ನಕಲಿ ಔಷಧಿಗಳ ಅಕ್ರಮ ಜಾಲ ತನಿಖೆಗೆ ವಂಶಿಕೃಷ್ಣ ನೇತೃತ್ವದಲ್ಲಿ ಎಸ್‌ಐಟಿ ರಚನೆ
x

ನಕಲಿ ಔಷಧಿಗಳ ಅಕ್ರಮ ಜಾಲ ತನಿಖೆಗೆ ವಂಶಿಕೃಷ್ಣ ನೇತೃತ್ವದಲ್ಲಿ ಎಸ್‌ಐಟಿ ರಚನೆ

ಐಪಿಎಸ್‌ ಅಧಿಕಾರಿ ಸಿ.ವಂಶಿಕೃಷ್ಣ ನೇತೃತ್ವದ ಎಸ್‌ಐಟಿ ತಂಡದಲ್ಲಿ ಐವರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ತಂಡದಲ್ಲಿ ಔಷಧ ನಿಯಂತ್ರಣ ಇಲಾಖೆಯ ಅಧಿಕಾರಿಗಳನ್ನೂ ಸೇರಿಸಲಾಗಿದೆ.


Click the Play button to hear this message in audio format

ಬೆಂಗಳೂರಿನ ಹೊರವಲಯದ ಬಿಡದಿಯ ಸಿ.ಕೆ. ತಾಂಡ್ಯ ಸಮೀಪದ ಫಾರ್ಮ್‌ಹೌಸ್ ಒಂದರಲ್ಲಿ ನಡೆಯುತ್ತಿದ್ದ ಬಹುದೊಡ್ಡ ನಕಲಿ ಔಷಧಿಗಳ ಅಕ್ರಮ ಜಾಲದ ಕುರಿತು ತನಿಖೆ ನಡೆಸಲು ರಾಜ್ಯ ಸರ್ಕಾರವು ಪಶ್ಚಿಮ ವಿಭಾಗದ ಜಂಟಿ ಪೊಲೀಸ್‌ ಆಯುಕ್ತ ಸಿ.ವಂಶಿಕೃಷ್ಣ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಿ ಆದೇಶ ಹೊರಡಿಸಿದೆ.

ಸಿ.ವಂಶಕೃಷ್ಣ ನೇತೃತ್ವದ ಎಸ್‌ಐಟಿ ತಂಡದಲ್ಲಿ ಐವರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ತಂಡದಲ್ಲಿ ಔಷಧ ನಿಯಂತ್ರಣ ಇಲಾಖೆಯ ಅಧಿಕಾರಿಗಳನ್ನೂ ಸೇರಿಸಲಾಗಿದೆ. ಪೊಲೀಸ್ ವರಿಷ್ಠಾಧಿಕಾರಿಗಳಾದ ಶಿವ ಪ್ರಕಾಶ್ ದೇವರಾಜು, ಲೋಕೇಶ್ ಬಿ. ಜಗಲಾಸರ್, ಸಹಾಯಕ ಔಷಧ ನಿಯತ್ರಣಕರಾದ ಮಂಜುನಾಥ ರೆಡ್ಡಿ, ನಮಿತಾ ಹಲ್ಲೂರು, ಔಷಧ ನಿರೀಕ್ಷಕರಾದ ನೇಹಾ ಮುರ್ಗಿ ಅವರು ತಂಡದ ಸದಸ್ಯರಾಗಿದ್ದಾರೆ.

ತಂಡದ ಅಧಿಕಾರಿಗಳಿಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸುವ ಮತ್ತು ಕಾನೂನು ಪ್ರಕ್ರಿಯೆಗಳನ್ನು ಪೂರೈಸುವ ಸಂಪೂರ್ಣ ಅಧಿಕಾರ ನೀಡಲಾಗಿದೆ. ತನಿಖೆಗೆ ಅಗತ್ಯವಾದ ಸಿಬ್ಬಂದಿಯನ್ನು ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿ ಮತ್ತು ಬೆಂಗಳೂರು ದಕ್ಷಿಣ ಜಿಲ್ಲೆಯ ಸಂಪನ್ಮೂಲಗಳಿಂದ ಪಡೆದುಕೊಳ್ಳಲು ಅನುಮತಿ ನೀಡಲಾಗಿದೆ.

ಈ ಸಂಪೂರ್ಣ ಕಾರ್ಯಾಚರಣೆಯು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು (ಕಾನೂನು ಮತ್ತು ಸುವ್ಯವಸ್ಥೆ) ಅವರ ಮೇಲ್ವಿಚಾರಣೆಯಲ್ಲಿ ನಡೆಯಲಿದೆ.

ತನಿಖೆಯ ಪಾರದರ್ಶಕತೆ ಮತ್ತು ಜವಾಬ್ದಾರಿ

ತನಿಖೆಯ ಪ್ರಗತಿಯ ಕುರಿತಾಗಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು (ಕಾನೂನು ಮತ್ತು ಸುವ್ಯವಸ್ಥೆ) ಪೊಲೀಸ್ ಮಹಾನಿರ್ದೇಶಕರು ಮತ್ತು ಮಹಾನಿರೀಕ್ಷಕರಿಗೆ ಕಾಲಕಾಲಕ್ಕೆ ವರದಿ ಸಲ್ಲಿಸಬೇಕೆಂದು ಸೂಚಿಸಲಾಗಿದೆ. ಅಂತಿಮವಾಗಿ ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿ, ಅದರ ಪ್ರತಿಯನ್ನು ಮಹಾನಿರ್ದೇಶಕರು ಮತ್ತು ಪೊಲೀಸ್ ಮಹಾನಿರೀಕ್ಷಕರ ಮುಖಾಂತರ ಸರ್ಕಾರಕ್ಕೆ ಸಲ್ಲಿಸಬೇಕೆಂದು ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ. ಪ್ರಕರಣದಲ್ಲಿ ಕ್ರಿಮಿನಲ್ ಸಂಚಿನ ಅಂಶಗಳಿರುವುದರಿಂದ, ವಿವಿಧ ಇಲಾಖೆಗಳ ಸಮನ್ವಯ ಅತ್ಯಗತ್ಯವಾಗಿದೆ. ಔಷಧ ನಿಯಂತ್ರಣ ಇಲಾಖೆಯ ಅಧಿಕಾರಿಗಳನ್ನು ಈ ತಂಡದಲ್ಲಿ ಸೇರಿಸಿರುವುದು ಪ್ರಕರಣದ ಸ್ವರೂಪವು ನಕಲಿ ಉತ್ಪನ್ನಗಳ ಜಾಲಕ್ಕೆ ಸಂಬಂಧಿಸಿದ್ದಾಗಿದೆ. ತಜ್ಞ ಅಧಿಕಾರಿಗಳನ್ನು ನೇಮಿಸುವ ಮೂಲಕ ಸರ್ಕಾರವು ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ಹಾಗೂ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವ ದೃಢತೆಯನ್ನು ಸರ್ಕಾರ ಪ್ರದರ್ಶಿಸಿದೆ.

ಬಿಡದಿಯ ಸಿ.ಕೆ. ತಾಂಡ್ಯ ಸಮೀಪದ ಸುಸಜ್ಜಿತ ಫಾರ್ಮ್‌ಹೌಸ್ ಒಂದರಲ್ಲಿ ಬಹುರಾಷ್ಟ್ರೀಯ ಕಂಪನಿಗಳ ಲೇಬಲ್ ಬಳಸಿ, ಅಗ್ಗದ ಬೆಲೆಯ ಔಷಧಿಗಳನ್ನು ದುಬಾರಿ ಬೆಲೆಯ ಹೆಸರಾಂತ ಕಂಪನಿಗಳ ಔಷಧಿಗಳೆಂದು ಬಿಂಬಿಸಿ ಮರುಪ್ಯಾಕ್ ಮಾಡಲಾಗುತ್ತಿತ್ತು. ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿದ್ದ ಈ ಜಾಲದ ಮೇಲೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳಿಗೆ ಕಂಡುಬಂದ ದೃಶ್ಯ ಬೆಚ್ಚಿಬೀಳಿಸುವಂತಿತ್ತು. ದಾಳಿಯ ವೇಳೆ ಒಟ್ಟು 4.91 ಕೋಟಿ ರೂ. ಮೌಲ್ಯದ ನಕಲಿ ಔಷಧಿಗಳು, ಖಾಲಿ ಬಾಟಲಿಗಳು, ನಕಲಿ ಲೇಬಲ್‌ಗಳು, ಪ್ಯಾಕೇಜಿಂಗ್ ಸಾಮಗ್ರಿಗಳು ಮತ್ತು ಅತ್ಯಾಧುನಿಕ ಯಂತ್ರೋಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕೃತ್ಯದಲ್ಲಿ ತೊಡಗಿದ್ದವರು ಅತ್ಯಂತ ಚಾಣಾಕ್ಷತೆಯಿಂದ ಕಾರ್ಯನಿರ್ವಹಿಸುತ್ತಿದ್ದರು. ಕಡಿಮೆ ಗುಣಮಟ್ಟದ ಅಥವಾ ಕಡಿಮೆ ಬೆಲೆಯ ಔಷಧಿಗಳನ್ನು ಸಗಟಾಗಿ ಖರೀದಿಸಿ, ಅವುಗಳನ್ನು ಬಹುರಾಷ್ಟ್ರೀಯ ಕಂಪನಿಗಳ ಅಸಲಿ ಪ್ಯಾಕೆಟ್ ಅಥವಾ ಬಾಟಲಿಗಳಲ್ಲಿ ತುಂಬುತ್ತಿದ್ದರು. ಅದಕ್ಕೆ ಬ್ರಾಂಡೆಡ್ ಕಂಪನಿಗಳ ಲೇಬಲ್‌ಗಳನ್ನು ಅಂಟಿಸಿ, ಅಸಲಿ ಔಷಧಿಯಂತೆ ಮಾರುಕಟ್ಟೆಗೆ ಬಿಡುತ್ತಿದ್ದರು. ನಂತರ ಈ ನಕಲಿ ಔಷಧಿಗಳನ್ನು ವಿವಿಧ ಆಸ್ಪತ್ರೆಗಳು ಮತ್ತು ಮೆಡಿಕಲ್ ಸ್ಟೋರ್‌ಗಳಿಗೆ ಪೂರೈಕೆ ಮಾಡಲಾಗುತ್ತಿತ್ತು.

Read More
Next Story