
ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುವವರ ಮೇಲೆ ನಿಗಾ ಇಡಲು ಜಿಬಿಎ ಮುಂದಾಗಿದೆ.
ಎಲ್ಲೆಂದರಲ್ಲಿ ಕಸ ಎಸೆಯೋ ಮುನ್ನ ಎಚ್ಚರ- ಜಿಬಿಎಯಿಂದ ಮಾಸ್ಟರ್‌ಪ್ಲ್ಯಾನ್!
ಸೇಫ್ ಸಿಟಿ ಯೋಜನೆಯ ಭಾಗವಾಗಿ ಈಗಾಗಲೇ ನಗರದಲ್ಲಿ ಸರ್ಕಾರದ ವತಿಯಿಂದ 7 ಸಾವಿರಕ್ಕೂ ಅಧಿಕ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಅಗತ್ಯವಿರುವ ಪ್ರದೇಶಗಳಲ್ಲಿ ಮತ್ತಷ್ಟು ಕ್ಯಾಮೆರಾಗಳನ್ನು ಅಳವಡಿಸಲು ಅಧಿಕಾರಿಗಳು ಮುಂದಾಗಿದ್ದಾರೆ.
ಬೆಂಗಳೂರಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಗ್ರೇಟರ್ ಬೆಂಗಳೂರು ಅಥಾರಿಟಿ (GBA) ಮುಂದಾಗಿದೆ. ನಗರದ ಸ್ವಚ್ಛತೆ ಕಾಪಾಡುವ ಉದ್ದೇಶದಿಂದ ಪ್ರಮುಖ ಪ್ರದೇಶಗಳಲ್ಲಿ ಸಿಸಿಟಿವಿ ಕಣ್ಗಾವಲನ್ನು ಮತ್ತಷ್ಟು ಹೆಚ್ಚಿಸಲು ಯೋಜನೆ ರೂಪಿಸಲಾಗಿದೆ.
ರಸ್ತೆ ಬದಿ, ಸಾರ್ವಜನಿಕ ಸ್ಥಳಗಳು ಹಾಗೂ ಕಸ ಹಾಕಬಾರದ ಪ್ರದೇಶಗಳಲ್ಲಿ ತ್ಯಾಜ್ಯ ಎಸೆಯುವವರನ್ನು ಸಿಸಿಟಿವಿ ಮೂಲಕ ಗುರುತಿಸುವ ವ್ಯವಸ್ಥೆ ಜಾರಿಗೆ ತರಲು GBA ಸಿದ್ಧತೆ ನಡೆಸಿದೆ. ನಿಯಮ ಉಲ್ಲಂಘಿಸುವವರ ವಿರುದ್ಧ ದಂಡ ವಿಧಿಸುವ ಮೂಲಕ ಸಾರ್ವಜನಿಕರಲ್ಲಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶವೂ ಇದೆ.
ಸೇಫ್ ಸಿಟಿ ಯೋಜನೆಯ ಭಾಗವಾಗಿ ಈಗಾಗಲೇ ನಗರದಲ್ಲಿ ಸರ್ಕಾರದ ವತಿಯಿಂದ 7 ಸಾವಿರಕ್ಕೂ ಅಧಿಕ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಅಗತ್ಯವಿರುವ ಪ್ರದೇಶಗಳಲ್ಲಿ ಮತ್ತಷ್ಟು ಕ್ಯಾಮೆರಾಗಳನ್ನು ಅಳವಡಿಸಲು ಅಧಿಕಾರಿಗಳು ಮುಂದಾಗಿದ್ದಾರೆ.
ಪೊಲೀಸರ ಸಹಕಾರದೊಂದಿಗೆ ನಿಗಾ
ಸಿಸಿಟಿವಿ ವ್ಯವಸ್ಥೆಯನ್ನು ಕೇವಲ ಸ್ವಚ್ಛತೆಗಾಗಿ ಮಾತ್ರವಲ್ಲದೆ ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದಲೂ ಬಳಸಲು ಜಿಬಿಎ ಉದ್ದೇಶಿಸಿದೆ. ಪೊಲೀಸ್ ಇಲಾಖೆಯ ಸಮನ್ವಯದೊಂದಿಗೆ ಸೇಫ್ ಸಿಟಿ ಯೋಜನೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ನಗರದ ಪ್ರಮುಖ ಪ್ರದೇಶಗಳಲ್ಲಿ ಕ್ಯಾಮೆರಾ ಕಣ್ಗಾವಲು ಹೆಚ್ಚಿಸುವುದರಿಂದ ಕಾನೂನು ಉಲ್ಲಂಘನೆಗಳನ್ನು ಪತ್ತೆಹಚ್ಚುವುದರ ಜೊತೆಗೆ ಸಾರ್ವಜನಿಕ ಸುರಕ್ಷತೆಗೂ ಸಹಾಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಹಿಳೆಯರ ಸುರಕ್ಷತೆಯ ದೃಷ್ಟಿಯಿಂದಲೂ ಪ್ರಮುಖ ಪ್ರದೇಶಗಳಲ್ಲಿ ಕಣ್ಗಾವಲು ವ್ಯವಸ್ಥೆಯನ್ನು ಬಲಪಡಿಸುವ ಯೋಜನೆ ಇದೆ.
ಸ್ವಚ್ಛತೆ ಮತ್ತು ಸುರಕ್ಷತೆಗೆ ಒತ್ತು
ಬೆಂಗಳೂರಿನ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಡುವುದು ಹಾಗೂ ನಾಗರಿಕರ ಸುರಕ್ಷತೆಯನ್ನು ಹೆಚ್ಚಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಎಲ್ಲೆಂದರಲ್ಲಿ ಕಸ ಎಸೆಯುವವರನ್ನು ಗುರುತಿಸಿ ಕ್ರಮ ಕೈಗೊಳ್ಳಲು ಕ್ಯಾಮೆರಾ ವ್ಯವಸ್ಥೆ ನೆರವಾಗಲಿದೆ.
ಮುಂದಿನ ದಿನಗಳಲ್ಲಿ ಅಗತ್ಯವಿರುವ ಪ್ರದೇಶಗಳನ್ನು ಗುರುತಿಸಿ ಹೆಚ್ಚುವರಿ ಸಿಸಿಟಿವಿಗಳನ್ನು ಅಳವಡಿಸುವುದಾಗಿ ಜಿಬಿಎ ಅಧಿಕಾರಿಗಳು ತಿಳಿಸಿದ್ದಾರೆ. ಇದರಿಂದ ನಗರದ ಸ್ವಚ್ಛತೆ ಮತ್ತು ಸುರಕ್ಷತಾ ವ್ಯವಸ್ಥೆ ಮತ್ತಷ್ಟು ಬಲಗೊಳ್ಳುವ ನಿರೀಕ್ಷೆ ಇದೆ.

