
Bangalore Rain Tragedy| ಕಾರ್ಯಪಾಲಕ ಎಂಜಿನಿಯರ್ ಅಮಾನತು; ಬೌರಿಂಗ್ ಆಸ್ಪತ್ರೆ ಮುಖ್ಯಸ್ಥರಿಗೆ ನೋಟಿಸ್
"ನಿಮ್ಮ ನಿರ್ಲಕ್ಷ್ಯದಿಂದಲೇ ಅಮಾಯಕರು ಜೀವ ಕಳೆದುಕೊಂಡಿದ್ದಾರೆ. ಮಣ್ಣಿನ ಒತ್ತಡಕ್ಕೆ ಹಳೆಯ ಗೋಡೆ ಬೀಳುತ್ತದೆ ಎಂಬ ಸಾಮಾನ್ಯ ಜ್ಞಾನ ನಿಮಗಿರಲಿಲ್ಲವೇ? ಎಂದು ಸಿಎಂ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಬೆಂಗಳೂರಿನ ಶಿವಾಜಿನಗರದ ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಗೋಡೆ ಕುಸಿದು ಸಂಭವಿಸಿದ ಭೀಕರ ದುರಂತಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪದ ಆರೋಪದ ಮೇಲೆ ಕಾರ್ಯಪಾಲಕ ಎಂಜಿನಿಯರ್ ಅಮಾನತು ಮಾಡಿ ಸಿಎಂ ಸಿದ್ದರಾಮಯ್ಯ ಆದೇಶಿಸಿದ್ದಾರೆ.
ಮಳೆ ಅನಾಹುತದ ಹಿನ್ನೆಲೆಯಲ್ಲಿ ಗುರುವಾರ ವಿಧಾನಸೌಧದಲ್ಲಿ ಉನ್ನತ ಮಟ್ಟದ ಸಭೆ ನಡೆಸಿದ ಅವರು, ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಆಸ್ಪತ್ರೆಯ ಮುಖ್ಯಸ್ಥರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡುವಂತೆ ಹಿರಿಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ ಸಿಎಂ ಅವರು, ಜಿಬಿಎ ಆಯುಕ್ತರು ಹಾಗೂ ಉನ್ನತ ಅಧಿಕಾರಿಗಳ ಬೆವರಿಳಿಸಿದರು.
ಗೊತ್ತಿದ್ದೂ ಮಣ್ಣು ಸುರಿದದ್ದು ಏಕೆ?
ಆಸ್ಪತ್ರೆಯ ಗೋಡೆ ಶಿಥಿಲಗೊಂಡು ದುರ್ಬಲವಾಗಿದೆ ಎಂಬುದು ತಿಳಿದಿದ್ದರೂ ಕಾಮಗಾರಿ ನಡೆಯುವಾಗ ಅದರ ಪಕ್ಕದಲ್ಲೇ ಮಣ್ಣು ಸುರಿದದ್ದು ಏಕೆ?" ಎಂದು ಸಿಎಂ ಅಧಿಕಾರಿಗಳನ್ನು ಪ್ರಶ್ನಿಸಿದರು.
ಕಾಮಗಾರಿ ನಡೆಸುವಾಗ ಕನಿಷ್ಠ ಸುರಕ್ಷತಾ ಕ್ರಮ ಅನುಸರಿಸದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಅವರು, "ನಿಮ್ಮ ನಿರ್ಲಕ್ಷ್ಯದಿಂದಲೇ ಅಮಾಯಕರು ಜೀವ ಕಳೆದುಕೊಂಡಿದ್ದಾರೆ. ಮಣ್ಣಿನ ಒತ್ತಡಕ್ಕೆ ಹಳೆಯ ಗೋಡೆ ಬೀಳುತ್ತದೆ ಎಂಬ ಸಾಮಾನ್ಯ ಜ್ಞಾನ ನಿಮಗಿರಲಿಲ್ಲವೇ? ಎಂದು ತರಾಟೆಗೆ ತೆಗೆದುಕೊಂಡರು.
ಆಸ್ಪತ್ರೆ ಮುಖ್ಯಸ್ಥರ ವಿರುದ್ಧ ಗರಂ
ಕೇವಲ ಎಂಜಿನಿಯರ್ಗಳಷ್ಟೇ ಅಲ್ಲದೆ ಆಸ್ಪತ್ರೆ ಆಡಳಿತ ಮಂಡಳಿಯ ಮೇಲೂ ಸಿಎಂ ಕೆಂಡಾಮಂಡಲವಾದರು. ಆಸ್ಪತ್ರೆ ಆವರಣದಲ್ಲಿ ಇಷ್ಟೆಲ್ಲಾ ಅವಾಂತರ ನಡೆಯುತ್ತಿದ್ದರೂ ಏನು ಮಾಡುತ್ತಿದ್ದಿರಿ?, ಏಕೆ ಮೇಲ್ವಿಚಾರಣೆ ನಡೆಸಲಿಲ್ಲ? ಎಂದು ಆಸ್ಪತ್ರೆ ಮುಖ್ಯಸ್ಥರನ್ನು ಪ್ರಶ್ನಿಸಿದ ಅವರು, ತಕ್ಷಣವೇ ನೋಟಿಸ್ ನೀಡುವಂತೆ ಸಂಬಂಧಪಟ್ಟ ಇಲಾಖೆಯ ಕಾರ್ಯದರ್ಶಿಗೆ ಆದೇಶಿಸಿದರು.
ಡೆತ್ ಆಡಿಟ್‌ಗೆ ಸೂಚನೆ
ನಗರದಾದ್ಯಂತ ಇರುವ ಹಳೆಯ ಮತ್ತು ಅಪಾಯಕಾರಿ ಗೋಡೆಗಳನ್ನು ಗುರುತಿಸಿ ಕೂಡಲೇ ತೆರವುಗೊಳಿಸಲು ಬಿಬಿಎಂಪಿ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದರು.
ನಿನ್ನೆ ಬೆಂಗಳೂರಿನಲ್ಲಿ ಸುರಿದ ಮಳೆಗೆ ಸಾಕಷ್ಟು ಹಾನಿಯಾಗಿದ್ದು, 250 ಕ್ಕೂ ಹೆಚ್ಚು ಮರಗಳು ಬಿದ್ದಿವೆ. ಏಳು ಜನ ಸಾವನ್ನಪ್ಪಿದ್ದಾರೆ. ಈಗಾಗಲೇ ಸತ್ತವರ ಕುಟುಂಬದವರಿಗೆ 5 ಲಕ್ಷ ಪರಿಹಾರ ಘೋಷಣೆ ಮಾಡಲಾಗಿದೆ. ಗಾಯಗೊಂಡವರಿಗೆ ಉಚಿತ ಚಿಕಿತ್ಸೆ ನೀಡುವಂತೆ ಸೂಚಿಸಿದರು.
ಮುಂಗಾರು ಆರಂಭಕ್ಕೂ ಮುನ್ನ ಸಿದ್ಧತೆ ಕೈಗೊಳ್ಳಿ
ಮುಂಗಾರು ಮಳೆ ಪ್ರಾರಂಭವಾಗುವ ಮೊದಲೇ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಬೆಂಗಳೂರಿನ ಐದೂ ವಲಯಗಳ ಆಯುಕ್ತರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಒಣಗಿರುವ ಅಪಾಯಕಾರಿ ಮರಗಳ ರೆಂಬೆಗಳನ್ನು ಕತ್ತರಿಸಬೇಕು ಎಂದು ಮುಖ್ಯಮಂತ್ರಿಗಳು ಸೂಚಿಸಿದರು.
ಮುಂದಿನ ದಿನಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಗಳಿದ್ದು ರಾಜಕಾಲುವೆಗಳಲ್ಲಿ ಹೂಳು ತೆಗೆಯುವುದು, ಪ್ರವಾಹ ಉಂಟಾಗದಂತೆ ಕ್ರಮ ತೆಗೆದುಕೊಳ್ಳಬೇಕು. ಮಳೆಯಿಂದ ರಸ್ತೆಯಲ್ಲಿ ಬಿದ್ದಿರುವ ಕಸ, ರೆಂಬೆಗಳನ್ನು ಕೂಡಲೇ ತೆರವು ಮಾಡಬೇಕು. ಅಂಡರ್ ಪಾಸ್‌ಗಳಲ್ಲಿ ಮಳೆ ನೀರು ನಿಲ್ಲದಂತೆ ಹಾಗೂ ಜನ ಅಂಡರ್ ಪಾಸ್ ಬಳಸದಂತೆ ಕೂಡಲೇ ಬ್ಯಾರಿಕೇಡ್ ಹಾಕಿ ಎಂದು ಸೂಚಿಸಿದರು.
ಸಭೆಯ ಬಳಿಕ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಇನ್ನುಮುಂದೆ ಅಪಾಯಕಾರಿ ಗೋಡೆಗಳ ಪಕ್ಕ ಹಾಗೂ ಫುಟ್ಪಾತ್ಗಳಲ್ಲಿ ವ್ಯಾಪಾರ ನಡೆಸಲು ಅವಕಾಶ ನೀಡುವುದಿಲ್ಲ. ಸಾರ್ವಜನಿಕರ ಸುರಕ್ಷತೆ ನಮಗೆ ಮುಖ್ಯ. ಮಳೆಯಿಂದ ಹಾನಿಯಾಗಿರುವ ಎಲ್ಲ ಪ್ರದೇಶಗಳಿಗೂ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು.

