ಲಾಲ್‌ಬಾಗ್ ಮಾರಾಟಕ್ಕಿದೆಯೇ; ಟನಲ್ ರಸ್ತೆ ವಿವಾದದ ಅಸಲಿ ಸತ್ಯ ಏನು?
ಉದ್ದೇಶಿತ ಸುರಂಗ ಮಾರ್ಗವು ಲಾಲ್ ಬಾಗ್ ಬಂಡೆಯನ್ನು ಸೀಳಿಕೊಂಡು ಹೋಗುವುದರಿಂದ 300 ಶತಕೋಟಿ ವರ್ಷಗಳಷ್ಟು ಹಳೆಯ ಪೆನಿನ್ಸುಲರ್ ಬಂಡೆಗೆ ಅಪಾಯ ಎದುರಾಗಲಿದೆ ಎಂಬ ಆತಂಕ ಭೂವಿಜ್ಞಾನಿಗಳದ್ದಾಗಿದೆ.
ಬೆಂಗಳೂರಿನ ಉದ್ದೇಶಿತ ಅವಳಿ ಸುರಂಗ ರಸ್ತೆ ಯೋಜನೆಗಾಗಿ ಲಾಲ್‌ಬಾಗ್ ಸಸ್ಯೋದ್ಯಾನದ 5 ಎಕರೆ ಜಾಗ ಬಳಸಿಕೊಳ್ಳುವ ರಾಜ್ಯ ಸರ್ಕಾರದ ಕ್ರಮ ಇದೀಗ ತೀವ್ರ ವಿರೋಧಕ್ಕೆ ಕಾರಣವಾಗಿದೆ. ರಾಜ್ಯ ಸರ್ಕಾರವು ಹೈಕೋರ್ಟ್‌ಗೆ ಸಲ್ಲಿಸಿರುವ ಅಫಿಡೆವಿಟ್ ನಲ್ಲಿ ಡಿಪಿಆರ್ ಅಂಶಗಳನ್ನು ಮರೆ ಮಾಚಿದೆ ಎಂದು ಆರೋಪಿಸಿ ಪರಿಸರವಾದಿಗಳು ಹಾಗೂ ಪ್ರತಿಪಕ್ಷದ ನಾಯಕರು 'ಲಾಲ್ ಬಾಗ್ ಮಾರಾಟಕ್ಕಿದೆ' ಎಂಬ ಕರಪತ್ರ ಹಂಚಿ, ಶ್ವಾಸತಾಣ ಉಳಿಸಲು ಜನಜಾಗೃತಿ ಮೂಡಿಸುತ್ತಿದ್ದಾರೆ.
ರಾಜ್ಯ ಸರ್ಕಾರ 19 ಸಾವಿರ ಕೋಟಿ ರೂ. ವೆಚ್ಚದಲ್ಲಿ ಅವಳಿ ಸುರಂಗ ರಸ್ತೆ ನಿರ್ಮಾಣ ಯೋಜನೆಗೆ ಸಿದ್ಧಪಡಿಸಿರುವ ಡಿಪಿಆರ್ ಹಾಗೂ ಕರೆದಿರುವ ಟೆಂಡರ್ ಎರಡೂ ಕೂಡ ನ್ಯಾಯಾಲಯದ ಅಂಗಳದಲ್ಲಿವೆ. ಮೊದಲಿಗೆ ನಾವು ಈ ಯೋಜನೆಯ ವ್ಯಾಪ್ತಿಯನ್ನ ಅರ್ಥ ಮಾಡಿಕೊಳ್ಳೋಣ. ಬೆಂಗಳೂರಿನ ಹೆಬ್ಬಾಳದಿಂದ ಸಿಲ್ಕ್ ಬೋರ್ಡ್ವರೆಗಿನ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ಹಾಡಲು ರಾಜ್ಯ ಸರ್ಕಾರ ಈ ಅವಳಿ ಸುರಂಗ ರಸ್ತೆ ಯೋಜನೆಯನ್ನು ಪ್ರಸ್ತಾಪಿಸಿದೆ. ಇದಕ್ಕಾಗಿ 2025ರ ಜುಲೈ 14ರಂದು ಅಧಿಕೃತವಾಗಿ ಟೆಂಡರ್ ಅಧಿಸೂಚನೆ ಹೊರಡಿಸಿತ್ತು. ಬಿಡ್ ಸಲ್ಲಿಕೆ, ಅದರ ಪೂರ್ವ ಪ್ರಕ್ರಿಯೆಗಳು ಹಾಗೂ RFP ಅಂದರೆ (Request for Proposal) ದಾಖಲೆಗಳ ಸಿದ್ಧತೆಯೂ ನಡೆದಿತ್ತು. ಇಷ್ಟೇ ಅಲ್ಲ, 2024ರ ನವೆಂಬರ್ 26ರಂದು ಕರ್ನಾಟಕ ರಾಜ್ಯ ಪರಿಸರ ಪರಿಣಾಮ ಮೌಲ್ಯಮಾಪನ ಪ್ರಾಧಿಕಾರವು "ಈ ಸುರಂಗ ಮಾರ್ಗ ಯೋಜನೆಗೆ ಯಾವುದೇ ಪೂರ್ವ ಪರಿಸರ ಅನುಮತಿ ಅಗತ್ಯವಿಲ್ಲ" ಎಂಬ ಪತ್ರ ನೀಡಿ ಹಸಿರು ನಿಶಾನೆಯನ್ನೂ ತೋರಿಸಿತ್ತು. ಆದರೆ, ಈಗ ಇಡೀ ಪ್ರಕ್ರಿಯೆ ಹೈಕೋರ್ಟ್ ಮೆಟ್ಟಿಲೇರಿದೆ!
ಖಾಸಗಿ ಸಂಸ್ಥೆ ತಯಾರಿಸಿದ್ದ ಡಿಪಿಆರ್ ಪರಿಶೀಲನೆಗೆ ರಾಜ್ಯ ಸರ್ಕಾರ ತಜ್ಞರ ಸಮಿತಿ ನೇಮಿಸಿತ್ತು. ಆ ಸಮಿತಿ ನೀಡಿದ 89 ಪುಟಗಳ ವರದಿಯಲ್ಲಿ ಹಲವು ಸ್ಫೋಟಕ ಸಂಗತಿಗಳು ಬೆಚ್ಚಿ ಬೀಳಿಸುವಂತಿದ್ದವು. ಅವುಗಳಲ್ಲಿ ಮೊದಲನೆಯದ್ದು, ಮಣ್ಣು ಪರಿಕ್ಷೆ. ಬೆಂಗಳೂರಿನ ಉತ್ತರ ಹಾಗೂ ದಕ್ಷಿಣ ಸಂಪರ್ಕಿಸುವ ಸುರಂಗ ಕೊರೆಯಬೇಕಾದರೆ ನೂರಾರು ಕಡೆ ಮಣ್ಣು ಮತ್ತು ಭೂಗರ್ಭದ ಪರೀಕ್ಷೆ ನಡೆಸಬೇಕು. ಆದರೆ, ಇಲ್ಲಿ ಕೇವಲ 4 ಸ್ಥಳಗಳ ಮಣ್ಣಿನ ಪರೀಕ್ಷೆಯನ್ನು ಆಧರಿಸಿ ಬೃಹತ್ ಯೋಜನೆಯನ್ನು ರೂಪಿಸಲಾಗಿದೆ!.
ಎರಡನೆಯದ್ದು ಮೆಟ್ರೋ ಮಾರ್ಗದೊಂದಿಗೆ ಅಡಚಣೆ. ಉದ್ದೇಶಿತ ಸುರಂಗ ಮಾರ್ಗವು ನಮ್ಮ ಮೆಟ್ರೋದ ಅಂಡರ್ ಗ್ರೌಂಡ್ ಮತ್ತು ಮೇಲ್ಸೇತುವೆ ಮಾರ್ಗಗಳಿಗೆ ತೀರಾ ಸಮಾನಾಂತರವಾಗಿ ಸಾಗುವುದರಿಂದ ಮೆಟ್ರೋ ಪಿಲ್ಲರ್ಗಳ ಫೌಂಡೇಶನ್ ಮತ್ತು ಸುರಂಗದ ಮಧ್ಯೆ ಕೇವಲ ಕೆಲವೇ ಮೀಟರ್ಗಳ ಅಂತರವಿರಲಿದೆ. ಇದು ಮೆಟ್ರೋ ಸುರಕ್ಷತೆಗೆ ಧಕ್ಕೆ ತರಬಹುದು ಎಂದು ಸಮಿತಿ ಆತಂಕ ವ್ಯಕ್ತಪಡಿಸಿತ್ತು.
ಮೂರನೆಯದ್ದು ಅವೈಜ್ಞಾನಿಕ ದತ್ತಾಂಶ. ಬೆಂಗಳೂರಿನ ಸಂಚಾರ ದಟ್ಟಣೆಯ ಪ್ರಾಥಮಿಕವಾದ ಟ್ರಾಫಿಕ್ ಡೇಟಾ ಮತ್ತು ಸಮಗ್ರ ಭೂವೈಜ್ಞಾನಿಕ ತಪಾಸಣೆಗಳಿಲ್ಲದೇ ವೆಚ್ಚವನ್ನು ಅಂದಾಜಿಸಲಾಗಿದೆ ಎಂಬುದನ್ನು ತಜ್ಞರ ಸಮಿತಿ ಹೇಳಿದೆ.
ವೀಕ್ಷಕರೇ ಇದು ತಜ್ಞರ ಸಮಿತಿ ಕಂಡು ಕೊಂಡ ಲೋಪಗಳಾದರೆ, ಇನ್ನು ಲಾಲ್ ಬಾಗ್ ಕೂಡ ಯೋಜನೆಯಿಂದ ಅಪಾಯ ಎದುರಿಸಲಿದೆ ಎಂಬುದನ್ನು ತಜ್ಞರೇ ಹೇಳುತ್ತಾರೆ. ಉದ್ದೇಶಿತ ಟನಲ್ ರಸ್ತೆ ನಿರ್ಮಾಣಕ್ಕಾಗಿ ಲಾಲ್ ಬಾಗ್ನ 5 ಎಕರೆ ಜಾಗವನ್ನು ಪ್ರವೇಶ ಮತ್ತು ನಿರ್ಗಮನ ದಾರಿಗಾಗಿ ಬಳಸಿಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ.
ಉದ್ದೇಶಿತ ಸುರಂಗ ಮಾರ್ಗವು ಲಾಲ್ ಬಾಗ್ ಬಂಡೆಯನ್ನು ಸೀಳಿಕೊಂಡು ಹೋಗುವುದರಿಂದ 300 ಶತಕೋಟಿ ವರ್ಷಗಳಷ್ಟು ಹಳೆಯ ಪೆನಿನ್ಸುಲರ್ ಬಂಡೆಗೆ ಅಪಾಯ ಎದುರಾಗಲಿದೆ ಎಂಬ ಆತಂಕ ಭೂವಿಜ್ಞಾನಿಗಳದ್ದಾಗಿದೆ. ಸದ್ಯ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು, ಲಾಲ್‌ಬಾಗ್ ಉಳಿವಿಗಾಗಿ ಜಾಗೃತಿ ಅಭಿಯಾನ ಆರಂಭಿಸಿದ್ದಾರೆ.

