ಒಕ್ಕಲಿಗರ ಭದ್ರಕೋಟೆ ಅಧಿಪತ್ಯ ಸಾಧಿಸಲು ಜೆಡಿಎಸ್ ʼಬಿಡದೀʼ ಕಾದಾಟ
ಬಿಡದಿ ಟೌನ್‌ಶಿಪ್ ಹೋರಾಟ ದೊಡ್ಡ ಜನಾಂದೋಲನವಾಗಿ ಬದಲಾಗುತ್ತಿದ್ದು, ಇದೀಗ ಬೆಂಗಳೂರಿಗೆ ಶಿಫ್ಟ್ ಆಗಿದೆ. ಕೆಪಿಎಸ್‌ಸಿ ಮೇಲೆ ಸಿಐಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಎಥೆನಾಲ್‌ಗೆ ಕೇಂದ್ರವು ಅಗ್ಗದ ದರದಲ್ಲಿ ಅಕ್ಕಿ ಪೂರೈಸಲು ಮುಂದಾಗಿರುವುದಕ್ಕೆ ಕರ್ನಾಟಕ ಆಕ್ಷೇಪ ವ್ಯಕ್ತಪಸಿದೆ.
ಬಿಡದಿ ಟೌನ್ಶಿಪ್ ಯೋಜನೆಗಾಗಿ ಭೂಸ್ವಾಧೀನ ಪ್ರಕ್ರಿಯೆ ವಿರೋಧಿಸಿ ಆರಂಭವಾಗಿರುವ ಹೋರಾಟವು ಇದೀಗ ಬೃಹತ್ ಜನಾಂದೋಲನವಾಗಿ ಮಾರ್ಪಟ್ಟಿದೆ. ಬಿಡದಿ ಹೋಬಳಿಯ ಬೈರಮಂಗಲ ಹಾಗೂ ಕಂಚುಗಾರನಹಳ್ಳಿ ಪಂಚಾಯ್ತಿ ವ್ಯಾಪ್ತಿಯ ರೈತರ ಹೋರಾಟಕ್ಕೆ ವಿವಿಧ ಜಿಲ್ಲೆಗಳ ರೈತರು, ಕಾರ್ಮಿಕ ಸಂಘಟನೆಗಳು, ರಾಜಕೀಯ ಪಕ್ಷಗಳು ಬೆಂಬಲ ನೀಡಿವೆ.
ಒಕ್ಕಲಿಗ ಸಮುದಾಯದ ಪ್ರಾಬಲ್ಯ ಹೆಚ್ಚಿರುವ ರಾಮನಗರದ ಮೇಲೆ ಹಿಡಿತ ಕಾಯ್ದುಕೊಳ್ಳಲು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕುಟುಂಬಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಜೆಡಿಎಸ್ ತನ್ನ ರಾಜಕೀಯ ಅಸ್ತಿತ್ವ ಗಟ್ಟಿ ಮಾಡಿಕೊಳ್ಳಲು ಬಿಡದಿ ಹೋರಾಟವನ್ನು ಬೆಂಗಳೂರಿಗೆ ಸ್ಥಳಾಂತರಿಸಿದ್ದು, ವಿಧಾನಸೌಧ ಮುತ್ತಿಗೆಗೂ ಕರೆ ನೀಡಿದೆ.
ರೈತರಿಂದ ಯಾವುದೇ ಕಾರಣಕ್ಕೂ ಬಲವಂತವಾಗಿ ಭೂಮಿ ಸ್ವಾಧೀನಪಡಿಸಿಕೊಳ್ಳುವುದಿಲ್ಲ, ಭೂಮಿ ನೀಡುವ ರೈತರಿಗೆ ದುಪ್ಪಟ್ಟು ಪರಿಹಾರ ನೀಡಲಾಗುವುದು ಎಂದು ಸರ್ಕಾರ ಹೇಳಿದೆ. ಜೊತೆಗೆ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಿ, 30 ದಿನಗಳಲ್ಲಿ ವರದಿ ನೀಡಲು ಸೂಚಿಸಿದೆ.
ಸರ್ಕಾರದ ಭರವಸೆ ಮೇಲೆ ನಂಬಿಕೆಯಿಲ್ಲದ ರೈತರು, ಭೂಸ್ವಾಧೀನ ಅಧಿಸೂಚನೆಯನ್ನೇ ರದ್ದುಗೊಳಿಸಬೇಕೆಂದು ಪಟ್ಟು ಹಿಡಿದಿದ್ದಾರೆ. ಚನ್ನರಾಯಪಟ್ಟಣದ ಹೋರಾಟದ ಮಾದರಿಯಲ್ಲೇ ಜಯಗಳಿಸಲು ರಾಜ್ಯದ ವಿವಿಧ ಜಿಲ್ಲೆಗಳ ರೈತರು ಒಗ್ಗೂಡಿದ್ದಾರೆ. ಕರ್ನಾಟಕ ಲೋಕಸೇವಾ ಆಯೋಗ ನಡೆಸಿದ 400 ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ರಾಜ್ಯ ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಪ್ರತಿಯೊಂದು ಹುದ್ದೆಗೆ 70 ರಿಂದ 80 ಲಕ್ಷ ರೂ. ಲಂಚ ಪಡೆಯಲಾಗಿದೆ ಹಾಗೂ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಒಎಂಆರ್ ಶೀಟ್ ತಿದ್ದಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿವೆ.
ಕೆಪಿಎಸ್ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಸದಸ್ಯೆ ಶಾಂತಾ ಹೊಸಮನಿ ಹಾಗೂ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ನಿವಾಸಗಳ ಮೇಲೆ ಇಡಿ ದಾಳಿ ನಡೆಸಿತ್ತು. ಈಗ ಸಿಐಡಿ ಅಧಿಕಾರಿಗಳು ಕೂಡ ಕೆಪಿಎಸ್ಸಿ ಕಚೇರಿ ಮೇಲೆ ದಾಳಿ ನಡೆಸಿ ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೇ, ಆಯ್ಕೆಯಾಗಿರುವ 329 ಅಭ್ಯರ್ಥಿಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ.
ಈ ಮಧ್ಯೆ, ಸಿಐಡಿ ತನಿಖೆಯು ಸರ್ಕಾರದ ಕಣ್ಣೊರೆಸುವ ತಂತ್ರ ಎಂದು ಆರೋಪಿಸಿರುವ ಎಬಿವಿಪಿ ಮತ್ತು ವಿದ್ಯಾರ್ಥಿ ಸಂಘಟನೆಗಳು ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಪ್ರತಿಭಟನೆ ನಡೆಸುತ್ತಿವೆ. ಕೇಂದ್ರ ಸರ್ಕಾರವು ಎಥೆನಾಲ್ ಉತ್ಪಾದಕರಿಗೆ ಶೇ. 40ರಷ್ಟು ಕಡಿಮೆ ದರದಲ್ಲಿ ಅಕ್ಕಿ ಮಾರಾಟ ಮಾಡಲು ಮುಂದಾಗಿರುವುದು ವಿವಾದಕ್ಕೆ ಕಾರಣವಾಗಿದೆ. ಮುಂಗಾರು ಅಭಾವದಿಂದಾಗಿ ಕರ್ನಾಟಕದಲ್ಲಿ ಭತ್ತದ ಬಿತ್ತನೆ ಮತ್ತು ಉತ್ಪಾದನೆ ಕುಸಿದಿದ್ದು, 'ಅನ್ನಭಾಗ್ಯ' ಯೋಜನೆಗೆ ಅಕ್ಕಿ ಸಿಗದೆ ರಾಜ್ಯ ಸರ್ಕಾರ ಸಂಕಷ್ಟ ಎದುರಿಸುತ್ತಿದೆ.
ಹೀಗಿರುವಾಗ, ಸಾರ್ವಜನಿಕರ ತೆರಿಗೆ ಹಣದಲ್ಲಿ ಖರೀದಿಸಿದ ಅಕ್ಕಿಯನ್ನು ಖಾಸಗಿ ಕಂಪನಿಗಳಿಗೆ ರಿಯಾಯಿತಿ ದರದಲ್ಲಿ ಎಥೆನಾಲ್ ಉತ್ಪಾದಿಸಲು ನೀಡಿ, ಬಳಿಕ ಅವರಿಂದಲೇ ಹೆಚ್ಚಿನ ದರದಲ್ಲಿ ಖರೀದಿಸುವುದರಿಂದ ಆರ್ಥಿಕತೆಗೆ ನಷ್ಟ ಉಂಟು ಮಾಡುತ್ತಿದೆ ಎಂದು ಕರ್ನಾಟಕ ಆಕ್ಷೇಪ ವ್ಯಕ್ತಪಡಿಸಿದೆ. ಆಹಾರಕ್ಕಾಗಿ ಬಳಸುವ ಅಕ್ಕಿಯನ್ನು ಇಂಧನ ಉತ್ಪಾದನೆಗೆ ಡೈವರ್ಟ್ ಮಾಡುವುದರಿಂದ ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿಯ ಅಭಾವ ಸೃಷ್ಟಿಯಾಗಿ ಸಾಮಾನ್ಯ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಲಿದೆ ಎಂದು ಆರೋಪಿಸಿದೆ.
ಇಂಧನ ಸ್ವಾವಲಂಬನೆಗಾಗಿ ಪೆಟ್ರೋಲ್ನಲ್ಲಿ ಶೇ. 20ರಷ್ಟು ಎಥೆನಾಲ್ ಮಿಶ್ರಣ ಮಾಡುವ E-20 ಗುರಿಯನ್ನು ಹೊಂದಿರುವ ಕೇಂದ್ರ ಸರ್ಕಾರ, ಕಬ್ಬು ಮಾತ್ರವಲ್ಲದೆ ಧಾನ್ಯಗಳಿಂದಲೂ ಎಥೆನಾಲ್ ತಯಾರಿಸಲು ಉತ್ತೇಜನ ನೀಡುತ್ತಿದೆ.

