
ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಮೈತ್ರಿ: ವಿತ್ತ ವಲಯದೊಂದಿಗೆ ಕೈಜೋಡಿಸಿದ ಸರ್ಕಾರ
ಸರ್ಕಾರವು ಕೇವಲ ನಿಯಂತ್ರಕನಾಗಿರದೆ, ನಾವೀನ್ಯತೆಗಳನ್ನು ಪರೀಕ್ಷಿಸುವ, ಅವುಗಳಿಗೆ ವೇದಿಕೆಗೆ ಕಲ್ಪಿಸುವ ಕಾರ್ಯನಿರ್ವಹಿಸುತ್ತದೆ ಎಂದು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ದೇಶದ ಸಿಲಿಕಾನ್ ವ್ಯಾಲಿ ಎಂದೇ ಖ್ಯಾತಿ ಪಡೆದಿರುವ ಕರ್ನಾಟಕ, ಇದೀಗ ತಂತ್ರಜ್ಞಾನ ಕ್ಷೇತ್ರದಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಬ್ಯಾಂಕಿಂಗ್, ಹಣಕಾಸು ಸೇವೆಗಳು ಮತ್ತು ಫಿನ್ಟೆಕ್ ವಲಯದೊಂದಿಗೆ ಕೈಜೋಡಿಸಿ, ರಾಜ್ಯದ ಆಡಳಿತ ವ್ಯವಸ್ಥೆ ಮತ್ತು ತಂತ್ರಜ್ಞಾನ ಪರಿಸರ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಲು ಸರ್ಕಾರ ಮುಂದಾಗಿದೆ. ಬೆಂಗಳೂರು ತಂತ್ರಜ್ಞಾನ ಶೃಂಗಸಭೆ 2026ರ ಪೂರ್ವಭಾವಿಯಾಗಿ ನಡೆದ ಮಹತ್ವದ ಸಭೆಯಲ್ಲಿ, ಸರ್ಕಾರ ಮತ್ತು ಉದ್ಯಮ ವಲಯದ ನಡುವಿನ ಸಹಭಾಗಿತ್ವವೇ ಭವಿಷ್ಯದ ಅಡಿಪಾಯ ಎಂಬ ಸ್ಪಷ್ಟ ಸಂದೇಶವನ್ನು ಸರ್ಕಾರ ರವಾನಿಸಿದೆ.
ಸಭೆಯಲ್ಲಿ ಮಾತನಾಡಿದ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ, "ಕರ್ನಾಟಕದ ತಂತ್ರಜ್ಞಾನದ ಭವಿಷ್ಯವು ಸಹಭಾಗಿತ್ವದ ಮೇಲೆ ನಿಂತಿದೆ. ಸರ್ಕಾರದಿಂದ ಮಾತ್ರ ಅಥವಾ ಉದ್ಯಮದಿಂದ ಮಾತ್ರ ಪ್ರಗತಿ ಅಸಾಧ್ಯ. ಸರ್ಕಾರವು ಕೇವಲ ನಿಯಂತ್ರಕನಾಗಿರದೆ, ನಾವೀನ್ಯತೆಗಳನ್ನು ಪರೀಕ್ಷಿಸುವ ಮತ್ತು ಅವುಗಳಿಗೆ ವೇದಿಕೆ ಕಲ್ಪಿಸುವ ಸಹಕಾರಿಯಾಗಿ ಕಾರ್ಯನಿರ್ವಹಿಸುತ್ತದೆ" ಎಂದು ಅಭಿಪ್ರಾಯಪಟ್ಟರು. ಸರ್ಕಾರದ ಮಹತ್ವಾಕಾಂಕ್ಷೆಯ ‘ಗವರ್ನಮೆಂಟ್ ಫಸ್ಟ್’ ಉಪಕ್ರಮದ ಮೂಲಕ, ನವೋದ್ಯಮಗಳಿಗೆ ಸರ್ಕಾರಿ ಇಲಾಖೆಗಳಲ್ಲಿರುವ ನೈಜ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಅವಕಾಶ ಕಲ್ಪಿಸಲಾಗುತ್ತಿದೆ. ನವೋದ್ಯಮಗಳು ರೂಪಿಸುವ ತಂತ್ರಜ್ಞಾನಗಳು ಪರಿಣಾಮಕಾರಿ ಎಂದು ಸಾಬೀತಾದಲ್ಲಿ, ಅವುಗಳನ್ನು ರಾಜ್ಯದಾದ್ಯಂತ ವಿಸ್ತರಿಸುವ ಬದ್ಧತೆಯನ್ನು ಸರ್ಕಾರ ತೋರಿದೆ.
ನವೆಂಬರ್ 17ರಿಂದ 19ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ಈ ಶೃಂಗಸಭೆಯು ಕೇವಲ ಒಂದು ಪ್ರದರ್ಶನವಾಗಿರದೆ, ವಿಶ್ವದ ತಂತ್ರಜ್ಞಾನ ನಾಯಕರು, ಹೂಡಿಕೆದಾರರು ಮತ್ತು ನವೋದ್ಯಮಿಗಳನ್ನು ಒಂದೇ ಸೂರಿನಡಿ ತರುವ ಜಾಗತಿಕ ವೇದಿಕೆಯಾಗಲಿದೆ. ವಿಶೇಷವಾಗಿ ‘ಫಿನ್ವರ್ಸ್’ ಎಂಬ ವಿಭಾಗವು, ಕೃತಕ ಬುದ್ಧಿಮತ್ತೆ ಮತ್ತು ಡಿಜಿಟಲ್ ಹಣಕಾಸು ಸೇವೆಗಳು ಮನುಷ್ಯನ ದೈನಂದಿನ ಜೀವನವನ್ನು ಹೇಗೆ ಬದಲಿಸುತ್ತಿವೆ ಎಂಬುದನ್ನು ಅನಾವರಣಗೊಳಿಸಲಿದೆ.
ಸಂವಾದದಲ್ಲಿ ಚರ್ಚೆಯಾದ ಪ್ರಮುಖ ಅಂಶಗಳು
ನವೋದ್ಯಮ ಸ್ನೇಹಿ ಸರ್ಕಾರಿ ಖರೀದಿ - ನವೋದ್ಯಮಗಳು ದೊಡ್ಡ ದೊಡ್ಡ ಟೆಂಡರ್ಗಳ ನಿಯಮಗಳಿಗೆ ಸಿಲುಕಿ ನಲುಗಬಾರದು ಎಂಬುದು ಸರ್ಕಾರದ ಉದ್ದೇಶ. ಸಣ್ಣ ಪ್ರಾಯೋಗಿಕ ಯೋಜನೆಗಳ ಮೂಲಕ ತಂತ್ರಜ್ಞಾನದ ಸಾಮರ್ಥ್ಯವನ್ನು ಸಾಬೀತುಪಡಿಸಿದ ಬಳಿಕ, ಅವುಗಳಿಗೆ ದೊಡ್ಡ ಪ್ರಮಾಣದ ಸರ್ಕಾರಿ ಒಪ್ಪಂದಗಳನ್ನು ನೀಡುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಕೃತಕ ಬುದ್ಧಿಮತ್ತೆ ಮತ್ತು ಸೈಬರ್ ಸುರಕ್ಷತೆ - ಎಐ ವೇಗವಾಗಿ ಬೆಳೆಯುತ್ತಿರುವ ಈ ದಿನಗಳಲ್ಲಿ, ದತ್ತಾಂಶದ ಸಾರ್ವಭೌಮತ್ವ ಮತ್ತು ನಾಗರಿಕರ ಖಾಸಗಿತನವನ್ನು ರಕ್ಷಿಸುವುದು ಸರ್ಕಾರದ ಜವಾಬ್ದಾರಿ. ಕ್ವಾಂಟಮ್ ತಂತ್ರಜ್ಞಾನ ಮತ್ತು ಸೈಬರ್ ಭದ್ರತೆಯನ್ನು ಬಲಪಡಿಸಲು ಶೈಕ್ಷಣಿಕ ವಲಯ ಮತ್ತು ಉದ್ಯಮದ ಸಹಭಾಗಿತ್ವದಲ್ಲಿ ವಿಶೇಷ 'ಉತ್ಕೃಷ್ಟತಾ ಕೇಂದ್ರ'ಗಳನ್ನು ಸ್ಥಾಪಿಸಲು ಸಚಿವರು ಒಲವು ವ್ಯಕ್ತಪಡಿಸಿದರು.
ಹಣಕಾಸು ಒಳಗೊಳ್ಳುವಿಕೆ ಮತ್ತು ಸಾಕ್ಷರತೆ - ತಂತ್ರಜ್ಞಾನ ಕೇವಲ ನಗರಗಳಿಗೆ ಸೀಮಿತವಾಗಬಾರದು. ಗ್ರಾಮೀಣ ಭಾಗದ ಜನರಿಗೂ ಡಿಜಿಟಲ್ ಹಣಕಾಸು ವ್ಯವಹಾರಗಳು ಸುಲಭವಾಗಬೇಕು. ಹಣಕಾಸು ಸಾಕ್ಷರತೆಯನ್ನು ಹೆಚ್ಚಿಸುವ ಮೂಲಕ ತಂತ್ರಜ್ಞಾನದ ಫಲವನ್ನು ಸಾಮಾನ್ಯನ ಮನೆ ಬಾಗಿಲಿಗೆ ಕೊಂಡೊಯ್ಯುವುದು ಈ ಸಹಭಾಗಿತ್ವದ ಮುಖ್ಯ ಉದ್ದೇಶಗಳಲ್ಲಿ ಒಂದಾಗಿದೆ.
ದತ್ತಾಂಶ ಲಭ್ಯತೆ - ನವೋದ್ಯಮಗಳು ಸಾರ್ವಜನಿಕ ಪರಿಹಾರಗಳನ್ನು ರೂಪಿಸಲು ಸರ್ಕಾರಿ ದತ್ತಾಂಶದ ಅಗತ್ಯವಿರುತ್ತದೆ. ನಿಯಂತ್ರಿತ ವಾತಾವರಣದಲ್ಲಿ, ನಾಗರಿಕರ ಸೂಕ್ಷ್ಮ ಮಾಹಿತಿಯನ್ನು ರಕ್ಷಿಸುತ್ತಲೇ ನವೋದ್ಯಮಗಳಿಗೆ ದತ್ತಾಂಶವನ್ನು ಲಭ್ಯವಾಗಿಸುವ ಬಗ್ಗೆ ಕಠಿಣ ನಿಯಮಾವಳಿಗಳನ್ನು ರೂಪಿಸುವ ಕುರಿತು ಸಭೆಯಲ್ಲಿ ಮಹತ್ವದ ಚರ್ಚೆ ನಡೆಯಿತು.
ಜಾಗತಿಕ ನಾಯಕತ್ವದ ಕಡೆಗೆ ಹೆಜ್ಜೆ
ಕರ್ನಾಟಕದ ಗುರಿ ಕೇವಲ ಭಾರತದ ಪ್ರಮುಖ ತಂತ್ರಜ್ಞಾನ ಕೇಂದ್ರವಾಗುವುದಲ್ಲ, ಬದಲಾಗಿ ಜಗತ್ತು ಅನುಸರಿಸುವಂತಹ ‘ಗ್ಲೋಬಲ್ ಹಬ್’ ಆಗುವುದು. ಉದ್ಯಮಗಳನ್ನು ಕೇವಲ ತೆರಿಗೆ ಪಾವತಿಸುವ ಸಂಸ್ಥೆಗಳಾಗಿ ನೋಡದೆ, ರಾಜ್ಯದ ಪ್ರಗತಿಯ ಪಾಲುದಾರರಾಗಿ ಪರಿಗಣಿಸುವುದಾಗಿ ಸಚಿವರು ಭರವಸೆ ನೀಡಿದರು. ಕೌಶಲ್ಯಾಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿ, ಉದ್ಯೋಗಕ್ಕೆ ಸಿದ್ಧವಿರುವ ಪದವೀಧರರನ್ನು ರೂಪಿಸಲು ಉದ್ಯಮದ ಸಹಭಾಗಿತ್ವದಲ್ಲಿ ಪಠ್ಯಕ್ರಮಗಳನ್ನು ಆಧುನೀಕರಿಸಲಾಗುವುದು ಎಂದು ತಿಳಿಸಿದರು. ತಂತ್ರಜ್ಞಾನದ ಲಾಭ ಕೇವಲ ಬೆಂಗಳೂರಿಗೆ ಸೀಮಿತವಾಗಬಾರದು. ರಾಜ್ಯದ ಇತರ ನಗರಗಳಲ್ಲೂ ಉದ್ಯೋಗ ಮತ್ತು ನಾವೀನ್ಯತೆ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ, ವಿಕೇಂದ್ರೀಕೃತ ಅಭಿವೃದ್ಧಿಯನ್ನು ಸಾಧಿಸುವುದು ಸರ್ಕಾರದ ಆದ್ಯತೆಯಾಗಿದೆ.

