ಎಸ್‌ಐಆರ್‌ಗೆ ಚಾಲನೆ: ಅ.7ಕ್ಕೆ ಅಂತಿಮ ಪಟ್ಟಿ, ಅರ್ಹ ಮತದಾರರ ನೋಂದಣಿಗೆ ಅವಕಾಶ
x

ಎಸ್‌ಐಆರ್‌ಗೆ ಚಾಲನೆ: ಅ.7ಕ್ಕೆ ಅಂತಿಮ ಪಟ್ಟಿ, ಅರ್ಹ ಮತದಾರರ ನೋಂದಣಿಗೆ ಅವಕಾಶ

ಜೂ.29ರವರೆಗೆ ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ ತಂತ್ರಜ್ಞಾನ, ಸರ್ವೆ ವಿಧಾನಗಳ ಕುರಿತು ತರಬೇತಿ ನೀಡಲಾಗುತ್ತದೆ. ಜೂ.30 - ಜು.29ರವರೆಗೆ ಬಿಎಲ್‌ಒಗಳು ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಕಲೆಹಾಕಲಿದ್ದಾರೆ.


Click the Play button to hear this message in audio format

ಭಾರತೀಯ ಪ್ರಜಾಪ್ರಭುತ್ವದ ಬುನಾದಿಯಾಗಿರುವ ಮತದಾರರ ಪಟ್ಟಿಯನ್ನು ದೋಷರಹಿತವಾಗಿಸಲು ಮತ್ತು ಅರ್ಹ ಮತದಾರರನ್ನು ಪ್ರಜಾಪ್ರಭುತ್ವ ಪ್ರಕ್ರಿಯೆಗೆ ಸೇರ್ಪಡೆಗೊಳಿಸಲು ಮುಖ್ಯ ಚುನಾವಣಾಧಿಕಾರಿ ಕಚೇರಿಯು 'ವಿಶೇಷ ತೀವ್ರ ಪರಿಷ್ಕರಣೆ' (ಎಸ್‌ಐಆರ್‌) ಕಾರ್ಯಕ್ರಮಕ್ಕೆ ಶನಿವಾರದಿಂದ ಆರಂಭಗೊಂಡಿದೆ. ಅಕ್ಟೋಬರ್ 1ರ ಅರ್ಹತಾ ದಿನಾಂಕವನ್ನಾಗಿ ನಿಗದಿಪಡಿಸಲಾಗಿದ್ದು, ಹೊಸದಾಗಿ 18 ವರ್ಷ ತುಂಬುವ ಯುವಜನರು ಸೇರಿದಂತೆ ಪ್ರತಿಯೊಬ್ಬ ಅರ್ಹ ನಾಗರಿಕರು ಈ ಪ್ರಕ್ರಿಯೆಯಲ್ಲಿ ಭಾಗವಹಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ರಾಜ್ಯದ ಪ್ರಸ್ತುತ ಮತದಾರರ ಪಟ್ಟಿಯಲ್ಲಿ 5,55,74,064 ಮತದಾರರಿದ್ದು, ಈ ಸಂಖ್ಯೆಯನ್ನು ಇನ್ನಷ್ಟು ನಿಖರವಾಗಿಸಲು ಸುಮಾರು 11 ಕೋಟಿಗೂ ಅಧಿಕ ಎಣಿಕೆ ನಮೂನೆಗಳನ್ನು ಮುದ್ರಿಸಲಾಗುತ್ತಿದೆ. ಈ ಪ್ರಕ್ರಿಯೆಯು ಕೇವಲ ದತ್ತಾಂಶ ಸಂಗ್ರಹಣೆಯಲ್ಲ, ಬದಲಾಗಿ ಪ್ರಜಾಪ್ರಭುತ್ವದ ಅಡಿಪಾಯವನ್ನು ಬಲಪಡಿಸುವ ಮಹಾ ಕಾರ್ಯಾಚರಣೆಯಾಗಿದೆ.

ಜೂನ್ 29ರವರೆಗೆ ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ ತಂತ್ರಜ್ಞಾನ ಮತ್ತು ಸರ್ವೆ ವಿಧಾನಗಳ ಕುರಿತು ತರಬೇತಿ ನೀಡಲಾಗುತ್ತದೆ. ಜೂನ್ 30 - ಜುಲೈ 29ರ ಅವಧಿಯಲ್ಲಿ ಬಿಎಲ್‌ಒಗಳು ಮನೆ ಮನೆಗೆ ಭೇಟಿ ನೀಡಿ, ಮೃತಪಟ್ಟರು, ಸ್ಥಳಾಂತರಗೊಂಡವರು ಮತ್ತು ಹೊಸದಾಗಿ ಸೇರ್ಪಡೆಯಾಗಬೇಕಾದವರ ಮಾಹಿತಿಯನ್ನು ಕಲೆಹಾಕುತ್ತಾರೆ. ಜುಲೈ 29ರಿಂದ ಭೌಗೋಳಿಕ ವ್ಯಾಪ್ತಿ ಮತ್ತು ಮತದಾರರ ಸಂಖ್ಯೆಯನ್ನು ಆಧರಿಸಿ ಮತಗಟ್ಟೆಗಳನ್ನು ಮರುಹೊಂದಿಸಲಾಗುವುದು. ಆಗಸ್ಟ್ 5 ರಂದು ರಾಜ್ಯಾದ್ಯಂತ ಕರಡು ಮತದಾರರ ಪಟ್ಟಿ ಪ್ರಕಟಗೊಳ್ಳಲಿದೆ. ಸಾರ್ವಜನಿಕರು ಈ ಹಂತದಲ್ಲಿ ತಮ್ಮ ಹೆಸರು ಮತ್ತು ವಿವರಗಳನ್ನು ಪರಿಶೀಲಿಸಿಕೊಳ್ಳಬಹುದು. ಅಕ್ಟೋಬರ್ 7ಕ್ಕೆ ಎಲ್ಲಾ ಆಕ್ಷೇಪಣೆಗಳನ್ನು ಇತ್ಯರ್ಥಗೊಳಿಸಿದ ನಂತರ ಅಂತಿಮ ಪಟ್ಟಿ ಅಧಿಕೃತವಾಗಿ ಬಿಡುಗಡೆಯಾಗಲಿದೆ.

ಸಾರ್ವಜನಿಕರ ಪಾಲ್ಗೊಳ್ಳುವಿಕೆ ಹಾಗೂ ಡಿಜಿಟಲೀಕರಣ

ಈ ಬಾರಿಯ ಪರಿಷ್ಕರಣೆಯಲ್ಲಿ ಪಾರದರ್ಶಕತೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಪ್ರತಿಯೊಬ್ಬ ಅರ್ಹ ಮತದಾರರಿಗೆ ಎರಡು ವಿಶೇಷ ಪೂರ್ವಮುದ್ರಿತ ನಮೂನೆಗಳನ್ನು ನೀಡಲಾಗುವುದು. ಇದರಲ್ಲಿ ಒಂದು ಬಿಎಲ್‌ಒಗಳಿಗೆ ನೀಡಬೇಕಾದರೆ, ಇನ್ನೊಂದನ್ನು ದೃಢೀಕರಿಸಿ ಮತದಾರರು ತಮ್ಮ ಬಳಿ ಇಟ್ಟುಕೊಳ್ಳಬಹುದು. ಅಲ್ಲದೆ, 'ವೋಟರ್ ಹೆಲ್ಪ್‌ಲೈನ್ ಆಪ್' ಮತ್ತು ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿಯೂ ಅರ್ಜಿ ಸಲ್ಲಿಸುವ ಸೌಲಭ್ಯವನ್ನು ಕಲ್ಪಿಸಲಾಗಿದೆ. ಜೂನ್ 18ರವರೆಗೆ ರಾಜ್ಯದಲ್ಲಿ ಶೇ. 91.5ರಷ್ಟು ಮತ್ತು ಬೆಂಗಳೂರಿನಲ್ಲಿ ಶೇ. 75ರಷ್ಟು ಮ್ಯಾಪಿಂಗ್ ಕಾರ್ಯ ಪೂರ್ಣಗೊಂಡಿರುವುದು ಈ ಕಾರ್ಯಾಚರಣೆಯ ಗತಿಯನ್ನು ಸೂಚಿಸುತ್ತದೆ.

ವಿವಾದದ ಸುಳಿಯಲ್ಲಿ ಅಂಗನವಾಡಿ ನೌಕರರು

ಒಂದು ಕಡೆ ಚುನಾವಣಾ ಆಯೋಗದ ಸಿದ್ಧತೆ ಸಾಗುತ್ತಿದ್ದರೆ, ಮತ್ತೊಂದೆಡೆ ಈ ಕಾರ್ಯಕ್ಕಾಗಿ ನಿಯೋಜಿಸಲಾಗಿರುವ ಅಂಗನವಾಡಿ ನೌಕರರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ರಾಜ್ಯಾದ್ಯಂತ ಈ ಕೆಲಸಕ್ಕಾಗಿ 59,050 ಬಿಎಲ್‌ಒಗಳು ಮತ್ತು 6,000 ಬಿಎಲ್‌ಒ ಮೇಲ್ವಿಚಾರಕರನ್ನು ನೇಮಿಸಲಾಗಿದ್ದು, ಇದರಲ್ಲಿ ಹೆಚ್ಚಿನ ಸಂಖ್ಯೆಯ ಅಂಗನವಾಡಿ ಕಾರ್ಯಕರ್ತೆಯರಿದ್ದಾರೆ. ಅಪೌಷ್ಟಿಕತೆ ತಡೆ, ಶಿಕ್ಷಣ, ಗರ್ಭಿಣಿ-ಬಾಣಂತಿಯರ ಆರೈಕೆ ಮುಂತಾದ ಅಂಗನವಾಡಿ ಕಾರ್ಯಕರ್ತೆಯರ ಮೂಲ ಕರ್ತವ್ಯಗಳ ಜೊತೆಗೆ ಬಿಎಲ್‌ಒ ಕೆಲಸವು ಅತಿಯಾದ ಹೊರೆಯಾಗಿದೆ ಎಂದು ಅವರು ಆರೋಪಿಸಿದ್ದಾರೆ. ಬಹುತೇಕ ಕಾರ್ಯಕರ್ತೆಯರು ಮಧ್ಯವಯಸ್ಕರಾಗಿದ್ದು, ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆಗಳು, ಸಕ್ಕರೆ ಕಾಯಿಲೆ ಮತ್ತು ಮೂಳೆ ರೋಗಗಳಂತಹ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಇಂತಹ ಸ್ಥಿತಿಯಲ್ಲಿ ಮನೆ ಮನೆಗೆ ಭೇಟಿ ನೀಡಿ ಸಮೀಕ್ಷೆ ನಡೆಸುವುದು ಅವರಿಗೆ ಕಷ್ಟಕರವಾಗಿದೆ. ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆಯ ಮಾನದಂಡದಿಂದ ನೇಮಕಗೊಂಡ ಹಲವು ಕಾರ್ಯಕರ್ತೆಯರಿಗೆ ಇಂದಿನ ಆಧುನಿಕ ಮೊಬೈಲ್ ತಂತ್ರಜ್ಞಾನ ಮತ್ತು ಸಾಫ್ಟ್‌ವೇರ್ ಅಪ್‌ಡೇಟ್ ಮಾಡುವುದರಲ್ಲಿ ನೈಪುಣ್ಯತೆಯ ಕೊರತೆಯಿದೆ. ನಿಗದಿತ ಗುರಿಯನ್ನು ತಲುಪದಿದ್ದರೆ ಕೆಲಸದಿಂದ ತೆಗೆಯುವ ಬೆದರಿಕೆ ಹಾಕಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಅಷ್ಟೇ ಅಲ್ಲದೆ, ದಾಖಲೆಗಳು ಸರಿ ಇಲ್ಲದಿದ್ದರೂ ಸ್ಥಳೀಯ ಅಧಿಕಾರಿಗಳು ಸುಳ್ಳು ದಾಖಲೆಗಳನ್ನು ಸೃಷ್ಟಿಸಲು ಒತ್ತಾಯಿಸುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಆಡಳಿತ - ಸಾಮಾಜಿಕ ಜವಾಬ್ದಾರಿ: ಒಂದು ಸಂಘರ್ಷ

ಚುನಾವಣಾ ಆಯೋಗಕ್ಕೆ ಸುಗಮ ಮತದಾನ ಪ್ರಕ್ರಿಯೆ ಮುಖ್ಯವಾದರೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಂಗನವಾಡಿ ನೌಕರರಿಗೆ ತಮ್ಮ ದಿನನಿತ್ಯದ ಸೇವೆಗಳ ನಿರ್ವಹಣೆ ಮುಖ್ಯವಾಗಿದೆ. ಆಯೋಗವು ಬಿಎಲ್‌ಒ ಕಾರ್ಯಕ್ಕೆ ಬದಲಿ ವ್ಯವಸ್ಥೆಯನ್ನು ಕಲ್ಪಿಸುವ ಬದಲು, ಇರುವ ನೌಕರರ ಮೇಲೆಯೇ ಅವಲಂಬಿತವಾಗಿರುವುದು ಈ ಸಂಘರ್ಷಕ್ಕೆ ಕಾರಣವಾಗಿದೆ. ಅಂಗನವಾಡಿ ನೌಕರರ ಪ್ರತಿಭಟನೆಯು ಪ್ರಜಾಪ್ರಭುತ್ವದ ಪ್ರಕ್ರಿಯೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಗಳ ಮಾನಸಿಕ ಮತ್ತು ದೈಹಿಕ ಸ್ಥಿತಿಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

Read More
Next Story