x

ಸಂವಿಧಾನ ದಿನ ಆಚರಣೆ ಹಿಂದೆ ಇದೆಯೇ ರಾಜಕೀಯ? ಎರವಲು ಸಂವಿಧಾನ ಟೀಕೆಗೆ ಉತ್ತರವೇನು?

ಮೂಲ ಮೌಲ್ಯಗಳ ಸಾಕಾರ, ಕಾಲಕಾಲಕ್ಕೆ ಆದ ತಿದ್ದುಪಡಿಗಳು ಹಾಗೂ ವರ್ತಮಾನದ ರಾಜಕೀಯ ಮತ್ತು ಸಾಮಾಜಿಕ ವ್ಯವಸ್ಥೆಯಲ್ಲಿ ಸಂವಿಧಾನದ ಪ್ರಸ್ತುತತೆಯ ಕುರಿತು ಅವಲೋಕಿಸುವುದು ಅತ್ಯಂತ ಮಹತ್ವದ್ದಾಗಿದೆ.


Click the Play button to hear this message in audio format

ಭಾರತೀಯ ಸಂವಿಧಾನವು ಕೇವಲ ಆಡಳಿತಾತ್ಮಕ ಕಾನೂನುಗಳ ಸಂಹಿತೆಯಲ್ಲ, ಅದು ಕೋಟ್ಯಂತರ ಭಾರತೀಯರ ಆಶೋತ್ತರಗಳನ್ನು ಹೊತ್ತ ಪ್ರಜಾಪ್ರಭುತ್ವದ ಜೀವಾಳವಾಗಿದೆ. ಸಂವಿಧಾನ ಜಾರಿಯಾಗಿ ಏಳು ದಶಕಗಳು ಕಳೆದಿರುವ ಈ ಸಂದರ್ಭದಲ್ಲಿ, ಅದರ ಮೂಲ ಮೌಲ್ಯಗಳ ಸಾಕಾರ, ಕಾಲಕಾಲಕ್ಕೆ ಆದ ತಿದ್ದುಪಡಿಗಳು ಹಾಗೂ ವರ್ತಮಾನದ ರಾಜಕೀಯ ಮತ್ತು ಸಾಮಾಜಿಕ ವ್ಯವಸ್ಥೆಯಲ್ಲಿ ಸಂವಿಧಾನದ ಪ್ರಸ್ತುತತೆಯ ಕುರಿತು ಅವಲೋಕಿಸುವುದು ಅತ್ಯಂತ ಮಹತ್ವದ್ದಾಗಿದೆ.

ಈ ಕುರಿತು ದ ಫೆಡರಲ್‌ ಕರ್ನಾಟಕ ಜತೆ ಹೈಕೋರ್ಟ್‌ನ ಹಿರಿಯ ವಕೀಲರಾದ ಶಿವರುದ್ರಪ್ಪ ಎನ್‌.ಬಿ. ಅವರು ವಿಶೇಷ ಸಂದರ್ಶನ ನೀಡಿದ್ದಾರೆ. ಈ ವೇಳೆ ಸಂವಿಧಾನದ ಪ್ರಸ್ತಾವನೆಯಲ್ಲಿ ಅಡಕವಾಗಿರುವ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ಎಂಬ ತ್ರಿವಳಿ ಮೌಲ್ಯಗಳು ಕಾನೂನಾತ್ಮಕವಾಗಿ ಸಾಕಷ್ಟು ಪ್ರಗತಿ ಸಾಧಿಸಿವೆ. ಸಾರ್ವತ್ರಿಕ ಮತದಾನದ ಹಕ್ಕು, ಶಿಕ್ಷಣ, ಉದ್ಯೋಗಾವಕಾಶಗಳು ಹಾಗೂ ಮಹಿಳಾ ಸಬಲೀಕರಣವು ದೇಶವನ್ನು ಪ್ರಗತಿಯತ್ತ ಕೊಂಡೊಯ್ದಿವೆ. ಆದರೂ, ಆರ್ಥಿಕ ಅಸಮಾನತೆ, ಜಾತಿ ತಾರತಮ್ಯ, ಲಿಂಗ ತಾರತಮ್ಯ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಸವಾಲುಗಳು ಸಮಾಜದಲ್ಲಿ ಇನ್ನೂ ಸಂಪೂರ್ಣವಾಗಿ ಮರೆಯಾಗಿಲ್ಲ. ಈ ಮೂರು ಮೌಲ್ಯಗಳಲ್ಲಿ ಇಂದಿನ ಸಮಾಜಕ್ಕೆ ಅತ್ಯಂತ ತುರ್ತಾಗಿ ಬೇಕಾಗಿರುವುದು 'ಭ್ರಾತೃತ್ವ' . ಧರ್ಮ, ಜಾತಿ, ಭಾಷೆ ಮತ್ತು ಪ್ರಾದೇಶಿಕತೆಯ ಹೆಸರಿನಲ್ಲಿ ಸಮಾಜದಲ್ಲಿ ಅಸಹಿಷ್ಣುತೆ ಮತ್ತು ವಿಭಜನೆಯ ಧೋರಣೆಗಳು ಹೆಚ್ಚುತ್ತಿರುವ ಇಂದಿನ ಕಾಲಘಟ್ಟದಲ್ಲಿ, ನಾಗರಿಕರ ನಡುವೆ ಪರಸ್ಪರ ಗೌರವ, ಸಹಬಾಳ್ವೆ ಮತ್ತು ಸಹಾನುಭೂತಿ ಅತ್ಯಗತ್ಯವಾಗಿದೆ. ಡಾ. ಬಿ.ಆರ್. ಅಂಬೇಡ್ಕರ್ ಅವರು ಎಚ್ಚರಿಸಿದಂತೆ, ಭ್ರಾತೃತ್ವವಿಲ್ಲದಿದ್ದರೆ ಸ್ವಾತಂತ್ರ್ಯ ಮತ್ತು ಸಮಾನತೆಗಳು ಕೇವಲ ಕಾಗದದ ಮೇಲಷ್ಟೇ ಉಳಿಯುತ್ತವೆ ಎಂದು ಹೇಳಿದ್ದಾರೆ.

'ಎರವಲು ಸಂವಿಧಾನ' ಎಂಬ ಟೀಕೆಗೆ ಸಮರ್ಥನೆ

ಭಾರತೀಯ ಸಂವಿಧಾನವನ್ನು ಕೆಲವರು 'ಎರವಲು ಸಂವಿಧಾನ' ಎಂದು ಟೀಕಿಸುವುದು ಅದರ ಆಳವನ್ನು ಅರಿಯದ ವಾದವಾಗಿದೆ. ಸಂವಿಧಾನ ರಚನಾ ಸಭೆಯು ವಿಶ್ವದ ಪ್ರಮುಖ ಪ್ರಜಾಪ್ರಭುತ್ವ ರಾಷ್ಟ್ರಗಳ ಸಂವಿಧಾನಗಳನ್ನು ಆಳವಾಗಿ ಅಧ್ಯಯನ ಮಾಡಿ, ಅವುಗಳಲ್ಲಿನ ಶ್ರೇಷ್ಠ ಅಂಶಗಳನ್ನು ಮಾತ್ರ ಆಯ್ದುಕೊಂಡಿತು. ಬ್ರಿಟನ್‌ನಿಂದ ಸಂಸದೀಯ ವ್ಯವಸ್ಥೆ, ಅಮೆರಿಕದಿಂದ ಮೂಲಭೂತ ಹಕ್ಕುಗಳು, ಐರ್ಲೆಂಡ್‌ನಿಂದ ನಿರ್ದೇಶಕ ತತ್ವಗಳನ್ನು ಪಡೆದಿದ್ದರೂ, ಅವುಗಳನ್ನು ಯಥಾವತ್ತಾಗಿ ನಕಲು ಮಾಡದೆ ಭಾರತದ ವೈವಿಧ್ಯತೆ, ಸಾಮಾಜಿಕ ವಾಸ್ತವ ಮತ್ತು ಆಡಳಿತಾತ್ಮಕ ಅಗತ್ಯಗಳಿಗೆ ತಕ್ಕಂತೆ ಮಾರ್ಪಡಿಸಿ ಅಳವಡಿಸಿಕೊಳ್ಳಲಾಗಿದೆ. "ಸಂವಿಧಾನದ ಮೂಲಭೂತ ತತ್ವಗಳ ಮೇಲೆ ಯಾರೊಬ್ಬರ ಹಕ್ಕುಸ್ವಾಮ್ಯವಿಲ್ಲ" ಎಂಬ ಅಂಬೇಡ್ಕರ್ ಅವರ ಮಾತು ಈ ಟೀಕೆಗೆ ಸೂಕ್ತ ಉತ್ತರವಾಗಿದೆ ಎಂದಿದ್ದಾರೆ.

ಅನುಷ್ಠಾನದ ಹೊಣೆಗಾರಿಕೆ ಮತ್ತು ಅಂಬೇಡ್ಕರ್ ಎಚ್ಚರಿಕೆ

"ಸಂವಿಧಾನ ಎಷ್ಟೇ ಒಳ್ಳೆಯದಾಗಿದ್ದರೂ, ಅದನ್ನು ಜಾರಿಗೊಳಿಸುವವರು ಕೆಟ್ಟವರಾಗಿದ್ದರೆ ಅದು ಕೆಟ್ಟದ್ದೇ ಆಗುತ್ತದೆ" ಎಂಬ ಅಂಬೇಡ್ಕರ್ ಅವರ ಮಾತು ಇಂದಿನ ರಾಜಕೀಯ ಮತ್ತು ಸಾಮಾಜಿಕ ವ್ಯವಸ್ಥೆಗೆ ನೂರಕ್ಕೆ ನೂರರಷ್ಟು ಪ್ರಸ್ತುತವಾಗಿದೆ. ಎಷ್ಟೇ ಶ್ರೇಷ್ಠ ಕಾನೂನುಗಳಿದ್ದರೂ ಆಡಳಿತ ನಡೆಸುವವರಲ್ಲಿ 'ಸಂವಿಧಾನಿಕ ನೈತಿಕತೆ' , ಪ್ರಾಮಾಣಿಕತೆ ಮತ್ತು ಜನಪರ ಕಾಳಜಿ ಇಲ್ಲದಿದ್ದರೆ ಜನರಿಗೆ ನ್ಯಾಯ ದೊರಕದು. ಭ್ರಷ್ಟಾಚಾರ, ಅಧಿಕಾರ ದುರುಪಯೋಗ ಹಾಗೂ ಸಾಂಸ್ಥಿಕ ಮೌಲ್ಯಗಳ ಕುಸಿತ ಕಂಡುಬರುತ್ತಿರುವ ಇಂದಿನ ದಿನಗಳಲ್ಲಿ, ಸಂವಿಧಾನದ ಯಶಸ್ಸು ಆಡಳಿತಗಾರರ ಹಾಗೂ ಪ್ರಜೆಗಳ ಸದ್ಗುಣವನ್ನು ಅವಲಂಬಿಸಿದೆ ಎಂಬುದು ಸ್ಪಷ್ಟವಾಗುತ್ತದೆ ಎಂದು ತಿಳಿಸಿದ್ದಾರೆ.

Read More
Next Story