ಬಿಡದಿ ಭೂಸ್ವಾಧೀನ ಕೈಬಿಡಿ, ರೈತರ ಕ್ಷಮೆಯಾಚಿಸಿ: ಎಸ್‌ಆರ್ ಹಿರೇಮಠ
ಬಿಡದಿ ಭೂಸ್ವಾಧೀನಕ್ಕೆ ಕಾನೂನುಬದ್ಧ ಆಧಾರವಿಲ್ಲ. ಯೋಜನೆ ಕೈಬಿಟ್ಟು ರೈತರ ಕ್ಷಮೆಯಾಚಿಸಬೇಕು ಎಂದು ಸಾಮಾಜಿಕ ಹೋರಾಟಗಾರ ಎಸ್‌ಆರ್ ಹಿರೇಮಠ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಬಿಡದಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಭೂಸ್ವಾಧೀನ ಪ್ರಕ್ರಿಯೆಗೆ ಯಾವುದೇ ಕಾಯ್ದೆಬದ್ಧ ಅಥವಾ ಸಂವಿಧಾನಬದ್ಧ ಆಧಾರವಿಲ್ಲ. ತಕ್ಷಣವೇ ಈ ಯೋಜನೆಯನ್ನು ಕೈಬಿಟ್ಟು, ಸಂಕಷ್ಟಕ್ಕೊಳಗಾದ ರೈತರ ಕ್ಷಮೆಯಾಚಿಸಬೇಕು ಎಂದು ಸಾಮಾಜಿಕ ಹೋರಾಟಗಾರ ಎಸ್‌ಆರ್ ಹಿರೇಮಠ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಅಕ್ರಮ ಗಣಿಗಾರಿಕೆ ವಿರುದ್ಧದ ಹೋರಾಟದ ಮೂಲಕ ಮನೆಮಾತಾಗಿದ್ದ ಎಸ್‌ಆರ್ ಹಿರೇಮಠ, ಬಿಡದಿ ಭೂಸ್ವಾಧೀನದ ಕುರಿತು 'ದ ಫೆಡರಲ್ ಕರ್ನಾಟಕ' ವಿಶೇಷ ಸಂದರ್ಶನದಲ್ಲಿ ಮಾತನಾಡಿದರು.
ನಿವೃತ್ತ ನ್ಯಾಯಮೂರ್ತಿ ಗೋಪಾಲ್ ಗೌಡ ವರದಿ ಐತಿಹಾಸಿಕ
ಬಿಡದಿ ಭೂಸ್ವಾಧೀನ ವಿರೋಧಿಸಿ ನಡೆಯುತ್ತಿರುವ ಹೋರಾಟದ ಭಾಗವಾಗಿ, ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲ್ ಗೌಡ ನೇತೃತ್ವದ ಸಮಿತಿ ನಡೆಸಿದ ಪಬ್ಲಿಕ್ ಹಿಯರಿಂಗ್ ವರದಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಪ್ರಾಧಿಕಾರ ಹೊರಡಿಸಿರುವ ಪ್ರಿಲಿಮಿನರಿ ಹಾಗೂ ಫೈನಲ್ ನೋಟಿಫಿಕೇಶನ್‌ಗಳಿಗೆ ಕಾನೂನಿನ ಬೆಂಬಲವಿಲ್ಲ. 2013ರ ಭೂಸ್ವಾಧೀನ ಹಾಗೂ ಪುನರ್ವಸತಿ ಕಾಯ್ದೆಯ ಸಾಮಾಜಿಕ ಪರಿಣಾಮಗಳ ಅಧ್ಯಯನ ನಿಯಮಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಲಾಗಿದೆ ಎಂದರು.
ಅಭಿವೃದ್ಧಿ ಹೆಸರಿನಲ್ಲಿ ರಿಯಲ್ ಎಸ್ಟೇಟ್ ಮಾಫಿಯಾ?
"ದಿನಕ್ಕೆ 6 ಲಕ್ಷ ಲೀಟರ್ ಹಾಲು ಉತ್ಪಾದಿಸುವ, ರೇಷ್ಮೆ ಹಾಗೂ ಹಣ್ಣು-ಹಂಪಲು ಬೆಳೆಯುವ ಅತ್ಯಂತ ಫಲವತ್ತಾದ ಮಲೆನಾಡಿನಂತಹ ಭೂಮಿಯನ್ನು ಬಲವಂತವಾಗಿ ಕಸಿದುಕೊಳ್ಳುವುದು ಅಭಿವೃದ್ಧಿಯಲ್ಲ," ಎಂದು ಹಿರೇಮಠ ಕಿಡಿಕಾರಿದರು.
"ಈ ಯೋಜನೆಯ ಹಿಂದೆ ಪ್ರಭಾವಶಾಲಿ ರಿಯಲ್ ಎಸ್ಟೇಟ್ ಮಾಫಿಯಾವಿದೆ. ಸರ್ಕಾರ ಮತ್ತು ಜನಪ್ರತಿನಿಧಿಗಳು ಸಂವಿಧಾನದ ಚೌಕಟ್ಟಿನಲ್ಲಿ ಕೆಲಸ ಮಾಡಬೇಕ ಹೊರತು ಇಂತಹ ಅಪರಾಧವೆಸಗಬಾರದು,ʼʼ ಎಂದು ಅವರು ತಿಳಿಸಿದರು.
ಜನಶಕ್ತಿಯೇ ಅಂತಿಮ
ಕೇಂದ್ರ ಸರ್ಕಾರ ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆದಂತೆ, ರಾಜ್ಯ ಸರ್ಕಾರವೂ ಬಿಡದಿ ಯೋಜನೆಯನ್ನು ಹಿಂಪಡೆಯಲೇಬೇಕು. 450 ದಿನಗಳಿಂದ ನಡೆಯುತ್ತಿರುವ ಈ ಹೋರಾಟ ಜನಶಕ್ತಿಯ ಬಲದಿಂದ ಗೆಲುವು ಸಾಧಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

