ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಅಕ್ರಮ: ಕಠಿಣ ಕ್ರಮಕ್ಕೆ ಬಿಜೆಪಿ-ಜೆಡಿಎಸ್‌ ನಾಯಕರ ಆಗ್ರಹ
x

ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಅಕ್ರಮ: ಕಠಿಣ ಕ್ರಮಕ್ಕೆ ಬಿಜೆಪಿ-ಜೆಡಿಎಸ್‌ ನಾಯಕರ ಆಗ್ರಹ

ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಗಾಳಿಗೆ ತೂರಿ, ಬೂತ್ ಮಟ್ಟದ ಅಧಿಕಾರಿಗಳು ಎಸಗುತ್ತಿರುವ ಲೋಪದೋಷಗಳ ಬಗ್ಗೆ ಎನ್‌ಡಿಎ ನಾಯಕರು ಕಳವಳ ವ್ಯಕ್ತಪಡಿಸಿದ್ದಾರೆ.


Click the Play button to hear this message in audio format

ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ಮತದಾರರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯಲ್ಲಿ ಭಾರೀ ಅಕ್ರಮಗಳು ನಡೆಯುತ್ತಿವೆ ಎಂದು ಆರೋಪಿಸಿ ಪ್ರತಿಪಕ್ಷಗಳಾದ ಬಿಜೆಪಿ-ಜೆಡಿಎಸ್‌ ಜಂಟಿಯಾಗಿ ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಿದೆ. ಮತದಾರರ ಪಟ್ಟಿಯ ಪಾವಿತ್ರ್ಯತೆ ಮತ್ತು ಪ್ರಜಾಪ್ರಭುತ್ವದ ಅಡಿಪಾಯದ ಮೇಲೆ ಎತ್ತಲಾಗಿರುವ ಈ ಗಂಭೀರ ಆರೋಪಗಳು ರಾಜ್ಯದ ಆಡಳಿತಾರೂಢ ಸರ್ಕಾರಕ್ಕೆ ಹೊಸ ತಲೆನೋವಾಗಿ ಪರಿಣಮಿಸಿವೆ.

ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ಎಚ್.ಡಿ. ಕುಮಾರಸ್ವಾಮಿ, ಶೋಭಾ ಕರಂದ್ಲಾಜೆ ಸೇರಿದಂತೆ ಬಿಜೆಪಿ-ಜೆಡಿಎಸ್‌ನ ವಿಧಾನಸಭೆ ಹಾಗೂ ವಿಧಾನಪರಿಷತ್‌ ಸದಸ್ಯರು ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್‌ಗೆ ದೂರು ನೀಡಿದರು. ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಗಾಳಿಗೆ ತೂರಿ, ಬೂತ್ ಮಟ್ಟದ ಅಧಿಕಾರಿಗಳು ಎಸಗುತ್ತಿರುವ ಲೋಪದೋಷಗಳ ಬಗ್ಗೆ ಎನ್‌ಡಿಎ ನಾಯಕರು ಕಳವಳ ವ್ಯಕ್ತಪಡಿಸಿದ್ದಾರೆ.

ನಾಯಕರ ಆರೋಪಗಳು

ಚುನಾವಣಾ ಆಯೋಗದ ಎಸ್‌ಐಆರ್‌ ಮಾರ್ಗಸೂಚಿಗಳ ಪ್ರಕಾರ, ಬೂತ್ ಮಟ್ಟದ ಅಧಿಕಾರಿಗಳು ಪ್ರತಿಯೊಂದು ಮನೆಗೂ ಖುದ್ದಾಗಿ ಭೇಟಿ ನೀಡಿ, ಕುಟುಂಬದ ಸದಸ್ಯರ ಗುರುತನ್ನು ಪರಿಶೀಲಿಸುವುದು ಕಡ್ಡಾಯವಾಗಿದೆ. ಆದರೆ, ಇಂತಹ ಯಾವುದೇ ಪರಿಶೀಲನೆ ನಡೆಯುತ್ತಿಲ್ಲ ಎಂದು ದೂರಿನಲ್ಲಿ ಆರೋಪಿಸಿವೆ. ಸಮುದಾಯ ಭವನಗಳು, ಮಸೀದಿಗಳು ಮತ್ತು ಬೂತ್ ಮಟ್ಟದ ಅಧಿಕಾರಿಗಳ ಸ್ವಂತ ನಿವಾಸಗಳಲ್ಲಿ ಕುಳಿತು ಮತದಾರರ ಪಟ್ಟಿಯ ನಮೂನೆಗಳನ್ನು ಭರ್ತಿ ಮಾಡಲಾಗುತ್ತಿದೆ. ಇದು ಪಾರದರ್ಶಕತೆಗೆ ವಿರುದ್ಧವಾಗಿದ್ದು, ಮತದಾರರ ಪಟ್ಟಿಯನ್ನು ಒಂದು ನಿರ್ದಿಷ್ಟ ಗುಂಪಿನ ಹಿತಾಸಕ್ತಿಗೆ ಒಳಪಡಿಸುವ ಪ್ರಯತ್ನ ಇದಾಗಿದೆ. ಮತದಾರರ ನೋಂದಣಿಗಾಗಿ ವಾಟ್ಸಾಪ್ ಗುಂಪುಗಳನ್ನು ಸೃಷ್ಟಿಸಿ, ಜನರನ್ನು ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡುವಂತೆ ಪ್ರೇರೇಪಿಸುತ್ತಿರುವುದು ಅಕ್ರಮ ಮತ್ತು ಪ್ರಜಾಪ್ರಭುತ್ವದ ವಿರೋಧಿಯಾಗಿದೆ. ಇಂತಹ ಪ್ರಕ್ರಿಯೆಗಳು ಚುನಾವಣಾ ವ್ಯವಸ್ಥೆಯ ಜಾತ್ಯತೀತ ಹಾಗೂ ನಿಷ್ಪಕ್ಷಪಾತ ಸ್ವಭಾವವನ್ನು ಹಾಳುಮಾಡುತ್ತಿವೆ. ಇದು ಮತದಾರರ ಪಟ್ಟಿಯ ನಂಬಿಕೆಯನ್ನು ಕುಂದಿಸುವ ಕೆಲಸ ಮಾಡುತ್ತಿದೆ ಎಂದು ಬಿಜೆಪಿ-ಜೆಡಿಎಸ್‌ನ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎನ್‌ಡಿಎ ನಾಯಕರ ಬೇಡಿಕೆಗಳೇನು?

ಈ ಅಕ್ರಮಗಳ ಗಂಭೀರತೆಯನ್ನು ಪರಿಗಣಿಸಿ, ಎನ್‌ಡಿಎ ನಾಯಕರು ನಡೆಯುತ್ತಿರುವ ಅಕ್ರಮಗಳ ಕುರಿತು ತುರ್ತು ವಿಚಾರಣೆ ನಡೆಸಬೇಕು. ಈಗಾಗಲೇ ಭರ್ತಿ ಮಾಡಲಾದ ಎಲ್ಲಾ ನಮೂನೆಗಳನ್ನು ಕಡ್ಡಾಯವಾಗಿ ಮನೆ ಬಾಗಿಲಿಗೆ ಭೇಟಿ ನೀಡುವ ಪದ್ಧತಿಯ ಮೂಲಕವೇ ಮರು ಪರಿಶೀಲನೆಗೆ ಒಳಪಡಿಸಬೇಕು. ನಿಯಮ ಉಲ್ಲಂಘನೆಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಮತ್ತು ಈ ಪ್ರಕ್ರಿಯೆಯಲ್ಲಿ ಭಾಗಿಯಾಗಿರುವ ರಾಜಕೀಯ ಕಾರ್ಯಕರ್ತರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಈ ದೂರಿನ ಪತ್ರವು ಕೇವಲ ಒಂದು ಆಡಳಿತಾತ್ಮಕ ದೂರು ಮಾತ್ರವಲ್ಲ, ಇದು ಮುಂದಿನ ಚುನಾವಣೆಗಳ ಮೇಲೆ ಹಿಡಿತ ಸಾಧಿಸಲು ನಡೆಯುತ್ತಿರುವ ಒಂದು ರಾಜಕೀಯ ಜಟಾಪಟಿಯ ಮುನ್ಸೂಚನೆಯಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.

ಯಾವುದೇ ಪ್ರಜಾಪ್ರಭುತ್ವದಲ್ಲಿ ಮತದಾರರ ಪಟ್ಟಿಯೇ ಆಧಾರಸ್ತಂಭ. ಅದರಲ್ಲಿ ಸಣ್ಣ ದೋಷವಾದರೂ ಚುನಾವಣೆಯ ಫಲಿತಾಂಶದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ವಿರೋಧ ಪಕ್ಷಗಳು ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿರುವುದು, ಆಡಳಿತ ಪಕ್ಷವು ಅನಗತ್ಯವಾಗಿ ಮತದಾರರ ಪಟ್ಟಿಯಲ್ಲಿ ಬದಲಾವಣೆಗಳನ್ನು ಮಾಡುತ್ತಿದೆ ಎಂಬ ಶಂಕೆಯನ್ನು ಬಲಪಡಿಸುತ್ತದೆ. ಚುನಾವಣಾ ಆಯೋಗದಂತಹ ಸಾಂವಿಧಾನಿಕ ಸಂಸ್ಥೆಯ ಅಧಿಕಾರಿಗಳ ಮೇಲೆ ಬೊಟ್ಟು ಮಾಡಿರುವ ವಿಪಕ್ಷಗಳು, ಆಡಳಿತ ಪಕ್ಷದ ಒತ್ತಡಕ್ಕೆ ಅಧಿಕಾರಿಗಳು ಮಣಿದಿದ್ದಾರೆ ಎಂದು ನೇರ ಆರೋಪಿಸಲಾಗಿದೆ. ಇದು ಕರ್ನಾಟಕದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವಿನ ಹದಗೆಟ್ಟ ಸಂಬಂಧವನ್ನು ಸೂಚಿಸುತ್ತದೆ.

ಆಡಳಿತ ವ್ಯವಸ್ಥೆಯ ಮೇಲೆ ಪರಿಣಾಮ

ಅಧಿಕಾರಿಗಳು ಮನೆ-ಮನೆಗೆ ಹೋಗದೆ, ಒಂದೇ ಸ್ಥಳದಲ್ಲಿ ಕುಳಿತು ಪಟ್ಟಿ ಸಿದ್ಧಪಡಿಸುವುದು ಸಂಪೂರ್ಣವಾಗಿ ನಿಯಮಬಾಹಿರ. ಇದು ಮತದಾರರ ಪಟ್ಟಿಯಲ್ಲಿ ಕಳ್ಳ ಮತದಾರರ ಸೇರ್ಪಡೆಗೆ ಅಥವಾ ನೈಜ ಮತದಾರರ ಹೆಸರು ಕೈಬಿಟ್ಟು ಹೋಗಲು ದಾರಿ ಮಾಡಿಕೊಡುತ್ತದೆ. ಇಂತಹ ಪ್ರಕ್ರಿಯೆಗಳು ಪೂರ್ಣಗೊಂಡರೆ, ಅದು ಭವಿಷ್ಯದಲ್ಲಿ ಚುನಾವಣಾ ಆಯೋಗದ ಘನತೆಯನ್ನು ಪ್ರಶ್ನಿಸುವಂತಹ ಅತಿದೊಡ್ಡ ವಿವಾದಕ್ಕೆ ಎಡೆಮಾಡಿಕೊಡುತ್ತದೆ. ಚುನಾವಣಾ ಆಯೋಗವು ಈ ದೂರಿಗೆ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಕಾದುನೋಡಬೇಕಿದೆ.

Read More
Next Story