x

ಬಿಡದಿ ಪಾದಯಾತ್ರೆಗೆ ಬ್ರೇಕ್; ಆ.18ಕ್ಕೆ ಫ್ರೀಡಂ ಪಾರ್ಕ್‌ನಲ್ಲಿ ಜೆಡಿಎಸ್ ಪ್ರತಿಭಟನೆ

ಬಿಡದಿ ಟೌನ್‌ಶಿಪ್ ಯೋಜನೆಗಾಗಿ ರೈತರ ಭೂಮಿ ಸ್ವಾಧೀನಪಡಿಸಿಕೊಳ್ಳುವ ಸರ್ಕಾರದ ಕ್ರಮವನ್ನು ನಿಖಿಲ್ ತೀವ್ರವಾಗಿ ವಿರೋಧಿಸಿದ್ದಾರೆ. ರೈತರಿಗೆ ಮೂರು ಕೋಟಿ ರೂಪಾಯಿ ಪರಿಹಾರ ನೀಡಿದರೂ ಭೂಮಿ ನೀಡಲು ಸಿದ್ಧರಿಲ್ಲ ಎಂದು ಅವರು ಹೇಳಿದ್ದಾರೆ.


Click the Play button to hear this message in audio format

ಬಿಡದಿ ಟೌನ್‌ಶಿಪ್‌ ಯೋಜನೆಗಾಗಿ ರೈತರ ಭೂಸ್ವಾಧೀನ ವಿರೋಧಿಸಿ ಜೆಡಿಎಸ್ ಯುವ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಆರಂಭವಾಗಿದ್ದ ಪಾದಯಾತ್ರೆಗೆ ಪೊಲೀಸರು ತಡೆ ಒಡ್ಡಿದ್ದಾರೆ. ಮೂರು ದಿನಗಳ ಕಾಲ ನಡೆಯಬೇಕಿದ್ದ ಪಾದಯಾತ್ರೆ ಆರಂಭದಲ್ಲೇ ಸ್ಥಗಿತಗೊಂಡಿದ್ದು, ಪೊಲೀಸರ ಒತ್ತಡ ಹಾಗೂ ಸರ್ಕಾರದ ಸೂಚನೆಯಿಂದಾಗಿ ಪಾದಯಾತ್ರೆ ಕೈಬಿಡಬೇಕಾಯಿತು ಎಂದು ನಿಖಿಲ್ ಕುಮಾರಸ್ವಾಮಿ ಆರೋಪಿಸಿದ್ದಾರೆ. ಆದರೆ ರೈತರ ಪರ ಜೆಡಿಎಸ್‌ನ ಹೋರಾಟ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಆ.18ರಂದು ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ

ಪಾದಯಾತ್ರೆ ಸ್ಥಗಿತಗೊಂಡ ಬೆನ್ನಲ್ಲೇ ಜೆಡಿಎಸ್ ಮುಂದಿನ ಹೋರಾಟದ ರೂಪುರೇಷೆ ಘೋಷಿಸಿದೆ. ಆಗಸ್ಟ್ 18ರಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ನಡೆಸುವುದಾಗಿ ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ. ಬಿಡದಿ ಹಾಗೂ ಬೈರಮಂಗಲ ಭಾಗದ ರೈತರ ಭೂಸ್ವಾಧೀನ ವಿಚಾರವನ್ನು ಮುಂದಿಟ್ಟುಕೊಂಡು ಹೋರಾಟ ಮುಂದುವರಿಸುವುದಾಗಿ ಹೇಳಿದ್ದಾರೆ.

ಸರ್ಕಾರದ ವಿರುದ್ಧ ನಿಖಿಲ್ ಗಂಭೀರ ಆರೋಪ

ಬೈರಮಂಗಲದಲ್ಲಿ ರೈತರು ಕಳೆದ 517 ದಿನಗಳಿಂದ ನಿರಂತರ ಹೋರಾಟ ನಡೆಸುತ್ತಿದ್ದರೂ ಸರ್ಕಾರ ಅವರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದೆ ಎಂದು ನಿಖಿಲ್ ಆರೋಪಿಸಿದ್ದಾರೆ. ಸರ್ಕಾರವನ್ನು ‘ರಿಯಲ್ ಎಸ್ಟೇಟ್ ಸರ್ಕಾರ’ ಎಂದು ಟೀಕಿಸಿರುವ ಅವರು, ರಿಯಲ್ ಎಸ್ಟೇಟ್ ಉದ್ದೇಶಕ್ಕಾಗಿ ರೈತರ ಭೂಮಿ ಕಸಿಯುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ. ರೈತರಿಗೆ ಮೊದಲು ಎರಡು ಕೋಟಿ ರೂಪಾಯಿ ಪರಿಹಾರ ನೀಡುವ ಪ್ರಸ್ತಾಪವಿತ್ತು. ಇದೀಗ ಮೂರು ಕೋಟಿ ರೂಪಾಯಿ ನೀಡಲು ಸರ್ಕಾರ ಮುಂದಾಗಿದೆ ಎಂಬ ಚರ್ಚೆಯೂ ನಡೆಯುತ್ತಿದೆ. ಆದರೆ ಮೂರು ಕೋಟಿ ರೂಪಾಯಿ ನೀಡಿದರೂ ರೈತರು ಭೂಮಿ ನೀಡುವುದಿಲ್ಲ ಎಂದು ನಿಖಿಲ್ ಹೇಳಿದ್ದಾರೆ.

ಜೆಡಿಎಸ್ ವಿರುದ್ಧ ಕಾಂಗ್ರೆಸ್ ಪೋಸ್ಟರ್ ವಾರ್

ಇದರ ನಡುವೆ ಬಿಡದಿ ಟೌನ್‌ಶಿಪ್‌ ವಿಚಾರ ರಾಜಕೀಯ ಪೋಸ್ಟರ್ ವಾರ್‌ಗೂ ಕಾರಣವಾಗಿದೆ. ಜೆಡಿಎಸ್ ನಾಯಕರನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್ ಕಾರ್ಯಕರ್ತರು ಪೋಸ್ಟರ್ ಅಭಿಯಾನ ನಡೆಸಿದ್ದಾರೆ ಎನ್ನಲಾಗುತ್ತಿದೆ. ಜೆಡಿಎಸ್ ಕಚೇರಿ ಜೆಪಿ ಭವನದ ಗೋಡೆ ಹಾಗೂ ಗೇಟ್‌ಗಳ ಬಳಿ ಕುಮಾರಸ್ವಾಮಿ ಅವರ ಎಡಿಟ್ ಮಾಡಿದ ಫೋಟೋ ಬಳಸಿ ವ್ಯಂಗ್ಯಾತ್ಮಕ ಟ್ಯಾಗ್‌ಲೈನ್‌ಗಳಿರುವ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ ಎಂದು ಆರೋಪಿಸಲಾಗಿದೆ.

‘ಹೊಟ್ಟೆಕಿಚ್ಚಿನ ಸುಮಾರ್‌ ಕೋಳಿ’ ಪೋಸ್ಟರ್‌ಗೆ ನಿಖಿಲ್ ತಿರುಗೇಟು

ಒಕ್ಕಲಿಗ ಸಮುದಾಯದ ನಾಯಕರು ಮುಖ್ಯಮಂತ್ರಿ ಅಥವಾ ಪ್ರಮುಖ ಸ್ಥಾನಕ್ಕೇರಿದರೆ ಜೆಡಿಎಸ್ ನಾಯಕರಿಗೆ ಸಹಿಸಲು ಸಾಧ್ಯವಾಗುವುದಿಲ್ಲ ಎಂಬ ಕಾಂಗ್ರೆಸ್ ಆರೋಪವನ್ನು ವ್ಯಂಗ್ಯ ಮಾಡುವ ರೀತಿಯಲ್ಲಿ ‘ಹೊಟ್ಟೆಕಿಚ್ಚಿನ ಕೋಳಿ’ ಎಂಬ ಟ್ಯಾಗ್‌ಲೈನ್ ಬಳಕೆ ಮಾಡಲಾಗಿದೆ ಎನ್ನಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ನಿಖಿಲ್, ಯಾವುದೇ ಸಮುದಾಯದ ನಾಯಕರು ಮುಖ್ಯಮಂತ್ರಿಯಾದರೂ ಜೆಡಿಎಸ್‌ಗೆ ಹೊಟ್ಟೆಕಿಚ್ಚಿಲ್ಲ. ಇಂತಹ ರಾಜಕೀಯ ಮಾಡುವ ಅಗತ್ಯವೂ ನಮಗಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ಒಟ್ಟಿನಲ್ಲಿ, ಬಿಡದಿ ಟೌನ್‌ಶಿಪ್‌ ಯೋಜನೆ ವಿರುದ್ಧ ಜೆಡಿಎಸ್ ಹೋರಾಟ ತೀವ್ರಗೊಳ್ಳುತ್ತಿದ್ದರೆ, ಮತ್ತೊಂದೆಡೆ ಕಾಂಗ್ರೆಸ್-ಜೆಡಿಎಸ್ ನಡುವೆ ಪೋಸ್ಟರ್ ವಾರ್‌ ಕೂಡ ರಾಜಕೀಯ ಕದನಕ್ಕೆ ಮತ್ತಷ್ಟು ಕಿಚ್ಚು ಹಚ್ಚಿದೆ.

Read More
Next Story