ನೈಸ್ ಟೋಲ್ ದರ ಹೆಚ್ಚಳದ ಬೆನ್ನಲ್ಲೇ ಬಿಎಂಟಿಸಿ ಟಿಕೆಟ್​ ದರವೂ ಏರಿಕೆ?
x

ಪ್ರಯಾಣಿಕರಿಗೆ ಮತ್ತೊಂದು ಶಾಕ್: 25 ರೂಪಾಯಿವರೆಗೆ ದರ ಹೆಚ್ಚಳ

ನೈಸ್ ಟೋಲ್ ದರ ಹೆಚ್ಚಳದ ಬೆನ್ನಲ್ಲೇ ಬಿಎಂಟಿಸಿ ಟಿಕೆಟ್​ ದರವೂ ಏರಿಕೆ?

ಬೆಂಗಳೂರಿನಲ್ಲಿ ನೈಸ್ ರೋಡ್ ಮತ್ತು ನೆಲಮಂಗಲ ಟೋಲ್ ದರ ಏರಿಕೆಯಾದ ಬೆನ್ನಲ್ಲೇ ಬಿಎಂಟಿಸಿ ಬಸ್ ಟಿಕೆಟ್ ದರವನ್ನು 20ರಿಂದ 25 ರೂಪಾಯಿವರೆಗೆ ಹೆಚ್ಚಿಸಲು ಸಾರಿಗೆ ಇಲಾಖೆ ಸಿದ್ಧತೆ ನಡೆಸುತ್ತಿದೆ.


Click the Play button to hear this message in audio format

ಡೀಸೆಲ್ ದರ ಏರಿಕೆ ಹಾಗೂ ತೀವ್ರ ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಈಗಾಗಲೇ ಬಿಎಂಟಿಸಿ ಶೇಕಡಾ 44ರಷ್ಟು ಟಿಕೆಟ್ ದರ ಏರಿಕೆಗೆ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಅದರ ಬೆನ್ನಲ್ಲೇ ಇದೀಗ ನೈಸ್ ರೋಡ್ ಮತ್ತು ನೆಲಮಂಗಲದ ನವಯುಗ ಟೋಲ್ ದರ ಏರಿಕೆಯಾಗಿರುವುದರಿಂದ, ಈ ಟೋಲ್​ಗಳ ಮೂಲಕ ಸಂಚರಿಸುವ ಬಿಎಂಟಿಸಿ ಬಸ್​​​​ಗಳ ಟಿಕೆಟ್ ದರವೂ ಹೆಚ್ಚಳವಾಗುವ ಸಾಧ್ಯತೆಯಿದೆ.

ಮಾದಾವರ, ನೆಲಮಂಗಲದಿಂದ ಎಲೆಕ್ಟ್ರಾನಿಕ್ಸ್ ಸಿಟಿಗೆ ಹೋಗುವ ಬಿಎಂಟಿಸಿ ಬಸ್ ಟಿಕೆಟ್ ದರದಲ್ಲಿ ಸುಮಾರು 20 ರಿಂದ 25 ರೂಪಾಯಿಗಳಷ್ಟು ಹೆಚ್ಚಳವಾಗಬಹುದು ಎನ್ನಲಾಗುತ್ತಿದೆ.

ಈಗಾಗಲೇ ಡೀಸೆಲ್ ದರ ಏರಿಕೆ ಮತ್ತು ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಬಿಎಂಟಿಸಿ ದರ ಏರಿಕೆಗೆ ಗ್ರೀನ್ ಸಿಗ್ನಲ್ ನೀಡುವಂತೆ ಕಳೆದ ಬಾರಿಯ ಸಿಎಂ ಸಭೆಯಲ್ಲಿ ಮನವಿ ಮಾಡಿತ್ತು. ಈ ಬಗ್ಗೆ ಇತ್ತೀಚಿನ ಕ್ಯಾಬಿನೆಟ್​ನಲ್ಲೂ ಸಾರಿಗೆ ಸಚಿವರು ಟಿಕೆಟ್ ದರ ಏರಿಕೆಗೆ ಪ್ರಸ್ತಾಪ ಮುಂದಿಟ್ಟಿದ್ದಾರೆ ಎನ್ನಲಾಗಿದೆ. ಈ ಸಂದರ್ಭದಲ್ಲೇ ಇಂದಿನಿಂದ ನೈಸ್ ರೋಡ್ ಟೋಲ್ ದರ ಏರಿಕೆಯಾಗಿದೆ. ನಂದಿ ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಸಂಸ್ಥೆಯು ಶೇಕಡಾ 10 ಟೋಲ್ ದರವನ್ನು ಹೆಚ್ಚಿಸಿದೆ. ನೈಸ್ ರೋಡ್​ನ ಏಳು ಕಾರಿಡಾರ್ ಟೋಲ್ ದರಗಳನ್ನು ಏರಿಕೆ ಮಾಡಲಾಗಿದ್ದು, ಮೈಸೂರು ರಸ್ತೆಯಿಂದ ಮಾಗಡಿ ರಸ್ತೆ, ಮಾಗಡಿ ರಸ್ತೆಯಿಂದ ತುಮಕೂರು ರಸ್ತೆ, ಹೊಸೂರು ರಸ್ತೆಯಿಂದ ಬನ್ನೇರುಘಟ್ಟ ರಸ್ತೆ ಸೇರಿದಂತೆ ಎಲ್ಲಾ ಟೋಲ್​ಗಳಲ್ಲೂ ದರ ಹೆಚ್ಚಾಗಿದೆ.

ಈ ಹಿಂದೆ ಮೈಸೂರು ರಸ್ತೆಯಿಂದ ಮಾಗಡಿ ರಸ್ತೆ ಸಂಚಾರ ಮಾಡಲು ಬಸ್​ಗೆ 205 ರೂಪಾಯಿ ಇದ್ದದ್ದು ಇದೀಗ 226 ರೂಪಾಯಿ ಆಗಲಿದೆ. ಕಾರಿಗೆ 20 ರೂಪಾಯಿ ಇದ್ದ ದರ 22 ರೂಪಾಯಿ ಹಾಗೂ ಟ್ರಕ್ಕಿಗೆ 140 ರೂಪಾಯಿ ಇದ್ದ ದರ 154 ರೂಪಾಯಿಗೆ ಏರಿಕೆಯಾಗಿದೆ. ಈ ರೀತಿಯಾಗಿ ಪದೇ ಪದೆ ಟೋಲ್ ದರ ಹೆಚ್ಚಳ ಮಾಡುತ್ತಿರುವ ಬಗ್ಗೆ ವಾಹನ ಸವಾರರು ಆಕ್ರೋಶ ಹೊರಹಾಕಿದ್ದಾರೆ.

ಒಂದೆಡೆ ಡೀಸೆಲ್ ದರ ಏರಿಕೆಯ ನೆಪವೊಡ್ಡಿ ಇಡೀ ಬೆಂಗಳೂರಿನಾದ್ಯಂತ ಬಿಎಂಟಿಸಿ ಟಿಕೆಟ್ ದರ ಏರಿಕೆಗೆ ಸಾರಿಗೆ ಇಲಾಖೆ ಸಿದ್ಧತೆ ಮಾಡಿಕೊಳ್ಳುತ್ತಿರುವಾಗಲೇ, ಇತ್ತ ಪ್ರಮುಖ ಹೆದ್ದಾರಿಗಳ ಟೋಲ್ ದರಗಳೂ ದುಬಾರಿಯಾಗಿವೆ. ಇದು ಮುಂದಿನ ದಿನಗಳಲ್ಲಿ ವಾಹನ ಸವಾರರಿಗೆ ಹಾಗೂ ಬಸ್ ಪ್ರಯಾಣಿಕರಿಗೆ 'ಡಬಲ್ ಶಾಕ್' ನೀಡುವ ಸಾಧ್ಯತೆಯಿದೆ.

Read More
Next Story