ಬೈಕ್‌ ಟ್ಯಾಕ್ಸಿ ಆ್ಯಪ್‌ಗಳ ವಿರುದ್ಧ ಕ್ರಮಕ್ಕೆ ಸಾರಿಗೆ ಸಂಘಟನೆ ಆಗ್ರಹ
x

ಬೈಕ್‌ ಟ್ಯಾಕ್ಸಿ ಆ್ಯಪ್‌ಗಳ ವಿರುದ್ಧ ಖಾಸಗಿ ಸಾರಿಗೆ ಸಂಘಟನೆ ಪ್ರತಿಭಟನೆ ನಡೆಸಿದೆ. 

ಬೈಕ್‌ ಟ್ಯಾಕ್ಸಿ ಆ್ಯಪ್‌ಗಳ ವಿರುದ್ಧ ಕ್ರಮಕ್ಕೆ ಸಾರಿಗೆ ಸಂಘಟನೆ ಆಗ್ರಹ

ಬೈಕ್‌ ಟ್ಯಾಕ್ಸಿ ಆ್ಯಪ್‌ಗಳ ವಿರುದ್ಧ ಖಾಸಗಿ ಸಾರಿಗೆ ಸಂಘಟನೆ ಪ್ರತಿಭಟನೆ ನಡೆಸಿದ್ದು, ಆ್ಯಪ್‌ ತೆರವು ಹಾಗೂ ಕಾನೂನು ಕ್ರಮಕ್ಕೆ ಸರ್ಕಾರಕ್ಕೆ 15 ದಿನಗಳ ಗಡುವು ನೀಡಿದೆ.


Click the Play button to hear this message in audio format

ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಬೈಕ್‌ ಟ್ಯಾಕ್ಸಿ ಅಗ್ರಿಗೇಟರ್‌ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಫೆಡರೇಷನ್‌ ಆಫ್‌ ಕರ್ನಾಟಕ ಸ್ಟೇಟ್‌ ಪ್ರೈವೇಟ್‌ ಟ್ರಾನ್ಸ್‌ಪೋರ್ಟ್‌ ಅಸೋಸಿಯೇಷನ್ಸ್‌ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ. ಅಗತ್ಯ ನಿಯಮಗಳು, ಪರವಾನಗಿ ಹಾಗೂ ಅಗ್ರಿಗೇಟರ್‌ ಲೈಸೆನ್ಸ್‌ ಇಲ್ಲದೆ ಬೈಕ್‌ ಟ್ಯಾಕ್ಸಿ ಸೇವೆಗಳು ನಡೆಯುತ್ತಿವೆ ಎಂದು ಸಂಘಟನೆ ಆರೋಪಿಸಿದೆ. ಈ ಕುರಿತು ಸಾರಿಗೆ ಮತ್ತು ರಸ್ತೆ ಸುರಕ್ಷತಾ ಆಯುಕ್ತರು ಹಾಗೂ ಬೆಂಗಳೂರು ನಗರ ಪೊಲೀಸ್‌ ಆಯುಕ್ತರಿಗೆ ಮನವಿ ಸಲ್ಲಿಸಲಾಗಿದೆ.

ಬೈಕ್‌ ಟ್ಯಾಕ್ಸಿ ಆ್ಯಪ್‌ಗಳನ್ನು ಗೂಗಲ್‌ ಪ್ಲೇ ಸ್ಟೋರ್‌ ಸೇರಿದಂತೆ ಇತರ ಡಿಜಿಟಲ್‌ ಮಾರುಕಟ್ಟೆಗಳಿಂದ ತೆಗೆದುಹಾಕಬೇಕು ಎಂದು ಫೆಡರೇಷನ್‌ ಆಗ್ರಹಿಸಿದೆ. ಸದಸ್ಯರು ಸಾರಿಗೆ ಆಯುಕ್ತರ ಕಚೇರಿ ಎದುರು ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಿ, ಬಳಿಕ ಅಧಿಕಾರಿಗಳಿಗೆ ದೂರು ಸಲ್ಲಿಸಿದರು. ಸರ್ಕಾರ ಕ್ರಮ ಕೈಗೊಳ್ಳುವವರೆಗೆ ವಾಹನಗಳಿಗೆ ಕಪ್ಪು ಬಾವುಟ ಕಟ್ಟಿಕೊಂಡು ಶಾಂತಿಯುತ ಪ್ರತಿಭಟನೆ ಮುಂದುವರಿಸುವುದಾಗಿ ಸಂಘಟನೆ ತಿಳಿಸಿದೆ.

2016ರ ನಿಯಮಗಳಲ್ಲಿ ದ್ವಿಚಕ್ರ ವಾಹನಗಳಿಗೆ ಅವಕಾಶವಿಲ್ಲ: ಸಂಘಟನೆ

ಫೆಡರೇಷನ್‌ ಅಧ್ಯಕ್ಷ ಎಸ್‌. ನಟರಾಜ ಶರ್ಮಾ ಮಾತನಾಡಿ, 2016ರ ಕರ್ನಾಟಕ ಆನ್‌-ಡಿಮ್ಯಾಂಡ್‌ ಟ್ರಾನ್ಸ್‌ಪೋರ್ಟೇಶನ್‌ ಟೆಕ್ನಾಲಜಿ ಅಗ್ರಿಗೇಟರ್ಸ್‌ ನಿಯಮಗಳಲ್ಲಿ ದ್ವಿಚಕ್ರ ವಾಹನಗಳನ್ನು ಹೊರಗಿಡಲಾಗಿದೆ. ಹೀಗಾಗಿ ಬೈಕ್‌ ಟ್ಯಾಕ್ಸಿ ಅಗ್ರಿಗೇಷನ್‌ಗೆ ಅಗತ್ಯವಾದ ಶಾಸನಬದ್ಧ ನಿಯಂತ್ರಣ ವ್ಯವಸ್ಥೆ ಇಲ್ಲ ಎಂದು ವಾದಿಸಿದ್ದಾರೆ.

ಕರ್ನಾಟಕ ಹೈಕೋರ್ಟ್‌ನ ಆದೇಶವನ್ನೂ ಸಂಘಟನೆ ಉಲ್ಲೇಖಿಸಿದ್ದು, ನಿಯಮಗಳನ್ನು ರೂಪಿಸುವ ಷರತ್ತಿನೊಂದಿಗೆ ದ್ವಿಚಕ್ರ ವಾಹನಗಳನ್ನು ಕಾಂಟ್ರ್ಯಾಕ್ಟ್‌ ಕ್ಯಾರೇಜ್‌ಗಳಾಗಿ ನೋಂದಾಯಿಸಬಹುದು ಎಂದು ನ್ಯಾಯಾಲಯ ಹೇಳಿತ್ತು. ಈ ಆದೇಶವನ್ನು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ಅನುಮತಿ ಅರ್ಜಿ ಮೂಲಕ ಪ್ರಶ್ನಿಸಿದೆ.

ಪ್ರಯಾಣಿಕರ ಸುರಕ್ಷತೆ, ವಿಮೆ ಬಗ್ಗೆಯೂ ಆತಂಕ

ಬೈಕ್‌ ಟ್ಯಾಕ್ಸಿ ಪ್ರಯಾಣಿಕರ ಸುರಕ್ಷತೆಯ ಬಗ್ಗೆಯೂ ಸಂಘಟನೆ ಕಳವಳ ವ್ಯಕ್ತಪಡಿಸಿದೆ. ಸಾಮಾನ್ಯ ಖಾಸಗಿ ಮೋಟಾರ್‌ಸೈಕಲ್‌ ವಿಮಾ ಪಾಲಿಸಿಗಳು ವಾಣಿಜ್ಯ ಪ್ರಯಾಣಿಕರ ಸಾಗಣೆಯನ್ನು ಒಳಗೊಂಡಿರುವುದಿಲ್ಲ. ಹೀಗಾಗಿ ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಪ್ರಯಾಣಿಕರಿಗೆ ವಿಮಾ ರಕ್ಷಣೆ ಸಿಗದಿರುವ ಸಾಧ್ಯತೆಯಿದೆ ಎಂದು ನಟರಾಜ ಶರ್ಮಾ ಹೇಳಿದ್ದಾರೆ. ಬೆಂಗಳೂರಿನಲ್ಲಿ ಈ ಹಿಂದೆ ನಡೆದ ಬೈಕ್‌ ಟ್ಯಾಕ್ಸಿ ಅಪಘಾತಗಳಲ್ಲಿಯೂ ಇಂತಹ ಸಮಸ್ಯೆಗಳು ಎದುರಾಗಿವೆ ಎಂದು ಅವರು ತಿಳಿಸಿದ್ದಾರೆ.

ಡಿಜಿಟಲ್‌ ದಾಖಲೆ, ಹಣಕಾಸು ಪರಿಶೀಲನೆಗೆ ಆಗ್ರಹ

ಟ್ರಿಪ್‌ ದಾಖಲೆಗಳು, ಪಾವತಿ ವಿವರಗಳು ಸೇರಿದಂತೆ ಬೈಕ್‌ ಟ್ಯಾಕ್ಸಿ ಸೇವೆಗಳಿಗೆ ಸಂಬಂಧಿಸಿದ ಡಿಜಿಟಲ್‌ ಸಾಕ್ಷ್ಯಗಳನ್ನು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್‌ 67C ಅಡಿಯಲ್ಲಿ ಸಂರಕ್ಷಿಸುವಂತೆ ಸಂಘಟನೆ ಮನವಿ ಮಾಡಿದೆ. ತಪ್ಪು ಮಾಹಿತಿ ನೀಡುವುದು, ವಂಚನೆ ಹಾಗೂ ಭಾರತೀಯ ನ್ಯಾಯ ಸಂಹಿತೆ ಮತ್ತು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಸಂಭವನೀಯ ಉಲ್ಲಂಘನೆಗಳ ಬಗ್ಗೆಯೂ ತನಿಖೆ ನಡೆಸುವಂತೆ ಆಗ್ರಹಿಸಿದೆ.

ಇದಲ್ಲದೆ, ಅಗ್ರಿಗೇಟರ್‌ಗಳು ಪಾವತಿಸಬೇಕಿರುವ ಶಾಸನಬದ್ಧ ತೆರಿಗೆ, ಲೈಸೆನ್ಸ್‌ ಶುಲ್ಕ ಹಾಗೂ 2020ರ ಮೋಟಾರ್‌ ವೆಹಿಕಲ್‌ ಅಗ್ರಿಗೇಟರ್‌ ಮಾರ್ಗಸೂಚಿಗಳಡಿ ರಾಜ್ಯದ ಬೊಕ್ಕಸಕ್ಕೆ ಪಾವತಿಸಬೇಕಿರುವ ಶೇ.2ರಷ್ಟು ಲೆವಿ ಸೇರಿದಂತೆ ಬಾಕಿ ಮೊತ್ತಗಳ ಕುರಿತು ಹಣಕಾಸು ಪರಿಶೀಲನೆ ನಡೆಸುವಂತೆ ಒತ್ತಾಯಿಸಿದೆ.

15 ದಿನಗಳಲ್ಲಿ ಕ್ರಮ ಕೈಗೊಳ್ಳದಿದ್ದರೆ ಹೋರಾಟದ ಎಚ್ಚರಿಕೆ

ಅಕ್ರಮವಾಗಿ ಬೈಕ್‌ ಟ್ಯಾಕ್ಸಿ ಸೇವೆ ನಡೆಸುತ್ತಿರುವವರನ್ನು ಬ್ಲ್ಯಾಕ್‌ಲಿಸ್ಟ್‌ ಮಾಡಿ, ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಫೆಡರೇಷನ್‌ ಆಗ್ರಹಿಸಿದೆ. ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಕರ್ತವ್ಯಲೋಪ ಮತ್ತು ಅಧಿಕಾರ ದುರುಪಯೋಗದ ಆರೋಪದಡಿ ಅಧಿಕಾರಿಗಳ ವಿರುದ್ಧವೂ ಕ್ರಮಕ್ಕೆ ಮುಂದಾಗುವುದಾಗಿ ನಟರಾಜ ಶರ್ಮಾ ಎಚ್ಚರಿಸಿದ್ದಾರೆ.

ಸರ್ಕಾರಕ್ಕೆ ಕ್ರಮ ಕೈಗೊಳ್ಳಲು 15 ದಿನಗಳ ಗಡುವು ನೀಡಲಾಗಿದ್ದು, ಈ ಅವಧಿಯಲ್ಲಿ ಕಪ್ಪು ಬಾವುಟ ಪ್ರದರ್ಶಿಸುವ ಮೂಲಕ ಶಾಂತಿಯುತ ಪ್ರತಿಭಟನೆ ಮುಂದುವರಿಸುವುದಾಗಿ ಸಂಘಟನೆ ತಿಳಿಸಿದೆ. ಗಡುವಿನೊಳಗೆ ಕ್ರಮ ಕೈಗೊಳ್ಳದಿದ್ದರೆ ಮುಂದಿನ ಹಂತದಲ್ಲಿ ಬೆಂಗಳೂರಿನಲ್ಲಿ ಬಂದ್‌ ಕರೆ ನೀಡುವ ಸಾಧ್ಯತೆಯನ್ನೂ ಸಂಘಟನೆ ವ್ಯಕ್ತಪಡಿಸಿದೆ.

Read More
Next Story