
ಕಾಂಗ್ರೆಸ್ ಭ್ರಷ್ಟಾಚಾರ ವಿರುದ್ಧ ಬಿಜೆಪಿ ಜನಾಂದೋಲನ: ಬಿ.ವೈ. ವಿಜಯೇಂದ್ರ ಎಚ್ಚರಿಕೆ
ಸರ್ಕಾರದ ವೈಫಲ್ಯಗಳು, ಭ್ರಷ್ಟಾಚಾರ, ಜನರ ಸಂಕಷ್ಟಗಳೇ ಪಾದಯಾತ್ರೆಗೆ ಮೂಲ ಕಾರಣ. ಸರ್ಕಾರವನ್ನು ಕಿತ್ತೊಗೆಯುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಬಿ.ವೈ. ವಿಜಯೇಂದ್ರ ಎಚ್ಚರಿಸಿದರು.
ಬಿಜೆಪಿ ಹಮ್ಮಿಕೊಂಡಿರುವ ಪಾದಯಾತ್ರೆಯು ಕೇವಲ ರಾಜಕೀಯ ಕಾರ್ಯಕ್ರಮವಲ್ಲ, ಇದು ದಲಿತರು, ರೈತರು, ಮಹಿಳೆಯರು ಮತ್ತು ಯುವಜನರ ಹಕ್ಕುಗಳ ರಕ್ಷಣೆಗಾಗಿ ನಡೆಸುತ್ತಿರುವ ಮಹತ್ವದ ಜನಾಂದೋಲನ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.
ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹಮ್ಮಿಕೊಂಡಿರುವ ಬಳ್ಳಾರಿ ಚಲೋ ಪಾದಯಾತ್ರೆಗೆ ಲಿಂಗಸುಗೂರಿನಲ್ಲಿ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಬಿಜೆಪಿ ಯಾಕೆ ಪಾದಯಾತ್ರೆ ಮಾಡುತ್ತಿದೆ ಎಂದು ಕಾಂಗ್ರೆಸ್ ಕೇಳುತ್ತಿದೆ? ಸರ್ಕಾರದ ವೈಫಲ್ಯಗಳು, ಭ್ರಷ್ಟಾಚಾರ ಮತ್ತು ಜನರ ಸಂಕಷ್ಟಗಳೇ ನಮ್ಮ ಪಾದಯಾತ್ರೆಗೆ ಮೂಲ ಕಾರಣ. ರಾಜ್ಯದ ಜನರ ಹಕ್ಕು, ನ್ಯಾಯ ಮತ್ತು ಭವಿಷ್ಯಕ್ಕಾಗಿ ಬೀದಿಗಿಳಿದಿದ್ದೇವೆ. ಈ ಸರ್ಕಾರವನ್ನು ಕಿತ್ತೊಗೆಯುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಸಿದರು.
ದಲಿತರ ಹಣಕ್ಕೆ ಕನ್ನ ಹಾಕಿದ ಕಾಂಗ್ರೆಸ್
ಪಾದಯಾತ್ರೆಯ ಪ್ರಮುಖ ಹಂತವೆಂದರೆ ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ರೂ. ಹಣದ ದುರುಪಯೋಗ. ತಮ್ಮನ್ನು ತಾವು ದಲಿತರ ರಕ್ಷಕರು ಎಂದು ಕರೆದುಕೊಳ್ಳುವ ಕಾಂಗ್ರೆಸ್, ದಲಿತರ ಅಭಿವೃದ್ಧಿಗೆ ಮೀಸಲಾದ ಹಣವನ್ನೇ ಲೂಟಿ ಮಾಡಿದೆ. ಎಸ್‌ಸಿಪಿ/ಟಿಎಸ್‌ಪಿ ಯೋಜನೆಯಡಿ ಮೀಸಲಿಟ್ಟ ಹಣವನ್ನು ಬೇರೆಡೆಗೆ ವರ್ಗಾಯಿಸಿ ದಲಿತ ಸಮುದಾಯಕ್ಕೆ ಅನ್ಯಾಯ ಮಾಡಲಾಗಿದೆ. ನಾಗೇಂದ್ರ ಅವರ ರಾಜೀನಾಮೆ ಎಂಬುದು ನಮ್ಮ ಹೋರಾಟದ ಮೊದಲ ಹಂತದ ಜಯವಷ್ಟೇ. ಈ ಹಗರಣದ ಬೇರುಗಳನ್ನು ನಾವು ತಲುಪುತ್ತೇವೆ. ದಲಿತ ಸಮುದಾಯದ ಮೇಲಿನ ದೌರ್ಜನ್ಯಗಳ ಬಗ್ಗೆ ಸರ್ಕಾರ ಮೌನ ವಹಿಸಿದೆ. ಘಟನೆಗಳ ನಂತರ ಸಂತ್ರಸ್ತ ಕುಟುಂಬಗಳಿಗೆ ಧೈರ್ಯ ತುಂಬುವ ಕನಿಷ್ಠ ಸೌಜನ್ಯವನ್ನೂ ಸರ್ಕಾರ ತೋರುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅರಮನೆಯಲ್ಲಿ ಕುಳಿತ ಸರ್ಕಾರಕ್ಕೆ ಅರಿವಿಲ್ಲ
ರಾಜ್ಯದಲ್ಲಿ ಬರಗಾಲದ ಸ್ಥಿತಿ ಗಂಭೀರವಾಗಿದ್ದರೂ, ಸರ್ಕಾರ ಮಾತ್ರ ನಿರ್ಲಕ್ಷ್ಯ ತೋರುತ್ತಿದೆ. 175 ತಾಲೂಕುಗಳು ಬರದಿಂದ ತತ್ತರಿಸಿದ್ದರೂ ಕೇವಲ 101 ತಾಲೂಕುಗಳನ್ನು ಮಾತ್ರ ಬರಪೀಡಿತ ಎಂದು ಘೋಷಿಸಲಾಗಿದೆ. ಸುಮಾರು 45 ಸಾವಿರ ಕುಟುಂಬಗಳು ಮನೆಗಳಿಗೆ ಬೀಗ ಹಾಕಿ ಗುಳೆ ಹೋಗುತ್ತಿವೆ. ಆದರೆ ಮುಖ್ಯಮಂತ್ರಿಗಳು ರೈತರ ಕಷ್ಟ ಆಲಿಸುವ ಬದಲು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಬ್ಯುಸಿಯಾಗಿದ್ದಾರೆ ಎಂದು ಹರಿಹಾಯ್ದರು. ಕೆಪಿಎಸ್‌ಸಿ ನೇಮಕಾತಿ ಪ್ರಕ್ರಿಯೆಯಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ತೀವ್ರವಾಗಿ ಖಂಡಿಸಿದರು. ರಾಜ್ಯದಲ್ಲಿ ಎರಡೂವರೆ ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇದ್ದರೂ ಅವುಗಳನ್ನು ಭರ್ತಿ ಮಾಡುತ್ತಿಲ್ಲ. ನೇಮಕಾತಿ ಅಕ್ರಮಗಳಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಯುವಕರ ಭವಿಷ್ಯದೊಂದಿಗೆ ಚೆಲ್ಲಾಟವಾಡುವುದನ್ನು ಸರ್ಕಾರ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಮುಂದಿನ ದಿನಗಳ ಎಚ್ಚರಿಕೆ
ಪಾದಯಾತ್ರೆಯನ್ನು ಲಘುವಾಗಿ ಪರಿಗಣಿಸುತ್ತಿರುವ ಕಾಂಗ್ರೆಸ್ ನಾಯಕರಿಗೆ ಎಚ್ಚರಿಕೆ ನೀಡಿದ ವಿಜಯೇಂದ್ರ, ಈ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ. ಮುಂದಿನ ದಿನಗಳಲ್ಲಿ ನಿಮ್ಮ ಸಂಪುಟದ ದೊಡ್ಡ ಸಚಿವರೊಬ್ಬರು ರಾಜೀನಾಮೆ ನೀಡುವ ಪರಿಸ್ಥಿತಿ ಬರುತ್ತದೆ. ಇದನ್ನು ಬರೆದಿಟ್ಟುಕೊಳ್ಳಿ. ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಮತ್ತು ಜನವಿರೋಧಿ ನೀತಿಗಳು ರಾಜ್ಯದ ಜನರಿಗೆ ಬೇಸರ ತಂದಿದೆ ಎಂದರು. 2028ರ ಚುನಾವಣೆಯಲ್ಲಿ ರಾಜ್ಯದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬರುವುದು ಖಚಿತ. ಇದು ನಮ್ಮ ಮಾತಲ್ಲ, ಜನ ನೀಡುತ್ತಿರುವ ತೀರ್ಪು. ಅಧಿಕಾರದಲ್ಲಿ ಮುಂದುವರಿಯಲು ಜನವಿರೋಧಿ ಸರ್ಕಾರಕ್ಕೆ ಯಾವುದೇ ನೈತಿಕ ಹಕ್ಕಿಲ್ಲ.ಬಿ.ಎಸ್. ಯಡಿಯೂರಪ್ಪ ಸ್ಥಾಪಿಸಿದ ಅಭಿವೃದ್ಧಿ ನಿಗಮಗಳ ಹಣಕ್ಕೆ ಕನ್ನ ಹಾಕಿರುವ ಕಾಂಗ್ರೆಸ್ ಸರ್ಕಾರ, ಬಡವರು ಮತ್ತು ಶೋಷಿತರಿಗೆ ತಲುಪಬೇಕಾದ ಸವಲತ್ತುಗಳನ್ನು ಲೂಟಿ ಮಾಡುತ್ತಿದೆ ಎಂದು ಟೀಕಿಸಿದರು.

