ತುಮಕೂರು-ಬೆಂಗಳೂರು ನಡುವೆ ಚತುಷ್ಪಥ ರೈಲು ಮಾರ್ಗ; ಬಿಗ್‌ ಅಪ್‌ಡೇಟ್‌ ಕೊಟ್ಟ ಕೇಂದ್ರ ಸಚಿವ
x

ತುಮಕೂರು-ಬೆಂಗಳೂರು ನಡುವೆ ಚತುಷ್ಪಥ ರೈಲು ಮಾರ್ಗ; ಬಿಗ್‌ ಅಪ್‌ಡೇಟ್‌ ಕೊಟ್ಟ ಕೇಂದ್ರ ಸಚಿವ

ಸಿಗ್ನಲ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಚತುಷ್ಪಥ ರೈಲು ಮಾರ್ಗ ನಿರ್ಮಾಣದ ಪೂರ್ವ ಸಿದ್ಧತೆಗಳು ಭರದಿಂದ ಸಾಗಿವೆ. ಪ್ರಸ್ತುತ ಕೇವಲ ಎರಡು ಪಥಗಳ ರೈಲ್ವೆ ಹಳಿ ಇರುವುದರಿಂದ ಎಕ್ಸ್‌ಪ್ರೆಸ್‌ ಮತ್ತು ಪ್ಯಾಸೆಂಜರ್ ರೈಲುಗಳು ಸಿಗ್ನಲ್‌ಗಾಗಿ ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಇದೆ.


ಕಲ್ಪತರು ನಾಡು ತುಮಕೂರಿನಿಂದ ರಾಜಧಾನಿ ಬೆಂಗಳೂರಿಗೆ ದಿನನಿತ್ಯ ರೈಲಿನಲ್ಲಿ ಸಂಚರಿಸುವ ಸಾವಿರಾರು ಪ್ರಯಾಣಿಕರ ಬಹುದಿನಗಳ ಕನಸು ಕೊನೆಗೂ ಈಡೇರುವ ಹಂತಕ್ಕೆ ಬಂದಿದೆ. ಶಿಕ್ಷಣ, ಉದ್ಯೋಗ, ವ್ಯಾಪಾರ ಹಾಗೂ ಇನ್ನಿತರೆ ವ್ಯವಹಾರಗಳ ಸಲುವಾಗಿ ಬೆಂಗಳೂರಿಗೆ ಬಂದು ಹೋಗುವ ಪ್ರಯಾಣಿಕರಿಂದ ವಿಪರೀತ ದಟ್ಟಣೆ ಎದುರಾಗಿತ್ತು. ಪ್ರಸ್ತುತ, ಇರುವ ದ್ವಿಪಥದಿಂದ ರೈಲು ಸಂಚಾರ ಸಾಕಷ್ಟು ವಿಳಂಬವಾಗುತ್ತಿದೆ. ಇದಕ್ಕೆ ಇತಿಶ್ರೀ ಹಾಡಲೆಂದೇ ಕೇಂದ್ರ ಸರ್ಕಾರ, ತುಮಕೂರು ಹಾಗೂ ಬೆಂಗಳೂರು ನಡುವೆ ಚತುಷ್ಪಥ ರೈಲು ಮಾರ್ಗ ನಿರ್ಮಾಣಕ್ಕೆ ಸಿದ್ಧತೆ ಆರಂಭಿಸಿದೆ.

ಸಿಗ್ನಲ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಚತುಷ್ಪಥ ರೈಲು ಮಾರ್ಗ ನಿರ್ಮಾಣದ ಪೂರ್ವ ಸಿದ್ಧತೆಗಳು ಭರದಿಂದ ಸಾಗಿವೆ. ಪ್ರಸ್ತುತ ಕೇವಲ ಎರಡು ಪಥಗಳ ರೈಲ್ವೆ ಹಳಿ ಇರುವುದರಿಂದ ಎಕ್ಸ್‌ಪ್ರೆಸ್‌ ಮತ್ತು ಪ್ಯಾಸೆಂಜರ್ ರೈಲುಗಳು ಸಿಗ್ನಲ್‌ಗಾಗಿ ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಇದೆ. ಇದರಿಂದಾಗಿ ಸಾರ್ವಜನಿಕರು ಪರದಾಡುತ್ತಿದ್ದಾರೆ. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ರೈಲ್ವೆ ಇಲಾಖೆಯು, ನಾಲ್ಕು ಪಥಗಳ ಸುಸಜ್ಜಿತ ರೈಲ್ವೆ ಕಾರಿಡಾರ್ ನಿರ್ಮಿಸಲು ಸಿದ್ಧತೆ ನಡೆಸುತ್ತಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

ರೈಲ್ವೆ ಮಂಡಳಿ ಅಂತಿಮ ಮುದ್ರೆಯಷ್ಟೇ ಬಾಕಿ

ಉದ್ದೇಶಿತ ಯೋಜನೆಗಾಗಿ ರೈಲ್ವೆ ಇಲಾಖೆಯು ವಿಸ್ತೃತ ಯೋಜನಾ ವರದಿಯನ್ನು ಸಿದ್ಧಪಡಿಸಿದೆ. ಅಷ್ಟೇ ಅಲ್ಲದೆ, ರೈಲ್ವೆ ಇಲಾಖೆಯ ಅತ್ಯುನ್ನತ ತಾಂತ್ರಿಕ ಸಮಿತಿಯು ಈ ವರದಿಯನ್ನು ಆಳವಾಗಿ ಪರಿಶೀಲಿಸಿ ಅನುಮೋದನೆ ನೀಡಿದೆ. ಸದ್ಯ ಈ ಪ್ರಕ್ರಿಯೆಯು ರೈಲ್ವೆ ಮಂಡಳಿಯ ಅಂತಿಮ ಒಪ್ಪಿಗೆಯ ಹಂತದಲ್ಲಿದ್ದು, ಮಂಡಳಿಯ ಅಧಿಕೃತ ಮುದ್ರೆ ಬೀಳುತ್ತಿದ್ದಂತೆ ಯೋಜನೆ ಕಾರ್ಯರೂಪಕ್ಕೆ ಬರಲಿದೆ.

6 ಸಾವಿರ ಕೋಟಿ ರೂ. ವೆಚ್ಚದ ಯೋಜನೆ

ಅಂದಾಜು 6 ಸಾವಿರ ಕೋಟಿ ರೂಪಾಯಿಗೂ ಅಧಿಕ ಬೃಹತ್ ವೆಚ್ಚದಲ್ಲಿ ಈ ಚತುಷ್ಪಥ ರೈಲು ಮಾರ್ಗದ ಮೂಲಸೌಕರ್ಯ ಕಾಮಗಾರಿ ನಡೆಯಲಿದೆ. ಈ ಯೋಜನೆಗೆ ಅಗತ್ಯವಿರುವ ಹೆಚ್ಚುವರಿ ಜಮೀನನ್ನು ಗುರುತಿಸುವ ಕಾರ್ಯವು ಈಗಾಗಲೇ ತಾಂತ್ರಿಕ ತಂಡಗಳಿಂದ ಚುರುಕಾಗಿ ಸಾಗುತ್ತಿದೆ. ಮುಂದಿನ ಐದಾರು ತಿಂಗಳ ಅವಧಿಯಲ್ಲಿ ಭೂಸ್ವಾಧೀನ ಪ್ರಕ್ರಿಯೆಯು ಸಹ ಅಧಿಕೃತವಾಗಿ ಆರಂಭವಾಗಲಿದೆ ಎಂದು ವಿ. ಸೋಮಣ್ಣ ಮುನ್ಸೂಚನೆ ನೀಡಿದ್ದಾರೆ.

ಪ್ರಯಾಣದ ಸಮಯ ಕಡಿತ

ಚತುಷ್ಪಥ ರೈಲು ಮಾರ್ಗ ನಿರ್ಮಾಣದಿಂದ ಬೆಂಗಳೂರು-ತುಮಕೂರು ನಡುವೆ ಸಿಗ್ನಲ್ ಮುಕ್ತ ಸಂಚಾರ ಸಾಧ್ಯವಾಗಲಿದೆ. ಈಗಿರುವ ಸಮಯವು ಅರ್ಧದಷ್ಟು ಕಡಿಮೆ ಆಗಲಿದೆ. ಭವಿಷ್ಯದಲ್ಲಿ ಯಲಹಂಕ, ಯಶವಂತಪುರ ಹಾಗೂ ಕೆಎಸ್ಆರ್ ಬೆಂಗಳೂರು ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸುವ ಹೊಸ ಮೆಮು ರೈಲುಗಳ ಸೇವೆ ಹೆಚ್ಚಿಸಲು ಇದು ಸಹಕಾರಿಯಾಗಲಿದೆ.

ಕಲ್ಪತರು ನಾಡು ಮತ್ತು ರಾಜಧಾನಿ ನಡುವಿನ ಆರ್ಥಿಕ, ಸಾಮಾಜಿಕ ಬಾಂಧವ್ಯ ಮತ್ತಷ್ಟು ಗಟ್ಟಿಗೊಳಿಸಲಿರುವ ಈ ರೈಲು ಮಾರ್ಗವು ಮುಂದಿನ ದಿನಗಳಲ್ಲಿ ತುಮಕೂರು ಜಿಲ್ಲೆಯ ಚಿತ್ರಣವನ್ನೇ ಬದಲಾಯಿಸಲಿದೆ ಎಂದು ವಿಶ್ಲೇಷಿಸಲಾಗಿದೆ.

Read More
Next Story