ಬೇಸೂರು ಅಣುಸ್ಥಾವರ ವಿರೋಧಿಸಿ ಸಾಗರಕ್ಕೆ ಬೃಹತ್ ಪಾದಯಾತ್ರೆ
x

ಬೇಸೂರು ಪರಮಾಣು ವಿದ್ಯುತ್ ಸ್ಥಾವರ ವಿರೋಧಿಸಿ ಸಾಗರದಲ್ಲಿ ಬೃಹತ್ ಪಾದಯಾತ್ರೆ.

ಬೇಸೂರು ಅಣುಸ್ಥಾವರ ವಿರೋಧಿಸಿ ಸಾಗರಕ್ಕೆ ಬೃಹತ್ ಪಾದಯಾತ್ರೆ

ಬೇಸೂರು ಪರಮಾಣು ವಿದ್ಯುತ್ ಸ್ಥಾವರ ವಿರೋಧಿಸಿ ಸಾಗರದಲ್ಲಿ ಬೃಹತ್ ಪಾದಯಾತ್ರೆ. ಯೋಜನೆ ಕೈಬಿಡುವಂತೆ ಆಗ್ರಹಿಸಿ ಸಾವಿರಾರು ರೈತರು ಮತ್ತು ಸಾರ್ವಜನಿಕರಿಂದ ತೀವ್ರ ಪ್ರತಿಭಟನೆ ನಡೆಸಿದರು.


Click the Play button to hear this message in audio format

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಆವಿನಹಳ್ಳಿ ಹೋಬಳಿಯಲ್ಲಿ ಪ್ರಸ್ತಾಪಿತ ಬೇಸೂರು ಪರಮಾಣು ವಿದ್ಯುತ್ ಸ್ಥಾವರ ವಿರೋಧಿಸಿ ಬುಧವಾರ ಬೇಸೂರಿನಿಂದ ಸಾಗರಕ್ಕೆ ಪಾದಯಾತ್ರೆ ನಡೆಸಲಾಯಿತು.

ಬೇಸೂರು ಬಸವಣ್ಣನಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಆರಂಭವಾದ ಪಾದಯಾತ್ರೆಗೆ ಹೊಸನಗರ ಮೂಲೆಗದ್ದೆ ಸದಾಶಿವ ಶಿವಯೋಗಶ್ರಮದ ಪೀಠಾಧ್ಯಕ್ಷ ಅಭಿನವ ಚನ್ನಬಸವ ಸ್ವಾಮೀಜಿ ಹಾಗೂ ಮಾಜಿ ಶಾಸಕ ಬಿ.ಸ್ವಾಮಿರಾವ್ ಚಾಲನೆ ನೀಡಿದರು.

ಅಣುಸ್ಥಾವರಕ್ಕೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರ ಬೇಸೂರು ಪ್ರದೇಶಕ್ಕೆ ಎನ್‌ಒಸಿ ನೀಡಬಾರದು. ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರು ಈ ಯೋಜನೆಗೆ ವಿರೋಧ ವ್ಯಕ್ತಪಡಿಸಬೇಕು. ಸ್ಥಳಿಯ ಶಾಸಕರು ಮೌನ ಮುರಿಯಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಈಗಾಗಲೇ ಮಲೆನಾಡು ಭಾಗದ ಜನ ಅನೇಕ ಸಮಸ್ಯೆಗಳನ್ನು ಅನುಭವಿಸಿದ್ದಾರೆ. ಮಲೆನಾಡಿನ ಜೀವ ವೈವಿಧ್ಯತೆ ನಡುವೆ ಜೀವನ ನಡೆಸುವ ಶರಾವತಿ ನದಿದಂಡೆಯ ಜನರ ಮೇಲೆ ಕಳೆದ ಆರು ದಶಕದಿಂದ ನಿರಂತರವಾಗಿ ಅನೈತಿಕ ದೌರ್ಜನ್ಯ ನಡೆಸಲಾಗುತ್ತಿದೆ. ಈ ಮೊದಲು 1948ರಲ್ಲಿ ಮಡೆನೂರು ಹಾಗೂ ಎರಡನೇ ಬಾರಿ 1963ರಲ್ಲಿ ಲಿಂಗನಮಕ್ಕಿ ಈಗ ಬೇಸೂರು ಅಣು ಸ್ಥಾವರ ಎಂಬ ಪೆಡಂಭೂತ ಜನರನ್ನು ಕಾಡುತ್ತಿದೆ. ಈ ಯೋಜನೆಯಿಂದ ಅನೇಕ ಕಷ್ಟಗಳಾಗುತ್ತದೆ. ಹಾಗಾಗಿ ಸರ್ಕಾರ ಇದಕ್ಕೆ ವಿರೋಧ ವ್ಯಕ್ತಪಡಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹ ಮಾಡಿದ್ದಾರೆ.

ಅಣುಸ್ಥಾವರ ವಿರೋಧಿ ಹೋರಾಟ ವೇದಿಯಿಂದ ಬೇಸೂರಿನಿಂದ ಸಾಗರ ಎಸಿ ಕಚೇರಿಯವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಸಾವಿರಾರು ಜನ ಬೆಳಿಗ್ಗೆ 7 ಗಂಟೆಗೆ ಬೇಸೂರು ನಿಂದ ಸಾಗರ ತಾಲ್ಲೂಕು ಕಚೇರಿ ವರೆಗೆ ಸರಿ ಸುಮಾರು 30 ಕಿಲೋಮೀಟರ್ ವರೆಗಿನ ಈ ಪಾದಯಾತ್ರೆಯಲ್ಲಿ ಭಾಗವಹಿಸಿದ್ದು, ಅಣುಸ್ಥಾವರ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದರು.

ಪಾದಯಾತ್ರೆ ಉದ್ದಕ್ಕೂ ಸಾವಿರಾರು ರೈತರು ಜನ ವಿರೋಧಿ ಪರಮಾಣು ಸ್ಥಾವರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಏಸೂರು ಕೊಟ್ಟರು ಬೇಸೂರು ಕೊಡೆವು ಎಂದು ಘೋಷಣೆ ಕೂಗುತ್ತಾ ಸಾಗಿದರು. ಪಾದಯಾತ್ರೆ ಉದ್ದಕ್ಕೂ ಜನರಿಗೆ ಕುಡಿಯುವ ನೀರು, ಲಘು ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು, ಮಹಿಳೆಯರು, ಮಕ್ಕಳು ಸೇರಿದಂತೆ ಸಾವಿರಾರು ಜನರು ಪಾದಯಾತ್ರೆಗೆ ಬಿಸಿಲಿನಲ್ಲೇ ಹೆಜ್ಜೆ ಹಾಕಿದರು. ಬೇಸೂರಿನಿಂದ ಆರಂಭವಾದ ಪಾದಯಾತ್ರೆ ಹುಲಿದೇವರ ಬನ, ಮೂರಕೈ ಗೆಣಸಿನಕುಣಿ ಆವಿನಹಳ್ಳಿ ಹೊಸೂರು ಮಾರ್ಗವಾಗಿ ಸಾಗರದ ಇಕ್ಕೇರಿ ವೃತ್ತದಲ್ಲಿ ಸಾವಿರಾರು ಜನರು ಜಮಾಯಿಸಿದ್ದರು.

ಪಾದಯಾತ್ರೆಯಲ್ಲಿ ಹೋರಾಟ ಸಮಿತಿ ಅಧ್ಯಕ್ಷ ಇಂದೂಧರ ಗೌಡ, ಹಕ್ರೆ ಮಲ್ಲಿಕಾರ್ಜುನ, ತಿ.ನಾ ಶ್ರೀನಿವಾಸ್, ಸೀತಾರಾಂ ಕುರವರಿ, ನವೀನ್ ಗೌಡ, ಕೆ ಜಿ ಪ್ರಶಾಂತ್, ಜಿ ಟಿ ಸತ್ಯನಾರಾಯಣ , ದಿನೇಶ್‌ ಶಿರವಾಳ, ಹಕ್ರೆ ಮಲ್ಲಿಕಾರ್ಜುನ ಸೇರಿದಂತೆ ಅನೇಕರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಎಸಿ ಕಛೇರಿ ವರೆಗೆ ಪಾದಯಾತ್ರೆ: ಮನವಿ

ಉದ್ದೇಶಿತ ಯೋಜನೆ ಕೈಬಿಡುವುದಾಗಿ ಲಿಖಿತವಾಗಿ ಸರ್ಕಾರ ಭರವಸೆ ನೀಡುವ ವರೆಗೆ ಹೋರಾಟ ನಿರಂತರವಾಗಿ ನಡೆಯಲಿದೆ ಎಂದು ಬೇಸೂರು ಅಣು ವಿದ್ಯುತ್ ಸ್ಥಾವರ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಇಂಧೂಧರ ಗೌಡ ಹೇಳಿದರು. ಮೇ 27 ಕ್ಕೆ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಎದುರು ಯೋಜನೆ ವಿರೋಧಿಸಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.

Read More
Next Story