
Bidadi Township| ವಿರೋಧದ ನಡುವೆ ರೈತರಿಗೆ ಪರಿಹಾರ ಚೆಕ್ ವಿತರಣೆ ಆರಂಭ
ಯೋಜನೆಗಾಗಿ ಗುರುತಿಸಿರುವ ಕೆಂಪಯ್ಯನಪಾಳ್ಯ, ವಡೇರಹಳ್ಳಿ ಹಾಗೂ ಮಂಡಲಹಳ್ಳಿ ಗ್ರಾಮಗಳ ಪೈಕಿ ಈವರೆಗೆ ಒಟ್ಟು 270 ರೈತರು ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ.
ರಾಜ್ಯ ಸರ್ಕಾರದ ಬಹುನಿರೀಕ್ಷಿತ ‘ಬಿಡದಿ ಟೌನ್‌ಶಿಪ್ʼ ಯೋಜನೆಗೆ ಭೂಮಿ ನೀಡಲು ಒಪ್ಪಿರುವ ರೈತರಿಗೆ ಮೊದಲ ಹಂತದಲ್ಲಿ ಪರಿಹಾರ ವಿತರಣೆ ಕಾರ್ಯ ಆರಂಭಿಸಲಾಗಿದೆ. ರಾಮನಗರದ ಕಂದಾಯ ಭವನದಲ್ಲಿರುವ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಶಾಸಕ ಎಚ್.ಸಿ. ಬಾಲಕೃಷ್ಣ ನೇತೃತ್ವದಲ್ಲಿ ಹತ್ತು ಮಂದಿ ರೈತರಿಗೆ ಸಾಂಕೇತಿಕವಾಗಿ ಚೆಕ್ ಹಸ್ತಾಂತರಿಸಲಾಯಿತು.
ಯೋಜನೆಗಾಗಿ ಗುರುತಿಸಿರುವ ಕೆಂಪಯ್ಯನಪಾಳ್ಯ, ವಡೇರಹಳ್ಳಿ ಹಾಗೂ ಮಂಡಲಹಳ್ಳಿ ಗ್ರಾಮಗಳ ಪೈಕಿ ಈವರೆಗೆ ಒಟ್ಟು 270 ರೈತರು ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ ಮೊದಲ ಹಂತದಲ್ಲಿ ಕೆಂಪಯ್ಯನಪಾಳ್ಯದ 10 ಮಂದಿ ರೈತರಿಗೆ ಚೆಕ್‌ಗಳನ್ನು ವಿತರಿಸಲಾಯಿತು. ಕೆಂಪಯ್ಯನಪಾಳ್ಯದಲ್ಲಿ ಪ್ರತಿ 1 ಎಕರೆ ಜಮೀನಿಗೆ ಬರೋಬ್ಬರಿ 2.07 ಕೋಟಿ ರೂ. ಪರಿಹಾರದ ಮೊತ್ತ ನಿಗದಿಪಡಿಸಲಾಗಿದೆ.
ತೃಪ್ತಿ ವ್ಯಕ್ತಪಡಿಸಿದ ರೈತರು
ಪರಿಹಾರ ಪಡೆದ ಕೆಂಪಯ್ಯನಪಾಳ್ಯದ ರೈತ ಮಹಿಳೆ ಜಾನಕಮ್ಮ ಮಾತನಾಡಿ, "ಸರ್ಕಾರ ನೀಡಿದ ಪರಿಹಾರದಿಂದ ನನಗೆ ಸಂಪೂರ್ಣ ತೃಪ್ತಿಯಿದೆ," ಎಂದು ಸಂತಸ ಹಂಚಿಕೊಂಡಿದ್ದಾರೆ. ತಮಗಿದ್ದ 1 ಎಕರೆ ಜಮೀನಿನ ಪೈಕಿ 18 ಗುಂಟೆಗೆ 1,00,52,386 ರೂ. ನಗದು ಪರಿಹಾರ ಪಡೆದಿದ್ದು, ಇನ್ನುಳಿದ 22 ಗುಂಟೆ ಜಮೀನಿಗೆ ಬದಲಾಗಿ ಅಭಿವೃದ್ಧಿಪಡಿಸಿದ ನಿವೇಶನ ಪಡೆಯಲು ಒಪ್ಪಿಗೆ ಸೂಚಿಸಿದ್ದಾರೆ. ಇದೇ ವೇಳೆ 6 ಗುಂಟೆ ಜಮೀನು ನೀಡಿದ ಗಿರೀಶ್ ಎಂಬ ರೈತರಿಗೆ 36,47,083 ರೂ. ಪರಿಹಾರ ಸಿಕ್ಕಿದೆ.
ವಾಣಿಜ್ಯ ಬೆಳೆಗಳಿಗೂ ಬಂಪರ್ ಪರಿಹಾರ
ಕೇವಲ ಭೂಮಿಗೆ ಮಾತ್ರವಲ್ಲದೆ, ರೈತರು ಕಷ್ಟಪಟ್ಟು ಬೆಳೆಸಿದ ಜಮೀನಿನಲ್ಲಿರುವ ವಾಣಿಜ್ಯ ಬೆಳೆಗಳು ಹಾಗೂ ಮರಗಳಿಗೂ ಸರ್ಕಾರ ಪ್ರತ್ಯೇಕ ಪರಿಹಾರ ನಿಗದಿ ಮಾಡಿದೆ.
ಬಿಡದಿ ಟೌನ್‌ಶಿಪ್ ಹೆಸರಿನಲ್ಲಿ ಬರೋಬ್ಬರಿ 33,562 ಕೋಟಿ ರೂ.ಗಳ ರಿಯಲ್ ಎಸ್ಟೇಟ್ ದಂಧೆ ನಡೆಯುತ್ತಿದೆ ಎಂದು ಬಿಜೆಪಿ ಮತ್ತು ಜೆಡಿಎಸ್ ಗಂಭೀರ ಆರೋಪ ಮಾಡಿವೆ. ರೈತರಿಗೆ ಪರಿಹಾರ ನೀಡಲು ಸರ್ಕಾರದ ಬಳಿ ಹಣವೇ ಇಲ್ಲ ಎಂಬ ಟೀಕೆಗೆ ತಿರುಗೇಟು ನೀಡಿರುವ ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಅವರು, "ರೈತರಿಗೆ ಪರಿಹಾರ ನೀಡಲು ಸರ್ಕಾರದ ಬಳಿ ಹಣವಿಲ್ಲ ಎಂದು ಸುಳ್ಳು ಹೇಳುತ್ತಿರುವ ಪ್ರತಿಪಕ್ಷಗಳಿಗೆ ಇವತ್ತಿನ ಚೆಕ್ ವಿತರಣೆಯೇ ಉತ್ತರ. ಒಂದು ವೇಳೆ ನಾನು ರೈತರಿಗೆ ಸರಿಯಾದ ಪರಿಹಾರ ಕೊಡಿಸದೇ ಹೋದರೆ ರಾಜಕೀಯ ನಿವೃತ್ತಿ ಪಡೆಯಲು ಸಿದ್ಧ," ಎಂದು ಬಹಿರಂಗ ಸವಾಲು ಹಾಕಿದ್ದಾರೆ.
ಜೆಡಿಎಸ್, ರೈತ ಸಂಘಟನೆಗಳಿಂದ ಬೃಹತ್ ಪಾದಯಾತ್ರೆ
ಸರ್ಕಾರವು ಚೆಕ್ ವಿತರಣೆ ಆರಂಭಿಸಿದ್ದರೂ ಮತ್ತೊಂದೆಡೆ ಬಿಡದಿ ಟೌನ್‌ಶಿಪ್‌ಗಾಗಿ 516 ಎಕರೆಗೂ ಹೆಚ್ಚು ಭೂಮಿ ಸ್ವಾಧೀನಪಡಿಸಿಕೊಳ್ಳುತ್ತಿರುವುದನ್ನು ವಿರೋಧಿಸಿ ಹೋರಾಟ ಹಮ್ಮಿಕೊಂಡಿದೆ. ಭೂಸ್ವಾಧೀನ ಪ್ರಕ್ರಿಯೆ ಖಂಡಿಸಿ ಜೆಡಿಎಸ್ ಹಾಗೂ ವಿವಿಧ ರೈತ ಸಂಘಟನೆಗಳು ಭಾನುವಾರ ಬೃಹತ್ ಪಾದಯಾತ್ರೆ ಹಮ್ಮಿಕೊಂಡಿವೆ.
ಸ್ವಯಂಪ್ರೇರಿತರಾಗಿ ಭೂಮಿ ನೀಡುತ್ತಿರುವ ರೈತರು ಒಂದು ಕಡೆಯಾದರೆ, ಭೂಮಿ ಕಳೆದುಕೊಳ್ಳಲು ಸಿದ್ಧರಿಲ್ಲದ ರೈತರು ಮತ್ತು ಪ್ರತಿಪಕ್ಷಗಳ ಹೋರಾಟ ಇನ್ನೊಂದೆಡೆ. ಹೀಗಾಗಿ, ಮುಂಬರುವ ದಿನಗಳಲ್ಲಿ ಈ ಯೋಜನೆಯ ವಿರುದ್ಧದ ಪ್ರತಿಭಟನೆ ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.

