
ಬಿಎಂಟಿಸಿ
4,500 ಎಲೆಕ್ಟ್ರಿಕ್ ಬಸ್ ಖರೀದಿಗೆ ರಾಜ್ಯ ಸರ್ಕಾರ ವಿಳಂಬ; ಕಮಿಷನ್ ದಂಧೆಯೇ ಮುಖ್ಯ ಎಂದ ಜೆಡಿಎಸ್
2025ರಲ್ಲೇ ಟೆಂಡರ್ ಪ್ರಕ್ರಿಯೆ ಮುಕ್ತಾಯವಾದರೂ, ರಾಜ್ಯ ಸರ್ಕಾರ ಇನ್ನೂ ಕಾರ್ಯಾದೇಶ ನೀಡದೆ ವಿಳಂಬ ಧೋರಣೆ ಅನುಸರಿಸುತ್ತಿರುವುದು ಏಕೆ ಎಂದು ಜೆಡಿಎಸ್ ಪ್ರಶ್ನಿಸಿದೆ.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಪಿಎಂ ಇ-ಡ್ರೈವ್ ಯೋಜನೆಯಡಿ ಬಿಎಂಟಿಸಿಗೆ ಮಂಜೂರಾಗಿರುವ 4,500 ಎಲೆಕ್ಟ್ರಿಕ್ ಬಸ್ಗಳ ಖರೀದಿ ಪ್ರಕ್ರಿಯೆ ಈಗ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದೆ. ಕೇಂದ್ರ ಸರ್ಕಾರವು 1,505 ಕೋಟಿ ಸಹಾಯಧನ ಘೋಷಿಸಿದ್ದರೂ ರಾಜ್ಯದ ಕಾಂಗ್ರೆಸ್ ನೇತೃತ್ವದ ಸರ್ಕಾರ ಸಚಿವ ಸಂಪುಟದಲ್ಲಿ ಇನ್ನೂ ಅನುಮೋದನೆ ನೀಡಿಲ್ಲ ಎಂದು ಜೆಡಿಎಸ್ ಆಕ್ರೋಶ ಹೊರಹಾಕಿದೆ.
ಈ ಕುರಿತು ತನ್ನ ʼಎಕ್ಸ್ʼ ಖಾತೆಯಲ್ಲಿ ಸರಣಿ ಪೋಸ್ಟ್ ಪ್ರಕಟಿಸಿರುವ ಜೆಡಿಎಸ್, ಸಾರಿಗೆ ಸಚಿವ ಭೈರತಿ ಸುರೇಶ್ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.
ಕಾಂಗ್ರೆಸ್‌ಗೆ ಸ್ವಹಿತಾಸಕ್ತಿಯೇ ಮುಖ್ಯ'
ರಾಜ್ಯ ಸರ್ಕಾರದ ನಿಲುವನ್ನು ಖಂಡಿಸಿರುವ ಜೆಡಿಎಸ್, ಸಾರ್ವಜನಿಕ ಹಿತಾಸಕ್ತಿಗಿಂತ ಕಾಂಗ್ರೆಸ್ ಸರ್ಕಾರಕ್ಕೆ ಕಮಿಷನ್ ದಂಧೆಯೇ ಮುಖ್ಯ ಎಂದು ನೇರ ಆರೋಪ ಮಾಡಿದೆ. ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ವಿಶೇಷ ಆಸಕ್ತಿ ವಹಿಸಿ ಬೆಂಗಳೂರಿಗೆ ಈ ಬೃಹತ್ ಯೋಜನೆ ಮಂಜೂರು ಮಾಡಿದ್ದಾರೆ. 2025ರಲ್ಲೇ ಟೆಂಡರ್ ಪ್ರಕ್ರಿಯೆ ಮುಕ್ತಾಯವಾದರೂ, ರಾಜ್ಯ ಸರ್ಕಾರ ಇನ್ನೂ ಕಾರ್ಯಾದೇಶ ನೀಡದೆ ವಿಳಂಬ ಧೋರಣೆ ಅನುಸರಿಸುತ್ತಿರುವುದು ಏಕೆ ಎಂದು ಪ್ರಶ್ನಿಸಿದೆ.
ನೆರೆರಾಜ್ಯಗಳಾದ ಹೈದರಾಬಾದ್, ಸೂರತ್ ಹಾಗೂ ಅಹಮದಾಬಾದ್ ನಗರಗಳು ಈಗಾಗಲೇ ಕೇಂದ್ರದ ಯೋಜನೆ ಸದುಪಯೋಗ ಮಾಡಿಕೊಂಡು ಕಾರ್ಯಾದೇಶ ನೀಡಿವೆ. ಆದರೆ, ನಮ್ಮ ಸೋಮಾರಿ ಕಾಂಗ್ರೆಸ್ ಸರ್ಕಾರ ಕೇವಲ ರಾಜಕೀಯ ದ್ವೇಷ ಸಾಧನೆಗಾಗಿ ಬೆಂಗಳೂರಿನ ಜನರಿಗೆ ಸಿಗಬೇಕಾದ ಹಸಿರು ಸಾರಿಗೆ ಯೋಜನೆಗೆ ಅಡ್ಡಗಾಲು ಹಾಕುತ್ತಿದೆ ಎಂದು ವಾಗ್ದಾಳಿ ನಡೆಸಿದೆ.
"ಬೆಂಗಳೂರಿಗರು ನಿಮ್ಮನ್ನು ಕ್ಷಮಿಸಲ್ಲ"
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ನೇರ ವಾಗ್ದಾಳಿ ನಡೆಸಿರುವ ಜೆಡಿಎಸ್, "ಡಿ.ಕೆ.ಶಿವಕುಮಾರ್ ಅವರೇ, ಬೆಂಗಳೂರಿನ ಜನರಿಗೆ ಹೊಸ ಬಸ್ಸುಗಳು ಬೇಡವೇ?, ಕೇಂದ್ರ ಸರ್ಕಾರ ನೀಡುತ್ತಿರುವ ಭಾರಿ ಸಹಾಯಧನವನ್ನೂ ಬಳಸಿಕೊಳ್ಳಲು ಯೋಗ್ಯತೆಯಿಲ್ಲದ ನಿಮ್ಮ ಆಡಳಿತ ವೈಫಲ್ಯಕ್ಕೆ ಏನನ್ನಬೇಕು?, ಒಂದು ವೇಳೆ ರಾಜ್ಯದ ನಿರ್ಲಕ್ಷ್ಯದಿಂದಾಗಿ ಇ-ಬಸ್ಸುಗಳು ಬೇರೆ ರಾಜ್ಯಗಳ ಪಾಲಾದರೆ ಬೆಂಗಳೂರಿಗರು ನಿಮ್ಮನ್ನು ಎಂದಿಗೂ ಕ್ಷಮಿಸಲ್ಲ" ಎಂದು ಎಚ್ಚರಿಕೆ ನೀಡಿದೆ.
ಆರ್ಥಿಕ ಹೊರೆ ನೆಪವೊಡ್ಡಿದ ಸಾರಿಗೆ ಸಚಿವ
ಇನ್ನೊಂದೆಡೆ, ಕೇಂದ್ರದ ಇ-ಬಸ್ ಯೋಜನೆಗೆ ಒಪ್ಪಿಗೆ ನೀಡಲು ರಾಜ್ಯ ಸರ್ಕಾರ ಹಿಂದೇಟು ಹಾಕುತ್ತಿರುವುದರ ಹಿಂದೆ ಆರ್ಥಿಕ ಕಾರಣಗಳನ್ನು ಸಾರಿಗೆ ಸಚಿವ ಭೈರತಿ ಸುರೇಶ್ ನೀಡಿದ್ದಾರೆ. ಕೇಂದ್ರ ಸರ್ಕಾರದ ಕಠಿಣ ನಿಯಮಗಳು ಹಾಗೂ ಷರತ್ತುಗಳಿಂದ ರಾಜ್ಯ ಸಾರಿಗೆ ಸಂಸ್ಥೆಗೆ ಭಾರಿ ಆರ್ಥಿಕ ನಷ್ಟ ಉಂಟಾಗುವ ಸಾಧ್ಯತೆ ಇದೆ. ಕೇಂದ್ರ ನೀಡುವ ಸಬ್ಸಿಡಿ ಪ್ರಮಾಣವು ಈ ನಷ್ಟವನ್ನು ಸರಿದೂಗಿಸಲು ಸಾಕಾಗುವುದಿಲ್ಲ ಎಂದು ಹೇಳಿಕೆ ನೀಡಿದ್ದರು.
ಆದರೆ, ಸರ್ಕಾರದ ಈ ವಾದವನ್ನು ಸಾರಾಸಗಟಾಗಿ ತಳ್ಳಿಹಾಕಿರುವ ವಿರೋಧ ಪಕ್ಷಗಳು, ಶಕ್ತಿ ಯೋಜನೆಯ ಬಾಕಿ ಹಣವನ್ನೇ ಸಾರಿಗೆ ಸಂಸ್ಥೆಗಳಿಗೆ ಮರುಪಾವತಿಸದ ಸರ್ಕಾರ, ಈಗ ಉಚಿತವಾಗಿ ಸಿಗುತ್ತಿರುವ 4,500 ಪರಿಸರ ಸ್ನೇಹಿ ಬಸ್‌ಗಳನ್ನು ಕಳೆದುಕೊಳ್ಳಲು ಆರ್ಥಿಕ ಹೊರೆಯ ನೆಪ ಹೇಳುತ್ತಿರುವುದು ಹಾಸ್ಯಾಸ್ಪದ ಎಂದು ಲೇವಡಿ ಮಾಡಿವೆ.

