
ಬಿಡದಿ ಟೌನ್ಶಿಪ್; ನಕಲಿ ದಾಖಲೆ ಕೊಟ್ಟು ಪರಿಹಾರ ದೋಚಲು ಯತ್ನಿಸಿದ್ದ 12 ಮಂದಿ ಬಂಧನ
ನೆಲಮಂಗಲ ತಾಲೂಕು ದಾಬಸ್ಪೇಟೆ ನಿವಾಸಿ ಆರ್. ತರುಣ್ ಎಂಬಾತನೇ ಇಡೀ ಜಾಲದ ಮಾಸ್ಟರ್ಮೈಂಡ್. ಈತ ಈ ಹಿಂದೆಯೂ ಇಂತಹ ಹಲವು ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿರುವುದು ತನಿಖೆಯಿಂದ ತಿಳಿದುಬಂದಿದೆ.
ರಾಮನಗರ ಜಿಲ್ಲೆ ಬಿಡದಿ ಟೌನ್ಶಿಪ್ ಯೋಜನೆಗೆ ಸಂಬಂಧಿಸಿದಂತೆ ರೈತರು ಹಾಗೂ ಸರ್ಕಾರದ ನಡುವೆ ಹಗ್ಗಜಗ್ಗಾಟ ಮುಂದುವರಿದ ಬೆನ್ನಲ್ಲೇ ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಂತರ ರೂಪಾಯಿ ಪರಿಹಾರ ಹಣ ಲಪಟಾಯಿಸಲು ಯತ್ನಿಸಿದ್ದ ಜಾಲವನ್ನು ಬಿಡದಿ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ.
ಅರಳಾಳುಸಂದ್ರ ಗ್ರಾಮದಲ್ಲಿ ಮೂಲ ವಾರಸುದಾರರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ವಂಚಿಸಲು ಮುಂದಾಗಿದ್ದ 12 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಿಡದಿ ಟೌನ್ಶಿಪ್ ಯೋಜನೆ ವ್ಯಾಪ್ತಿಯ ಅರಳಾಳುಸಂದ್ರ ಗ್ರಾಮದ ಸರ್ವೆ ನಂಬರ್ಗಳಾದ 25/5 (37 ಗುಂಟೆ), 43/1 (1 ಎಕರೆ 1 ಗುಂಟೆ) ಹಾಗೂ 117/2 ರಲ್ಲಿ ಬರುವ ಒಟ್ಟು ಮೂರೂವರೆ ಎಕರೆ ಭೂಮಿಗೆ ವಂಚಕರು ನಕಲಿ ದಾಖಲೆ ಸೃಷ್ಟಿಸಿದ್ದರು.
ನೆಲಮಂಗಲ ತಾಲೂಕು ದಾಬಸ್ಪೇಟೆ ನಿವಾಸಿ ಆರ್. ತರುಣ್ ಎಂಬಾತನೇ ಇಡೀ ಜಾಲದ ಮಾಸ್ಟರ್ಮೈಂಡ್. ಈತ ಈ ಹಿಂದೆಯೂ ಇಂತಹ ಹಲವು ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿರುವುದು ತನಿಖೆಯಿಂದ ತಿಳಿದುಬಂದಿದೆ. ನೈಜ ರೈತರು ಮತ್ತು ಮೂಲ ವಾರಸುದಾರರನ್ನು ಬದಿಗೊತ್ತಿ, ಅವರ ಹೆಸರಿನಲ್ಲಿ ನಕಲಿ ವೋಟರ್ ಐಡಿ, ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಪಾಸ್ಬುಕ್ ಸೃಷ್ಟಿಸಲಾಗಿತ್ತು. ಅಷ್ಟೇ ಅಲ್ಲದೆ, ಸರ್ಕಾರದ ವಿವಿಧ ಇಲಾಖೆಗಳ ನಕಲಿ ಸೀಲುಗಳು ಹಾಗೂ ಅಧಿಕಾರಿಗಳ ನಕಲಿ ಸಹಿ ಬಳಸಿ ದಾಖಲೆ ಸಿದ್ಧಪಡಿಸಲಾಗಿತ್ತು.
ವಂಚನೆ ಬಯಲಾಗಿದ್ದು ಹೇಗೆ?
ಆರೋಪಿಗಳು ಸೃಷ್ಟಿಸಿದ ನಕಲಿ ದಾಖಲೆಗಳೊಂದಿಗೆ ಗ್ರೇಟರ್ ಬೆಂಗಳೂರು ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ಕಚೇರಿಗೆ ತೆರಳಿ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಆದರೆ, ದಾಖಲೆಗಳ ಪ್ರಾಥಮಿಕ ಪರಿಶೀಲನೆ ನಡೆಸುವ ವೇಳೆ ಜಿಬಿಡಿಎ ಅಧಿಕಾರಿಗಳಿಗೆ ಅನುಮಾನ ಮೂಡಿದೆ. ಕೂಡಲೇ ಎಚ್ಚೆತ್ತ ಅಧಿಕಾರಿಗಳು ಸೆ.3 ರಂದು ರಾಮನಗರ ತಹಶೀಲ್ದಾರ್ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿಗೆ ಪತ್ರ ಬರೆದು ದಾಖಲೆಗಳ ಸತ್ಯಾಸತ್ಯತೆ ಬಗ್ಗೆ ಸ್ಪಷ್ಟನೆ ಕೋರಿದ್ದರು. ಪರಿಶೀಲನೆ ವೇಳೆ ಆ ಎಲ್ಲಾ ದಾಖಲೆಗಳು ಸಂಪೂರ್ಣ ನಕಲಿ ಎಂಬುದು ಅಧಿಕೃತವಾಗಿ ಸಾಬೀತಾಗಿತ್ತು.
ಪೊಲೀಸರ ಕಾರ್ಯಾಚರಣೆ, ಬಂಧನ
ಅಧಿಕಾರಿಗಳ ದೂರಿನ ಮೇರೆಗೆ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ, ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ತನಿಖೆ ಕೈಗೊಂಡ ಪೊಲೀಸರು ಪ್ರಮುಖ ಆರೋಪಿ ತರುಣ್ ಸೇರಿದಂತೆ ಒಟ್ಟು 12 ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ ಕಂಪ್ಯೂಟರ್ ಉಪಕರಣಗಳು, ನಕಲಿ ಸರ್ಕಾರಿ ಸೀಲುಗಳು ಹಾಗೂ ನಕಲಿ ದಾಖಲಾತಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಸರ್ಕಾರದ ಬೃಹತ್ ಯೋಜನೆಗಳ ಪರಿಹಾರದ ಹಣವನ್ನು ಲಪಟಾಯಿಸಲು ಹೊಂಚುಹಾಕಿದ್ದ ಭೂಗಳ್ಳರ ಈ ಕೃತ್ಯ ಸ್ಥಳೀಯವಾಗಿ ಚರ್ಚೆಗೆ ಗ್ರಾಸವಾಗಿದೆ.

