ವಿಧಾನಸೌಧದ ಮುಂಭಾಗದಲ್ಲಿ ನಾಳೆ ‘ಫ್ರೀಡಂ ಹಬ್ಬ’ - ಈ ರಸ್ತೆಗಳು ಬಂದ್, ಮೆಟ್ರೋ ಸೇವೆಯಲ್ಲೂ ವ್ಯತ್ಯಯ
x

ವಿಧಾನಸೌಧದ ಮುಂಭಾಗದಲ್ಲಿ ನಾಳೆ ‘ಫ್ರೀಡಂ ಹಬ್ಬ’ - ಈ ರಸ್ತೆಗಳು ಬಂದ್, ಮೆಟ್ರೋ ಸೇವೆಯಲ್ಲೂ ವ್ಯತ್ಯಯ

ಆಗಸ್ಟ್ 15ರಂದು ಬೆಳಗ್ಗೆ 11ರಿಂದ ರಾತ್ರಿ 10ರವರೆಗೆ ವಿಧಾನಸೌಧ ಹಾಗೂ ಸುತ್ತಮುತ್ತಲಿನ ಪ್ರಮುಖ ರಸ್ತೆಗಳಲ್ಲಿ ಸಂಚಾರ ನಿರ್ಬಂಧ ಇರಲಿದೆ. ಹೀಗಾಗಿ ಈ ಭಾಗದಲ್ಲಿ ಸಂಚರಿಸುವ ವಾಹನ ಸವಾರರು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಸಂಚಾರ ಪೊಲೀಸರು ಸೂಚಿಸಿದ್ದಾರೆ.


Click the Play button to hear this message in audio format

ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಆಗಸ್ಟ್ 15ರಂದು ವಿಧಾನಸೌಧದ ಮುಂಭಾಗದಲ್ಲಿ ‘ಫ್ರೀಡಂ ಹಬ್ಬ’ ಆಯೋಜಿಸಲಾಗಿದೆ. ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸಾರ್ವಜನಿಕರ ಸುರಕ್ಷತೆ ಹಾಗೂ ಸುಗಮ ಸಂಚಾರಕ್ಕಾಗಿ ಬೆಂಗಳೂರಿನ ಕೇಂದ್ರ ಭಾಗದಲ್ಲಿ ವಾಹನ ಸಂಚಾರ, ಮೆಟ್ರೋ ಸೇವೆ ಮತ್ತು ಪಾರ್ಕಿಂಗ್‌ ವ್ಯವಸ್ಥೆಯಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ.

ಆಗಸ್ಟ್ 15ರಂದು ಬೆಳಗ್ಗೆ 11ರಿಂದ ರಾತ್ರಿ 10ರವರೆಗೆ ವಿಧಾನಸೌಧ ಹಾಗೂ ಸುತ್ತಮುತ್ತಲಿನ ಪ್ರಮುಖ ರಸ್ತೆಗಳಲ್ಲಿ ಸಂಚಾರ ನಿರ್ಬಂಧ ಇರಲಿದೆ. ಹೀಗಾಗಿ ಈ ಭಾಗದಲ್ಲಿ ಸಂಚರಿಸುವ ವಾಹನ ಸವಾರರು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಸಂಚಾರ ಪೊಲೀಸರು ಸೂಚಿಸಿದ್ದಾರೆ.

ಯಾವ ರಸ್ತೆಯಲ್ಲಿ ಸಂಚಾರ ನಿರ್ಬಂಧ?

ವಿಧಾನಸೌಧದ ಮೆಟ್ಟಿಲುಗಳ ಮುಂಭಾಗದಲ್ಲಿ ‘ಫ್ರೀಡಂ ಹಬ್ಬ’ ನಡೆಯಲಿರುವ ಹಿನ್ನೆಲೆಯಲ್ಲಿ ಅಂಬೇಡ್ಕರ್ ರಸ್ತೆಯಿಂದ ಕೆ.ಆರ್. ಸರ್ಕಲ್ ಕಡೆಗೆ ಹಾಗೂ ಶೇಷಾದ್ರಿ ರಸ್ತೆಯ ಕೆ.ಆರ್. ಸರ್ಕಲ್‌ನಿಂದ ಅಂಬೇಡ್ಕರ್ ರಸ್ತೆಯ ಮೂಲಕ ಶಿವಾಜಿನಗರ ಮತ್ತು ವಸಂತನಗರ ಕಡೆಗೆ ತೆರಳುವ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಈ ಸಂಚಾರ ನಿರ್ಬಂಧ ಬೆಳಗ್ಗೆ 11ರಿಂದ ರಾತ್ರಿ 10ರವರೆಗೆ ಜಾರಿಯಲ್ಲಿರಲಿದೆ.

ಎರಡು ಮೆಟ್ರೋ ನಿಲ್ದಾಣಗಳಲ್ಲಿ ಸೇವೆ ಸ್ಥಗಿತ

ಫ್ರೀಡಂ ಹಬ್ಬದ ಹಿನ್ನೆಲೆಯಲ್ಲಿ ಅಂಬೇಡ್ಕರ್ ಮೆಟ್ರೋ ನಿಲ್ದಾಣ ಮತ್ತು ವಿಧಾನಸೌಧ ಮೆಟ್ರೋ ನಿಲ್ದಾಣಗಳಲ್ಲಿ ರೈಲುಗಳ ನಿಲುಗಡೆ ಇರುವುದಿಲ್ಲ. ಈ ನಿಲ್ದಾಣಗಳ ಪ್ರವೇಶ ಮತ್ತು ನಿರ್ಗಮನವನ್ನೂ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತದೆ. ವಿಧಾನಸೌಧದ ಬಳಿಯ ಕಾರ್ಯಕ್ರಮಕ್ಕೆ ಮೆಟ್ರೋ ಮೂಲಕ ಆಗಮಿಸುವ ಸಾರ್ವಜನಿಕರು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣ ಅಥವಾ ವಿಶ್ವೇಶ್ವರಯ್ಯ ಮೆಟ್ರೋ ನಿಲ್ದಾಣ (ಸೆಂಟ್ರಲ್ ಕಾಲೇಜು) ಮೂಲಕ ತೆರಳುವಂತೆ ಸೂಚಿಸಲಾಗಿದೆ.

ಈ ರಸ್ತೆಗಳಲ್ಲಿ ಪಾರ್ಕಿಂಗ್ ನಿಷೇಧ

ಕ್ವೀನ್ಸ್ ರಸ್ತೆಯ ಎರಡೂ ಬದಿಗಳು, ಬಾಳೇಕುಂದ್ರಿ ವೃತ್ತದಿಂದ ಕ್ಲೀನ್ಸ್ ಸರ್ಕಲ್‌ವರೆಗೆ, ಕ್ಲೀನ್ಸ್ ಸರ್ಕಲ್‌ನಿಂದ ಸಿಟಿಒ ಜಂಕ್ಷನ್‌ವರೆಗೆ, ಲೋಕಭವನ ರಸ್ತೆ, ಟಿ.ಚೌಡಯ್ಯ ರಸ್ತೆ, ರೇಸ್‌ಕೋರ್ಸ್ ರಸ್ತೆ, ಕಬ್ಬನ್ ಪಾರ್ಕ್‌ನ ಒಳಭಾಗದ ಕಿಂಗ್ ಸರ್ಕಲ್, ಪ್ರೆಸ್ ಕ್ಲಬ್ ಮುಂಭಾಗ ಆಗಸ್ಟ್ 15ರಂದು ಕೆಲವು ಪ್ರಮುಖ ರಸ್ತೆಗಳಲ್ಲಿ ವಾಹನ ನಿಲುಗಡೆಗೆ ಸಂಪೂರ್ಣ ನಿಷೇಧ ಹೇರಲಾಗಿದೆ. ಈ ಪ್ರದೇಶಗಳಲ್ಲಿ ಸಾರ್ವಜನಿಕರು ವಾಹನಗಳನ್ನು ನಿಲ್ಲಿಸದಂತೆ ಸೂಚಿಸಲಾಗಿದೆ.

ವಾಹನ ನಿಲುಗಡೆಗೆ ಎಲ್ಲೆಲ್ಲಿ ಅವಕಾಶ?

ಸಾರ್ವಜನಿಕರ ಅನುಕೂಲಕ್ಕಾಗಿ ಹಲವು ಕಡೆ ಪರ್ಯಾಯ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಅವುಗಳೆಂದರೆ ಸ್ಕೌಟ್ಸ್ ಮತ್ತು ಗೈಡ್ಸ್ ಪಾರ್ಕಿಂಗ್ ಸ್ಥಳ, ಫ್ರೀಡಂ ಪಾರ್ಕ್, ಎಂಎಲ್‌ಸಿಪಿ ಪಾರ್ಕಿಂಗ್ ಸ್ಥಳ, ಕಂಠೀರವ ಕ್ರೀಡಾಂಗಣ, ಜ್ಞಾನಜ್ಯೋತಿ ಆಡಿಟೋರಿಯಂ ಬಳಿಯ ಯುನಿವರ್ಸಿಟಿ ಪಾರ್ಕಿಂಗ್, ಕಲಾ ಕಾಲೇಜು ಪಾರ್ಕಿಂಗ್ ಸ್ಥಳ, ಯುಬಿ ಸಿಟಿ ಪಾರ್ಕಿಂಗ್, ಶಿವಾಜಿನಗರ ಎಂಎಲ್‌ಸಿಪಿ ಪಾರ್ಕಿಂಗ್ ಸ್ಥಳ, ನೆಹರು ತಾರಾಲಯ, ಸೆಂಟ್ ಜೋಸೆಫ್ ಹೈಸ್ಕೂಲ್ ಮೈದಾನ, ಲಿಂಕ್ ರಸ್ತೆ

ಕ್ಯಾಬ್‌ಗಳಿಗೆ ಎಲ್ಲೆಲ್ಲಿ ಪಿಕ್‌ಅಪ್ ಮತ್ತು ಡ್ರಾಪ್?

ಕ್ಯಾಬ್‌ಗಳಲ್ಲಿ ಆಗಮಿಸುವ ಅಥವಾ ತೆರಳುವ ಸಾರ್ವಜನಿಕರಿಗೆ ನಿಗದಿತ ಸ್ಥಳಗಳಲ್ಲಿ ಮಾತ್ರ ಪಿಕ್‌ಅಪ್ ಮತ್ತು ಡ್ರಾಪ್ ವ್ಯವಸ್ಥೆ ಇರಲಿದೆ. ಸಿಟಿಒ ಜಂಕ್ಷನ್ ಬಳಿಯ ಲೋಕಭವನ ರಸ್ತೆ, ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣ ಹಾಗೂ ಕೆ.ಆರ್. ವೃತ್ತದಲ್ಲಿ ಕ್ಯಾಬ್‌ಗಳ ಪಿಕ್‌ಅಪ್ ಮತ್ತು ಡ್ರಾಪ್‌ಗೆ ಅವಕಾಶ ಕಲ್ಪಿಸಲಾಗಿದೆ.

ಕಾರ್ಯಕ್ರಮದ ಬಳಿಕ ಬಿಎಂಟಿಸಿ ಬಸ್ ವ್ಯವಸ್ಥೆ

ಫ್ರೀಡಂ ಹಬ್ಬ ಮುಗಿದ ಬಳಿಕ ಸಾರ್ವಜನಿಕರ ಅನುಕೂಲಕ್ಕಾಗಿ ಎಂ.ಎಸ್. ಬಿಲ್ಡಿಂಗ್ ಒಳಭಾಗದ ದೇವರಾಜ ಅರಸು ರಸ್ತೆಯಿಂದ ಬಿಎಂಟಿಸಿ ವಿಶೇಷ ಬಸ್‌ಗಳು ವಿವಿಧ ಮಾರ್ಗಗಳಲ್ಲಿ ಸಂಚರಿಸಲಿವೆ.

ಮಾರ್ಗ 1

ಕೆ.ಆರ್. ಸರ್ಕಲ್ → ಟೌನ್‌ಹಾಲ್ → ಸಿಟಿ ಮಾರ್ಕೆಟ್ → ಮೈಸೂರು ರಸ್ತೆ → ಸ್ಯಾಟಲೈಟ್

ಮಾರ್ಗ 2

ಐಐಟಿ → ಬಸವೇಶ್ವರ ಸರ್ಕಲ್ → ರೇಸ್‌ಕೋರ್ಸ್ ರಸ್ತೆ → ಶೇಷಾದ್ರಿಪುರಂ → ಮಲ್ಲೇಶ್ವರಂ → ಮತ್ತಿಕೆರೆ → ಸುಮ್ಮನಹಳ್ಳಿ

ಮಾರ್ಗ 3

ಕೆ.ಆರ್. ಸರ್ಕಲ್ → ಹಡ್ಸನ್ ಸರ್ಕಲ್ → ಡೈರಿ ಸರ್ಕಲ್ → ಶಾಂತಿನಗರ → ಮಡಿವಾಳ → ಎಲೆಕ್ಟ್ರಾನಿಕ್ ಸಿಟಿ

ಸ್ವಾತಂತ್ರ್ಯ ದಿನದಂದು ವಿಧಾನಸೌಧದ ಸುತ್ತಮುತ್ತ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಸೇರುವ ನಿರೀಕ್ಷೆಯಿರುವುದರಿಂದ, ಸಾರ್ವಜನಿಕರು ಸಾಧ್ಯವಾದಷ್ಟು ಸಾರ್ವಜನಿಕ ಸಾರಿಗೆ ಬಳಸುವಂತೆ ಹಾಗೂ ಸಂಚಾರ ಪೊಲೀಸರ ಸೂಚನೆಗಳನ್ನು ಪಾಲಿಸುವಂತೆ ಮನವಿ ಮಾಡಲಾಗಿದೆ.

Read More
Next Story