ಬಿಡದಿ ಟೌನ್‌ಶಿಪ್‌ ಯೋಜನೆಗೆ ತಡೆ? : ರೈತರ ವಿರುದ್ಧ ಹೋಗಲು ಕಾಂಗ್ರೆಸ್‌ ನಾಯಕರ ಹಿಂದೇಟು?
x

ಬಿಡದಿ ಟೌನ್‌ಶಿಪ್‌ ಯೋಜನೆಗೆ ತಡೆ? : ರೈತರ ವಿರುದ್ಧ ಹೋಗಲು ಕಾಂಗ್ರೆಸ್‌ ನಾಯಕರ ಹಿಂದೇಟು?

ಕಾಂಗ್ರೆಸ್‌ನಲ್ಲೇ ರೈತರ ಪರವಾಗಿ ದನಿ ಎತ್ತಲಾಗಿದೆ. ಸ್ವತಃ ಸರ್ಕಾರದ ಸಚಿವರು ಮತ್ತು ಕೆಪಿಸಿಸಿ ಅಧ್ಯಕ್ಷರೇ ಯೋಜನೆಯ ವಿರುದ್ಧ ಮಾತನಾಡುತ್ತಿದ್ದಾರೆ. ಇದು ಡಿ.ಕೆ. ಶಿವಕುಮಾರ್‌ಗೆ ದೊಡ್ಡ ಹೊಡೆತ ಎನ್ನಲಾಗಿದೆ.


Click the Play button to hear this message in audio format

ಬೆಂಗಳೂರು ಅಭಿವೃದ್ಧಿಯ ದೃಷ್ಟಿಯಿಂದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅತ್ಯಂತ ಮಹತ್ವಾಕಾಂಕ್ಷೆಯಿಂದ ರೂಪಿಸಿದ್ದ ಬಿಡದಿ ಟೌನ್‌ಶಿಪ್ ಯೋಜನೆಯು ಇದೀಗ ತೀವ್ರ ರಾಜಕೀಯ ತಿಕ್ಕಾಟಕ್ಕೆ ಕಾರಣವಾಗಿದೆ. ಬೆಂಗಳೂರಿನ ಮೇಲಿನ ಜನಸಂಖ್ಯೆ ಮತ್ತು ಸಂಚಾರ ದಟ್ಟಣೆಯ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶದಿಂದ ಕೈಗೊಂಡ ಈ ಯೋಜನೆಗೆ ರೈತರ ತೀವ್ರ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನಲ್ಲೇ ರೈತರ ಪರವಾಗಿ ದನಿ ಎತ್ತಲಾಗಿದೆ. ಸ್ವತಃ ಸರ್ಕಾರದ ಸಚಿವರು ಮತ್ತು ಕೆಪಿಸಿಸಿ ಅಧ್ಯಕ್ಷರೇ ಯೋಜನೆಯ ವಿರುದ್ಧ ಮಾತನಾಡುತ್ತಿರುವುದು, ಡಿ.ಕೆ. ಶಿವಕುಮಾರ್ ಅವರ ಕನಸಿನ ಯೋಜನೆಗೆ ಬಿದ್ದಿರುವ ದೊಡ್ಡ ಹೊಡೆತವೆಂದು ವಿಶ್ಲೇಷಿಸಲಾಗುತ್ತಿದೆ.

ಕಂದಾಯ ಸಚಿವ ಡಾ. ಜಿ. ಪರಮೇಶ್ವರ್ ಅವರು ಈ ವಿಚಾರವಾಗಿ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ನಾವು ಬಲವಂತವಾಗಿ ರೈತರನ್ನು ಒಕ್ಕಲೆಬ್ಬಿಸಿ ಟೌನ್‌ಶಿಪ್ ನಿರ್ಮಿಸುವುದಿಲ್ಲ. ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅವರ ಒಪ್ಪಿಗೆ ಪಡೆದರೆ ಮಾತ್ರ ಯೋಜನೆ ಮುಂದುವರಿಯುತ್ತದೆ. ಒಂದು ವೇಳೆ ರೈತರಿಗೆ ಸಿಗುವ ಪರಿಹಾರ ಸಾಕಾಗದಿದ್ದರೆ, ಅದನ್ನು ಹೆಚ್ಚಿಸಲು ಸರ್ಕಾರ ಸಿದ್ಧವಿದೆ. ಒಟ್ಟಾರೆಯಾಗಿ ಯಾವುದೇ ಗೊಂದಲವಿಲ್ಲದೆ ಯೋಜನೆ ನಡೆಯಬೇಕು ಎಂಬುದು ನಮ್ಮ ಆಶಯ ಎಂದು ಹೇಳಿದ್ದಾರೆ.

ಆದರೆ, ಇದೇ ವಿಚಾರದಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಇನ್ನೊಂದು ಹೆಜ್ಜೆ ಮುಂದೆ ಹೋಗಿ, ರೈತರಿಗೆ ಈ ಯೋಜನೆ ಇಷ್ಟವಿಲ್ಲದಿದ್ದರೆ, ನಾವು ಅದನ್ನು ಬಲವಂತವಾಗಿ ಹೇರುವುದಿಲ್ಲ. ಕೈಗಾರಿಕೆಗಳನ್ನು ಸ್ಥಳಾಂತರಿಸಿದಂತೆ, ಈ ಟೌನ್‌ಶಿಪ್ ಯೋಜನೆಯನ್ನು ಸಹ ರಾಜ್ಯದ ಬೇರೆ ಭಾಗಕ್ಕೆ ಸ್ಥಳಾಂತರಿಸಲು ಸರ್ಕಾರ ಸಿದ್ಧವಿದೆ ಎಂದು ಖಡಕ್ಕಾಗಿ ನುಡಿದಿದ್ದಾರೆ.

ಇನ್ನು, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ಈ ಯೋಜನೆಯ ವಿರೋಧಿಗಳ ಸಾಲಿನಲ್ಲಿ ನಿಂತಿದ್ದಾರೆ. ಬಿಡದಿಯಲ್ಲಿ ಟೌನ್‌ಶಿಪ್ ಸ್ಥಾಪನೆ ಬೇಡವೆಂದು ನಿಜವಾದ ರೈತರು ಹೇಳಿದರೆ, ನಾವು ಆ ಯೋಜನೆ ಕೈಬಿಡುತ್ತೇವೆ. ರೈತರು ಬೇಡವೆಂದರೆ, ನಾವು ಅಲ್ಲಿ ಟೌನ್‌ಶಿಪ್ ಮಾಡಲ್ಲ. ಕೃಷಿ ಭೂಮಿಯ ಸ್ವಾಧೀನಕ್ಕೆ ಮಾರುಕಟ್ಟೆ ದರಕ್ಕಿಂತ ಮೂರು ಪಟ್ಟು ಹಣ ನೀಡಿದರೂ, ಅವರ ಒಪ್ಪಿಗೆ ಮುಖ್ಯ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ಇದು ಡಿ.ಕೆ. ಶಿವಕುಮಾರ್ ಅವರ ಪ್ರಾಬಲ್ಯವಿರುವ ರಾಮನಗರ ಜಿಲ್ಲೆಯ ಭಾಗದಲ್ಲಿ ನಡೆಯುತ್ತಿರುವ ಯೋಜನೆಯಾಗಿದ್ದರೂ, ಸರ್ಕಾರದ ಆಂತರಿಕ ಭಿನ್ನಮತ ಹೇಳಿಕೆಗಳು ಕೇಳಿಬರುತ್ತಿವೆ.

ಡಿ.ಕೆ. ಶಿವಕುಮಾರ್ ಅವರ ಮಹತ್ವಾಕಾಂಕ್ಷೆಗೆ ಹಿನ್ನಡೆ ?

ಡಿ.ಕೆ. ಶಿವಕುಮಾರ್ ಅವರು, ಬಿಡದಿಯನ್ನು ಒಂದು ಅತ್ಯಾಧುನಿಕ ಟೌನ್‌ಶಿಪ್ ಆಗಿ ಪರಿವರ್ತಿಸುವ ಮೂಲಕ ಬೆಂಗಳೂರಿನ ವಿಸ್ತರಣೆಯ ಕೇಂದ್ರವನ್ನಾಗಿಸಲು ಯೋಜಿಸಿದ್ದರು. ಆದರೆ, ಅವರದೇ ಪಕ್ಷದ ನಾಯಕರು ರೈತರ ವಿರುದ್ಧ ಹೇಳಿಕೆ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಒಂದು ವೇಳೆ ಯೋಜನೆ ಕೈಬಿಟ್ಟರೆ, ಅದು ಡಿ ಕೆ ಶಿವಕುಮಾರ್‌ ಅವರ ಪ್ರತಿಷ್ಠೆಗೆ ದೊಡ್ಡ ಧಕ್ಕೆಯಾಗಲಿದೆ. ಸರ್ಕಾರದಲ್ಲಿಯೂ ಮತ್ತು ಪಕ್ಷದಲ್ಲಿಯೂ ಡಿ ಕೆ ಶಿವಕುಮಾರ್ ವಿರುದ್ಧ ಯೋಜನೆಯ ವಿರೋಧ ಇದೆ ಎಂಬ ಸಂದೇಶ ವ್ಯಕ್ತವಾಗುತ್ತಿದೆ. ಮುಂಬರುವ ದಿನಗಳಲ್ಲಿ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು, ರೈತರನ್ನು ವಿರೋಧಿಸಿ ಯೋಜನೆ ಜಾರಿಗೆ ತರುವುದು ಅಪಾಯಕಾರಿ ಎಂದು ಪಕ್ಷದ ನಾಯಕರು ಭಾವಿಸಿದ್ದಾರೆ.

ಎಐ ಹಬ್ ಮತ್ತು ನೀರಿನ ಬವಣೆ

ಬಿಡದಿ ಟೌನ್‌ಶಿಪ್‌ಗೆ ಎಐ ಹಬ್‌ಗಳ ಸಂಪರ್ಕ ಕಲ್ಪಿಸುವ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ. ಆದರೆ, ಎಐ ಹಬ್‌ಗಳಿಗೆ ಅಗತ್ಯವಿರುವ ನೀರಿನ ಲಭ್ಯತೆಯ ಬಗ್ಗೆ ತಜ್ಞರಲ್ಲಿ ಮತ್ತು ಸಾರ್ವಜನಿಕರಲ್ಲಿ ಗೊಂದಲಗಳಿವೆ. ಸಚಿವ ಪರಮೇಶ್ವರ್ ಅವರು, ಎಐ ಸೆಂಟರ್‌ಗಳಿಗೆ ಏನೆಲ್ಲ ಮಾನದಂಡಗಳಿವೆ ಎಂಬ ಸ್ಪಷ್ಟತೆ ನಮಗೇ ಇಲ್ಲ. ಇದು ಕೇವಲ ಎಐ ಹಬ್‌ಗಾಗಿ ಮಾಡುತ್ತಿರುವ ಯೋಜನೆಯಲ್ಲ, ಬೆಂಗಳೂರಿನ ಒತ್ತಡ ಕಡಿಮೆ ಮಾಡಲು ಕೈಗೊಂಡ ಕ್ರಮ ಎಂದು ಹೇಳುವ ಮೂಲಕ, ಯೋಜನೆಯ ಮೂಲ ಉದ್ದೇಶದ ಬಗ್ಗೆಯೇ ಅಸ್ಪಷ್ಟತೆ ಇದೆ ಎಂಬುದನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.

ಬಿಡದಿ ಟೌನ್‌ಶಿಪ್ ಯೋಜನೆಯು ಇದೀಗ ಇಕ್ಕಟ್ಟಿನಲ್ಲಿದೆ. ಸಚಿವರಾದ ಡಾ. ಜಿ. ಪರಮೇಶ್ವರ್ ಮತ್ತು ಪ್ರಿಯಾಂಕ್ ಖರ್ಗೆ ಹೇಳಿಕೆಗಳು, ಈ ಯೋಜನೆಗೆ ಸರ್ಕಾರವೇ ಹಿಂದೇಟು ಹಾಕುತ್ತಿದೆ ಎಂಬ ಸಂದೇಶವನ್ನು ನೀಡುತ್ತಿವೆ. ಡಿ.ಕೆ. ಶಿವಕುಮಾರ್ ಅವರ ಮಹತ್ವಾಕಾಂಕ್ಷೆಯ ಯೋಜನೆಯು ಅಂತಿಮವಾಗಿ ರೈತರ ಒಪ್ಪಿಗೆಯ ಕೊರತೆಯಿಂದಾಗಿ ಮತ್ತು ಪಕ್ಷದ ಆಂತರಿಕ ಭಿನ್ನಾಭಿಪ್ರಾಯಗಳಿಂದಾಗಿ ನನೆಗುದಿಗೆ ಬೀಳುವ ಸಾಧ್ಯತೆಯೇ ಹೆಚ್ಚಾಗಿದೆ.

Read More
Next Story