Farmers Bhairamangala Chalo protest against land acquisition in Bidadi Township: Support from Devanahalli farmers!
x

ಬಿಡದಿ ಟೌನ್‌ಶಿಪ್‌ ವಿರೋಧಿಸಿ ರೈತರು ಪ್ರತಿಭಟನೆ ನಡೆಸಿದರು.

ಬಿಡದಿ ಟೌನ್‌ಶಿಪ್‌ಗೆ ಭೂಸ್ವಾಧೀನ ವಿರೋಧಿಸಿ ರೈತರ 'ಭೈರಮಂಗಲ ಚಲೋ': ದೇವನಹಳ್ಳಿ ರೈತರ ಸಾಥ್‌!

ಭೈರಮಂಗಲ ಚಲೋ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ರೈತ ಮುಖಂಡರು ಮತ್ತು ಮಹಿಳೆಯರು ಸರ್ಕಾರದ ನೀತಿಯ ವಿರುದ್ಧ ರೊಚ್ಚಿಗೆದ್ದಿದ್ದಾರೆ. "ನಮಗೆ ಕೋಟಿ ರೂಪಾಯಿ ಬೇಡ, ನಮ್ಮ ಹಸಿರು ಭೂಮಿ ಬೇಕು!" ಎಂದು ಘೋಷಣೆ ಕೂಗಿದ್ದಾರೆ.


Click the Play button to hear this message in audio format

ಬಿಡದಿ ಟೌನ್‌ಶಿಪ್‌ಗೆ ಭೂಸ್ವಾಧೀನ ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ. ಬೈರಮಂಗಲ, ಕಂಚುಗಾರನಹಳ್ಳಿ ಸೇರಿದಂತೆ 13 ಗ್ರಾಮಗಳ ರೈತರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರವು 438ನೇ ದಿನಕ್ಕೆ ಕಾಲಿಟ್ಟಿದೆ. ಬಿಡದಿ ರೈತರ ಈ ನಿರಂತರ ಹೋರಾಟಕ್ಕೆ ಇದೀಗ ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹೋಬಳಿ ರೈತರು ಕೂಡ ಸಾಥ್‌ ನೀಡಿದ್ದಾರೆ. ಶುಕ್ರವಾರ ಚನ್ನರಾಯಪಟ್ಟಣ ಹೋಬಳಿ ರೈತರು 'ಭೈರಮಂಗಲ ಚಲೋ' ನಡೆಸಿದರು.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಯೋಜನೆ ಜಾರಿಗೆ ಪಟ್ಟು ಹಿಡಿದಿದ್ದರೆ, ರೈತರು ಕೂಡ ಭೂಮಿ ನೀಡದಿರಲು ತೀರ್ಮಾನಿಸಿ ಹೋರಾಟದ ಹಾದಿ ತುಳಿದಿದ್ದಾರೆ. ದೇವನಹಳ್ಳಿಯಲ್ಲಿ 1,200ಕ್ಕೂ ಹೆಚ್ಚು ದಿನಗಳ ಕಾಲ ಅನಿರ್ದಿಷ್ಟಾವಧಿ ಹೋರಾಟ ನಡೆಸಿ ಜಯಗಳಿಸಿದ್ದ ಚನ್ನರಾಯಪಟ್ಟಣ ಹೋಬಳಿಯ ರೈತ ಹೋರಾಟಗಾರರು, ಶುಕ್ರವಾರ ಬಿಡದಿಯ ಭೈರಮಂಗಲ ವೃತ್ತದಲ್ಲಿ ಹಮ್ಮಿಕೊಳ್ಳಲಾಗಿದ್ದ ಬೃಹತ್ ಪ್ರತಿಭಟನಾ ರ್ಯಾಲಿಯಲ್ಲಿ ಭಾಗವಹಿಸಿ, ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಏನಿದು ಬಿಡದಿ ಟೌನ್‌ಶಿಪ್‌ ಯೋಜನೆ?

ರಾಮನಗರ ಜಿಲ್ಲೆಯ ಬಿಡದಿ ಹೋಬಳಿಯ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳನ್ನು ಬೆಂಗಳೂರಿಗೆ ಪರ್ಯಾಯವಾಗಿ ಅತ್ಯಾಧುನಿಕ ಉಪನಗರವನ್ನಾಗಿ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಈ ಬೃಹತ್ ಯೋಜನೆ ರೂಪಿಸಿದೆ. ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನೇತೃತ್ವದಲ್ಲಿ ಸುಮಾರು 7,481 ಎಕರೆ ವಿಸ್ತೀರ್ಣದಲ್ಲಿ ಈ ಸಮಗ್ರ ಉಪನಗರವನ್ನು ನಿರ್ಮಿಸಲು ಸರ್ಕಾರ ಉದ್ದೇಶಿಸಿದೆ.

ಈ ಯೋಜನೆಯಡಿ ಎಐ ಸಿಟಿ, ಪ್ರೀಮಿಯಂ ವಸತಿ ವಲಯಗಳು, ಐಟಿ ಪಾರ್ಕ್‌ಗಳು ಹಾಗೂ ಬೃಹತ್ ಕ್ರೀಡಾ ಮೂಲಸೌಕರ್ಯಗಳನ್ನು ಒಳಗೊಂಡ "ಎರಡನೇ ಸಿಬಿಡಿ" (Central Business District) ಸೃಷ್ಟಿಸುವುದು ಸರ್ಕಾರದ ಗುರಿಯಾಗಿದೆ. ಇದಕ್ಕಾಗಿ ಬಿಡದಿ ಹೋಬಳಿಯ ಭೈರಮಂಗಲ, ಕಂಚುಗಾರನಹಳ್ಳಿ, ಕೆಂಪಶೆಟ್ಟಿದೊಡ್ಡಿ, ಕೆಂಪಯ್ಯನಪಾಳ್ಯ, ಅರಳಾಳುಸಂದ್ರ, ಹೊಸೂರು ಹಾಗೂ ಬನ್ನಿಗಿರಿ ಸೇರಿದಂತೆ ಸುಮಾರು 25ಕ್ಕೂ ಹೆಚ್ಚು ಗ್ರಾಮಗಳ ಜಮೀನುಗಳು ಪ್ರಾಥಮಿಕ ಅಧಿಸೂಚನೆಗೆ ಒಳಪಟ್ಟಿವೆ.

ಭೈರಮಂಗಲ ಚಲೋ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ರೈತ ಮುಖಂಡರು ಮತ್ತು ಮಹಿಳೆಯರು ಸರ್ಕಾರದ ನೀತಿಯ ವಿರುದ್ಧ ರೊಚ್ಚಿಗೆದ್ದಿದ್ದಾರೆ. "ನಮಗೆ ಕೋಟಿ ರೂಪಾಯಿ ಬೇಡ, ನಮ್ಮ ಹಸಿರು ಭೂಮಿ ಬೇಕು!" ಎಂದು ಘೋಷಣೆ ಕೂಗಿದ್ದಾರೆ.

6 ಲಕ್ಷ ಲೀಟರ್ ಹಾಲು ಸರಬರಾಜು

"ಈ ಭಾಗದಲ್ಲಿ 2 ಲಕ್ಷಕ್ಕೂ ಹೆಚ್ಚು ತೆಂಗಿನ ಮರಗಳಿವೆ. ಮಾವು, ಅಡಿಕೆ, ಬಾಳೆ ಹಾಗೂ ತರಕಾರಿ ಬೆಳೆಯುವ ಅತ್ಯಂತ ಫಲವತ್ತಾದ ನೀರಾವರಿ ಭೂಮಿ ಇದಾಗಿದೆ. ಬಿಡದಿಯಿಂದ ಬೆಂಗಳೂರಿಗೆ ದಿನಕ್ಕೆ 6 ಲಕ್ಷ ಲೀಟರ್ ಹಾಲು ಸರಬರಾಜಾಗುತ್ತದೆ. ಇಂತಹ ಸುಸ್ಥಿರ ಗ್ರಾಮೀಣ ಆರ್ಥಿಕತೆಯನ್ನು ನಾಶಮಾಡಿ ಕಾಂಕ್ರೀಟ್ ಕಾಡು ನಿರ್ಮಿಸಲು ನಾವು ಬಿಡುವುದಿಲ್ಲ. ಸರ್ಕಾರ 10 ಕೋಟಿ ರೂ. ಕೊಟ್ಟರೂ ನಮ್ಮ ತಾಯಿಯಂತಹ ಭೂಮಿಯನ್ನು ಕೊಡುವುದಿಲ್ಲ." ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಮಧ್ಯೆ, ಸರ್ಕಾರ ಪ್ರತಿ ಎಕರೆಗೆ 2.55 ಕೋಟಿ ರೂ. ನಿಂದ 3 ಕೋಟಿ ರೂ. ಪರಿಹಾರ ಅಥವಾ ಅಭಿವೃದ್ಧಿಪಡಿಸಿದ ನಿವೇಶನ ನೀಡುವುದಾಗಿ ಹೇಳುತ್ತಿದೆ. ಆದರೆ, ರೈತರು ಇದನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದು, ಸರ್ಕಾರ ನಮ್ಮ ಒಪ್ಪಿಗೆಯಿಲ್ಲದೆ ಏಕಪಕ್ಷೀಯವಾಗಿ ಭೂಸ್ವಾಧೀನ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಈಗಾಗಲೇ 3,500ಕ್ಕೂ ಹೆಚ್ಚು ಸಣ್ಣ ಮತ್ತು ಅತಿ ಸಣ್ಣ ರೈತರು ಲಿಖಿತ ಆಕ್ಷೇಪಣೆ ಸಲ್ಲಿಸಿದ್ದರೂ ಸರ್ಕಾರ ಪರಿಗಣಿಸಿಲ್ಲ ಎಂದು ದೂರಿದ್ದಾರೆ.

ಟೌನ್‌ಶಿಪ್‌ ಯೋಜನೆ ವಿರುದ್ಧ ರೈತರು ಪ್ರತಿಭಟನೆ ನಡೆಸಿದರು.

ರಾಜಕೀಯ ರಂಗೇರಿದ ಟೌನ್‌ಶಿಪ್‌ ವಿವಾದ

ಬಿಡದಿ ಟೌನ್‌ಶಿಪ್‌ ಯೋಜನೆ ಇದೀಗ ರಾಜ್ಯ ರಾಜಕಾರಣದಲ್ಲಿ ದೊಡ್ಡ ಜಟಾಪಟಿಗೆ ಕಾರಣವಾಗಿದೆ. ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, "ಶೇ 80 ರಷ್ಟು ರೈತರು ಭೂಮಿ ನೀಡಲು ಸ್ವಇಚ್ಛೆಯಿಂದ ಒಪ್ಪಿದ್ದಾರೆ, ಕೆಲವರು ರಾಜಕೀಯ ಪ್ರೇರಿತವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ" ಎಂದು ಹೇಳಿಕೆ ನೀಡಿದ್ದರು.

ಮಾಜಿ ಪ್ರಧಾನಿ ಹೆಚ್‌ಡಿಡಿ ವಿರೋಧ

ಡಿಕೆಶಿ ಹೇಳಿಕೆಗೆ ಭೈರಮಂಗಲದ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, "ನಮಗೆ ಯಾವುದೇ ರಾಜಕೀಯ ಬೇಡ, ನಮ್ಮ ಜಮೀನು ಬೇಕು" ಎಂದಿದ್ದಾರೆ. ಇತ್ತೀಚೆಗಷ್ಟೇ ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ಅವರು ಬಾಧಿತ ಹಳ್ಳಿಗಳಿಗೆ ಪ್ರವಾಸ ಕೈಗೊಂಡು, "ರೈತರ ಹೆಣದ ಮೇಲೆ ಟೌನ್‌ಶಿಪ್‌ ಕಟ್ಟಬೇಕಾಗುತ್ತದೆ" ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಕೂಡ ಈ ಯೋಜನೆಯನ್ನು "ರಿಯಲ್ ಎಸ್ಟೇಟ್ ದಂಧೆ" ಎಂದು ಕರೆದು ರೈತರ ಪರ ನಿಂತಿದ್ದಾರೆ.

ಒಟ್ಟಾರೆ ಬಿಡದಿ ರೈತರ ಈ ಅನಿರ್ದಿಷ್ಟಾವಧಿ ಧರಣಿಗೆ ದೇವನಹಳ್ಳಿ ರೈತರ ಬೆಂಬಲ ಸಿಕ್ಕಿರುವುದರಿಂದ ಹೋರಾಟ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಂಡಿದೆ. ಜೂನ್ ತಿಂಗಳಿನಲ್ಲಿ ಭೂಸ್ವಾಧೀನದ ಮುಂದಿನ ಪ್ರಕ್ರಿಯೆ ನಡೆಸಲು ಸರ್ಕಾರ ಮುಂದಾಗಿರುವುದರಿಂದ ಮುಂಬರುವ ದಿನಗಳಲ್ಲಿ ಸರ್ಕಾರದ ನಡೆ ಮತ್ತು ರೈತರ ಪ್ರತಿರೋಧ ಯಾವ ತಿರುವು ಪಡೆದುಕೊಳ್ಳಲಿದೆ ಎಂಬ ಕುತೂಹಲ ಎಲ್ಲರಲ್ಲೂ ಇದೆ.

Read More
Next Story