ಬೆಂಗಳೂರು 2037ರ ದೃಷ್ಟಿಕೋನ: 1 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಗುರಿ - ಸಿಎಂ
x

ಬೆಂಗಳೂರು 2037ರ ದೃಷ್ಟಿಕೋನ: 1 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಗುರಿ - ಸಿಎಂ

ಮುಂದಿನ ವರ್ಷಗಳಲ್ಲಿ ಬೆಂಗಳೂರನ್ನು ಜಾಗತಿಕ ಮಟ್ಟದ ಕೈಗಾರಿಕಾ ಕೇಂದ್ರವನ್ನಾಗಿ ಪರಿವರ್ತಿಸಲು 9 ಹೊಸ ಇಂಟಿಗ್ರೇಟೆಡ್ ಕೈಗಾರಿಕಾ ಟೌನ್‌ಶಿಪ್‌ಗಳನ್ನು ಸ್ಥಾಪಿಸಲಾಗುವುದು ಎಂದು ಸಿಎಂ ಹೇಳಿದ್ದಾರೆ.


Click the Play button to hear this message in audio format

ರಾಜ್ಯದ ಆರ್ಥಿಕತೆಯನ್ನು 2047ರ ವೇಳೆಗೆ 1 ಟ್ರಿಲಿಯನ್ ಡಾಲರ್ ಮತ್ತು 2037ರ ವೇಳೆಗೆ 400-420 ಬಿಲಿಯನ್ ಡಾಲರ್ ಗುರಿಯತ್ತ ಕೊಂಡೊಯ್ಯುವ ಮಹತ್ವಾಕಾಂಕ್ಷೆಯೊಂದಿಗೆ, ಬೆಂಗಳೂರು ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ (ಬಿಎಂಆರ್‌ಡಿಎ) ವ್ಯಾಪ್ತಿಯನ್ನು ಆಮೂಲಾಗ್ರವಾಗಿ ಬದಲಿಸಲು ಸರ್ಕಾರ ಸಜ್ಜಾಗಿದೆ. ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಬೆಂಗಳೂರು ಮಹಾನಗರ ಪ್ರದೇಶದ ಆರ್ಥಿಕ ಅಭಿವೃದ್ಧಿ ಕುರಿತಾದ ಉನ್ನತ ಮಟ್ಟದ ಸಭೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಂದಿನ ದಶಕಗಳ ಅಭಿವೃದ್ಧಿ ದೃಷ್ಟಿಕೋನವನ್ನು ಹಂಚಿಕೊಂಡಿದ್ದಾರೆ.

ರಾಜ್ಯದ ಆರ್ಥಿಕ ಪ್ರಗತಿಯಲ್ಲಿ ಬೆಂಗಳೂರಿನ ಪಾತ್ರ ನಿರ್ಣಾಯಕವಾಗಿದೆ. ಈ ಹಿನ್ನೆಲೆಯಲ್ಲಿ ಸುಗಮ ಸಂಚಾರ, ವಸತಿ ಮತ್ತು ಕೈಗಾರಿಕಾ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಲಾಗುತ್ತಿದೆ. ನಮ್ಮ ಗುರಿ ಸ್ಪಷ್ಟವಾಗಿದ್ದು, ಮುಂಬರುವ ವರ್ಷಗಳಲ್ಲಿ ಬೆಂಗಳೂರನ್ನು ಜಾಗತಿಕ ಗುಣಮಟ್ಟದ ಕೈಗಾರಿಕಾ ಕೇಂದ್ರವನ್ನಾಗಿ ಪರಿವರ್ತಿಸಲು 9 ಹೊಸ ಇಂಟಿಗ್ರೇಟೆಡ್ ಕೈಗಾರಿಕಾ ಟೌನ್‌ಶಿಪ್‌ಗಳನ್ನು ಸ್ಥಾಪಿಸಲಾಗುವುದು. ಈ ಯೋಜನೆಗಾಗಿ ಈಗಾಗಲೇ 7,900 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದ್ದು, ಮತ್ತೊಂದು 5,600 ಎಕರೆ ಭೂಸ್ವಾಧೀನ ಪ್ರಕ್ರಿಯೆ ಚಾಲನೆಯಲ್ಲಿದೆ. ಸಿಂಗಾಪುರದ ಪುಂಗಾಲ್ ಮಾದರಿಯಲ್ಲಿ ಬೆಂಗಳೂರಿನಲ್ಲಿ ಎಐ ಸಿಟಿ ನಿರ್ಮಿಸುವ ಯೋಜನೆಯು ಈ ಅಭಿವೃದ್ಧಿಯ ಪ್ರಮುಖ ಆಕರ್ಷಣೆಯಾಗಿದೆ. ಇದಕ್ಕಾಗಿ ಎಐ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ಸೂಕ್ತ ಸ್ಥಳ ಗುರುತಿಸುವ ಕಾರ್ಯವು ವೇಗವಾಗಿ ನಡೆಯುತ್ತಿದೆ ಎಂದು ಹೇಳಿದರು.

ಸಂಪೂರ್ಣ ಬೆಂಗಳೂರು ಜಿಲ್ಲೆಗೆ ಸಮಗ್ರ ಯೋಜನೆ

ಗ್ರೇಟರ್‌ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಸಭೆಯಲ್ಲಿ ಮಾತನಾಡಿ, ಬೆಂಗಳೂರು ನಗರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಹೊಸ ಸಮಗ್ರ ಯೋಜನೆ ರೂಪಿಸಲಾಗುತ್ತಿದೆ. ಸಂಪೂರ್ಣ ಬೆಂಗಳೂರು ನಗರ ಜಿಲ್ಲೆಯನ್ನು ಜಲಮಂಡಳಿ ವ್ಯಾಪ್ತಿಗೆ ಸೇರ್ಪಡೆಗೊಳಿಸಿ, ನೀರು ಮತ್ತು ಒಳಚರಂಡಿ ವ್ಯವಸ್ಥೆಯನ್ನು ಹಂತ ಹಂತವಾಗಿ ಬಲಪಡಿಸಲಾಗುವುದು. ಜಿಲ್ಲೆಯಾದ್ಯಂತದ ರಸ್ತೆ ಜಾಲವನ್ನು ಗುರುತಿಸಿ, ಅವೆಲ್ಲವನ್ನೂ ಸುಧಾರಿಸುವ ಮೂಲಕ ನಗರೀಕರಣದ ಸಮಗ್ರ ಲಾಭ ದೊರಕುವಂತೆ ನೋಡಿಕೊಳ್ಳಲಾಗುವುದು. ಇದಲ್ಲದೆ, ಬೆಂಗಳೂರು ಜಿಲ್ಲೆಯ ಎಲ್ಲ ಪ್ರದೇಶಗಳನ್ನು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗೆ ತರುವ ಮೂಲಕ ಆಡಳಿತಾತ್ಮಕವಾಗಿ ಏಕರೂಪತೆ ತರಲು ಸರ್ಕಾರ ನಿರ್ಧರಿಸಿದೆ ಎಂದು ತಿಳಿಸಿದರು.

ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ದೀರ್ಘಕಾಲೀನ ಯೋಜನೆಗಳನ್ನು ಸಿದ್ಧಪಡಿಸಲಾಗಿದೆ. 2037ರ ವೇಳೆಗೆ ಹೆಚ್ಚುವರಿ 312 ಕಿ.ಮೀ. ಮೆಟ್ರೋ ಜಾಲವನ್ನು ನಿರ್ಮಿಸುವ ಯೋಜನೆ, 72 ಕಿ.ಮೀ. ಹೆಚ್ಚುವರಿ ಸಬ್ ಅರ್ಬನ್ ರೈಲು ಸಂಪರ್ಕ ಕಲ್ಪಿಸುವುದು, 10 ಹಬ್‌ಗಳನ್ನು ಸಂಪರ್ಕಿಸುವ 210 ಕಿ.ಮೀ. ಉದ್ದದ ಹೊಸ ವರ್ತುಲ ರಸ್ತೆ ನಿರ್ಮಾಣ, ಪೆರಿಫೆರಲ್ ರಿಂಗ್ ರಸ್ತೆ (ಪಿಆರ್‌ಆರ್‌) ಹಂತ-2ನ್ನು ನೈಸ್ ರಸ್ತೆಯೊಂದಿಗೆ ಬೆಸೆಯುವುದು, ಬೆಂಗಳೂರು-ತುಮಕೂರು, ಬೆಂಗಳೂರು-ಮೈಸೂರು ಮತ್ತು ಬೆಂಗಳೂರು-ಕೆಜಿಎಫ್ ನಡುವೆ 270 ಕಿ.ಮೀ. ಉದ್ದದ ಆರ್.ಆರ್.ಟಿ.ಎಸ್ ರಸ್ತೆಗಳ ನಿರ್ಮಾಣ. ಅಲ್ಲದೆ, ಮುಂಬೈ-ಬೆಂಗಳೂರು ಹೈಸ್ಪೀಡ್ ರೈಲನ್ನು ಮೈಸೂರುವರೆಗೆ ವಿಸ್ತರಿಸುವ ಪ್ರಸ್ತಾವನೆಗೂ ಒತ್ತು ನೀಡಲಾಗಿದೆ ಎಂದು ಹೇಳಿದರು.

ಜಲ ನಿರ್ವಹಣೆ ಹಾಗೂ ಸುಸ್ಥಿರತೆ

2037ರ ವೇಳೆಗೆ ಬೆಂಗಳೂರು ಮಹಾನಗರ ಪ್ರದೇಶಕ್ಕೆ 3,600 ಎಂಎಲ್‌ಡಿ ನೀರು ಬೇಕಾಗಲಿದೆ. ಈ ಅಗತ್ಯವನ್ನು ಪೂರೈಸಲು ಸಂಸ್ಕರಿಸಿದ ನೀರನ್ನು ಕೈಗಾರಿಕೆಗಳಿಗೆ ಬಳಸುವುದು, ಕೆರೆಗಳನ್ನು ತುಂಬಿಸುವ ಮೂಲಕ ಅಂತರ್ಜಲ ಮಟ್ಟ ಹೆಚ್ಚಿಸುವುದು ಮತ್ತು ಮಳೆನೀರು ಕೊಯ್ಲು ಪದ್ಧತಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸಿಎಂ ನಿರ್ದೇಶನ ನೀಡಿದ್ದಾರೆ. ಮುಂದಿನ ಹತ್ತು ವರ್ಷಗಳ ನೀರಿನ ಅಗತ್ಯತೆಯನ್ನು ಈಗಲೇ ಅಂದಾಜಿಸಿ, ಯೋಜನೆಗಳನ್ನು ರೂಪಿಸಲು ತಜ್ಞರಿಗೆ ಸೂಚಿಸಲಾಗಿದೆ. ಅಭಿವೃದ್ಧಿಯ ಲಾಭ ಸಾಮಾನ್ಯ ಜನರಿಗೂ ಸಿಗಬೇಕೆಂಬ ಉದ್ದೇಶದಿಂದ, 6 ರಿಂದ 6.5 ಲಕ್ಷ ಮನೆಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ. ವಿಶೇಷವಾಗಿ ನಗರದ ಕೈಗಾರಿಕಾ ಪ್ರದೇಶಗಳಲ್ಲಿ ದುಡಿಯುವ 40 ಸಾವಿರ ದಿಂದ 50 ಸಾವಿರ ಕಾರ್ಮಿಕರಿಗೆ ಕೆಲಸದ ಸ್ಥಳದ ಸಮೀಪದಲ್ಲೇ ಸುಸಜ್ಜಿತ ವಸತಿ ವ್ಯವಸ್ಥೆ ಕಲ್ಪಿಸುವುದು ಸರ್ಕಾರದ ಬದ್ಧತೆಯಾಗಿದೆ ಎಂದರು.

ಸಭೆಯು ಬೆಂಗಳೂರನ್ನು ಕೇವಲ ಒಂದು ನಗರವನ್ನಾಗಿ ನೋಡದೆ, ಒಂದು ದೊಡ್ಡ ಆರ್ಥಿಕ ವಲಯವನ್ನಾಗಿ ಪರಿವರ್ತಿಸುವ ಸರ್ಕಾರದ ಆಶಯವನ್ನು ಪ್ರತಿಬಿಂಬಿಸುತ್ತದೆ. ಆಧುನಿಕ ಸಾರಿಗೆ, ಸ್ವಚ್ಛ ನೀರು, ಕೈಗಾರಿಕಾ ಬೆಳವಣಿಗೆ ಮತ್ತು ತಂತ್ರಜ್ಞಾನ ಆಧಾರಿತ ನಗರಾಭಿವೃದ್ಧಿಯು ಬೆಂಗಳೂರನ್ನು ಮುಂದಿನ ದಿನಗಳಲ್ಲಿ ವಿಶ್ವದ ಅಗ್ರಗಣ್ಯ ನಗರಗಳ ಪಟ್ಟಿಯಲ್ಲಿ ಉಳಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಈ ಬೃಹತ್ ಯೋಜನೆಗಳ ಅನುಷ್ಠಾನಕ್ಕೆ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರ, ಖಾಸಗಿ ಹೂಡಿಕೆದಾರರು ಮತ್ತು ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳ ನಡುವೆ ಉತ್ತಮ ಸಮನ್ವಯ ಸಾಧಿಸಲು ಯೋಜಿಸುತ್ತಿದೆ. ನಗರದ ಮೂಲಸೌಕರ್ಯವು ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿರಬೇಕು ಎಂಬ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಈ ಹೊಸ ಪ್ರಯತ್ನವು, ಬೆಂಗಳೂರಿನ ಭವಿಷ್ಯಕ್ಕೆ ಹೊಸ ಆಯಾಮವನ್ನು ನೀಡಲಿದೆ.

Read More
Next Story