
ಅವಳಿ ಹೆಣ್ಣುಮಕ್ಕಳನ್ನು ಬಕೆಟ್‌ನಲ್ಲಿ ಮುಳುಗಿಸಿ ಕೊಂದ ತಾಯಿ, ಆತ್ಮಹತ್ಯೆಗೆ ಯತ್ನ
ಹೆರಿಗೆಯಾದ ಕೆಲವೇ ದಿನಗಳಲ್ಲಿ ಉಮಾದೇವಿಯ ವರ್ತನೆಯಲ್ಲಿ ಬದಲಾವಣೆ ಕಂಡುಬಂದಿತ್ತು. ರಾಮಲಿಂಗಪ್ಪ ದೂರಿನ ಪ್ರಕಾರ, ಒಂದೂವರೆ ತಿಂಗಳಿಂದ ಉಮಾದೇವಿ ಮಕ್ಕಳ ಪಾಲನೆಯಲ್ಲಿ ಆಸಕ್ತಿ ತೋರುತ್ತಿರಲಿಲ್ಲ.
ಬೆಂಗಳೂರಿನ ವಾಜರಹಳ್ಳಿಯ ಬಿಸಿಸಿಎಚ್‌ಎಸ್ ಲೇಔಟ್‌ನಲ್ಲಿ ನಡೆದ ಅತ್ಯಂತ ಹೃದಯ ವಿದ್ರಾವಕ ಘಟನೆಯೊಂದು ಇಡೀ ನಗರವನ್ನು ಬೆಚ್ಚಿಬೀಳಿಸಿದೆ. ನಾಲ್ಕು ತಿಂಗಳ ಹಸುಗೂಸುಗಳಾದ ಅವಳಿ ಹೆಣ್ಣುಮಕ್ಕಳನ್ನು ಸ್ವತಃ ತಾಯಿಯೇ ನೀರು ತುಂಬಿದ ಬಕೆಟ್‌ನಲ್ಲಿ ಮುಳುಗಿಸಿ ಕೊಲೆ ಮಾಡಿರುವ ದಾರುಣ ಘಟನೆ ಬೆಳಕಿಗೆ ಬಂದಿದೆ. ಕೃತ್ಯದ ಬಳಿಕ ತಾಯಿ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.
ಆರೋಪಿ ಮಹಿಳೆಯನ್ನು ಉಮಾದೇವಿ (44) ಎಂದು ಗುರುತಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಆಕೆಯ ಪತಿ, ರಿಯಲ್ ಎಸ್ಟೇಟ್ ಉದ್ಯಮಿ ರಾಮಲಿಂಗಪ್ಪ ಅವರು ನೀಡಿದ ದೂರಿನ ಮೇರೆಗೆ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಮಲಿಂಗಪ್ಪ ಮತ್ತು ಉಮಾದೇವಿ ದಂಪತಿ 2002ರಲ್ಲಿ ವಿವಾಹವಾಗಿದ್ದರು. ಹಲವು ವರ್ಷಗಳ ಕಾಲ ಮಕ್ಕಳಿಲ್ಲದ ಕಾರಣ ದಂಪತಿ ದೀರ್ಘಕಾಲದ ಚಿಕಿತ್ಸೆಯ ಮೊರೆ ಹೋಗಿದ್ದರು. ಅಂತಿಮವಾಗಿ ಕೃತಕ ಗರ್ಭಧಾರಣೆ ಚಿಕಿತ್ಸೆಯ ಮೂಲಕ ಉಮಾದೇವಿ ಗರ್ಭಿಣಿಯಾಗಿ, ಕಳೆದ ಮೇ 5ರಂದು ಅವಳಿ ಹೆಣ್ಣುಮಕ್ಕಳಿಗೆ ಜನ್ಮ ನೀಡಿದ್ದರು. ದೀರ್ಘಕಾಲದ ಕಾಯುವಿಕೆಯ ನಂತರ ಲಭಿಸಿದ ಸಂತಾನದಿಂದ ಕುಟುಂಬದಲ್ಲಿ ಸಂಭ್ರಮ ಮನೆಮಾಡಿತ್ತು.
ಮಾನಸಿಕ ಸ್ಥಿತ್ಯಂತರ, ಅನಾರೋಗ್ಯ
ಆದರೆ, ಹೆರಿಗೆಯಾದ ಕೆಲವೇ ದಿನಗಳಲ್ಲಿ ಉಮಾದೇವಿಯ ವರ್ತನೆಯಲ್ಲಿ ಬದಲಾವಣೆ ಕಂಡುಬಂದಿತ್ತು. ಪತಿ ರಾಮಲಿಂಗಪ್ಪ ಅವರ ದೂರಿನ ಪ್ರಕಾರ, ಕಳೆದ ಒಂದೂವರೆ ತಿಂಗಳಿಂದ ಉಮಾದೇವಿ ಮಕ್ಕಳ ಪಾಲನೆಯಲ್ಲಿ ಆಸಕ್ತಿ ತೋರುತ್ತಿರಲಿಲ್ಲ. "ಮಕ್ಕಳನ್ನು ಆಶ್ರಮಕ್ಕೆ ಸೇರಿಸಿಬಿಡೋಣ" ಎಂದು ಪದೇಪದೇ ಹೇಳುತ್ತಿದ್ದ ಅವರು, ಅಸಹಜವಾಗಿ ವರ್ತಿಸುತ್ತಿದ್ದರು. ಪತ್ನಿಯ ಈ ವಿಚಿತ್ರ ನಡವಳಿಕೆಯಿಂದ ಆತಂಕಗೊಂಡ ರಾಮಲಿಂಗಪ್ಪ, ಆಕೆಯನ್ನು ಬೆಂಗಳೂರಿನ ಪ್ರತಿಷ್ಠಿತ ನಿಮ್ಹಾನ್ಸ್ ಆಸ್ಪತ್ರೆಗೆ ಕರೆದೊಯ್ದು ಮನೋವೈದ್ಯರಿಂದ ಚಿಕಿತ್ಸೆ ಕೊಡಿಸಿದ್ದರು. ಹೆರಿಗೆಯ ನಂತರದ ಹಾರ್ಮೋನ್‌ಗಳ ಅಸಮತೋಲನದಿಂದ ಉಮಾದೇವಿ ಮಾನಸಿಕ ಒತ್ತಡದಲ್ಲಿದ್ದಾರೆ ಎಂದು ವೈದ್ಯರು ತಿಳಿಸಿದ್ದರು.
ಉಮಾದೇವಿ ಮನೆಯ ಕೊಠಡಿಯ ಬಾಗಿಲು ಹಾಕಿಕೊಂಡಿದ್ದು, ತುಂಬಾ ಸಮಯವಾದರೂ ಬಾಗಿಲು ತೆರೆಯದಿದ್ದಾಗ, ಮನೆಯವರು ಅನುಮಾನಗೊಂಡು ಬಾಗಿಲು ಒಡೆದು ಒಳಗೆ ಹೋಗಿ ನೋಡಿದಾಗ ದೃಶ್ಯ ಭಯಾನಕವಾಗಿತ್ತು. ನಾಲ್ಕು ತಿಂಗಳ ಅವಳಿ ಹೆಣ್ಣುಮಕ್ಕಳು ನೀರಿನ ಬಕೆಟ್‌ನಲ್ಲಿ ಮುಳುಗಿ ಮೃತಪಟ್ಟಿದ್ದರು. ಅದೇ ಕೊಠಡಿಯಲ್ಲಿ ಉಮಾದೇವಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಸ್ಥಿತಿಯಲ್ಲಿ ಪತ್ತೆಯಾದರು. ಕೂಡಲೇ ಅವರನ್ನು ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಪೊಲೀಸರ ತನಿಖೆ
ಸ್ಥಳಕ್ಕೆ ಭೇಟಿ ನೀಡಿದ ತಲಘಟ್ಟಪುರ ಪೊಲೀಸರು ಮಹಜರು ನಡೆಸಿದರು. ಪ್ರಾಥಮಿಕ ತನಿಖೆಯಲ್ಲಿ, ಪೋಸ್ಟ್-ಪಾರ್ಟಮ್ ಡಿಪ್ರೆಷನ್‌ನಿಂದ ಉಮಾದೇವಿ ಇಂತಹ ಕಠಿಣ ನಿರ್ಧಾರ ಕೈಗೊಂಡಿರಬಹುದು ಎಂದು ಶಂಕಿಸಲಾಗಿದೆ. ಈ ವಿಷಯ ಈಗ ಸ್ಥಳೀಯರಲ್ಲಿ ಮತ್ತು ಸಾರ್ವಜನಿಕರಲ್ಲಿ ಆಘಾತವನ್ನುಂಟುಮಾಡಿದೆ. ಸುದೀರ್ಘ ಚಿಕಿತ್ಸೆಯ ನಂತರ ಮಗುವನ್ನು ಪಡೆದ ತಾಯಿಯೊಬ್ಬಳು, ಮಾನಸಿಕ ಕಾಯಿಲೆಯ ಕಾರಣಕ್ಕೆ ಇಂತಹ ಕೃತ್ಯಕ್ಕೆ ಮುಂದಾಗಿರುವುದು ದುರಂತದ ಪರಮಾವಧಿ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

