ಬಿಡದಿ ಟೌನ್-ಶೀಪ್ ಯೋಜನೆ: 7,500 ಎಕರೆ ಫಲವತ್ತಾದ ಭೂಮಿ ಕಬಳಿಕೆಗೆ ಹುನ್ನಾರ? ಚರ್ಚೆ
x

ಬಿಡದಿ ಟೌನ್-ಶೀಪ್ ಯೋಜನೆ: 7,500 ಎಕರೆ ಫಲವತ್ತಾದ ಭೂಮಿ ಕಬಳಿಕೆಗೆ ಹುನ್ನಾರ? ಚರ್ಚೆ

ಈ ವಿಚಾರವಾಗಿ 'ದಿ ಫೆಡರಲ್ ಕರ್ನಾಟಕ'ದ ವಿಶೇಷ ಚರ್ಚೆಯಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ರಾಜ್ಯಾಧ್ಯಕ್ಷ ರವಿ ಕೃಷ್ಣಾರೆಡ್ಡಿ ಮತ್ತು ಹಿರಿಯ ಪತ್ರಕರ್ತ ಸಮೀವುಲ್ಲಾ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.


Click the Play button to hear this message in audio format

ರಾಜ್ಯ ಮಟ್ಟದಲ್ಲಿ ಮಾತ್ರವಲ್ಲದೆ ರಾಷ್ಟ್ರ ಮಟ್ಟದಲ್ಲೂ ತೀವ್ರ ಚರ್ಚೆಗೆ ಗ್ರಾಸವಾಗಿರುವ ಬಿಡದಿ ಟೌನ್‌ಶಿಪ್ (ಸ್ಮಾರ್ಟ್ ಸಿಟಿ/ಎಐ ಸಿಟಿ) ಯೋಜನೆ ಇದೀಗ ರೈತರ ಮತ್ತು ಸರ್ಕಾರದ ನಡುವಿನ ದೊಡ್ಡ ಸಂಘರ್ಷಕ್ಕೆ ವೇದಿಕೆಯಾಗಿದೆ. ಭೂಸ್ವಾಧೀನ ವಿರೋಧಿಸಿ ರೈತರು ಕಳೆದ 470ಕ್ಕೂ ಹೆಚ್ಚು ದಿನಗಳಿಂದ ನಿರಂತರ ಹೋರಾಟ ನಡೆಸುತ್ತಿದ್ದರೂ, ಸರ್ಕಾರ ಮಾತ್ರ ಮೂರು ಹಳ್ಳಿಗಳ 470 ಎಕರೆ ಜಮೀನಿಗೆ ಅಂತಿಮ ಅಧಿಸೂಚನೆ (ಫೈನಲ್ ನೋಟಿಫಿಕೇಶನ್) ಹೊರಡಿಸುವ ಮೂಲಕ ತನ್ನ ಪಟ್ಟು ಸಡಿಲಿಸಿಲ್ಲ.

ಈ ವಿಚಾರವಾಗಿ 'ದಿ ಫೆಡರಲ್ ಕರ್ನಾಟಕ'ದ ವಿಶೇಷ ಚರ್ಚೆಯಲ್ಲಿ ಭಾಗವಹಿಸಿದ್ದ ಕರ್ನಾಟಕ ರಾಷ್ಟ್ರ ಸಮಿತಿ ರಾಜ್ಯಾಧ್ಯಕ್ಷ ರವಿ ಕೃಷ್ಣಾರೆಡ್ಡಿ ಮತ್ತು ಹಿರಿಯ ಪತ್ರಕರ್ತ ಸಮೀವುಲ್ಲಾ ಅವರು ಪ್ರಕೃತಿ ನಾಶ ಮತ್ತು ಇದರ ಹಿಂದಿರುವ ರಾಜಕೀಯ ಹಿತಾಸಕ್ತಿಗಳ ಬಗ್ಗೆ ಆತಂಕಕಾರಿ ವಿಚಾರಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಜೀವವೈವಿಧ್ಯತೆ ಮತ್ತು ಹಸಿರು ಕ್ರಾಂತಿಯ ಮಾರಣಹೋಮ

ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಮಹತ್ವಾಕಾಂಕ್ಷೆಯ ಎಐ ಸಿಟಿ ಯೋಜನೆಗಾಗಿ ರಾಮನಗರ ತಾಲೂಕಿನ ಬಿಡದಿ ಹೋಬಳಿಯ ಎಂಟು ಹಳ್ಳಿಗಳು ಹಾಗೂ ಹಾರೋಹಳ್ಳಿ ತಾಲೂಕಿನ ಒಡೆಯರಹಳ್ಳಿ ಸೇರಿ ಒಟ್ಟು ಸುಮಾರು 7,500 ಎಕರೆ ಪ್ರದೇಶವನ್ನು ವಶಪಡಿಸಿಕೊಳ್ಳಲು ಮುಂದಾಗಿದೆ. ಇದು ಕೇವಲ ಭೂಮಿಯಲ್ಲ, ಬದಲಾಗಿ ರೈತರ ಬದುಕಿನ ಆಧಾರಸ್ತಂಭ ಎಂದು ರವಿಕೃಷ್ಣಾರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇವಲ ಮುಕ್ಕಾಲು ಎಕರೆ, ಒಂದೆಕರೆ ಭೂಮಿ ಹೊಂದಿದವರೂ ಸಹ ಹೈನುಗಾರಿಕೆ, ರೇಷ್ಮೆ, ಅಡಿಕೆ ಬೆಳೆದು ತಿಂಗಳಿಗೆ 50 ಸಾವಿರಕ್ಕೂ ಹೆಚ್ಚು ಆದಾಯ ಗಳಿಸುತ್ತಾ ಘನತೆಯಿಂದ ಬದುಕುತ್ತಿದ್ದಾರೆ. ಆರ್.ಟಿ.ಐ ಮಾಹಿತಿಯ ಪ್ರಕಾರವೇ ಈ ವ್ಯಾಪ್ತಿಯಲ್ಲಿ ಸುಮಾರು 83,536 ಅಡಿಕೆ ಮರಗಳು, 87,903 ತೆಂಗಿನ ಮರಗಳು, 12,550 ಮಾವಿನ ಮರಗಳು ಹಾಗೂ 3.65 ಲಕ್ಷಕ್ಕೂ ಹೆಚ್ಚು ಬಾಳೆ ಗಿಡಗಳಿವೆ. ಈ ಎಲ್ಲವನ್ನೂ ನಾಶಪಡಿಸಿ, ಕಾಂಕ್ರೀಟ್ ಕಾಡು ನಿರ್ಮಾಣ ಮಾಡಲು ಹೊರಟಿರುವುದು ಪರಮ ಪಾಪದ ಕೆಲಸ ಎಂದು ಅವರು ಕಿಡಿಕಾರಿದ್ದಾರೆ.

ಬಂಜರು ಭೂಮಿ ಎಂಬ ಹಸಿ ಸುಳ್ಳು!

ಇಷ್ಟು ಫಲವತ್ತಾದ ಜೀವವೈವಿಧ್ಯತೆ ಹೊಂದಿರುವ ಭೂಮಿಯನ್ನು ಸರ್ಕಾರದ ವತಿಯಿಂದ 'ಬಂಜರು ಭೂಮಿ' ಮತ್ತು 'ಕೃಷಿಗೆ ಯೋಗ್ಯವಲ್ಲದ ಜಾಗ' ಎಂದು ಬಿಂಬಿಸುತ್ತಿರುವುದು ವ್ಯವಸ್ಥಿತ ಷಡ್ಯಂತ್ರ ಎಂದು ಪತ್ರಕರ್ತ ಸಮೀವುಲ್ಲಾ ದೂರಿದ್ದಾರೆ. ಕೈಗಾರಿಕೆಗಳ ತ್ಯಾಜ್ಯ ಬಿಟ್ಟು ಕೆರೆಗಳನ್ನು ಕಲುಷಿತಗೊಳಿಸಿ, ನಂತರ ಅಲ್ಲಿ ಬೆಳೆ ಬರುವುದಿಲ್ಲ ಎಂಬ ಕಾರಣ ನೀಡಿ ಜಮೀನು ಕಿತ್ತುಕೊಳ್ಳುವುದು ಎಷ್ಟರಮಟ್ಟಿಗೆ ಸರಿ? ರೈತರಿಗೆ ಎಕರೆಗೆ 2 ಕೋಟಿ ರೂ. ಪರಿಹಾರ ನೀಡಿದರೂ, ಆ ಹಣ ಮುಂದೊಂದು ದಿನ ಖಾಲಿಯಾದಾಗ, ಬೇರೆ ಯಾವುದೇ ತಾಂತ್ರಿಕ ಕೌಶಲ್ಯವಿಲ್ಲದ ಅನ್ನದಾತರು ನಗರ ಪ್ರದೇಶಗಳಿಗೆ ಬಂದು ಕೂಲಿ ಕೆಲಸ ಮಾಡಬೇಕಾದ ದುಸ್ಥಿತಿ ಎದುರಾಗಲಿದೆ ಎಂದು ಎಚ್ಚರಿಸಿದ್ದಾರೆ.

ರಿಯಲ್ ಎಸ್ಟೇಟ್ ಲಾಬಿಯೇ?

ಈ ಭೂಸ್ವಾಧೀನ ಪ್ರಕ್ರಿಯೆಗೆ ಕೇವಲ ಪ್ರಸ್ತುತ ಕಾಂಗ್ರೆಸ್ ಸರ್ಕಾರ ಮಾತ್ರವಲ್ಲ, ಹಿಂದಿನ ಬಿಜೆಪಿ ಹಾಗೂ ಜೆಡಿಎಸ್ ಸರ್ಕಾರಗಳೂ ಕಾರಣವಾಗಿವೆ ಎಂಬುದು ತಜ್ಞರ ಇಂಗಿತ. 2006ರಲ್ಲಿ ಎಚ್.ಡಿ. ಕುಮಾರಸ್ವಾಮಿ ಅವಧಿಯಲ್ಲಿ ರೂಪುಗೊಂಡ ಈ ಯೋಜನೆಗೆ ನಂತರದ ಸರ್ಕಾರಗಳು ನೀರೆರೆದು ಪೋಷಿಸಿವೆ. ಇಷ್ಟು ದಿನ ಮೌನವಾಗಿದ್ದ ಪ್ರತಿಪಕ್ಷ ನಾಯಕರಾದ ಆರ್. ಅಶೋಕ್, ಬಿ.ವೈ. ವಿಜಯೇಂದ್ರ ಅವರು ಇದೀಗ ರೈತರ ನಿರಂತರ ಪ್ರತಿಭಟನೆ ಹಾಗೂ ಮಾಧ್ಯಮಗಳ ಒತ್ತಡದಿಂದಾಗಿ ಧ್ವನಿ ಎತ್ತುತ್ತಿದ್ದಾರೆ. ಸುಮಾರು 20,000 ಕೋಟಿ ರೂ. ಮೊತ್ತದ ಈ ಪ್ರಾಜೆಕ್ಟ್‌ನಲ್ಲಿ ಬರುವ ಸಾವಿರಾರು ಕೋಟಿ ಕಮಿಷನ್ ದಂಧೆಗೆ ಭ್ರಷ್ಟ ರಾಜಕಾರಣಿಗಳು ಕಣ್ಣಿಟ್ಟಿದ್ದಾರೆ ಎಂಬ ಗಂಭೀರ ಆರೋಪವನ್ನು ರವಿಕೃಷ್ಣಾರೆಡ್ಡಿ ಮಾಡಿದ್ದಾರೆ. ಬಿಡದಿ ಸಮೀಪದ ಸೂರ್ಯ ಸಿಟಿಯಲ್ಲೇ ಶೇ. 80ರಷ್ಟು ನಿವೇಶನಗಳು ಇನ್ನೂ ಖಾಲಿ ಇರುವಾಗ, ಕೃಷಿ ಭೂಮಿ ನಾಶಪಡಿಸಿ ಹೊಸ ಬಡಾವಣೆ ಯಾರಿಗೆ ಬೇಕು ಎಂದು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ಹೈಕಮಾಂಡ್‌ಗೆ ಎಚ್ಚರಿಕೆ ಗಂಟೆ

ರೈತರ ಭೂಮಿ ಕಿತ್ತುಕೊಳ್ಳುವ ಈ ಹೋರಾಟವನ್ನು ಸರ್ಕಾರ ಹಠಮಾರಿ ಧೋರಣೆಯಿಂದ ನಿರ್ವಹಿಸಿದರೆ, ಅದು ಪಂಜಾಬ್ ರೈತ ಚಳುವಳಿ, ನರಗುಂದ-ನವಲಗುಂದ ಬಂಡಾಯ ಅಥವಾ ದೇವನಹಳ್ಳಿ ಹೋರಾಟದ ಮಾದರಿಯಲ್ಲಿ ಸ್ಫೋಟಗೊಳ್ಳುವ ಅಪಾಯವಿದೆ. ಇದು ಕೇವಲ ರಾಜ್ಯ ಸರ್ಕಾರಕ್ಕೆ ಮಾತ್ರವಲ್ಲ, ರಾಹುಲ್ ಗಾಂಧಿ ಅವರ ಮಟ್ಟಿಗೂ ಕಾಂಗ್ರೆಸ್ ಪಕ್ಷಕ್ಕೆ ಭಾರೀ ಡ್ಯಾಮೇಜ್ ಮಾಡಲಿದೆ. ಸಚಿವ ಸತೀಶ್ ಜಾರಕಿಹೊಳಿ ಸೇರಿದಂತೆ ಕೆಲವು ನಾಯಕರು ಈಗಾಗಲೇ ಈ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದು, ಸರ್ಕಾರ ತಕ್ಷಣವೇ ಎಚ್ಚೆತ್ತುಕೊಂಡು ರೈತರ ಪರವಾದ ನಿಲುವು ತೆಗೆದುಕೊಳ್ಳಬೇಕಿದೆ. ಅಭಿವೃದ್ಧಿ ಬೇಕು, ಆದರೆ ರೈತರ ಬದುಕಿನ ಮೇಲೆ ಚಪ್ಪಡಿ ಎಳೆದು ಮಾಡುವ ಅಭಿವೃದ್ಧಿ ಬೇಕೇ? ಎಂಬುದೇ ಈಗಿರುವ ಬಹುದೊಡ್ಡ ಪ್ರಶ್ನೆ.

Read More
Next Story