ಮೋದಿ ಹೆಸರು ತಂದ ಡಿಕೆಶಿ, ತಿರುಗೇಟು ನೀಡಿದ ಎಚ್‌ಡಿಕೆ: ಬಿಡದಿ ಭೂಸ್ವಾಧೀನದಲ್ಲಿ ಹೈಡ್ರಾಮಾ
x

ಬಿಡದಿಯ 18,000 ಕೋಟಿಯ ಮೆಗಾ ಟೌನ್‌ಶಿಪ್ ಯೋಜನೆಯ ಭೂಸ್ವಾಧೀನಕ್ಕೆ ರೈತರ ತೀವ್ರ ಆಕ್ರೋಶ ವ್ಯಕ್ತವಾಗಿದೆ. 

ಮೋದಿ ಹೆಸರು ತಂದ ಡಿಕೆಶಿ, ತಿರುಗೇಟು ನೀಡಿದ ಎಚ್‌ಡಿಕೆ: ಬಿಡದಿ ಭೂಸ್ವಾಧೀನದಲ್ಲಿ ಹೈಡ್ರಾಮಾ

ಬಿಡದಿಯ ₹18,000 ಕೋಟಿಯ ಮೆಗಾ ಟೌನ್‌ಶಿಪ್ ಯೋಜನೆಯ ಭೂಸ್ವಾಧೀನಕ್ಕೆ ರೈತರ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಈ ವಿಚಾರ ಈಗ ಡಿಕೆಶಿ ಮತ್ತು ಎಚ್‌ಡಿಕೆ ನಡುವೆ ರಾಜಕೀಯ ಯುದ್ಧಕ್ಕೆ ಕಾರಣವಾಗಿದೆ.


Click the Play button to hear this message in audio format

ನೂರಾರು ವರ್ಷಗಳಿಂದ ಹಸಿರಿನಿಂದ ಕಂಗೊಳಿಸುತ್ತಾ ಸಾವಿರಾರು ರೈತರ ಬದುಕಿಗೆ ಆಧಾರವಾಗಿದ್ದ ಕೃಷಿಭೂಮಿ ಈಗ ಬಿಡದಿಯಲ್ಲಿ ಬೆಂಗಳೂರನ್ನು ಹೋಲುವಂತಹ ಮೆಗಾ ಟೌನ್ಶಿಪ್ ನಿರ್ಮಾಣಕ್ಕೆ ಸಜ್ಜಾಗುತ್ತಿದೆ. ಸುಮಾರು 18 ಸಾವಿರ ಕೋಟಿ ರೂಪಾಯಿಗಳ ಬೃಹತ್ ವೆಚ್ಚದಲ್ಲಿ 7 ಸಾವಿರಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ "ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್ಶಿಪ್" (GBIT) ನಿರ್ಮಿಸಲು ಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸಿದೆ. ಬೆಂಗಳೂರಿನ ಎರಡನೇ ಸೆಂಟ್ರಲ್ ಬಿಸಿನೆಸ್ ಡಿಸ್ಟ್ರಿಕ್ಟ್ ಮತ್ತು ಭಾರತದ ಮೊದಲ ಎಐ ಆಧರಿತ ಸಮಗ್ರ ಟೌನ್ಶಿಪ್ ಆಗಿ ಇದನ್ನು ರೂಪಿಸುವುದು ಸರ್ಕಾರದ ಗುರಿಯಾಗಿದೆ. ಆದರೆ, ಈ ಯೋಜನೆ ಈಗ ಕೇವಲ ಭೂಸ್ವಾಧೀನದ ವಿಚಾರವಾಗಿ ಉಳಿದಿಲ್ಲ, ಬದಲಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ನಡುವಿನ ಪ್ರತಿಷ್ಠೆಯ ಕಾಳಗವಾಗಿ ಮಾರ್ಪಟ್ಟಿದೆ.

ಒಕ್ಕಲುತನದ ಆಸರೆ ಕಳೆದುಕೊಳ್ಳುವ ಭೀತಿಯಲ್ಲಿ ಅನ್ನದಾತ

ರೈತರ ಆಕ್ರೋಶಕ್ಕೆ ಪ್ರಮುಖ ಕಾರಣವೇನೆಂದರೆ, ಸ್ವಾಧೀನಪಡಿಸಿಕೊಳ್ಳಲಾಗುತ್ತಿರುವ ಭೂಮಿ ಬಂಜರು ಭೂಮಿಯಲ್ಲ, ಅದು ಅತ್ಯಂತ ಫಲವತ್ತಾದ ಬಹುಬೆಳೆಯ ಕೃಷಿ ಭೂಮಿಯಾಗಿದೆ. ಗ್ರಾಮಸಭೆ ನಡೆಸದೆ, ಸಮರ್ಪಕ ಸಮಾಲೋಚನೆ ಇಲ್ಲದೆ ಕಾನೂನುಬಾಹಿರವಾಗಿ ಭೂಮಿ ಕಬಳಿಸಲಾಗುತ್ತಿದೆ ಎಂದು ರೈತರು ಆರೋಪಿಸುತ್ತಿದ್ದಾರೆ. ಈ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದ್ದು, ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಕುರಿತು ರೈತರೊಬ್ಬರು ಮಾತನಾಡಿ, "ಯಾವುದೇ ಕಾರಣಕ್ಕೂ ಆ ರಾಕ್ಷಸರ ಕೈಗೆ ಭೂಮಿ ಕೊಡೋಕೆ ನಾವು ತಯಾರಿಲ್ಲ. ಅವರು ನಮಗೆ ಭೂಸ್ವಾಧೀನದ ಉರುಳು ಹಾಕೋಕೆ ಬಂದವರೆ. ಆ ಉರುಳಿಗೆ ಈ ಭೂತಾಯಿಯ ಕೊರಳನ್ನು ನಾವು ಕೊಡೋದಕ್ಕೆ ಯಾವುದೇ ಕಾರಣಕ್ಕೂ ತಯಾರಿಲ್ಲ. ಭೂಮಿಯನ್ನು ಯಾವುದೇ ಕಾರಣಕ್ಕೂ ಒಂದು ಇಂಚು ಕೂಡ ನಾವು ಬಿಟ್ಟುಕೊಡೋದಿಲ್ಲ" ಎಂದು ಆಕ್ರೋಶ ಹೊರಹಾಕಿದ್ದಾರೆ.

ಸರ್ಕಾರದ ವಿರುದ್ಧ ಕಣಕ್ಕಿಳಿದ ಕುಮಾರಸ್ವಾಮಿ: ಪೋಸ್ಟರ್ ರಾಜಕಾರಣಕ್ಕೆ ಕಿಡಿ

ಈ ವಿವಾದದ ಮುಂಚೂಣಿಯಲ್ಲಿ ನಿಂತಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಸರ್ಕಾರದ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ. ಶೇಕಡಾ 80 ರಿಂದ 90 ರಷ್ಟು ರೈತರು ಈ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದರೂ ಸರ್ಕಾರ ಬಲವಂತವಾಗಿ ಮುಂದುವರಿಯುತ್ತಿದೆ ಎಂಬುದು ಅವರ ಆರೋಪವಾಗಿದೆ. ಇದೇ ವೇಳೆ ತಮ್ಮ ಕುಟುಂಬದ ವಿರುದ್ಧ ಕೇಳಿಬಂದ ಭೂಮಿಯ ಆರೋಪ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪೋಸ್ಟರ್‌ಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಎಚ್.ಡಿ. ಕುಮಾರಸ್ವಾಮಿ, "ಈ ರಾಜ್ಯದ ಮುಖ್ಯಮಂತ್ರಿಗಳಾದ ಮೇಲಾದರೂ ಇದೆ ಬ್ಲೂ ಫಿಲಂ ಮಾಡಿಸೋದು, ಪೋಸ್ಟರ್ ನಡೆಸೋದು ಇದೆಲ್ಲ ಬಿಡ್ತಾರೆ ಅನ್ಕೊಂಡಿದ್ದೆ, ಆ ಕಯಾಲಿ ಇನ್ನು ಹೋಗಿಲ್ಲ. ಅದೆಲ್ಲ ಪೋಸ್ಟ್ ಅಂಟಿಸಿಬಿಟ್ಟು ಪ್ರಚಾರ ಮಾಡುಂತದ? ನನ್ನದು ಬಿಟ್ಟುಬಿಡಿ, ಈವನ್ ನನ್ನ ಹೆಂಡತಿದು ಫೋಟೋ ಹಾಕವ್ರೆ ನಂದು 100 ಎಕರೆ ಅಂತ. ಅದೇನೋ ನಿಖಿಲ್ದು ನಂದು ಹಾಕವರಲ್ವೇ 46 ಎಕರೆ, 40 ವರ್ಷದ ಹಿಂದೆ ಕಷ್ಟಪಟ್ಟು ಸಂಪಾದನೆ ಮಾಡಿರೋ ಜಮೀನು ಅದು. ಖರೀದಿ ಮಾಡಿರೋ ಜಮೀನ ಯಾವನೋ ಪೋಸ್ಟ್ ಹಾಕೊಂಡು ಅವರ ಹೆಸರಿನಲ್ಲಿ ಹಾಕ್ಬಿಟ್ಟು ನನಗೆ ಜಮೀನ್ ಕೊಡಿ ಅಂದ್ರೆ... ಬೆರಗಾನಳಿಯಲ್ಲಿ ಸತ್ತೋದವರು, ಸತ್ತೋದರ ಹೆಬ್ಬೆಟ್ಟು ತೋರಿಸಿ ಜಮೀನ್ ತಗೊಂಡಂತ ವ್ಯಕ್ತಿ ಈ ಪೋಸ್ಟ್ನ್ನ ಈಗ ಅವರ ಬೆಂಬಲಿಗೆ ಹೇಳಿ ಹಾಕಿಸ್ಕೊಂಡು ಇದರಲ್ಲಿ ಪ್ರಚಾರ ಮಾಡ್ತೀನಿ ಅಂದ್ರೆ ಜನ ನಂಬುತಾರ? ಮುಖ್ಯಮಂತ್ರಿ ಆದಾಗಲಾದರೂ ಒಂದು ಸ್ಟ್ಯಾಂಡರ್ಡ್ ಬೇಡವ?" ಎಂದು ಡಿ.ಕೆ. ಶಿವಕುಮಾರ್ ಅವರ ಹೆಸರೇಳದೆ ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.

ಡಿ.ಕೆ. ಶಿವಕುಮಾರ್ ಸಮರ್ಥನೆ: ಪ್ರಧಾನಿ ಮೋದಿ ಹೆಸರು ಪ್ರಸ್ತಾಪಿಸಿ ಟ್ವಿಸ್ಟ್

ಇತ್ತ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಂಪೂರ್ಣ ವಿಭಿನ್ನವಾದ ಚಿತ್ರಣವನ್ನು ನೀಡುತ್ತಿದ್ದಾರೆ. ಶೇಕಡಾ 70 ರಷ್ಟು ಭೂಮಾಲೀಕರು ಈಗಾಗಲೇ ಪರಿಹಾರ ಪಡೆಯಲು ಅರ್ಜಿ ಸಲ್ಲಿಸಿದ್ದು, ಯೋಜನೆಗೆ ವ್ಯಾಪಕ ಬೆಂಬಲವಿದೆ ಎಂದು ಅವರು ವಾದಿಸುತ್ತಿದ್ದಾರೆ. ಪ್ರತಿ ಎಕರೆಗೆ ಎರಡೂವರೆಯಿಂದ 2.77 ಕೋಟಿ ರೂಪಾಯಿ ಪರಿಹಾರ ಅಥವಾ ಶೇಕಡಾ 50 ರಷ್ಟು ಅಭಿವೃದ್ಧಿಪಡಿಸಿದ ಭೂಮಿಯನ್ನು ನೀಡುವುದಾಗಿ ಸರ್ಕಾರ ಹೇಳುತ್ತಿದೆ. ಅಷ್ಟೇ ಅಲ್ಲದೆ, ಈ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಬೆಂಬಲವೂ ಇದೆ ಎಂದು ಡಿ.ಕೆ. ಶಿವಕುಮಾರ್ ಹೊಸ ಬಾಂಬ್ ಸಿಡಿಸಿದ್ದಾರೆ. ಜೆಡಿಎಸ್ ಪ್ರತಿಭಟನೆಯ ಬಗ್ಗೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, "ಐ ವಿಶ್ ದೆಮ್ ಗುಡ್ ಲಕ್. ಏನು ಕುಮಾರಸ್ವಾಮಿ ಮಾರ್ಗದರ್ಶನ ಕೊಟ್ರು ಆ ಮಾರ್ಗದರ್ಶನದಲ್ಲೇ ಟೌನ್ಶಿಪ್ ಆಗ್ತಾ ಇರೋದು. ನೆನ್ನೆ ಪ್ರೈಮ್ ಮಿನಿಸ್ಟರ್ ಭೇಟಿ ಮಾಡಿದ್ದೀನಿ. ಪ್ರೈಮ್ ಮಿನಿಸ್ಟರ್ ಹೇಳಿದ್ರು ನಾನು ಏಳೆಂಟು ಟೌನ್ಶಿಪ್ ಮಾಡಿದ್ದೆ, ಅಡಿಕೆ ನೀನು ಒಳ್ಳೆ ಕೆಲಸ ಮಾಡ್ತಾ ಇದ್ದೀಯಾ, ಬೆಂಗಳೂರಿಗೆ ಜಾಸ್ತಿ ಒತ್ತಡನ ಕಡಿಮೆ ಮಾಡಬೇಕು ಅಂತ ನನಗೆ ಕಿವಿ ಮಾತು ಹೇಳಿದ್ದಾರೆ. ಅವರದು ಕೂಡ ನನ್ನ ಗಮನದಲ್ಲಿ ಇಟ್ಟುಕೊಂಡು ನಾವು ಮಾಡ್ತಾ ಇದ್ದೀವಿ" ಎಂದು ಹೇಳುವ ಮೂಲಕ ಜೆಡಿಎಸ್ ಮತ್ತು ಬಿಜೆಪಿಗೆ ತಿರುಗೇಟು ನೀಡಿದ್ದಾರೆ.

ಇಕ್ಕಟ್ಟಿನಲ್ಲಿ ಬಿಜೆಪಿ: ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಆಕ್ರೋಶ

ಡಿ.ಕೆ. ಶಿವಕುಮಾರ್ ಅವರು ಪ್ರಧಾನಿ ಮೋದಿಯವರ ಹೆಸರನ್ನು ಪ್ರಸ್ತಾಪಿಸುತ್ತಿದ್ದಂತೆ ಬಿಜೆಪಿ ನಾಯಕರು ಇಕ್ಕಟ್ಟಿಗೆ ಸಿಲುಕಿದ್ದಾರೆ. ಮೈತ್ರಿ ಪಕ್ಷವಾದ ಜೆಡಿಎಸ್ ಯೋಜನೆಯನ್ನು ತೀವ್ರವಾಗಿ ವಿರೋಧಿಸುತ್ತಿದ್ದರೆ, ಪ್ರಧಾನಿ ಬೆಂಬಲಿಸಿದ್ದಾರೆ ಎನ್ನಲಾದ ಯೋಜನೆಗೆ ನೇರ ವಿರೋಧ ವ್ಯಕ್ತಪಡಿಸಲು ಬಿಜೆಪಿಗೆ ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ತೀವ್ರವಾಗಿ ಪ್ರತಿಕ್ರಿಯಿಸಿ, "ಇನ್ ದ ಗುಜರಾತ್ ಟೈಮ್ ಲಾಕ್ಸ್ ಆಫ್ ಪೀಪಲ್ಸ್... ಟೈಮ್ ನರೇಂದ್ರ ಮೋದಿ ಡನ್ ದ ಲೇವಡ್ ದೇರ್ ಫಾರ್ ಹೂಮ ಹೂ ಲಾಸ್ಟ್ ದೇರ್ ಹೌಸಸ್. ವಾಟ್ ಯು ಆರ್ ಡೂಯಿಂಗ್ ಇನ್ ಬಿಡದಿ ಇಸ್ ಎ ರಿಯಲ್ ಎಸ್ಟೇಟ್ ಏಜೆಂಟ್. ಡೋಂಟ್ ಕಂಪೇರ್ ಇಟ್ ಇಸ್ ನಾಟ್ ಎ ಡೆವಲಪ್ಮೆಂಟ್. ಮೋದಿ ಸಪೋರ್ಟ್ ದ ಡೆವಲಪ್ಮೆಂಟ್ ಆಫ್ ಕಂಟ್ರಿ, ಡೆವಲಪ್ಮೆಂಟ್ ಆಫ್ ದ ಸ್ಟೇಟ್. ವಿ ಆರ್ ಡೂಯಿಂಗ್ ಎನಿ ಸ್ಕೂಲ್? ಯು ಆರ್ ಡೂಯಿಂಗ್ ಎನಿ ಕಾಲೇಜ್? ಯು ಆರ್ ಡೂಯಿಂಗ್ ಎನಿ ಹಾಸ್ಪಿಟಲ್, ಎನಿ ಬಸ್ ಸ್ಟ್ಯಾಂಡ್? ನಥಿಂಗ್" ಎಂದು ಇಂಗ್ಲಿಷ್‌ನಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಹಳೇ ಮೈಸೂರು ಭಾಗದ ರಾಜಕೀಯ ಮೇಲಾಟ

ಈ ಇಡೀ ವಿವಾದದ ಹಿಂದೆ ದೊಡ್ಡ ರಾಜಕೀಯ ಮತ್ತು ವೈಯಕ್ತಿಕ ಹಿತಾಸಕ್ತಿಗಳ ಚರ್ಚೆಯೂ ನಡೆಯುತ್ತಿದೆ. ಉದ್ದೇಶಿತ ಟೌನ್ಶಿಪ್ ಪ್ರದೇಶದಲ್ಲಿ ಕುಮಾರಸ್ವಾಮಿ ಕುಟುಂಬಕ್ಕೆ ಸೇರಿದ ಅಂದಾಜು 100 ಎಕರೆ ಜಮೀನಿದ್ದರೆ, ಡಿ.ಕೆ. ಶಿವಕುಮಾರ್ ಕುಟುಂಬಕ್ಕೂ ನೂರಾರು ಎಕರೆ ಜಮೀನಿದೆ ಎನ್ನಲಾಗಿದೆ. ಈ ಹಿಂದೆ ನೈಸ್ ಕಾರಿಡಾರ್ ಯೋಜನೆ ವಿಚಾರದಲ್ಲೂ ದೇವೇಗೌಡರ ಕುಟುಂಬ ಮತ್ತು ಡಿ.ಕೆ. ಶಿವಕುಮಾರ್ ನಡುವೆ ಇಂತಹದ್ದೇ ಹಗ್ಗಜಗ್ಗಾಟ ನಡೆದಿತ್ತು. ಒಟ್ಟಾರೆಯಾಗಿ, ಬಿಡದಿ ಟೌನ್ಶಿಪ್ ಯೋಜನೆ ಬೆಂಗಳೂರಿನ ಮೇಲಿನ ಒತ್ತಡ ಕಡಿಮೆ ಮಾಡಿ, ಸಾವಿರಾರು ಉದ್ಯೋಗ ಸೃಷ್ಟಿಸುವ ಭವಿಷ್ಯದ ಬ್ಲೂಪ್ರಿಂಟ್ ಆಗುತ್ತದೋ ಅಥವಾ ರೈತರ ಬದುಕನ್ನು ಕಸಿದುಕೊಳ್ಳುವ ರಿಯಲ್ ಎಸ್ಟೇಟ್ ದಂಧೆಯಾಗುತ್ತದೋ ಎಂಬುದನ್ನು ಕಾಲವೇ ನಿರ್ಧರಿಸಬೇಕಿದೆ. ಆದರೆ ಸದ್ಯಕ್ಕಂತೂ ಈ ಹೋರಾಟ ಕೇವಲ ಭೂಮಿಗಾಗಿ ಮಾತ್ರವಲ್ಲ, ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗ ಸಮುದಾಯದ ಮೇಲಿನ ಪ್ರಭುತ್ವಕ್ಕಾಗಿ ನಡೆಯುತ್ತಿರುವ ದೊಡ್ಡ ರಾಜಕೀಯ ಮಹಾಸಮರವಾಗಿದೆ.

Read More
Next Story