ಮತದಾರರ ಪಟ್ಟಿ ಪರಿಷ್ಕರಣೆ ವಿವಾದ: ಫಾರ್ಮ್ 7 ಸಲ್ಲಿಕೆಗೆ ಎಫ್ಐಆರ್ ದಾಖಲಿಸಿದ ಕಾಂಗ್ರೆಸ್ ವಿರುದ್ಧ ಡಾ. ಅನಿಲ್ ಥಾಮಸ್ ಕಿಡಿ
'ದ ಫೆಡರಲ್ ಕರ್ನಾಟಕ'ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ಡಾ. ಅನಿಲ್ ಥಾಮಸ್, ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಹಲವು ಮಹತ್ವದ ಪ್ರಶ್ನೆಗಳನ್ನು ಎತ್ತಿದ್ದಾರೆ.
ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ 'ಫಾರ್ಮ್ 7' ದುರ್ಬಳಕೆ ಮಾಡಲಾಗಿದೆ ಎಂಬ ಗಂಭೀರ ಆರೋಪದ ಮೇಲೆ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಕಾರ್ಯಕರ್ತರ ವಿರುದ್ಧ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಎಫ್ಐಆರ್ ದಾಖಲಾಗುತ್ತಿವೆ.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರು ನಗರ ಪೊಲೀಸ್ ಠಾಣೆಯಲ್ಲಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಜ್ಯಾಧ್ಯಕ್ಷರಾದ ಡಾ. ಅನಿಲ್ ಥಾಮಸ್ ಅವರ ಮೇಲೆಯೂ ಪ್ರಕರಣ ದಾಖಲಾಗಿದೆ. ಈ ಬೆಳವಣಿಗೆಗಳ ಕುರಿತು 'ದ ಫೆಡರಲ್ ಕರ್ನಾಟಕ'ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ಡಾ. ಅನಿಲ್ ಥಾಮಸ್, ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಹಲವು ಮಹತ್ವದ ಪ್ರಶ್ನೆಗಳನ್ನು ಎತ್ತಿದ್ದಾರೆ.
ಸಾಂವಿಧಾನಿಕ ಹಕ್ಕು ಮತ್ತು ಬಿಎಲ್ಎ ಜವಾಬ್ದಾರಿ
ಮತದಾರರ ಪಟ್ಟಿಯಲ್ಲಿನ ಲೋಪಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಲು ಚುನಾವಣಾ ಆಯೋಗವೇ ನಮಗೆ ಫಾರ್ಮ್ 7 ಸಲ್ಲಿಸುವ ಅಧಿಕಾರ ನೀಡಿದೆ. ಇದೊಂದು ಸಾಂವಿಧಾನಿಕ ಪ್ರಕ್ರಿಯೆಯಾಗಿದ್ದು, ಇದನ್ನು ಅಪರಾಧ ಎಂಬಂತೆ ಬಿಂಬಿಸುತ್ತಿರುವುದು ದುರದೃಷ್ಟಕರ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೈಸೂರಿನ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಉಸ್ತುವಾರಿಯಾಗಿ ನನ್ನನ್ನು ಪಕ್ಷ ನೇಮಿಸಿದೆ. ಆ ಕ್ಷೇತ್ರದ ಒಟ್ಟು 243 ಬೂತ್ಗಳಲ್ಲಿ ನಾನು ಬೂತ್ ಲೆವೆಲ್ ಏಜೆಂಟ್ (ಬಿಎಲ್ಎ) ಆಗಿ ಕಾರ್ಯನಿರ್ವಹಿಸುತ್ತಿದ್ದು, ಕ್ಷೇತ್ರದ ಮತದಾರರ ಪಟ್ಟಿಯ ಮೇಲೆ ನಿಗಾ ಇಡುವ ಸಂಪೂರ್ಣ ಜವಾಬ್ದಾರಿ ನನ್ನ ಮೇಲಿದೆ ಎಂದು ಅವರು ತಮ್ಮ ಕಾರ್ಯವ್ಯಾಪ್ತಿಯನ್ನು ಸ್ಪಷ್ಟಪಡಿಸಿದ್ದಾರೆ.
ಎನುಮರೇಷನ್ ಪ್ರಕ್ರಿಯೆಯಲ್ಲಿನ ಲೋಪ ಮತ್ತು ಅನುಮಾನ
ನಿಯಮಗಳ ಪ್ರಕಾರ, ಎನುಮರೇಷನ್ ಫಾರ್ಮ್ಗಳನ್ನು ಅಧಿಕಾರಿಗಳು ಮನೆ ಮನೆಗೆ ತೆರಳಿ ವಿತರಿಸಬೇಕಿತ್ತು. ಆದರೆ, ಹಾಗೆ ಮಾಡಿಲ್ಲ ಎಂಬ ದೂರುಗಳು ವ್ಯಾಪಕವಾಗಿ ಕೇಳಿಬಂದಿದ್ದವು. ನರಸಿಂಹರಾಜ ಕ್ಷೇತ್ರದ ಸುಮಾರು 100 ಬೂತ್ಗಳು ಅಲ್ಪಸಂಖ್ಯಾತ ಬಾಹುಳ್ಯವನ್ನು ಹೊಂದಿವೆ. ಈ ಸೂಕ್ಷ್ಮ ಪ್ರದೇಶಗಳಲ್ಲಿ ಏಕಾಏಕಿ ತೆರಳಿ ಫಾರ್ಮ್ ವಿತರಿಸಲು ಮುಂದಾದರೆ ಘರ್ಷಣೆಗಳು ಉಂಟಾಗುವ ಸಾಧ್ಯತೆಯಿದೆ ಎಂದು ನಾನು ಮೊದಲೇ ನಮ್ಮ ಪಕ್ಷದ ಮುಖಂಡರ ಗಮನಕ್ಕೆ ತಂದಿದ್ದೆ. ಅಲ್ಲದೆ, ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಅವರೊಂದಿಗಿನ ವಿಡಿಯೋ ಸಂವಾದದ ವೇಳೆ, ಎಲ್ಲಾ ರಾಜಕೀಯ ಪಕ್ಷಗಳ ಬೂತ್ ಲೆವೆಲ್ ಏಜೆಂಟ್ಗಳನ್ನು (ಬಿಎಲ್ಎ) ಜೊತೆಯಲ್ಲಿ ಕರೆದೊಯ್ದು ಎನುಮರೇಷನ್ ಫಾರ್ಮ್ ಹಂಚುವಂತೆ ನಾನೇ ಖುದ್ದಾಗಿ ಮನವಿ ಮಾಡಿದ್ದೆ ಎಂದು ಅವರು ನೆನಪಿಸಿಕೊಂಡಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ನರಸಿಂಹರಾಜ ಕ್ಷೇತ್ರದಲ್ಲಿ ದಿಢೀರನೆ ಸುಮಾರು ಒಂದು ಲಕ್ಷಕ್ಕೂ ಅಧಿಕ ಹೊಸ ಮತಗಳು ಸೇರ್ಪಡೆಯಾಗಿದ್ದವು. ಈ ಅಸಹಜ ಏರಿಕೆಯ ಬಗ್ಗೆ ನಾವು ಪರಿಶೀಲನೆ ನಡೆಸಿದಾಗ ನಮಗೆ ಹಲವು ಅನುಮಾನಗಳು ಮೂಡಿದ್ದವು ಎಂದಿದ್ದಾರೆ.
ಕಾಂಗ್ರೆಸ್ ವಿರುದ್ಧ ದ್ವೇಷ ರಾಜಕಾರಣದ ಆರೋಪ
ಮತದಾರರ ಸೇರ್ಪಡೆ ಬಗ್ಗೆ ನಮಗೆ ಅನುಮಾನವಿದ್ದಾಗ ನಾವು ಫಾರ್ಮ್ 7 ಅನ್ನು ಸಲ್ಲಿಸುತ್ತೇವೆ. ಆನಂತರ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್ಒ) ಖುದ್ದಾಗಿ ಮನೆ ಮನೆಗೆ ತೆರಳಿ ಆಕ್ಷೇಪಣೆಗಳ ಸತ್ಯಾಸತ್ಯತೆಯನ್ನು ಪರಿಶೀಲಿಸುತ್ತಾರೆ. ಇದೊಂದು ಸಾಮಾನ್ಯ ಪರಿಶೀಲನಾ ಪ್ರಕ್ರಿಯೆ. ಆದರೆ, ಕೇವಲ ಫಾರ್ಮ್ 7 ನೀಡಿದ ಕಾರಣಕ್ಕಾಗಿ ನನ್ನ ಮೇಲೆ ಎಫ್ಐಆರ್ ದಾಖಲಿಸಿರುವುದು ಎಷ್ಟು ಸರಿ ಎಂದು ಡಾ. ಅನಿಲ್ ಥಾಮಸ್ ಪ್ರಶ್ನಿಸಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ವಾಸವಿರುವವರು ನರಸಿಂಹರಾಜ ಕ್ಷೇತ್ರದಲ್ಲಿ ಮತದಾನ ಮಾಡುವಂತಹ ಹತ್ತು ಹಲವು ನಿದರ್ಶನಗಳು ನಮ್ಮ ಕಣ್ಣ ಮುಂದಿವೆ. ಅಲ್ಪಸಂಖ್ಯಾತ ಮತದಾರರನ್ನು ಗುರಿಯಾಗಿಸುವ ಯಾವುದೇ ದುರುದ್ದೇಶ ನಮಗಿಲ್ಲ, ಬದಲಿಗೆ ಅಕ್ರಮ ತಡೆಯುವುದಷ್ಟೇ ನಮ್ಮ ಗುರಿ. ಆದರೆ ಕಾಂಗ್ರೆಸ್ ಪಕ್ಷ ಸುಮ್ಮನೆ ಬಿಜೆಪಿ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ನಿಯಮಾವಳಿಗಳ ಪ್ರಕಾರ, ಒಬ್ಬ ವ್ಯಕ್ತಿ ದಿನಕ್ಕೆ 50 ಫಾರ್ಮ್ 7 ಗಳನ್ನು ನೀಡಲು ಅವಕಾಶವಿದೆ. ಕಾಂಗ್ರೆಸ್ ಕಾರ್ಯಕರ್ತರು ಸಹ ಇದೇ ರೀತಿ ಫಾರ್ಮ್ 7 ನೀಡಿದ್ದಾರೆ. ಆದರೆ ಅಧಿಕಾರಿಗಳ ಮೇಲೆ ತೀವ್ರ ಒತ್ತಡ ಹೇರಿ ಕೇವಲ ಬಿಜೆಪಿ ಕಾರ್ಯಕರ್ತರ ಮೇಲೆ ಉದ್ದೇಶಪೂರ್ವಕವಾಗಿ ಎಫ್ಐಆರ್ ದಾಖಲಿಸಲಾಗುತ್ತಿದೆ ಎಂದು ಅವರು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ.

