ಲಿಂಗಸುಗೂರಿನಿಂದ ಬಳ್ಳಾರಿಯತ್ತ ಬಿಜೆಪಿ ರಣಕಹಳೆ: ಸರ್ಕಾರ ವಿರುದ್ಧ ಪಾದಯಾತ್ರೆ ಆರಂಭ
x

ಲಿಂಗಸುಗೂರಿನಿಂದ ಬಳ್ಳಾರಿಯತ್ತ ಬಿಜೆಪಿ ರಣಕಹಳೆ: ಸರ್ಕಾರ ವಿರುದ್ಧ ಪಾದಯಾತ್ರೆ ಆರಂಭ

ಕಾಂಗ್ರೆಸ್‌ ಸರ್ಕಾರವು ಅಧಿಕಾರದ ಮದದಲ್ಲಿ ಮೆರೆಯುತ್ತಿದ್ದು, ಮಹಿಳಾ ವಿರೋಧಿ, ರೈತ ವಿರೋಧಿ, ಪ್ರಗತಿ ವಿರೋಧಿಯಾಗಿದೆ ಎಂದು ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಟೀಕಾಪ್ರಹಾರ ನಡೆಸಿದ್ದಾರೆ.


Click the Play button to hear this message in audio format

ರಾಜ್ಯದಲ್ಲಿನ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ, ರೈತ ವಿರೋಧಿ ಧೋರಣೆ ಮತ್ತು ಆಡಳಿತ ವೈಫಲ್ಯಗಳನ್ನು ಖಂಡಿಸಿ, ಬಿಜೆಪಿ ಹಮ್ಮಿಕೊಂಡಿರುವ ಬಳ್ಳಾರಿ ಚಲೋ ಪಾದಯಾತ್ರೆಗೆ ರಾಯಚೂರು ಜಿಲ್ಲೆಯ ಲಿಂಗಸುಗೂರಿನಲ್ಲಿ ಚಾಲನೆ ದೊರೆತಿದೆ. ರಾಜ್ಯದ ಮೂಲೆಮೂಲೆಗಳಿಂದ ಆಗಮಿಸಿದ್ದ ಸಾವಿರಾರು ಕಾರ್ಯಕರ್ತರು ಮತ್ತು ರೈತರ ಸಮ್ಮುಖದಲ್ಲಿ, ಪಕ್ಷದ ಪ್ರಮುಖ ಮುಖಂಡರು ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಪಾದಯಾತ್ರೆಯ ಉದ್ಘಾಟನಾ ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕಹಳೆ ಊದುವ ಮೂಲಕ ಐತಿಹಾಸಿಕ ಹೋರಾಟಕ್ಕೆ ಚಾಲನೆ ನೀಡಿದರು. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಸಂಸದ ಗೋವಿಂದ ಕಾರಜೋಳ, ಶಾಸಕ ಮಾನಪ್ಪ ವಜ್ಜಲ ಸೇರಿದಂತೆ ಹಿರಿಯ ನಾಯಕರು ಉಪಸ್ಥಿತರಿದ್ದರು. ರೈತಗೀತೆಯೊಂದಿಗೆ ಆರಂಭವಾದ ಸಮಾವೇಶವು ಸರ್ಕಾರದ ವಿರುದ್ಧದ ಜನಾಕ್ರೋಶದ ಪ್ರತೀಕವಾಗಿತ್ತು.

ಮುಖ್ಯಮಂತ್ರಿಗಳಿಗೆ ಸ್ವಾತಂತ್ರ್ಯವಿಲ್ಲವೇ? - ಬಿ.ಎಸ್. ಯಡಿಯೂರಪ್ಪ

ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಬಿ.ಎಸ್. ಯಡಿಯೂರಪ್ಪ, ಈ ಪಾದಯಾತ್ರೆಯನ್ನು ಕೇವಲ ರಾಜಕೀಯ ಕಾರ್ಯಕ್ರಮವಾಗಿ ನೋಡಬೇಡಿ, ಇದು 6 ಕೋಟಿ ಕನ್ನಡಿಗರ ಆಶೋತ್ತರಗಳ ಧ್ವನಿ ಎಂದು ಬಣ್ಣಿಸಿದರು. ಅಧಿಕಾರದ ಮದದಲ್ಲಿ ಮೆರೆಯುತ್ತಿರುವ ಈ ಸರ್ಕಾರ ಮಹಿಳಾ ವಿರೋಧಿ, ರೈತ ವಿರೋಧಿ ಮತ್ತು ಪ್ರಗತಿ ವಿರೋಧಿಯಾಗಿದೆ. ಮುಖ್ಯಮಂತ್ರಿಗಳು ದೆಹಲಿಗೆ ಹೋಗಿ ರಾಹುಲ್ ಗಾಂಧಿಯವರ ಕಾಲು ಹಿಡಿಯುವ ಸ್ಥಿತಿಯಲ್ಲಿದ್ದಾರೆ. ಸ್ವತಂತ್ರವಾಗಿ ಆಡಳಿತ ನಡೆಸುವ ಶಕ್ತಿಯೂ ಇಲ್ಲದ ಇವರು ಮುಖ್ಯಮಂತ್ರಿ ಹುದ್ದೆಗೆ ಶೋಭೆ ತರುತ್ತಾರೆಯೇ? ಎಂದು ತೀವ್ರ ವಾಗ್ದಾಳಿ ನಡೆಸಿದರು.

ಸರ್ಕಾರ ಪಾಪರ್ ಆಗಿದೆ -ಆರ್. ಅಶೋಕ್

ವಿಧಾನಸಭೆಯ ವಿಪಕ್ಷ ನಾಯಕ ಆರ್. ಅಶೋಕ್ ಅವರು ರಾಜ್ಯ ಸರ್ಕಾರದ ಆರ್ಥಿಕ ದಿವಾಳಿತನವನ್ನು ಪ್ರಶ್ನಿಸಿದರು. ಸಿದ್ದರಾಮಯ್ಯನವರ ಕಾಲದಲ್ಲಿ ದರೋಡೆ ನಡೆಯುತ್ತಿತ್ತು, ಈಗ ಡಿಕೆಶಿ ಆಡಳಿತದಲ್ಲಿ ತೆರಿಗೆ ಹೆಚ್ಚಳದ ಹೆಸರಿನಲ್ಲಿ ಜನಸಾಮಾನ್ಯರ ಜೇಬಿಗೆ ಕನ್ನ ಹಾಕಲಾಗುತ್ತಿದೆ. 175 ತಾಲೂಕುಗಳು ಬರಗಾಲದಿಂದ ಬಳಲುತ್ತಿದ್ದರೂ, ಕೇವಲ 101 ತಾಲೂಕುಗಳನ್ನು ಮಾತ್ರ ಬರಪೀಡಿತ ಎಂದು ಘೋಷಿಸಲಾಗಿದೆ. ಹಣಕಾಸಿನ ಅಭಾವದಿಂದ ಸರ್ಕಾರ ಪಾಪರ್ ಆಗಿದೆ ಎಂದು ವ್ಯಂಗ್ಯವಾಡಿದರು.

ಸರ್ಕಾರದ ವೈಫಲ್ಯಗಳ ವಿರುದ್ಧ ಕಿಡಿ

ಬಸವರಾಜ ಬೊಮ್ಮಾಯಿ ಮಾತನಾಡಿ, ಇದು ಹೋರಾಟದ ಮೊದಲ ಹೆಜ್ಜೆ. ನಾವು ರಾಜ್ಯದ ಜನರ ದನಿಗಾಗಿ ಹೋರಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಇಡೀ ರಾಜ್ಯದಾದ್ಯಂತ ಸರ್ಕಾರದ ಹಗರಣಗಳನ್ನು ಬಯಲಿಗೆಳೆಯಲಿದ್ದೇವೆ. ನಮ್ಮ ಪ್ರತಿ ಹೆಜ್ಜೆಯೂ ಜನಪರವಾಗಿದೆ ಎಂದು ಕರೆ ನೀಡಿದರು.‌ ಸಂಸದ ಜಗದೀಶ ಶೆಟ್ಟರ್ ಮಾತನಾಡಿ, ನಾಗೇಂದ್ರ ಅವರ ರಾಜೀನಾಮೆಯೇ ನಮ್ಮ ಹೋರಾಟದ ಮೊದಲ ಜಯ. ಈಗಿನ ಸಚಿವ ಸಂಪುಟದಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮತ್ತು ಹೈಕಮಾಂಡ್ ಎಂಬ ಮೂರು ಬಣಗಳ ನಡುವಿನ ಆಂತರಿಕ ಕಲಹದಿಂದ ಆಡಳಿತ ಸಂಪೂರ್ಣ ಕುಸಿದಿದೆ ಎಂದರು.

ವಿಧಾನಪರಿಷತ್‌ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಈ ಸರ್ಕಾರ ಶೌಚಾಲಯಗಳನ್ನೂ ಕಟ್ಟಿಕೊಡುವ ಸ್ಥಿತಿಯಲ್ಲಿಲ್ಲ. ಕೇಂದ್ರದಿಂದ ಬಂದ ಅನುದಾನವನ್ನೂ ಲೂಟಿ ಮಾಡಿ ನುಂಗಿದ್ದಾರೆ. ಇದು ಯುವಜನತೆ ಮತ್ತು ದಲಿತರ ವಿರೋಧಿ ಸರ್ಕಾರ ಎಂದು ಕಿಡಿಕಾರಿದರು. ಮಾಜಿ ಸಚಿವ ಬಿ. ಶ್ರೀರಾಮುಲು ಮಾತನಾಡಿ, ಅರಮನೆಯಲ್ಲಿ ಕುಳಿತು ಆಡಳಿತ ನಡೆಸುವ ಸರ್ಕಾರಕ್ಕೆ ಜನಸಾಮಾನ್ಯರ ಗೋಳು ಕೇಳುತ್ತಿಲ್ಲ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ರೈತರು ಗುಳೆ ಹೋಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ಪಾದಯಾತ್ರೆಯ ಮುಖ್ಯ ಉದ್ದೇಶಗಳು

ಲಿಂಗಸಗೂರಿನಿಂದ ಆರಂಭವಾದ ಈ ಬೃಹತ್ ಪಾದಯಾತ್ರೆಯು ಬಳ್ಳಾರಿಯತ್ತ ಸಾಗಲಿದೆ. ದಲಿತರ ಹಣವನ್ನು ಅನ್ಯ ಉದ್ದೇಶಕ್ಕೆ ದುರುಪಯೋಗಪಡಿಸಿಕೊಂಡಿದ್ದರ ವಿರುದ್ಧ ಸಮರವಾಗಿದೆ. ಬಾಕಿ ಉಳಿದ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸುವುದು. ಜನಸಾಮಾನ್ಯರ ಮೇಲೆ ಹೊರಿಸಲಾಗಿರುವ ಹೆಚ್ಚುವರಿ ಆರ್ಥಿಕ ಹೊರೆಯ ವಿರೋಧ, ಸಚಿವರ ನಡುವಿನ ಭಿನ್ನಮತ ಮತ್ತು ಸರ್ಕಾರದ ಭ್ರಷ್ಟಾಚಾರದ ಕುರಿತು ಜನಜಾಗೃತಿ ಮೂಡಿಸುವುದು ಪಾದಯಾತ್ರೆಯ ಉದ್ದೇಶವಾಗಿದೆ. ಹತ್ತು ದಿನಗಳ ಕಾಲ ನಡೆಯಲಿರುವ ಈ ಪಾದಯಾತ್ರೆಯು, ಕರ್ನಾಟಕದ ಪ್ರತಿಯೊಂದು ಹಳ್ಳಿ-ಪಟ್ಟಣ ತಲುಪಲಿದೆ. ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ಕಡತಗಳನ್ನು ಜನರ ಮುಂದಿಡುವ ಮೂಲಕ, ಸರ್ಕಾರದ ನಿಜಸ್ವರೂಪವನ್ನು ಬಯಲಿಗೆಳೆಯಲು ಬಿಜೆಪಿ ಸಜ್ಜಾಗಿದೆ. ರಾಜ್ಯದ ಜನತೆಯ ಬೆಂಬಲದೊಂದಿಗೆ, ಹೋರಾಟವನ್ನು ತೀವ್ರಗೊಳಿಸಿ ಸರ್ಕಾರವನ್ನು ಉರುಳಿಸುವವರೆಗೂ ನಿಲ್ಲುವುದಿಲ್ಲ ಎಂದು ಮುಖಂಡರು ಶಪಥ ಮಾಡಿದರು.

Read More
Next Story