
ಸ್ಟಿಂಗ್ ಆಪರೇಷನ್: ಸಮಗ್ರ ತನಿಖೆ, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು: ವಿಜಯೇಂದ್ರ
ಸ್ಟಿಂಗ್ ಆಪರೇಷನ್ ವಿಷಯ ಸಿಎಂ ಸಂಪುಟ ಸಭೆಯಲ್ಲಿ ಪ್ರಸ್ತಾಪಿಸಿರುವ ಹಿನ್ನೆಲೆಯಲ್ಲಿ ಹಿಟ್ ಅಂಡ್ ರನ್ ಮಾಡುವಂತಿಲ್ಲ.ಇದರ ಪಿತಾಮಹ ಯಾರೆಂಬುದು ಗೊತ್ತಿದೆ ಎಂದು ವಿಜಯೇಂದ್ರ ಕಿಡಿಕಾರಿದ್ದಾರೆ.
ರಾಜ್ಯದಲ್ಲಿನ ರಾಜಕೀಯ ಅಸ್ಥಿರತೆ, ಆಡಳಿತಾತ್ಮಕ ವೈಫಲ್ಯಗಳು ಮತ್ತು ರೈತರ ಸಂಕಷ್ಟಗಳ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಟಿಂಗ್ ಆಪರೇಷನ್ ಪ್ರಕರಣದಿಂದ ಹಿಡಿದು ದಸರಾ ಅವ್ಯವಸ್ಥೆ ಮತ್ತು ರೈತರ ಸಾಲದವರೆಗೆ ಸರ್ಕಾರದ ವಿರುದ್ಧ ಸರಣಿ ಆರೋಪಗಳನ್ನು ಹೊರಿಸಿದ್ದಾರೆ.
ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿರುವ ಸ್ಟಿಂಗ್ ಆಪರೇಷನ್ ಪ್ರಕರಣವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗಂಭೀರವಾಗಿ ಪರಿಗಣಿಸಬೇಕು ಎಂದು ವಿಜಯೇಂದ್ರ ಆಗ್ರಹಿಸಿದರು. "ಈ ವಿಚಾರವನ್ನು ಸ್ವತಃ ಸಿಎಂ ಸಂಪುಟ ಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ. ಹೀಗಾಗಿ ಇದನ್ನು ಹಿಟ್ ಅಂಡ್ ರನ್ ಮಾಡುವಂತಿಲ್ಲ. ಪ್ರಕರಣದ ಪಿತಾಮಹ ಯಾರು ಎಂಬುದು ಎಲ್ಲರಿಗೂ ತಿಳಿದಿದೆ. ತಪ್ಪಿತಸ್ಥರು ಎಷ್ಟೇ ದೊಡ್ಡ ಸ್ಥಾನದಲ್ಲಿದ್ದರೂ ಕಾನೂನು ಕ್ರಮ ಕೈಗೊಳ್ಳಬೇಕು" ಎಂದು ಆಗ್ರಹಿಸಿದರು. ಮೈಸೂರು ದಸರಾ ಮಹೋತ್ಸವದ ವೈಭವದ ನಡುವೆ ನಡೆದ ಅವ್ಯವಸ್ಥೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, "ದನಕರುಗಳ ಜಾತ್ರೆಯಲ್ಲಿ ಮೇವಿನ ವ್ಯವಸ್ಥೆಯಿಲ್ಲ, ರೈತರಿಗೆ ಹಾಗೂ ಮಹಿಳೆಯರಿಗೆ ಸಮರ್ಪಕ ಊಟದ ವ್ಯವಸ್ಥೆಯಿಲ್ಲ. ಇಂತಹ ಅವ್ಯವಸ್ಥೆಯನ್ನು ಮೈಸೂರು ದಸರಾ ಇತಿಹಾಸದಲ್ಲಿ ಹಿಂದೆಂದೂ ಕಂಡಿರಲಿಲ್ಲ. ಆಡಳಿತ ಮೈಮರೆತಿರುವುದಕ್ಕೆ ಇದೇ ಸಾಕ್ಷಿ" ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಿಎಂ ಕೇವಲ ಸ್ಟಿಂಗ್ ಆಪರೇಷನ್ನಂತಹ ರಾಜಕೀಯ ಗಿಮಿಕ್ಗಳಲ್ಲಿ ಮಗ್ನರಾಗಿ, ಜನರ ಮೂಲಭೂತ ಸೌಕರ್ಯಗಳ ಕಡೆಗೆ ಗಮನ ಹರಿಸುತ್ತಿಲ್ಲ ಎಂದು ಟೀಕಿಸಿದರು.
ಕಬ್ಬು ಬೆಳೆಗಾರರ ಹೋರಾಟಕ್ಕೆ ಬಿಜೆಪಿ ಬೆಂಬಲ
ರಾಜ್ಯಾದ್ಯಂತ ನಡೆಯುತ್ತಿರುವ ಕಬ್ಬು ಬೆಳೆಗಾರರ ಪಾದಯಾತ್ರೆಗೆ ಬಿಜೆಪಿ ಸಂಪೂರ್ಣ ಬೆಂಬಲ ಘೋಷಿಸಿತು. ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಮತ್ತು ಶಿವರಾಜ್ ಸಿಂಗ್ ಚೌಹಾಣ್ ಅವರು ರೈತರ ಸಮಸ್ಯೆಗಳನ್ನು ಆಲಿಸಿದ್ದಾರೆ. ಆದರೆ, ಕಬ್ಬಿಗೆ ಸೂಕ್ತ ರಾಜ್ಯ ಸಲಹಾ ಬೆಲೆ ನಿಗದಿಪಡಿಸುವುದು ರಾಜ್ಯ ಸರ್ಕಾರದ ಹೊಣೆ. ಪ್ರತಿ ಟನ್ಗೆ ಹೆಚ್ಚುವರಿ 1 ಸಾವಿರ ರೂ. ನೀಡುವ ವಿಚಾರದಲ್ಲಿ ರಾಜ್ಯ ಸರ್ಕಾರ ಸಕಾರಾತ್ಮಕ ನಿರ್ಧಾರ ಕೈಗೊಳ್ಳಬೇಕು" ಎಂದು ಒತ್ತಾಯಿಸಿದರು. ಸಕ್ಕರೆ ಕಾರ್ಖಾನೆಗಳಲ್ಲಿ ತೂಕದ ಮೋಸ ನಡೆಯುತ್ತಿದೆ ಎಂಬ ರೈತರ ಆರೋಪಗಳ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಆಗ್ರಹಿಸಿದರು. ರಾಜ್ಯದಲ್ಲಿ ಭೀಕರ ಬರಗಾಲವಿದ್ದರೂ, ರೈತರಿಗೆ ಕೇವಲ 2,500 ರೂ. ಪರಿಹಾರ ನೀಡಿ ಕೈಕಟ್ಟಿ ಕುಳಿತಿರುವ ಸರ್ಕಾರದ ಧೋರಣೆಯನ್ನು ಅವರು ಖಂಡಿಸಿದರು. ರೈತರ ಸಂಕಷ್ಟಕ್ಕೆ ಸ್ಪಂದಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ದೂರಿದರು.
ರಾಹುಲ್ ಗಾಂಧಿ, ಕಾಂಗ್ರೆಸ್ ವಿರುದ್ಧ ಗಂಭೀರ ಆರೋಪ
ಕಾಂಗ್ರೆಸ್ ಪಕ್ಷದ ಕಾರ್ಯವೈಖರಿಯನ್ನು ತರಾಟೆಗೆ ತೆಗೆದುಕೊಂಡ ವಿಜಯೇಂದ್ರ, "ಚುನಾವಣಾ ಸೋಲಿನ ಹತಾಶೆಯಲ್ಲಿರುವ ರಾಹುಲ್ ಗಾಂಧಿ, ವಿವಿಧ ಸಂಘಟನೆಗಳನ್ನು ಬಳಸಿ ದೇಶದಲ್ಲಿ ಗೊಂದಲದ ವಾತಾವರಣ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ. ಕಮ್ಯುನಿಸ್ಟ್ ಪಕ್ಷಗಳ ಜೊತೆ ಸೇರಿ ದೇಶದಲ್ಲಿ ಅಸ್ಥಿರತೆ ಉಂಟುಮಾಡುವ ಅವರ ತಂತ್ರಗಳು ಯಶಸ್ವಿಯಾಗುವುದಿಲ್ಲ. ಪ್ರಧಾನಿ ಮೋದಿಯವರ ನಾಯಕತ್ವಕ್ಕೆ ದೇಶದ ಜನತೆಯ ಬೆಂಬಲವಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕಾಂಗ್ರೆಸ್ ಸಂಘಟನೆಗಳಿಗೆ ಹಣಕಾಸಿನ ನೆರವು ನೀಡುತ್ತಿರುವ ಆರೋಪಗಳು ಈಗ ಮೇಲ್ನೋಟಕ್ಕೆ ಸಾಬೀತಾಗುತ್ತಿವೆ ಎಂದರು. ಹಿರಿಯೂರು ಕ್ಷೇತ್ರದ ಉಪಚುನಾವಣೆ ವಿಚಾರ ಸಂಬಂಧ "ಪಕ್ಷದ ಕೇಂದ್ರ ಕೋರ್ ಕಮಿಟಿಯಲ್ಲಿ ಅಭ್ಯರ್ಥಿಗಳ ಪಟ್ಟಿಯ ಕುರಿತು ಚರ್ಚೆ ನಡೆದಿದೆ. ಮೈತ್ರಿ ಪಕ್ಷದ ವರಿಷ್ಠರೊಂದಿಗೆ ಸಮಾಲೋಚಿಸಿ, ಯಾರು ಕಣಕ್ಕಿಳಿಯಬೇಕು ಎಂಬುದನ್ನು ಅಂತಿಮಗೊಳಿಸುತ್ತೇವೆ" ಎಂದು ಸ್ಪಷ್ಟಪಡಿಸಿದರು.

