ವಿಶೇಷ ಅಧಿವೇಶನ ಕೇವಲ ರಾಜಕೀಯ ನಾಟಕ: ಮುಖ್ಯಮಂತ್ರಿ ವಿರುದ್ಧ ವಿಜಯೇಂದ್ರ ಕಿಡಿ
x

ವಿಶೇಷ ಅಧಿವೇಶನ ಕೇವಲ ರಾಜಕೀಯ ನಾಟಕ: ಮುಖ್ಯಮಂತ್ರಿ ವಿರುದ್ಧ ವಿಜಯೇಂದ್ರ ಕಿಡಿ

ರಾಜ್ಯದಲ್ಲಿ ಬಿಜೆಪಿ ನಡೆಸಿದ ಪಾದಯಾತ್ರೆಗೆ ಸಿಕ್ಕ ಜನಬೆಂಬಲ, ಒತ್ತಡವೇ ವಿಶೇಷ ಅಧಿವೇಶನಕ್ಕೆ ಕಾರಣ. ಪಾದಯಾತ್ರೆ ನಡೆಸದಿದ್ದರೆ ವಿಶೇಷ ಅಧಿವೇಶನ ಕರೆಯುವ ಪ್ರಮೇಯವೇ ಬರುತ್ತಿರಲಿಲ್ಲ ಎಂದು ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.


Click the Play button to hear this message in audio format

ವಿಶೇಷ ಅಧಿವೇಶನವು ಕೇವಲ ರಾಜಕೀಯ ಪ್ರೇರಿತವಾಗಿದ್ದು, ಜನರಿಗೆ ನ್ಯಾಯ ಒದಗಿಸುವ ಬದಲು ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಕುತಂತ್ರವನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಟೀಕಿಸಿದ್ದಾರೆ.

ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯದ ಬರ ಪರಿಸ್ಥಿತಿ ಮತ್ತು ಕಸ್ತೂರಿರಂಗನ್ ವರದಿ ವಿಚಾರದಲ್ಲಿ ಸರ್ಕಾರ ಅನುಸರಿಸುತ್ತಿರುವ ನೀತಿಯನ್ನು ವಿರೋಧಿಸಿದರು. ರಾಜ್ಯದಲ್ಲಿ ಬಿಜೆಪಿ ನಡೆಸಿದ ಪಾದಯಾತ್ರೆಗೆ ಸಿಕ್ಕ ಜನಬೆಂಬಲ ಮತ್ತು ಒತ್ತಡವೇ ಈ ವಿಶೇಷ ಅಧಿವೇಶನಕ್ಕೆ ಕಾರಣ. ನಾವು ಪಾದಯಾತ್ರೆ ನಡೆಸದೇ ಇದ್ದಿದ್ದರೆ ಈ ವಿಶೇಷ ಅಧಿವೇಶನ ಕರೆಯುವ ಪ್ರಮೇಯವೇ ಬರುತ್ತಿರಲಿಲ್ಲ. ಬಹುಶಃ ಮುಖ್ಯಮಂತ್ರಿಗಳು ಮಂಗಳೂರಿನಲ್ಲಿ ಮೀನು ಹಿಡಿಯುತ್ತಾ ಕಾಲ ಕಳೆಯುತ್ತಿದ್ದರು. ನಮ್ಮ ಹೋರಾಟಕ್ಕೆ ಹೆದರಿ, ಅದರಿಂದ ವಿಚಲಿತರಾಗಿ ಈ ಅಧಿವೇಶನದ ನಾಟಕವಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಬರ ಘೋಷಣೆಯಲ್ಲಿ ರಾಜಕಾರಣ

ರಾಜ್ಯದಲ್ಲಿ ತೀವ್ರ ಬರಗಾಲವಿದ್ದರೂ, ಸರ್ಕಾರವು ಕೇವಲ 20 ತಾಲೂಕುಗಳನ್ನು ಮಾತ್ರ ಬರಪೀಡಿತ ಎಂದು ಘೋಷಿಸಿರುವುದು ಅನ್ಯಾಯ. ಬೆಂಗಳೂರಿನ ಬಿಜೆಪಿ ಶಾಸಕರ ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದ 44 ಕ್ಷೇತ್ರಗಳಲ್ಲಿ ಕೇವಲ 20 ತಾಲೂಕುಗಳನ್ನು ಮಾತ್ರ ಬರಪೀಡಿತ ಎಂದು ಗುರುತಿಸುವುದು ರಾಜಕಾರಣವಲ್ಲವೇ? ಕಾಂಗ್ರೆಸ್‌ನ ಹಿರಿಯ ನಾಯಕ ಎಚ್.ಕೆ. ಪಾಟೀಲ್ ಅವರೇ ತಮ್ಮ ತಾಲೂಕನ್ನು ಬರಪೀಡಿತ ಎಂದು ಘೋಷಿಸದಿದ್ದರೆ ರಾಜೀನಾಮೆ ನೀಡುತ್ತೇನೆ ಎಂಬುದಾಗಿ ಪತ್ರ ಬರೆದಿದ್ದಾರೆ. ಸ್ವಪಕ್ಷೀಯ ಶಾಸಕರೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದರೂ, ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ ಎಂದು ಕಿಡಿಕಾರಿದರು. ಶಿಕಾರಿಪುರ ಸೇರಿದಂತೆ ರಾಜ್ಯದ 190ಕ್ಕೂ ಹೆಚ್ಚು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿ, ರೈತರ ಕೃಷಿ ಸಾಲವನ್ನು ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.

ರೈತರನ್ನು ನಡುಬೀದಿಗೆ ತಂದ ಸರ್ಕಾರ

ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರು ಛತ್ತೀಸ್‌ಗಢದಿಂದ ವಿದ್ಯುತ್ ಖರೀದಿಸಿ ರಾಜ್ಯಕ್ಕೆ ಬೆಳಕು ನೀಡಿದ್ದರು. ಆದರೆ ಇಂದಿನ ಸರ್ಕಾರ ರೈತರಿಗೆ ಭತ್ತ ನಾಟಿ ಮಾಡಬೇಡಿ ಎಂದು ಎಚ್ಚರಿಕೆ ನೀಡಿ, ವಿದ್ಯುತ್ ಕೊಡಲಾಗದೆ ನಡುಬೀದಿಗೆ ತಂದು ನಿಲ್ಲಿಸಿದೆ. 10-11 ರೂಪಾಯಿಗೆ ಸಿಗುತ್ತಿದ್ದ ವಿದ್ಯುತ್ ಖರೀದಿಸದೆ, ಈಗ 14-15 ರೂಪಾಯಿಗೆ ಖರೀದಿ ಮಾಡುತ್ತಿದ್ದಾರೆ. ರೈತರ ಬಗ್ಗೆ ಕಳಕಳಿ ಇದ್ದರೆ ಕೂಡಲೇ ವಿದ್ಯುತ್ ಖರೀದಿಸಿ ಪೂರೈಕೆ ಮಾಡಿ ಎಂದು ಸವಾಲು ಹಾಕಿದರು. ಕಸ್ತೂರಿರಂಗನ್ ವರದಿಯ ವಿಚಾರದಲ್ಲಿ ಸರ್ಕಾರ ದ್ವಂದ್ವ ನಿಲುವು ತಾಳಿದೆ. ಶಿವಮೊಗ್ಗದಲ್ಲಿ ಪಾದಯಾತ್ರೆ ನಡೆಸಿದಾಗ ಆಡಳಿತ ಪಕ್ಷದ ಶಾಸಕರೇ ಈ ಬಗ್ಗೆ ಮಾತನಾಡಿದ್ದರು. ಆದರೆ ಈಗ ಸರ್ಕಾರವು ಫಿಸಿಕಲ್ ಸರ್ವೆ ನಡೆಸುವ ಬದಲು ಕಾಲಹರಣ ಮಾಡುತ್ತಿದೆ. ಕಾಡಂಚಿನ ಜನರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಟೀಕಿಸಿದರು.

32 ಸಾವಿರ ಕೋಟಿ ರೂ. ಎಲ್ಲಿಂದ ತರುತ್ತೀರಿ?

ಮಂಗಳೂರಿನಲ್ಲಿ ಘೋಷಣೆ ಮಾಡಲಾದ 32 ಸಾವಿರ ಕೋಟಿ ರೂಪಾಯಿ ಅಭಿವೃದ್ಧಿ ಪ್ಯಾಕೇಜ್ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಅವರು, "ಈ ಹಣ ಎಲ್ಲಿಂದ ಬರುತ್ತದೆ? ರಿಯಲ್ ಎಸ್ಟೇಟ್ ಕಂಪನಿಗಳಿಂದ ತರುತ್ತೀರಾ ಅಥವಾ ಜನರ ತೆರಿಗೆ ಹಣವನ್ನು ಲೂಟಿ ಮಾಡುತ್ತೀರಾ? ನಿಮ್ಮ ಹತ್ತಿರ ಅಭಿವೃದ್ಧಿಗೆ ಹಣವಿಲ್ಲ. ಸಾರಿಗೆ ಸಂಸ್ಥೆಯ ನೌಕರರಿಗೆ ಸಂಬಳ ನೀಡಲು ಹಣವಿಲ್ಲದೆ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಇಂತಹ ಸ್ಥಿತಿಯಲ್ಲಿ ಸುಳ್ಳು ಭರವಸೆಗಳನ್ನು ನೀಡುವುದನ್ನು ನಿಲ್ಲಿಸಿ ಎಂದು ಆಗ್ರಹಿಸಿದರು. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಇಲಾಖೆಯಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ವಿಜಯೇಂದ್ರ ದೂರಿದರು. ಒಂದು ವರ್ಷ ಬಾಳಿಕೆ ಬರಬೇಕಾದ ಶೂ ಮತ್ತು ಸಾಕ್ಸ್‌ಗಳು ಒಂದು ತಿಂಗಳಿಗೂ ಬರ್ತಾ ಇಲ್ಲ. ಮಧು ಬಂಗಾರಪ್ಪನವರು ಪುಕ್ಕಟ್ಟೆ ಮಾತುಗಳನ್ನಾಡುವುದನ್ನು ಬಿಟ್ಟು, ತಮ್ಮ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಗಮನಹರಿಸಲಿ ಎಂದು ವಾಗ್ದಾಳಿ ನಡೆಸಿದರು.

ಸರ್ಕಾರ ಕೇವಲ ನಾಟಕ ಆಡುವುದನ್ನು ಬಿಟ್ಟು ಜನರಿಗೆ ನ್ಯಾಯ ಒದಗಿಸಲಿ. ಅಧಿವೇಶನದಲ್ಲಿ ಈ ಎಲ್ಲಾ ವಿಷಯಗಳ ಕುರಿತು ನಾವು ದನಿ ಎತ್ತುತ್ತೇವೆ. ಜನಸಾಮಾನ್ಯರ ಕಷ್ಟಗಳನ್ನು ಬಗೆಹರಿಸದಿದ್ದರೆ, ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

Read More
Next Story