
ಬಿಡದಿ ಟೌನ್‌ಶಿಪ್: ವಿರೋಧದ ನಡುವೆ ತಜ್ಞರ ಸಮಿತಿ ರಚಿಸಿದ ಸರ್ಕಾರ
ರಾಜ್ಯ ಸರ್ಕಾರ ಈಗಾಗಲೇ ಯಾರಿಂದಲೂ ಬಲವಂತವಾಗಿ ಭೂಸ್ವಾಧೀನ ಮಾಡಿಕೊಳ್ಳುವುದಿಲ್ಲ. ಸ್ವಯಂಪ್ರೇರಿತವಾಗಿ ಭೂಮಿ ನೀಡುವವರಿಗೆ ಮಾತ್ರ ಸೂಕ್ತ ಹಾಗೂ ಅದಕ್ಕಿಂತ ಹೆಚ್ಚಿನ ಪರಿಹಾರ ನೀಡಲಾಗುವುದು ಎಂದು ತಿಳಿಸಿದೆ.
ಬೆಂಗಳೂರಿನ ವಾಹನ ದಟ್ಟಣೆ ಹಾಗೂ ಮೂಲಸೌಕರ್ಯದ ಮೇಲಿನ ಒತ್ತಡ ತಗ್ಗಿಸುವ ಮಹತ್ವಾಕಾಂಕ್ಷೆಯೊಂದಿಗೆ ರಾಜ್ಯ ಸರ್ಕಾರ ಸ್ಥಾಪಿಸಲು ಉದ್ದೇಶಿಸಿರುವ ಬಿಡದಿ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆ ಇದೀಗ ನಿರ್ಣಾಯಕ ಹಂತಕ್ಕೆ ತಲುಪಿದೆ. ಸುಮಾರು 18,133 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಬಿಡದಿ ಟೌನ್‌ಶಿಪ್‌ಗೆ ಬಿಡದಿಯ ಸುಮಾರು 13 ಗ್ರಾಮಗಳ 7,481 ಎಕರೆಗೂ ಹೆಚ್ಚು ಭೂಮಿ ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಮುಂದಾಗಿದೆ. ಆದರೆ, ಭೂಸ್ವಾಧೀನ ವಿರೋಧಿಸಿ ರೈತರು 500 ದಿನಗಳಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಬಿಡದಿ ಟೌನ್‌ಶಿಪ್ ವಿರೋಧಿಸಿ ಹೋರಾಟ ನಡೆಸುತ್ತಿವೆ. ಆದಾಗ್ಯೂ, ಯೋಜನೆಯಿಂದ ಹಿಂದೆ ಸರಿಯದ ರಾಜ್ಯ ಸರ್ಕಾರ ಈಗಾಗಲೇ ಹಲವು ಗ್ರಾಮಗಳಲ್ಲಿ ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆಯನ್ನು ಹೊರಡಿಸಿ, ಕೆಲ ರೈತರಿಗೆ ಪರಿಹಾರವನ್ನೂ ನೀಡಿದೆ.
ಬಿಡದಿ ಟೌನ್ ಶಿಪ್ ಯೋಜನೆಗೆ ಜೆಡಿಎಸ್ ಶತಾಯಗತಾಯ ಪ್ರಯತ್ನಿಸುತ್ತಿದ್ದು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಕೂಡ ಯೋಜನೆ ಕೈ ಬಿಡಲು ಒತ್ತಾಯಿಸಿದ್ದರು. ಇದರಿಂದ ಸಂಕಷ್ಟಕ್ಕೆ ಸಿಲುಕಿದ ರಾಜ್ಯ ಸರ್ಕಾರ ಈಗ ಯೋಜನೆಯ ಪರ-ವಿರೋಧದ ಅಭಿಪ್ರಾಯಗಳನ್ನು ಕಾನೂನಾತ್ಮಕ ಹಾಗೂ ಸಾಮಾಜಿಕ ದೃಷ್ಟಿಕೋನದಿಂದ ಪರಿಶೀಲಿಸಲು ಉನ್ನತ ಮಟ್ಟದ ಸಮಿತಿ ರಚಿಸಿ ಆದೇಶಿಸಿದೆ.
ಸಮಿತಿಯ ಅಧ್ಯಕ್ಷರಾಗಿ ವಿಶ್ರಾಂತ ಮುಖ್ಯ ನ್ಯಾಯಮೂರ್ತಿ ಗುಹನಾಥನ್ ನರೇಂದ್ರ, ಸದಸ್ಯರನ್ನಾಗಿ ನಿವೃತ್ತ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್, ವಿಶ್ರಾಂತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್, ಸದಸ್ಯ ಕಾರ್ಯದರ್ಶಿಯಾಗಿ ಪ್ರಸನ್ನ ಕುಮಾರ್ ಅವರನ್ನು ನೇಮಿಸಲಾಗಿದೆ. 30 ದಿನಗಳಲ್ಲಿ ವರದಿ ನೀಡಲು ತಜ್ಞರ ಸಮಿತಿಗೆ ಗಡುವು ನೀಡಲಾಗಿದೆ. ಈ ಸಮಿತಿಯು ಸಾರ್ವಜನಿಕರ ಆಕ್ಷೇಪಗಳು, ಭೂಸ್ವಾಧೀನ ಪ್ರಕ್ರಿಯೆಯ ಕಾನೂನಾತ್ಮಕ ತೊಡಕುಗಳು ಹಾಗೂ ನಿರಾಶ್ರಿತರ ಸಮಸ್ಯೆಗಳನ್ನು ಕೂಲಂಕಷವಾಗಿ ಅಧ್ಯಯನ ನಡೆಸಿ ವರದಿ ನೀಡಲಿದೆ.
ರೈತರ ಪ್ರತಿಭಟನೆ ತೀವ್ರ
ಸ್ಥಳೀಯರು ಮತ್ತು ವಿಪಕ್ಷಗಳು ಯೋಜನೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿವೆ. ಫಲವತ್ತಾದ ಕೃಷಿ ಭೂಮಿ, ಲಕ್ಷಾಂತರ ತೆಂಗು, ಅಡಿಕೆ ಮತ್ತು ರೇಷ್ಮೆ ಕೃಷಿಯ ಮೇಲೆ ಈ ಯೋಜನೆ ಪರಿಣಾಮ ಬೀರಲಿದೆ ಎಂಬುದು ರೈತರ ಪ್ರಮುಖ ಆತಂಕ. ಆದರೆ, ರಾಜ್ಯ ಸರ್ಕಾರ ಈಗಾಗಲೇ ಯಾರಿಂದಲೂ ಬಲವಂತವಾಗಿ ಭೂಸ್ವಾಧೀನ ಮಾಡಿಕೊಳ್ಳುವುದಿಲ್ಲ. ಸ್ವಯಂಪ್ರೇರಿತವಾಗಿ ಭೂಮಿ ನೀಡುವವರಿಗೆ ಮಾತ್ರ ಸೂಕ್ತ ಹಾಗೂ ಅದಕ್ಕಿಂತ ಹೆಚ್ಚಿನ ಪರಿಹಾರ ನೀಡಲಾಗುವುದು ಎಂದು ತಿಳಿಸಿದೆ. ಉನ್ನತ ಮಟ್ಟದ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಸರ್ಕಾರವು ಈ ಯೋಜನೆಗೆ ಮುಂದಿನ ರೂಪರೇಷೆಗಳನ್ನು ನೀಡಲಿದ್ದು, ಮುಂದಿನ ದಿನಗಳಲ್ಲಿ ಬಿಡದಿ ಟೌನ್‌ಶಿಪ್ ಭವಿಷ್ಯ ಸ್ಪಷ್ಟವಾಗಲಿದೆ.

