
ಬೆಂಗಳೂರು ದಕ್ಷಿಣ ಎಸ್ಪಿ ಕಚೇರಿಯ 3ನೇ ಮಹಡಿಯಿಂದ ಜಿಗಿದು ದೈಹಿಕ ಶಿಕ್ಷಕ ಆತ್ಮಹತ್ಯೆ
"ಶಿಕ್ಷಕನ ಮೇಲೆ ಇಲ್ಲಸಲ್ಲದ ಸುಳ್ಳು ಆರೋಪ ಹೊರಿಸಲಾಗಿದೆ. ಪೊಲೀಸರು ಹಾಗೂ ಶಾಲಾ ಆಡಳಿತ ಮಂಡಳಿಯ ಕಿರುಕುಳದಿಂದಲೇ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ” ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೋಕ್ಸೋ ಪ್ರಕರಣದ ಆರೋಪದ ಮೇಲೆ ಬಂಧಿತರಾಗಿದ್ದ ದೈಹಿಕ ಶಿಕ್ಷಣ ಶಿಕ್ಷಣರೊಬ್ಬರು ಬೆಂಗಳೂರು ದಕ್ಷಿಣ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ 3ನೇ ಮಹಡಿಯಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭಾನುವಾರ ನಡೆದಿದೆ.
ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕಿನ ಚಪ್ಪರದಹಳ್ಳಿ ನಿವಾಸಿಯಾದ ಶಶಿಧರ್ (49) ಆತ್ಮಹತ್ಯೆ ಮಾಡಿಕೊಂಡ ದೈಹಿಕ ಶಿಕ್ಷಣ ಶಿಕ್ಷಕ. ಕಳೆದ 15 ವರ್ಷಗಳಿಂದ ಚನ್ನಪಟ್ಟಣ ತಾಲೂಕಿನ ಅನುದಾನಿತ ಪ್ರೌಢಶಾಲೆಯೊಂದರಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಘಟನೆಯ ಹಿನ್ನೆಲೆ ಏನು?
ಶಾಲೆಯ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದ ಮೇರೆಗೆ ಶಶಿಧರ್ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ರಾಮನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಶುಕ್ರವಾರವೇ ಎಫ್ಐಆರ್ ದಾಖಲಾಗಿದ್ದು, ಪೊಲೀಸರು ಶಶಿಧರ್ ಅವರನ್ನು ಬಂಧಿಸಿ ವಿಚಾರಣೆ ನಡೆಸಿದ್ದರು.
ಇಂದು ವೈದ್ಯಕೀಯ ತಪಾಸಣೆ ಬಳಿಕ, ಬೆರಳಚ್ಚು ನೋಂದಣಿ ಪ್ರಕ್ರಿಯೆಗಾಗಿ ಬೆಂಗಳೂರು ದಕ್ಷಿಣ ಜಿಲ್ಲೆಯ ಎಸ್ಪಿ ಕಚೇರಿಗೆ ಕರೆತರಲಾಗಿತ್ತು. ಬೆರಳಚ್ಚು ಪಡೆಯಲು ಸಿದ್ಧತೆ ನಡೆಸುತ್ತಿದ್ದ ವೇಳೆ, ಶಶಿಧರ್ ಇದ್ದಕ್ಕಿದ್ದಂತೆ ಕೆಳಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಸಾಗಿಸಲು ಯತ್ನಿಸಿದರೂ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.
ಸುದ್ದಿ ತಿಳಿದು ಆಸ್ಪತ್ರೆಗೆ ಧಾವಿಸಿದ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಈ ವೇಳೆ ಪೊಲೀಸರ ವಿರುದ್ಧ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಶಿಕ್ಷಕ ಶಶಿಧರ್ ಸಾವಿಗೆ ಪೊಲೀಸರು ಮತ್ತು ಶಾಲೆಯ ಮುಖ್ಯೋಪಾಧ್ಯಾಯರೇ ನೇರ ಕಾರಣ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ.
"ಶಿಕ್ಷಕನ ಮೇಲೆ ಇಲ್ಲಸಲ್ಲದ ಸುಳ್ಳು ಆರೋಪ ಹೊರಿಸಲಾಗಿದೆ. ಪೊಲೀಸರು ಹಾಗೂ ಶಾಲಾ ಆಡಳಿತ ಮಂಡಳಿಯ ಕಿರುಕುಳದಿಂದಲೇ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ” ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆ ಕುರಿತಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಪ್ರತಿಕ್ರಿಯಿಸಿ, "ಶಾಲಾ ಮಕ್ಕಳ ಮೇಲೆ ಶಶಿಧರ್ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಮಕ್ಕಳ ಸಹಾಯವಾಣಿಗೆ ಕರೆ ಬಂದಿತ್ತು. ಆ ಮೇರೆಗೆ ಜಿಲ್ಲಾ ಮಕ್ಕಳ ರಕ್ಷಾಣಾಧಿಕಾರಿ ಕೊಟ್ಟ ದೂರಿನ ಮೇರೆಗೆ ರಾಮನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಮೂರು ದಿನಗಳ ಹಿಂದೆ ಪ್ರಕರಣ ದಾಖಲಾಗಿತ್ತು. ಆರೋಪಿ ಶಶಿಧರ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವ ಜೊತೆಗೆ ಸಂತ್ರಸ್ತ ಮಕ್ಕಳಿಂದಲೂ ಹೇಳಿಕೆ ಪಡೆಯಲಾಗಿತ್ತು. ಅದಾದ ಬಳಿಕ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಇಂದು ವೈದ್ಯಕೀಯ ತಪಾಸಣೆಗೆ ಒಳಪಡಿಸಿ, ಬೆರಳಚ್ಚು ಪಡೆಯಲು ಕರೆತಂದಾಗ ಈ ಅವಘಡ ಸಂಭವಿಸಿದೆ" ಎಂದು ಹೇಳಿದ್ದಾರೆ.

