ಜಾಗತಿಕ ಒಪ್ಪಂದಗಳು, ಎಐ ಕೌಶಲ್ಯಾಭಿವೃದ್ಧಿಯೊಂದಿಗೆ ಬೆಂಗಳೂರು ಟೆಕ್ ಸಮ್ಮಿಟ್ ತೆರೆ
x

ಜಾಗತಿಕ ಒಪ್ಪಂದಗಳು, ಎಐ ಕೌಶಲ್ಯಾಭಿವೃದ್ಧಿಯೊಂದಿಗೆ ಬೆಂಗಳೂರು ಟೆಕ್ ಸಮ್ಮಿಟ್ ತೆರೆ

‘ಸರ್ವಂ’ ಮತ್ತು ‘ಬಿಎಲ್‌ಡಿಇ’ ಸಂಸ್ಥೆಗಳು ಸೇರಿ ಉತ್ತರ ಕರ್ನಾಟಕದಲ್ಲಿ ಎಐ ಲ್ಯಾಬ್ ಸ್ಥಾಪಿಸುತ್ತಿವೆ. ಇದರಿಂದ 2,000 ವಿದ್ಯಾರ್ಥಿಗಳಿಗೆ ಜಿಪಿಯು ಸೌಲಭ್ಯ ಹಾಗೂ ಎಐ ಕೌಶಲ್ಯ ತರಬೇತಿ ಸಿಗಲಿದೆ.


Click the Play button to hear this message in audio format

ಕರ್ನಾಟಕವನ್ನು ಜಾಗತಿಕ ತಂತ್ರಜ್ಞಾನ ಮತ್ತು ನಾವೀನ್ಯತೆಯ ಪ್ರಮುಖ ಕೇಂದ್ರವನ್ನಾಗಿ ಮತ್ತಷ್ಟು ಬಲಪಡಿಸಿದ ಮೂರು ದಿನಗಳ 29ನೇ ಆವೃತ್ತಿಯ ‘ಬೆಂಗಳೂರು ಟೆಕ್ ಸಮ್ಮಿಟ್ 2026’ ಸಮ್ಮೇಳನಕ್ಕೆ ಯಶಸ್ವಿ ತೆರೆ ಬಿದ್ದಿದೆ. ಬೆಂಗಳೂರಿನ ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ (ಬಿಐಇಸಿ) ರಾಜ್ಯ ಸರ್ಕಾರದ ಎಲೆಕ್ಟ್ರಾನಿಕ್ಸ್, ಐಟಿ ಮತ್ತು ಬಿಟಿ ಇಲಾಖೆಯ ವತಿಯಿಂದ “ಎಐ ಆ್ಯಂಡ್ ಬಿಯಾಂಡ್” ಎಂಬ ವಿಷಯದಡಿ ಆಯೋಜಿಸಲಾಗಿದ್ದ ಈ ಶೃಂಗಸಭೆಯು ಹಲವು ಜಾಗತಿಕ ಪಾಲುದಾರಿಕೆಗಳು, ಮಹತ್ವದ ಒಡಂಬಡಿಕೆಗಳು ಹಾಗೂ ಪ್ರಮುಖ ತಂತ್ರಜ್ಞಾನ ಉಪಕ್ರಮಗಳಿಗೆ ಸಾಕ್ಷಿಯಾಯಿತು.

ಈ ಸಮ್ಮೇಳನದಲ್ಲಿ ಜಾಗತಿಕ ತಂತ್ರಜ್ಞಾನ ನಾಯಕರು, ನೀತಿ ನಿರೂಪಕರು, ಉದ್ಯಮಿಗಳು, ಸ್ಟಾರ್ಟ್‌ಅಪ್‌ಗಳು, ಹೂಡಿಕೆದಾರರು, ಸಂಶೋಧಕರು ಹಾಗೂ ಅಂತಾರಾಷ್ಟ್ರೀಯ ನಿಯೋಗಗಳು ಒಂದೇ ವೇದಿಕೆಯಲ್ಲಿ ಸೇರಿದ್ದವು. ಕೃತಕ ಬುದ್ಧಿಮತ್ತೆ (ಎಐ), ಡೀಪ್‌ಟೆಕ್, ರೊಬೊಟಿಕ್ಸ್, ಸೆಮಿಕಂಡಕ್ಟರ್, ಜೈವಿಕ ತಂತ್ರಜ್ಞಾನ (ಬಯೋಟೆಕ್ನಾಲಜಿ), ಬಾಹ್ಯಾಕಾಶ ತಂತ್ರಜ್ಞಾನ, ಎವಿಜಿಸಿ, ಸೈಬರ್ ಭದ್ರತೆ ಮತ್ತು ಹೆಲ್ತ್‌ಟೆಕ್ ಕ್ಷೇತ್ರಗಳಲ್ಲಿನ ಹೊಸ ಅವಕಾಶಗಳ ಕುರಿತು ಸುದೀರ್ಘ ಚರ್ಚೆಗಳು ನಡೆದವು. ವಿದ್ಯಾರ್ಥಿಗಳನ್ನು ಹೊರತುಪಡಿಸಿ ಸುಮಾರು 70,129 ಮಂದಿ ಈ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಪ್ರಮುಖ ಅಂತಾರಾಷ್ಟ್ರೀಯ ಪಾಲುದಾರಿಕೆಗಳು ಮತ್ತು ಒಪ್ಪಂದಗಳು

ಈ ಬಾರಿಯ ಸಮ್ಮೇಳನದ ಅತ್ಯಂತ ಪ್ರಮುಖ ಫಲಿತಾಂಶವೆಂದರೆ ರಾಜ್ಯದ ಸ್ಟಾರ್ಟ್‌ಅಪ್‌ಗಳಿಗೆ ಜಾಗತಿಕ ಮಾರುಕಟ್ಟೆ ಒದಗಿಸಲು ಹಾಗೂ ವಿದೇಶಿ ಕಂಪನಿಗಳನ್ನು ಕರ್ನಾಟಕಕ್ಕೆ ಆಕರ್ಷಿಸಲು ಅಂತಾರಾಷ್ಟ್ರೀಯ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ.

ಬಾಹ್ಯಾಕಾಶ ತಂತ್ರಜ್ಞಾನ ಮತ್ತು ಎವಿಜಿಸಿ ಕ್ಷೇತ್ರಗಳಲ್ಲಿ ಸಹಕಾರಕ್ಕಾಗಿ ಸರ್ಕಾರವು ಪೋಲೆಂಡ್‌ನ ಆರ್‌ಐಜಿ ಕ್ಯಾಟೊವಿಸ್ ಮತ್ತು ಶಾಫ್ಟ್ ಕೆ ತಂತ್ರಜ್ಞಾನ ಕೇಂದ್ರದ ನಿರ್ವಾಹಕರಾದ ‘ಕ್ಯಾಟೊ.ಹಬ್’ ಜೊತೆ ಜಂಟಿ ಉದ್ದೇಶ ಘೋಷಣೆಗೆ ಸಹಿ ಹಾಕಿದೆ. ಇದರಿಂದ ಎರಡೂ ಪ್ರದೇಶಗಳ ಸ್ಟಾರ್ಟ್‌ಅಪ್‌ಗಳಿಗೆ ಬೆಂಬಲ ಮತ್ತು ಮಾರುಕಟ್ಟೆ ಪ್ರವೇಶ ಸುಲಭವಾಗಲಿದೆ. ಕೃತಕ ಬುದ್ಧಿಮತ್ತೆ ಮತ್ತು ಅನ್ವಯಿಕ ಎಐ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ದುಬೈ ಕಾಮರ್ಸ್‌ಸಿಟಿ ಜೊತೆ ಜಂಟಿ ಉದ್ದೇಶ ಘೋಷಣೆಗೆ ಸಹಿ ಹಾಕಲಾಗಿದೆ. ಇದರಿಂದ ಕರ್ನಾಟಕದ ಸ್ಟಾರ್ಟ್‌ಅಪ್‌ಗಳು ದುಬೈನಲ್ಲಿ ತಮ್ಮ ಕಚೇರಿ ತೆರೆಯಲು, ವ್ಯವಹಾರ ನಡೆಸಲು ಮತ್ತು ಯುಎಇ ಮಾರುಕಟ್ಟೆ ಪ್ರವೇಶಿಸಲು ಅನುಕೂಲವಾಗಲಿದೆ. ‘ಕಾರ್ವ್ ಸ್ಟಾರ್ಟ್‌ಅಪ್ ಲ್ಯಾಬ್ಸ್’ ಜೊತೆಗಿನ ಒಪ್ಪಂದದ ಮೂಲಕ ಕರ್ನಾಟಕದ ‘ಗ್ಲೋಬಲ್ ಇನ್ನೋವೇಶನ್ ಅಲೈಯನ್ಸ್’ ಅನ್ನು ಹೊಸ ಪ್ರದೇಶಗಳಿಗೆ ವಿಸ್ತರಿಸಲಾಗುತ್ತಿದ್ದು, ವಿಶೇಷವಾಗಿ ಜರ್ಮನಿ, ಜಪಾನ್ ಮತ್ತು ಇತರೆ ಯುರೋಪಿಯನ್ ಮಾರುಕಟ್ಟೆಗಳೊಂದಿಗೆ ಸಂಪರ್ಕ ಬಲಪಡಿಸಲಾಗುತ್ತಿದೆ.

ಬೆಂಗಳೂರಿನಲ್ಲಿರುವ ಕೊರಿಯನ್ ಮತ್ತು ತೈವಾನೀಸ್ ಚೇಂಬರ್‌ಗಳೊಂದಿಗೆ ಐಟಿ-ಬಿಟಿ ಇಲಾಖೆ ಒಡಂಬಡಿಕೆ ಮಾಡಿಕೊಂಡಿದೆ. ಇದರಿಂದ ಈಗಾಗಲೇ ಕರ್ನಾಟಕದಲ್ಲಿರುವ ಆ ದೇಶಗಳ ಕಂಪನಿಗಳಿಗೆ ನೆರವು ಸಿಗುವುದಲ್ಲದೆ, ಹೊಸ ಕಂಪನಿಗಳು ರಾಜ್ಯದಲ್ಲಿ ಹೂಡಿಕೆ ಮಾಡಲು ಉತ್ತೇಜನ ಸಿಗಲಿದೆ.

ಉತ್ತರ ಕರ್ನಾಟಕದಲ್ಲಿ ಎಐ ಲ್ಯಾಬ್

ಬೆಂಗಳೂರಿನಲ್ಲಿ ‘ಕ್ರೀಡಾ ತಂತ್ರಜ್ಞಾನ ಶ್ರೇಷ್ಠತಾ ಕೇಂದ್ರ’ ಸ್ಥಾಪಿಸುವ ಸಾಧ್ಯತೆಗಳ ಕುರಿತು ಕರ್ನಾಟಕ ಸರ್ಕಾರ ಮತ್ತು ಅಮಾಗಿ ಮೀಡಿಯಾ ಲ್ಯಾಬ್ಸ್ ಲಿಮಿಟೆಡ್ ಉದ್ದೇಶ ಪತ್ರಕ್ಕೆ ಸಹಿ ಹಾಕಿವೆ. ವಿದ್ಯಾರ್ಥಿಗಳು, ಎಂಜಿನಿಯರ್‌ಗಳು ಹಾಗೂ ಸಂಶೋಧಕರ ಸಾಮರ್ಥ್ಯ ವೃದ್ಧಿಗಾಗಿ ಸಮ್ಮೇಳನದಲ್ಲಿ ದೊಡ್ಡ ಮಟ್ಟದ ಘೋಷಣೆಗಳನ್ನು ಮಾಡಲಾಯಿತು. ಸರ್ಕಾರವು ಒಟ್ಟು 63,200 ವಿದ್ಯಾರ್ಥಿಗಳು ಮತ್ತು ಎಂಜಿನಿಯರ್‌ಗಳನ್ನು ಗುರಿಯಾಗಿಸಿಕೊಂಡು ಬೃಹತ್ ಎಐ ಕೌಶಲ್ಯಾಭಿವೃದ್ಧಿ ಉಪಕ್ರಮವನ್ನು ಪ್ರಕಟಿಸಿದೆ. ಇದರೊಂದಿಗೆ ಸ್ಟಾರ್ಟ್‌ಅಪ್‌ಗಳಿಗೆ ಹಣಕಾಸು ನೆರವು, ಇನ್‌ಕ್ಯುಬೇಷನ್ ಮತ್ತು ಮಾರ್ಗದರ್ಶನವನ್ನೂ ಬಲಪಡಿಸಲಾಗಿದೆ. ‘ಸರ್ವಂ’ ಮತ್ತು ‘ಬಿಎಲ್‌ಡಿಇ’ ಸಂಸ್ಥೆಗಳು ಸೇರಿ ಉತ್ತರ ಕರ್ನಾಟಕದಲ್ಲಿ ಎಐ ಲ್ಯಾಬ್ ಸ್ಥಾಪಿಸುತ್ತಿವೆ. ಇದರಿಂದ 2,000 ವಿದ್ಯಾರ್ಥಿಗಳಿಗೆ ಜಿಪಿಯು ಸೌಲಭ್ಯ ಹಾಗೂ ಎಐ ಕೌಶಲ್ಯ ತರಬೇತಿ ಸಿಗಲಿದೆ. ಇದರಲ್ಲಿ 1,500 ವಿದ್ಯಾರ್ಥಿಗಳಿಗೆ ಎಐ ಅಪ್ಲಿಕೇಶನ್ ನಿರ್ಮಾಣದ ವಿಶೇಷ ಪ್ರಮಾಣಪತ್ರ ತರಬೇತಿ ಮತ್ತು 300 ವಿದ್ಯಾರ್ಥಿಗಳಿಗೆ ಮಾಡೆಲ್ ಟ್ರೈನಿಂಗ್‌ನಲ್ಲಿ ಪ್ರಾಯೋಗಿಕ ಪರಿಣತಿ ನೀಡಲಾಗುತ್ತದೆ.

ಬೆಂಗಳೂರು ಬಯೋಇನ್ನೋವೇಶನ್ ಸೆಂಟರ್ 3 ಮಹತ್ವದ ಯೋಜನೆಗಳು

ಇಂಗ್ಲೆಂಡ್‌ನ ಯಾರ್ಕ್ ವಿಶ್ವವಿದ್ಯಾಲಯದೊಂದಿಗೆ ಒಪ್ಪಂದ ಮಾಡಿಕೊಂಡು, ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಅನೇರೋಬಿಕ್ ಡೈಜೆಶನ್ ಮತ್ತು ಕೈಗಾರಿಕಾ ಜೈವಿಕ ತಂತ್ರಜ್ಞಾನ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲಾಗುತ್ತಿದೆ. ಡಾನಹರ್ ಕಾರ್ಪೊರೇಷನ್ ಜೊತೆಗಿನ ಒಪ್ಪಂದದಡಿ ಸ್ಟಾರ್ಟ್‌ಅಪ್‌ಗಳು ಮತ್ತು ಉನ್ನತ ಸಂಶೋಧನೆಗೆ ನೆರವಾಗಲು ‘ಬೆಕ್‌ಮನ್ ಕೌಲ್ಟರ್ ಸೆಂಟರ್ ಆಫ್ ಎಕ್ಸಲೆನ್ಸ್’ ಸ್ಥಾಪಿಸಲಾಗುತ್ತಿದೆ. ಪೆಪ್ಟೈಡ್ ಸಂಶೋಧನೆ ಮತ್ತು ಚಿಕಿತ್ಸಾ ನಾವೀನ್ಯತೆಗಾಗಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಮತ್ತು ಎಚ್‌ಸಿಜಿ ಆಸ್ಪತ್ರೆಯ ಕ್ಯಾನ್ಸರ್ ತಜ್ಞ ಡಾ. ವಿಶಾಲ್ ರಾವ್ ಅವರೊಂದಿಗೆ ಬಿಬಿಸಿ ಒಪ್ಪಂದ ಮಾಡಿಕೊಂಡಿದೆ.

ಜೀವ ವಿಜ್ಞಾನ ಮತ್ತು ಬಯೋಟೆಕ್ನಾಲಜಿ ಕ್ಷೇತ್ರದಲ್ಲಿ ಸಂಶೋಧನೆಗೆ ಒತ್ತು ನೀಡಲು ಸಿ-ಕ್ಯಾಂಪ್ ಮತ್ತು ಫ್ರಾನ್ಸ್‌ನ ‘ಜೆನೋಪೋಲ್’ ಸಂಸ್ಥೆಗಳು ಒಪ್ಪಂದ ಮಾಡಿಕೊಂಡಿವೆ. ಸೈಬರ್ ಭದ್ರತಾ ಕೌಶಲ್ಯ, ಸಂಶೋಧನೆ, ಪಠ್ಯಕ್ರಮ ಅಭಿವೃದ್ಧಿ, ಸ್ಟಾರ್ಟ್‌ಅಪ್ ಬೆಂಬಲ ಮತ್ತು ಸಾರ್ವಜನಿಕ ಜಾಗೃತಿಗಾಗಿ ‘ಸೈಸೆಕ್’ ಮತ್ತು ಡಿಎಸ್‌ಎನ್ ಫೌಂಡೇಶನ್ ನಡುವೆ ಒಪ್ಪಂದ ಏರ್ಪಟ್ಟಿದೆ.

ಸೇವಾ ಕೇಂದ್ರದಿಂದ ತಂತ್ರಜ್ಞಾನ ನಿರ್ಮಾಣದತ್ತ ಕರ್ನಾಟಕದ ಹೆಜ್ಜೆ

ಸಮ್ಮೇಳನದ ಯಶಸ್ಸಿನ ಕುರಿತು ಮಾತನಾಡಿದ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ಅವರು, ಕರ್ನಾಟಕದ ತಂತ್ರಜ್ಞಾನ ಪರಿಸರವನ್ನು ಜಗತ್ತಿನೊಂದಿಗೆ ಬೆಸೆಯಲು ಬೆಂಗಳೂರು ಟೆಕ್ ಸಮ್ಮಿಟ್ ಒಂದು ಪ್ರಮುಖ ವೇದಿಕೆಯಾಗಿ ಮುಂದುವರಿದಿದೆ ಎಂದು ತಿಳಿಸಿದರು. ಕೇವಲ ತಂತ್ರಜ್ಞಾನ ಸೇವಾ ಕೇಂದ್ರವಾಗಿ ಉಳಿಯದೆ, ಹೊಸ ತಂತ್ರಜ್ಞಾನಗಳನ್ನು ಸ್ವತಃ ನಿರ್ಮಿಸುವ, ಅಭಿವೃದ್ಧಿಪಡಿಸುವ ಮತ್ತು ಅವುಗಳನ್ನು ವಾಣಿಜ್ಯೀಕರಣಗೊಳಿಸುವ ದೊಡ್ಡ ಗುರಿಯನ್ನು ಈ ವರ್ಷದ ಒಪ್ಪಂದಗಳು ಪ್ರತಿಬಿಂಬಿಸುತ್ತವೆ ಎಂದರು. ಸ್ಟಾರ್ಟ್‌ಅಪ್‌ಗಳು, ಸಂಶೋಧಕರು, ಉದ್ಯಮಗಳು ಮತ್ತು ಪ್ರತಿಭಾವಂತರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುವ ಮೂಲಕ ಆರ್ಥಿಕ ಪ್ರಗತಿ, ಉದ್ಯೋಗ ಸೃಷ್ಟಿ ಹಾಗೂ ಸಮಾಜಕ್ಕೆ ಉಪಯುಕ್ತವಾಗುವಂತಹ ಬದಲಾವಣೆ ತರುವುದು ಸರ್ಕಾರದ ಗುರಿಯಾಗಿದೆ ಎಂದು ವಿವರಿಸಿದರು.

ಇದೇ ವೇಳೆ ಮಾತನಾಡಿದ ಎಲೆಕ್ಟ್ರಾನಿಕ್ಸ್, ಐಟಿ, ಬಿಟಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಡಾ. ಮಂಜುಳಾ ಎನ್., ವೈಜ್ಞಾನಿಕ ಸಂಶೋಧನೆಗಳನ್ನು ಉದ್ಯಮ ಮತ್ತು ವಾಣಿಜ್ಯೀಕರಣದೊಂದಿಗೆ ಜೋಡಿಸುವ ಜಾಗತಿಕ ಮಟ್ಟದ ಸ್ಪರ್ಧಾತ್ಮಕ ಬಯೋಟೆಕ್ನಾಲಜಿ ವ್ಯವಸ್ಥೆಯನ್ನು ನಿರ್ಮಿಸಲು ಕರ್ನಾಟಕ ಬದ್ಧವಾಗಿದೆ ಎಂದರು. ಬೆಂಗಳೂರು ಬಯೋಇನ್ನೋವೇಶನ್ ಸೆಂಟರ್ ಮೂಲಕ ಮಾಡಿಕೊಳ್ಳಲಾದ ಪಾಲುದಾರಿಕೆಗಳು ಸ್ವದೇಶಿ ತಂತ್ರಜ್ಞಾನಗಳ ಅಭಿವೃದ್ಧಿ, ಕೌಶಲ್ಯಾಧಾರಿತ ಉದ್ಯೋಗ ಮತ್ತು ಆರ್ಥಿಕ ಬೆಳವಣಿಗೆಗೆ ದಾರಿ ಮಾಡಿಕೊಡಲಿವೆ ಎಂದು ತಿಳಿಸಿದರು.

‘ಬೆಂಗಳೂರು ಟೆಕ್ ಸಮ್ಮಿಟ್ 2026’ ಯಶಸ್ಸು

ಮೂರು ದಿನಗಳ ಕಾಲ ನಡೆದ ಸಮ್ಮೇಳನದಲ್ಲಿ ದಾಖಲೆ ಪ್ರಮಾಣದ ಜನಭಾಗವಹಿಸುವಿಕೆ ಮತ್ತು ವ್ಯಾಪಾರ ವಹಿವಾಟು ನಡೆದಿರುವುದು ಅಂಕಿ-ಅಂಶಗಳಿಂದ ತಿಳಿದುಬಂದಿದೆ. ಸಮ್ಮೇಳನದಲ್ಲಿ ಒಟ್ಟು 64 ದೇಶಗಳು ಭಾಗವಹಿಸಿದ್ದವು. 162 ವಿವಿಧ ಗೋಷ್ಠಿಗಳು ಹಾಗೂ 24 ದುಂಡು ಮೇಜಿನ ಸಭೆಗಳು ನಡೆದಿದ್ದು, 704 ಭಾಷಣಕಾರರು ತಮ್ಮ ವಿಚಾರಗಳನ್ನು ಹಂಚಿಕೊಂಡರು. 11,257 ಸಮ್ಮೇಳನ ಪ್ರತಿನಿಧಿಗಳು ಮತ್ತು 58,872 ನೋಂದಾಯಿತ ವಾಣಿಜ್ಯ ಸಂದರ್ಶಕರು ಭಾಗವಹಿಸಿದ್ದರು. ವಿದ್ಯಾರ್ಥಿಗಳನ್ನು ಹೊರತುಪಡಿಸಿ ಒಟ್ಟು 70,129 ಮಂದಿ ಪಾಲ್ಗೊಂಡಿದ್ದರು.

104 ನಗರಗಳಿಂದ ಆಗಮಿಸಿದ್ದ 923 ಸ್ಟಾರ್ಟ್‌ಅಪ್‌ಗಳು ಸೇರಿದಂತೆ ಒಟ್ಟು 1,518 ಪ್ರದರ್ಶಕರು ತಮ್ಮ ಆವಿಷ್ಕಾರಗಳನ್ನು ಪ್ರದರ್ಶಿಸಿದರು. ತಂತ್ರಜ್ಞಾನ ಮತ್ತು ಸಂಪರ್ಕದ ಭಾಗವಾಗಿ 938 ಬಿ2ಬಿ ಭೌತಿಕ ಸಭೆಗಳು, 11,289 ವಾಟ್ಸಾಪ್ ಕನೆಕ್ಟ್ ವಾಣಿಜ್ಯ ಸಂಪರ್ಕಗಳು ಹಾಗೂ 9,046 ಬಿಟಿಎಸ್ ಆ್ಯಪ್ ಡೌನ್‌ಲೋಡ್‌ಗಳು ದಾಖಲಾಗಿವೆ. ವಿಶೇಷವಾಗಿ, ಪರಿಸರ ಸ್ನೇಹಿ ಸಂಚಾರಕ್ಕೆ ಉತ್ತೇಜನ ನೀಡುವಂತೆ ಮೂರು ದಿನಗಳಲ್ಲಿ ಒಟ್ಟು 8,597 ಮೆಟ್ರೋ ಟಿಕೆಟ್‌ಗಳನ್ನು ಬುಕ್ ಮಾಡಲಾಗಿತ್ತು.

‘ಗ್ರೀನ್ ಬಿಟಿಎಸ್’: ಪರಿಸರ ಸ್ನೇಹಿ ಸಮ್ಮೇಳನಕ್ಕೆ ಹೊಸ ಮಾನದಂಡ

ಈ ಬಾರಿಯ ಬೆಂಗಳೂರು ಟೆಕ್ ಸಮ್ಮಿಟ್ ಕೇವಲ ತಂತ್ರಜ್ಞಾನಕ್ಕೆ ಸೀಮಿತವಾಗದೆ, ಪರಿಸರ ಸ್ನೇಹಿ ಹಾಗೂ ಜವಾಬ್ದಾರಿಯುತ ಕಾರ್ಯಕ್ರಮ ಆಯೋಜನೆಯಲ್ಲೂ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಸ್ವತಂತ್ರ ಲೆಕ್ಕಪರಿಶೋಧನೆಯ ನಂತರ, ಸುಸ್ಥಿರ ಕಾರ್ಯಕ್ರಮ ನಿರ್ವಹಣೆಗಾಗಿ ‘ಟಿಯುವಿ ಇಂಡಿಯಾ’ ಸಂಸ್ಥೆಯು ಬಿಟಿಎಸ್ ಅನ್ನು ಐಎಸ್‌ಒ 20121 ಪ್ರಮಾಣಪತ್ರಕ್ಕೆ ಶಿಫಾರಸು ಮಾಡಿದೆ. ಅಲ್ಲದೆ, ಕಾರ್ಬನ್ ಫುಟ್‌ಪ್ರಿಂಟ್ ಮತ್ತು ‘ಶೂನ್ಯ ತ್ಯಾಜ್ಯ’ ಸಾಧನೆಯ ಪರಿಶೀಲನೆ ಪ್ರಗತಿಯಲ್ಲಿದೆ. ಸ್ಥಳದಲ್ಲಿ ಕೈಗೊಂಡ ಕ್ರಮಗಳ ಫಲವಾಗಿ, ಉತ್ಪತ್ತಿಯಾದ ಶೇ. 100ರಷ್ಟು ತ್ಯಾಜ್ಯವನ್ನು ಮೂಲದಲ್ಲೇ 10 ವರ್ಗಗಳಾಗಿ ವಿಂಗಡಿಸಿ ಮರುಬಳಕೆಗಾಗಿ ಕಳುಹಿಸಲಾಗಿದೆ. ಪ್ಲಾಸ್ಟಿಕ್ ಬಾಟಲಿಗಳ ಬಳಕೆಯನ್ನು ತಡೆಯಲು ಸಮ್ಮೇಳನದ ಆವರಣದಾದ್ಯಂತ 52 ಕುಡಿಯುವ ನೀರಿನ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. ಪರಿಸರ ಸ್ನೇಹಿ ಮಳಿಗೆಗಳಿಗಾಗಿ ‘ಮಿಸ್ಟ್-ಕೆಟಿಐಎಂಎಫ್’ ಹಾಗೂ ‘ಬ್ಯುಸಿನೆಸ್ ಸ್ವೀಡನ್’ ಸಂಸ್ಥೆಗಳಿಗೆ ‘ಸುಸ್ಥಿರ ಮಳಿಗೆ ಪ್ರಶಸ್ತಿ’ ಮತ್ತು ಸುಸ್ಥಿರ ಸ್ಥಳಾವಕಾಶ ಒದಗಿಸಿದ ಬಿಐಇಸಿಗೆ ‘ಸುಸ್ಥಿರ ವೆಂಡರ್ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.

Read More
Next Story