ಧ್ವಜಾರೋಹಣ ನಿರಾಕರಿಸುವುದು ತ್ರಿವರ್ಣ ಧ್ವಜಕ್ಕೆ ತೋರಿದ ಅಗೌರವ - ಬಿ.ವೈ.ವಿಜಯೇಂದ್ರ
x

ಧ್ವಜಾರೋಹಣ ನಿರಾಕರಿಸುವುದು ತ್ರಿವರ್ಣ ಧ್ವಜಕ್ಕೆ ತೋರಿದ ಅಗೌರವ - ಬಿ.ವೈ.ವಿಜಯೇಂದ್ರ

ಪಕ್ಷ ಸಂಘಟನೆ ಮಾಡಬೇಕು, ಉಪಚುನಾವಣೆ ಎದುರಿಸಬೇಕು ಎಂಬ ಕಾರಣ ನೀಡಿ ಸರ್ಕಾರಿ ಜವಾಬ್ದಾರಿಯಿಂದ ಹಿಂದೆ ಸರಿಯುವುದು ಸರಿಯಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿಕಾರಿದ್ದಾರೆ.


Click the Play button to hear this message in audio format

ಸಚಿವರು, ಶಾಸಕರು ಹಾಗೂ ಜನಪ್ರತಿನಿಧಿಗಳಿಗೆ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ತ್ರಿವರ್ಣ ಧ್ವಜಾರೋಹಣ ಮಾಡುವುದು ಕರ್ತವ್ಯ. ಅದು ವೈಯಕ್ತಿಕ ಆಯ್ಕೆಯ ವಿಷಯವಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಾಪ್ರಹಾರ ನಡೆಸಿದ್ದಾರೆ.

ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನವನ್ನು ನಿರಾಕರಿಸಿರುವ ಸಚಿವ ಜಮೀರ್ ಅಹಮದ್ ಅವರ ನಿರ್ಧಾರವನ್ನು ತೀವ್ರವಾಗಿ ಟೀಕಿಸಿದ ಅವರು, ಪಕ್ಷ ಸಂಘಟನೆ ಮಾಡಬೇಕು, ಉಪಚುನಾವಣೆ ಎದುರಿಸಬೇಕು ಎಂಬ ಕಾರಣ ನೀಡಿ ಸರ್ಕಾರಿ ಜವಾಬ್ದಾರಿಯಿಂದ ಹಿಂದೆ ಸರಿಯುವುದು ಸರಿಯಲ್ಲ. ಲಾಭ ಬೇಕು, ಆದರೆ ಹೊಣೆಗಾರಿಕೆ ಬೇಡ ಎಂಬ ಮನೋಭಾವ ಜನಪ್ರತಿನಿಧಿಗಳಿಗೆ ಇರಬಾರದು ಎಂದು ಕಿಡಿಕಾರಿದರು.

ಜಮೀರ್ ಅಹಮದ್ ಅವರು ಉಸ್ತುವಾರಿ ಸಚಿವ ಸ್ಥಾನಕ್ಕೆ ಸಂಬಂಧಿಸಿದಂತೆ ನೀಡಿರುವ ಪತ್ರವು ಆ ಸ್ಥಾನಕ್ಕೆ ಹಾಗೂ ತ್ರಿವರ್ಣ ಧ್ವಜಕ್ಕೆ ಅಗೌರವ ತೋರಿದಂತಾಗಿದೆ. ಸಚಿವರು ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಜಿಲ್ಲೆಗೆ ತೆರಳಿ ತ್ರಿವರ್ಣ ಧ್ವಜಾರೋಹಣ ಮಾಡುವ ಜವಾಬ್ದಾರಿಯಿಂದ ಹಿಂದೆ ಸರಿಯಬಾರದು. ಪಕ್ಷ ಸಂಘಟನೆ ಹಾಗೂ ಉಪಚುನಾವಣೆ ಎದುರಿಸುವ ಕಾರಣ ನೀಡಿ ಉಸ್ತುವಾರಿ ಸಚಿವ ಸ್ಥಾನ ಬೇಡ ಎಂದು ಜಮೀರ್ ಅಹಮದ್ ಅವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವುದು ಸರಿಯಲ್ಲ ಎಂದು ಹೇಳಿದರು.

ಆರ್‌ಎಸ್‌ಎಸ್‌ ವಿರುದ್ಧ ಹಿಂಬಾಗಿಲಿನಿಂದ ನಿರ್ಬಂಧ ಹೇರುವ ಪ್ರಯತ್ನ

ಆರ್‌ಎಸ್‌ಎಸ್‌ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಸಾರ್ವಜನಿಕ ಸಭೆಗಳಿಗೆ ಅನುಮತಿ ಕಡ್ಡಾಯಗೊಳಿಸುವಂತಹ ನಿರ್ಧಾರಗಳನ್ನು ಸರ್ಕಾರ ಕೈಗೊಳ್ಳುತ್ತಿದೆ. ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ನೇರವಾಗಿ ಆರ್‌ಎಸ್‌ಎಸ್‌ ಹೆಸರನ್ನು ಉಲ್ಲೇಖಿಸದಿದ್ದರೂ, ಸರ್ಕಾರದ ಕ್ರಮಗಳ ಉದ್ದೇಶ ಸ್ಪಷ್ಟವಾಗಿದೆ. ಸದನದಲ್ಲಿ ಆರ್‌ಎಸ್‌ಎಸ್‌ನ ಪ್ರಾರ್ಥನೆಯ ಉಲ್ಲೇಖ ಮಾಡಿದ್ದ ಮುಖ್ಯಮಂತ್ರಿಗಳ ನಿಲುವು ಇದೀಗ ಬಯಲಾಗಿದೆ. ಆರ್‌ಎಸ್‌ಎಸ್‌ನಿಂದ ಯಾವ ದೇಶವಿರೋಧಿ ಚಟುವಟಿಕೆ ನಡೆದಿದೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು. ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ತಮ್ಮ ಇಲಾಖೆಯ ಜವಾಬ್ದಾರಿಗಳ ಬಗ್ಗೆ ಗಮನಹರಿಸುವ ಬದಲು ಪದೇಪದೇ ಆರ್‌ಎಸ್‌ಎಸ್‌ ಅನ್ನು ಟೀಕಿಸುವ ಕೆಲಸ ಮಾಡುತ್ತಿದ್ದಾರೆ. ಆರ್‌ಎಸ್‌ಎಸ್‌ ವಿರುದ್ಧವೇ ಇಷ್ಟೊಂದು ಆಸಕ್ತಿ ಇದ್ದರೆ ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ, ಆರ್‌ಎಸ್‌ಎಸ್‌ ವಿರೋಧಿ ಇಲಾಖೆಯನ್ನು ಪಡೆದುಕೊಳ್ಳಲಿ, “ಮುಖ್ಯಮಂತ್ರಿಗಳೇ, ಧೈರ್ಯವಿದ್ದರೆ ಆರ್‌ಎಸ್‌ಎಸ್‌ ಅನ್ನು ನಿಷೇಧಿಸುವ ಪ್ರಯತ್ನ ಮಾಡಿ ನೋಡೋಣ ಎಂದು ಸವಾಲು ಹಾಕಿದರು.

ಆರ್‌ಎಸ್‌ಎಸ್‌ ಶತಮಾನ ಪೂರೈಸಿರುವ ಸಂಘಟನೆ. ದೇಶಭಕ್ತಿ, ರಾಷ್ಟ್ರಾಭಿಮಾನ ಹಾಗೂ ಸೇವಾ ಮನೋಭಾವ ಬೆಳೆಸುವ ಸಂಘಟನೆಯಾಗಿ ಅದು ಕಾರ್ಯನಿರ್ವಹಿಸುತ್ತಿದೆ. ದೇಶದ ಪರವಾಗಿ ಧ್ವನಿ ಎತ್ತುವ ಶಕ್ತಿಗಳಲ್ಲಿ ಆರ್‌ಎಸ್‌ಎಸ್‌ ಪ್ರಮುಖವಾಗಿದೆ. ಹಿಂಬಾಗಿಲಿನಿಂದ ಆರ್‌ಎಸ್‌ಎಸ್‌ನ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಯಾವುದೇ ಪ್ರಯತ್ನವನ್ನು ಬಿಜೆಪಿ ಸಹಿಸುವುದಿಲ್ಲ. ಸರ್ಕಾರ ತನ್ನ ನಿಲುವನ್ನು ಮರುಪರಿಶೀಲಿಸಬೇಕು. ಹಿಂದೆ ಜವಾಹರಲಾಲ್ ನೆಹರೂ ಹಾಗೂ ಇಂದಿರಾ ಗಾಂಧಿ ಅವರ ಅವಧಿಯಲ್ಲಿ ಆರ್‌ಎಸ್‌ಎಸ್‌ ವಿರುದ್ಧ ನಿಷೇಧ ಹೇರಲಾಗಿದ್ದರೂ ಸಂಘಟನೆ ಮತ್ತಷ್ಟು ಬಲಿಷ್ಠವಾಗಿ ಬೆಳೆದಿದೆ. ಇತಿಹಾಸದಿಂದ ಪಾಠ ಕಲಿತು ಸರ್ಕಾರ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

ದೇಶದ ಭದ್ರತೆಗೆ ಧಕ್ಕೆ ತರುವಂತಹ ಚಟುವಟಿಕೆಗಳಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಗೃಹ ಸಚಿವರ ಕರ್ತವ್ಯ. ಅಂತಹ ವಿಚಾರಗಳ ಬಗ್ಗೆ ಗಮನಹರಿಸದೆ ಆರ್‌ಎಸ್‌ಎಸ್‌ ಕುರಿತು ಚರ್ಚೆ ಮಾಡುವುದಕ್ಕೆ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ರಾಜ್ಯದ ಜ್ವಲಂತ ಸಮಸ್ಯೆಗಳು, ಬಡವರ ಸಂಕಷ್ಟ ಹಾಗೂ ಜನಸಾಮಾನ್ಯರ ಸಮಸ್ಯೆಗಳ ಕುರಿತು ಚರ್ಚೆ ನಡೆಸುವ ಬದಲು ಸರ್ಕಾರ ಅನಗತ್ಯ ವಿಚಾರಗಳನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದರು.

ಭ್ರಷ್ಟಾಚಾರಕ್ಕೆ ಜಾತಿಯ ಬಣ್ಣ ಕಟ್ಟಬಾರದು

ಹಿಂದಿನ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅವಧಿಯಲ್ಲಿ ಸಚಿವ ನಾಗೇಂದ್ರ ಅವರು ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಕೋಟ್ಯಂತರ ರೂ. ಭ್ರಷ್ಟಾಚಾರದ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಬಿಜೆಪಿ ನಾಗೇಂದ್ರ ಅವರ ಜಾತಿಯನ್ನು ವಿರೋಧಿಸುತ್ತಿಲ್ಲ. ಆದರೆ ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ವ್ಯಕ್ತಿಯನ್ನು ಸಚಿವ ಸಂಪುಟಕ್ಕೆ ಸೇರಿಸುವುದನ್ನು ವಿರೋಧಿಸುತ್ತಿದೆ. ಭ್ರಷ್ಟಾಚಾರಕ್ಕೆ ಯಾವುದೇ ಕಾರಣಕ್ಕೂ ಜಾತಿಯ ಬಣ್ಣ ಕಟ್ಟಬಾರದು. ಪ್ರಕರಣದಲ್ಲಿ ಆರೋಪಪಟ್ಟಿ ಸಲ್ಲಿಕೆಯಾಗಿರುವ ಹಿನ್ನೆಲೆಯಲ್ಲಿ, ಆರೋಪಗಳಿಂದ ಸಂಪೂರ್ಣ ಮುಕ್ತರಾದ ಬಳಿಕ ನಾಗೇಂದ್ರ ಅವರನ್ನು ಸಚಿವರನ್ನಾಗಿ ಮಾಡಿದರೂ ಬಿಜೆಪಿಗೆ ಯಾವುದೇ ತಕರಾರಿಲ್ಲ. ಅಲ್ಲಿಯವರೆಗೆ ಮುಖ್ಯಮಂತ್ರಿಗಳು ಆ ಸಮುದಾಯದಿಂದ ಒಬ್ಬರ ಬದಲು ಇಬ್ಬರು ಸಚಿವರನ್ನು ನೇಮಕ ಮಾಡಿದರೂ ಬಿಜೆಪಿಗೆ ವಿರೋಧವಿಲ್ಲ ಎಂದು ಹೇಳಿದರು

ಪರಿಶಿಷ್ಟ ಪಂಗಡದ ಅಭಿವೃದ್ಧಿಗೆ ಮೀಸಲಿಟ್ಟ ಹಣದ ದುರ್ಬಳಕೆ ಹಾಗೂ ಹಗರಣದ ಆರೋಪಗಳು ಅತ್ಯಂತ ಗಂಭೀರವಾಗಿವೆ. ಈ ಹಿನ್ನೆಲೆಯಲ್ಲಿ ವಾಲ್ಮೀಕಿ ಸಮುದಾಯದ ಹಲವು ಪ್ರಮುಖರು ತಮ್ಮನ್ನು ಭೇಟಿಯಾಗಿ, ನಾಗೇಂದ್ರ ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿರುವುದು ಸಮುದಾಯಕ್ಕೆ ಅಪಮಾನವಾಗಿದೆ. ರಾಜ್ಯಾದ್ಯಂತ ಹೋರಾಟ, ಪಾದಯಾತ್ರೆ ಹಾಗೂ ಪ್ರತಿಭಟನೆ ನಡೆಸಬೇಕೆಂಬ ಅಭಿಪ್ರಾಯವನ್ನು ಸಮುದಾಯದ ಮುಖಂಡರು ವ್ಯಕ್ತಪಡಿಸಿದ್ದಾರೆ. ಈ ಕುರಿತು ಪಕ್ಷದ ಹಿರಿಯರೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Read More
Next Story