ಹಸಿದವರಿಗೆ ಅನ್ನ ನೀಡುವ ʼಬಿಎಂಟಿಸಿ ಕೃಷ್ಣʼನ ಅಕ್ಷಯಪಾತ್ರೆ
ಬೆಂಗಳೂರಿನ ಬಿಎಂಟಿಸಿ ಚಾಲಕ ಕೃಷ್ಣಮೂರ್ತಿ ಕಳೆದ ನಾಲ್ಕು ವರ್ಷಗಳಿಂದ ಹಸಿದವರಿಗೆ ಉಚಿತ ಆಹಾರ ವಿತರಿಸುತ್ತಿದ್ದಾರೆ. ತಮ್ಮ ಸಂಬಳದ ಹಣದಲ್ಲೇ ಬಡವರು, ವೃದ್ಧರು ಮತ್ತು ಪೌರಕಾರ್ಮಿಕರಿಗೆ ಅನ್ನ ನೀಡುವ ಇವರ ಮಾನವೀಯ ಸೇವೆಯ ಕಥೆ ಇಲ್ಲಿದೆ.
ಬೆಂಗಳೂರು ನಗರದ ಸಂಚಾರ ದಟ್ಟಣೆಯ ನಡುವೆ ಪ್ರತಿದಿನ ನೂರಾರು ಪ್ರಯಾಣಿಕರನ್ನು ಅವರ ಗಮ್ಯಸ್ಥಾನಕ್ಕೆ ತಲುಪಿಸುವ ಬಿಎಂಟಿಸಿ ಬಸ್ ಚಾಲಕರೊಬ್ಬರು, ಹಸಿದವರ ಹೊಟ್ಟೆ ತುಂಬಿಸುವ ಮೂಲಕ ಮಾನವೀಯತೆಯ ಮಾದರಿಯಾಗಿದ್ದಾರೆ. ಉತ್ತರಹಳ್ಳಿಯಿಂದ ಮೆಜೆಸ್ಟಿಕ್ಗೆ ಸಂಚರಿಸುವ ಬಿಎಂಟಿಸಿ ಬಸ್ ಚಾಲಕ ಕೃಷ್ಣಮೂರ್ತಿ ಕಳೆದ ನಾಲ್ಕು ವರ್ಷಗಳಿಂದ ಬಡವರು, ವೃದ್ಧರು, ಭಿಕ್ಷುಕರು ಮತ್ತು ಪೌರಕಾರ್ಮಿಕರಿಗೆ ಉಚಿತವಾಗಿ ಆಹಾರ ವಿತರಿಸುತ್ತಿದ್ದಾರೆ.
48 ವರ್ಷದ ಕೃಷ್ಣಮೂರ್ತಿ 2009ರಿಂದ ಬಿಎಂಟಿಸಿಯಲ್ಲಿ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ದೈನಂದಿನ ಕೆಲಸದ ಜೊತೆಗೆ ಸಮಾಜಸೇವೆಯನ್ನೂ ರೂಢಿಸಿಕೊಂಡಿರುವ ಅವರು, ಪ್ರತಿದಿನ ಬೆಳಿಗ್ಗೆ ಬಸ್ಗೆ ಕನಿಷ್ಠ 15ರಿಂದ 20 ಆಹಾರದ ಪೊಟ್ಟಣಗಳನ್ನು ತೆಗೆದುಕೊಂಡು ಬರುತ್ತಾರೆ. ರಸ್ತೆಯ ಬದಿಯಲ್ಲಿ ಹಸಿವಿನಿಂದ ಕುಳಿತಿರುವವರು, ವಯಸ್ಸಾದವರು, ಕಸ ಸಂಗ್ರಹಿಸುವವರು ಹಾಗೂ ದುಡಿದು ದಣಿದ ಪೌರಕಾರ್ಮಿಕರನ್ನು ಕಂಡಾಗ ಬಸ್ ನಿಲ್ಲಿಸಿ ಪ್ರೀತಿಯಿಂದ ಆಹಾರ ನೀಡುತ್ತಾರೆ.
ಹಸಿವಿನ ನೋವೇ ಸೇವೆಗೆ ಪ್ರೇರಣೆ
ಕೃಷ್ಣಮೂರ್ತಿ ಅವರ ಈ ಸೇವೆಯ ಹಿಂದೆ ಅವರ ಬದುಕಿನ ಕಹಿ ಅನುಭವಗಳಿವೆ. ಒಂದು ಕಾಲದಲ್ಲಿ ವೈಯಕ್ತಿಕ ಸಮಸ್ಯೆಗಳಿಂದಾಗಿ ಅವರ ಕುಟುಂಬವೇ ತುತ್ತು ಅನ್ನಕ್ಕೂ ಪರದಾಡುವ ಪರಿಸ್ಥಿತಿ ಎದುರಿಸಿತ್ತು. ಮಕ್ಕಳ ಹಸಿದ ಮುಖಗಳನ್ನು ಕಂಡು ಅಸಹಾಯಕರಾಗಿ ಬೇರೆಯವರ ಮುಂದೆ ಕೈಚಾಚಬೇಕಾದ ಸಂದರ್ಭವನ್ನೂ ಅವರು ಎದುರಿಸಿದ್ದರು. ತಾವು ಅನುಭವಿಸಿದ ಹಸಿವಿನ ನೋವು ಮತ್ತೊಬ್ಬರಿಗೆ ಬರಬಾರದು ಎಂಬ ಸಂಕಲ್ಪವೇ ಇಂದು ಅವರ ಸೇವೆಗೆ ಪ್ರೇರಣೆಯಾಗಿದೆ.
ಹಸಿದವರಿಗೆ ಆಹಾರ ನೀಡಿದಾಗ ಅವರ ಮುಖದಲ್ಲಿ ಮೂಡುವ ನಗು ಕೃಷ್ಣಮೂರ್ತಿ ಅವರಿಗೆ ಅಪಾರ ಸಂತೋಷ ನೀಡುತ್ತದೆ. ಕೆಲವರು ಆಹಾರದ ಪೊಟ್ಟಣ ಪಡೆದ ತಕ್ಷಣವೇ ಕುಳಿತು ಊಟ ಮಾಡಲು ಆರಂಭಿಸುವುದನ್ನು ಕಂಡಾಗ, ತಮ್ಮ ಕಷ್ಟದ ದಿನಗಳು ನೆನಪಾಗುತ್ತವೆ ಎಂದು ಅವರು ಹೇಳುತ್ತಾರೆ.
ಕೈಜೋಡಿಸಿದ ಹೋಟೆಲ್ ಮಾಲೀಕ
ಕೃಷ್ಣಮೂರ್ತಿ ಅವರ ಸಮಾಜಮುಖಿ ಕಾರ್ಯಕ್ಕೆ ಉತ್ತರಹಳ್ಳಿಯ ಶ್ರೀ ಸಾಯಿ ತಟ್ಟೆ ಇಡ್ಲಿ ಹೋಟೆಲ್ ಮಾಲೀಕ ರವಿ ಕೂಡ ಕೈಜೋಡಿಸಿದ್ದಾರೆ. ಪ್ರತಿದಿನ ಬೆಳಿಗ್ಗೆ ಕೃಷ್ಣಮೂರ್ತಿ ಅವರಿಗೆ 15ರಿಂದ 20 ಆಹಾರದ ಪೊಟ್ಟಣಗಳನ್ನು ಸಿದ್ಧಪಡಿಸಿಕೊಡುತ್ತಾರೆ. ಪ್ರತಿ ಪೊಟ್ಟಣಕ್ಕೆ ಐದು ರೂಪಾಯಿ ರಿಯಾಯಿತಿ ನೀಡುತ್ತಿದ್ದು, ಕೃಷ್ಣಮೂರ್ತಿ ಅವರು ತಿಂಗಳ ಕೊನೆಯಲ್ಲಿ ಹಣ ಪಾವತಿಸುತ್ತಾರೆ. ಈ ಆಹಾರಕ್ಕಾಗಿ ಅವರು ತಿಂಗಳಿಗೆ ಸುಮಾರು 12,000ರಿಂದ 15,000 ರೂಪಾಯಿ ಖರ್ಚು ಮಾಡುತ್ತಾರೆ.
ಇಷ್ಟಕ್ಕೇ ಅವರ ಸೇವೆ ಸೀಮಿತವಾಗಿಲ್ಲ. ಸ್ವಾತಂತ್ರ್ಯ ದಿನಾಚರಣೆ, ಗಾಂಧಿ ಜಯಂತಿ, ಕನ್ನಡ ರಾಜ್ಯೋತ್ಸವ ಮತ್ತು ಗಣರಾಜ್ಯೋತ್ಸವದಂತಹ ಸಂದರ್ಭಗಳಲ್ಲಿ ಡಿಪೋದಲ್ಲಿಯೇ ನೂರಾರು ಜನರಿಗೆ ಆಹಾರ ವಿತರಿಸುತ್ತಾರೆ. ರಸ್ತೆ ಅಪಘಾತಗಳನ್ನು ತಡೆಯುವ ಉದ್ದೇಶದಿಂದ ಅಗತ್ಯವಿದ್ದ ಸ್ಥಳಗಳಲ್ಲಿ ರಸ್ತೆ ಉಬ್ಬುಗಳನ್ನು ನಿರ್ಮಿಸಲು ಸಹ ಮುಂದಾಗಿದ್ದಾರೆ. ಗಾಯಗೊಂಡ ಪ್ರಾಣಿಗಳ ಆರೈಕೆಯಲ್ಲಿಯೂ ತೊಡಗಿಸಿಕೊಂಡಿದ್ದಾರೆ.
ಸರಳ ಬದುಕಿನಲ್ಲಿ ಅಸಾಧಾರಣ ಮಾನವೀಯತೆ
ದೊಡ್ಡ ಸಂಪತ್ತಾಗಲಿ, ಅಪಾರ ಆದಾಯವಾಗಲಿ ಇಲ್ಲದಿದ್ದರೂ, ತಮ್ಮ ದುಡಿಮೆಯ ಹಣದಲ್ಲಿಯೇ ಹಸಿದವರಿಗೆ ನೆರವಾಗುತ್ತಿರುವ ಕೃಷ್ಣಮೂರ್ತಿ ಅವರು ಮಾನವೀಯತೆಗೆ ಮಾದರಿಯಾಗಿದ್ದಾರೆ. ಪ್ರತಿದಿನ ರಸ್ತೆಯಲ್ಲಿ ಕಾಣುವ ಹಸಿದ ಮುಖಗಳನ್ನು ನಿರ್ಲಕ್ಷಿಸದೆ, ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ.
ಉತ್ತರಹಳ್ಳಿಯಿಂದ ಮೆಜೆಸ್ಟಿಕ್ಗೆ ಸಂಚರಿಸುವ ಅವರ ಬಿಎಂಟಿಸಿ ಬಸ್ ಪ್ರಯಾಣಿಕರನ್ನು ಮಾತ್ರವಲ್ಲ, ಹಸಿದವರ ಬದುಕಿನಲ್ಲೂ ಭರವಸೆಯನ್ನು ತಲುಪಿಸುತ್ತಿದೆ. ಹಸಿದವರಿಗೆ ಅನ್ನ ನೀಡುವುದಕ್ಕಿಂತ ದೊಡ್ಡ ಸೇವೆ ಮತ್ತೊಂದಿಲ್ಲ ಎಂಬ ಮಾತಿಗೆ ಕೃಷ್ಣಮೂರ್ತಿ ಅವರ ಕಾರ್ಯವೇ ಸಾಕ್ಷಿಯಾಗಿದೆ.

