x

ಬಿಡದಿ ಟೌನ್‌ಶಿಪ್‌ ರದ್ದು ಮಾಡದಿದ್ದರೆ ಸರ್ಕಾರ ನಡೆಸಲು ನಾಲಾಯಕ್ ; ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ.‌ಗೋಪಾಲ ಗೌಡ

ಬಿಡದಿ ಟೌನ್‌ಶಿಪ್ ಯೋಜನೆ ಕಾನೂನುಬದ್ಧವಾಗಿಲ್ಲ, ರೆಡ್‌ ಝೋನ್‌ ರದ್ದುಪಡಿಸುವುದು ಹೇಗೆಂದು ತಿಳಿಯದಿದ್ದರೆ ನಮ್ಮ ಬಳಿ ಬರಲಿ, ಹೇಳಿಕೊಡುತ್ತೇವೆ ಎಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡ ಹೇಳಿದ್ದಾರೆ.


ಬಿಡದಿ ಹೋಬಳಿಯ 16 ಹಳ್ಳಿಗಳ ಸುಮಾರು 9,600 ಎಕರೆ ಕೃಷಿ ಭೂಮಿಯನ್ನು 'ಬಿಡದಿ ಸಮಗ್ರ ಉಪನಗರ ಯೋಜನೆ'ಗಾಗಿ ಸ್ವಾಧೀನಪಡಿಸಿಕೊಳ್ಳಲು ಹೊರಟಿರುವ ಸರ್ಕಾರದ ಕ್ರಮ ಕಾನೂನುಬದ್ಧವಲ್ಲ ಎಂದು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ. ಗೋಪಾಲಗೌಡ ಹೇಳಿದ್ದಾರೆ.

ʼದ ಫೆಡರಲ್‌ ಕರ್ನಾಟಕʼಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ಈ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರ ಹೊರಡಿಸಿರುವ ಅಧಿಸೂಚನೆಗಳು ಮತ್ತು ಭೂಸ್ವಾಧೀನ ಪ್ರಕ್ರಿಯೆಗಳು ಹಲವು ಕಾನೂನಾತ್ಮಕ ಲೋಪದೋಷಗಳಿಂದ ಕೂಡಿವೆ ಎಂದು ಆರೋಪಿಸಿದ್ದಾರೆ.

ಕರ್ನಾಟಕ ಟೌನ್ ಅಂಡ್ ಕಂಟ್ರಿ ಪ್ಲಾನಿಂಗ್ ಆಕ್ಟ್ ಸೆಕ್ಷನ್ 4ಸಿ ಅಡಿ ರಚಿಸಲಾದ 'ಗ್ರೇಟರ್ ಬೆಂಗಳೂರು ಬಿಡದಿ ಸ್ಮಾರ್ಟ್ ಸಿಟಿ ಪ್ಲಾನಿಂಗ್ ಅಥಾರಿಟಿ' ಸಂವಿಧಾನದ 74ನೇ ತಿದ್ದುಪಡಿಯ ಅನುಚ್ಛೇದ 243ZD ಗೆ ವಿರುದ್ಧವಾಗಿದೆ. ಸಮಿತಿಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ಇರಬೇಕೆಂಬ ನಿಯಮವನ್ನು ಪಾಲಿಸಿಲ್ಲ. 2023ರಲ್ಲಿ ಯಾವುದೇ ಕಾನೂನು ಅಥವಾ ಕಾಯ್ದೆ ಅಸ್ತಿತ್ವದಲ್ಲಿಲ್ಲದಿದ್ದರೂ, 'ಗ್ರೇಟರ್ ಬೆಂಗಳೂರು ಬಿಡದಿ ಸ್ಮಾರ್ಟ್ ಸಿಟಿ ಪ್ಲಾನಿಂಗ್ ಅಥಾರಿಟಿ'ಯನ್ನು 'ಗ್ರೇಟರ್ ಬೆಂಗಳೂರು ಡೆವಲಪ್ಮೆಂಟ್ ಅಥಾರಿಟಿ' ಎಂದು ಮರುನಾಮಕರಣ ಮಾಡಲಾಗಿದೆ. 2024ರಲ್ಲಿ ಮಂಜೂರಾಗಿ 2025ರಲ್ಲಿ ಜಾರಿಗೆ ಬಂದ ಕಾಯ್ದೆಗೂ ಮುಂಚೆಯೇ ಇಂತಹ ಕ್ರಮ ಕೈಗೊಂಡಿರುವುದು ಕಾನೂನುಬಾಹಿರ ಎಂದು ಉಲ್ಲೇಖಿಸಿದ್ದಾರೆ.

ಟೇಲರ್ ವರ್ಸಸ್ ಟೇಲರ್ ಮತ್ತು ಬಾಬು ವರ್ಗೀಸ್ ವರ್ಸಸ್ ಕೇರಳ ಸರ್ಕಾರ (1999) ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ, ಯಾವುದೇ ಕಾನೂನಿನ ಪ್ರಕ್ರಿಯೆಯನ್ನು ನಿಗದಿತ ವಿಧಾನದಲ್ಲೇ ನಡೆಸಬೇಕು. ಇಲ್ಲದಿದ್ದರೆ ಆ ಪ್ರಕ್ರಿಯೆಯೇ ಶೂನ್ಯ ಆಗುತ್ತದೆ. ಕರ್ನಾಟಕ ಅರ್ಬನ್ ಡೆವಲಪ್ಮೆಂಟ್ ಅಥಾರಿಟಿ ಆಕ್ಟ್ ಸೆಕ್ಷನ್ 15 ಮತ್ತು 16ರ ಪ್ರಕಾರ ಕಡ್ಡಾಯವಾದ 'ಯೋಜನೆ'ಯನ್ನು ಸಿದ್ಧಪಡಿಸದೆ ಮತ್ತು ಮುಕ್ತ ವಿಚಾರಣೆ ನಡೆಸದೆ ನೇರವಾಗಿ ಪ್ರಥಮ ಹಾಗೂ ಅಂತಿಮ ಅಧಿಸೂಚನೆಗಳನ್ನು ಹೊರಡಿಸಲಾಗಿದೆ ಎಂದು ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡ ಅವರು ಹೇಳಿದ್ದಾರೆ.

ಕೇಂದ್ರ ಸರ್ಕಾರದ 'ರೈಟ್ ಟು ಫೇರ್ ಕಂಪೆನ್ಸೇಷನ್ ಅಂಡ್ ಟ್ರಾನ್ಸ್ಪರೆನ್ಸಿ ಇನ್ ಲ್ಯಾಂಡ್ ಅಕ್ವಿಸಿಷನ್ ಆಕ್ಟ್ 2013'ರ ನಿಯಮ ಹಾಗೂ ಸಾಮಾಜಿಕ ಪರಿಣಾಮ ಅಧ್ಯಯನವನ್ನುರಾಜ್ಯ ಸರ್ಕಾರ ಕಡೆಗಣಿಸಿದೆ. ಎಂ.ಕರುಣಾನಿಧಿ ಪ್ರಕರಣದ ಸುಪ್ರೀಂ ಕೋರ್ಟ್ ತೀರ್ಪಿನಂತೆ, ಸಂಸತ್ತಿನ ಕಾಯ್ದೆಗೆ ವಿರುದ್ಧವಾಗಿ ರಾಜ್ಯ ಸರ್ಕಾರ ಮಾಡಿರುವ ತಿದ್ದುಪಡಿಗಳು ಕಾನೂನುಬದ್ಧವಾಗಿ ಅಂಗೀಕಾರಗೊಳ್ಳುವುದಿಲ್ಲ ಎಂದು ವಿವರಿಸಿದ್ದಾರೆ.

ರೈತರ ಬದುಕಿನ ಮೇಲೆ ಗಂಭೀರ ಪರಿಣಾಮ

ಈ ಪ್ರದೇಶದ ರೈತರು ಹಾಲು ಉತ್ಪಾದನೆ, ರೇಷ್ಮೆ ಕೃಷಿ, ತೆಂಗು, ಅಡಿಕೆ ಹಾಗೂ ತರಕಾರಿ ಬೇಸಾಯದ ಮೂಲಕ ಲಕ್ಷಾಂತರ ಜನರಿಗೆ ಆಧಾರವಾಗಿದ್ದಾರೆ. ಕೇವಲ ಪರಿಹಾರದ ಹಣದಿಂದ ರೈತರ ಮಕ್ಕಳು ಹಾಗೂ ಕುಟುಂಬದ ಭವಿಷ್ಯ ರೂಪಿಸಲು ಸಾಧ್ಯವಿಲ್ಲ. ಸಂವಿಧಾನದ ಅನುಚ್ಛೇದ 21ರ ಅಡಿಯಲ್ಲಿ ಪ್ರತಿಯೊಬ್ಬರಿಗೂ ಗೌರವಯುತವಾಗಿ ಬದುಕುವ ಹಕ್ಕಿದೆ ಎಂದು ಗೋಪಾಲಗೌಡ ಅವರು ಆತಂಕ ವ್ಯಕ್ತಪಡಿಸಿದ್ದಾರೆ.

"ಯಾವುದೇ ಅಧಿಸೂಚನೆ ಅಥವಾ ಭೂಸ್ವಾಧೀನ ಪ್ರಕ್ರಿಯೆ ಕಾನೂನಿನ ಚೌಕಟ್ಟಿನಲ್ಲಿರಬೇಕು. ರೈತರ ಅಹವಾಲುಗಳನ್ನು ಕೇಳದೆ, ಕೃಷಿ ಭೂಮಿಯನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳುವುದು ನೈಸರ್ಗಿಕ ನ್ಯಾಯದ ತತ್ವಗಳಿಗೆ ವಿರೋಧವಾಗಿದೆ” ಎಂದು ನಿವೃತ್ತ ನ್ಯಾಯಮೂರ್ತಿಗಳು ಕಳವಳ ವ್ಯಕ್ತಪಡಿಸಿದ್ದಾರೆ.

Read More
Next Story