ವಸತಿ ಪ್ರದೇಶಗಳಲ್ಲಿ ಅಕ್ರಮ ವಾಣಿಜ್ಯ ಚಟುವಟಿಕೆ: 51 ಮಳಿಗೆಗಳಿಗೆ ಬೀಗ ಜಡಿದ ಬೆಂಗಳೂರು ದಕ್ಷಿಣ ನಗರ ಪಾಲಿಕೆ
x

ಅರಕೆರೆ ವ್ಯಾಪ್ತಿಯಲ್ಲಿರುವ ಕ್ಯಾಟರಿಂಗ್ ಘಟಕವೊಂದರ ಮೇಲೆ ದಾಳಿ ನಡೆಸಿದ ಅಧಿಕಾರಿಗಳಿಗೆ ಭಾರಿ ಪ್ರಮಾಣದ ಅಕ್ರಮ ಕಂಡುಬಂದಿದೆ. ವಾಣಿಜ್ಯ ಉದ್ದೇಶಕ್ಕಾಗಿ ಬಳಸಲು ಕಾನೂನುಬಾಹಿರವಾಗಿ ಸಂಗ್ರಹಿಸಿಡಲಾಗಿದ್ದ 23 ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳನ್ನು ಸ್ಥಳದಲ್ಲೇ ಜಪ್ತಿ ಮಾಡಲಾಗಿದೆ. 

ವಸತಿ ಪ್ರದೇಶಗಳಲ್ಲಿ ಅಕ್ರಮ ವಾಣಿಜ್ಯ ಚಟುವಟಿಕೆ: 51 ಮಳಿಗೆಗಳಿಗೆ ಬೀಗ ಜಡಿದ ಬೆಂಗಳೂರು ದಕ್ಷಿಣ ನಗರ ಪಾಲಿಕೆ

ವಸತಿ ಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ನಡೆಸುವುದು ಸ್ಪಷ್ಟ ನಿಯಮ ಉಲ್ಲಂಘನೆಯಾಗಿದ್ದು, ಇಂತಹ ಪ್ರಕರಣಗಳ ವಿರುದ್ಧ ಪಾಲಿಕೆಯು ಕಠಿಣ ಕ್ರಮಗಳನ್ನು ಮುಂದುವರಿಸಲಿದೆ ಎಂದು ಆಯುಕ್ತ ಕೆ.ಎನ್. ರಮೇಶ್ ತಿಳಿಸಿದ್ದಾರೆ.


Click the Play button to hear this message in audio format

ವಸತಿ ಪ್ರದೇಶಗಳಲ್ಲಿ ನಿಯಮ ಉಲ್ಲಂಘಿಸಿ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿದ್ದ 51 ವಾಣಿಜ್ಯ ಮಳಿಗೆಗಳನ್ನು ಬೆಂಗಳೂರು ದಕ್ಷಿಣ ನಗರ ಪಾಲಿಕೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಮುಚ್ಚಿಸಿದ್ದಾರೆ. ಒಟ್ಟು 5 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಈ ದಿಢೀರ್ ತಪಾಸಣೆ ನಡೆಸಲಾಗಿದೆ. ಈ ಪೈಕಿ ಅತಿ ಹೆಚ್ಚು ಅಂದರೆ ಬೊಮ್ಮನಹಳ್ಳಿ ವ್ಯಾಪ್ತಿಯಲ್ಲಿ 22 ಮಳಿಗೆಗಳನ್ನು ಸೀಜ್ ಮಾಡಲಾಗಿದೆ. ಜಯನಗರದಲ್ಲಿ 11, ಬೆಂಗಳೂರು ದಕ್ಷಿಣದಲ್ಲಿ 9, ಪದ್ಮನಾಭನಗರದಲ್ಲಿ 6 ಹಾಗೂ ಬಿಟಿಎಂ ಲೇಔಟ್ ವ್ಯಾಪ್ತಿಯಲ್ಲಿ 3 ವಾಣಿಜ್ಯ ಮಳಿಗೆಗಳಿಗೆ ಅಧಿಕಾರಿಗಳು ಬೀಗ ಜಡಿದಿದ್ದಾರೆ.

ಅಕ್ರಮ ಸಿಲಿಂಡರ್ ಜಪ್ತಿ ಹಾಗೂ ಇತರೆ ಉದ್ದಿಮೆಗಳ ಸ್ಥಗಿತ

ಅರಕೆರೆ ವ್ಯಾಪ್ತಿಯಲ್ಲಿರುವ ಕ್ಯಾಟರಿಂಗ್ ಘಟಕವೊಂದರ ಮೇಲೆ ದಾಳಿ ನಡೆಸಿದ ಅಧಿಕಾರಿಗಳಿಗೆ ಭಾರಿ ಪ್ರಮಾಣದ ಅಕ್ರಮ ಕಂಡುಬಂದಿದೆ. ವಾಣಿಜ್ಯ ಉದ್ದೇಶಕ್ಕಾಗಿ ಬಳಸಲು ಕಾನೂನುಬಾಹಿರವಾಗಿ ಸಂಗ್ರಹಿಸಿಡಲಾಗಿದ್ದ 23 ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳನ್ನು ಸ್ಥಳದಲ್ಲೇ ಜಪ್ತಿ ಮಾಡಲಾಗಿದೆ. ಇದಲ್ಲದೆ, ವಸತಿ ಪ್ರದೇಶಗಳಲ್ಲಿ ನಡೆಯುತ್ತಿದ್ದ ಕಾಂಡಿಮೆಂಟ್ಸ್ ಅಂಗಡಿಗಳು, ಫ್ಯಾಬ್ರಿಕೇಷನ್ ಘಟಕ ಹಾಗೂ ಕಾರ್ ವಾಶ್ ಸೆಂಟರ್‌ಗಳನ್ನು ಸಹ ನಿಯಮ ಉಲ್ಲಂಘನೆಯ ಅಡಿಯಲ್ಲಿ ಮುಚ್ಚಿಸಲಾಗಿದೆ.

ಕಾರ್ಯಾಚರಣೆ ಮುಂದುವರಿಕೆ: ಆಯುಕ್ತರ ಎಚ್ಚರಿಕೆ

ವಸತಿ ಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ನಡೆಸುವುದು ಸ್ಪಷ್ಟ ನಿಯಮ ಉಲ್ಲಂಘನೆಯಾಗಿದ್ದು, ಇಂತಹ ಪ್ರಕರಣಗಳ ವಿರುದ್ಧ ಪಾಲಿಕೆಯು ಕಠಿಣ ಕ್ರಮಗಳನ್ನು ಮುಂದುವರಿಸಲಿದೆ ಎಂದು ಆಯುಕ್ತ ಕೆ.ಎನ್. ರಮೇಶ್ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿಯೂ ವಿವಿಧ ಬಡಾವಣೆಗಳಲ್ಲಿ ತಪಾಸಣೆ ಕಾರ್ಯ ತೀವ್ರಗೊಳ್ಳಲಿದ್ದು, ನಿಯಮ ಮೀರಿ ವಾಣಿಜ್ಯ ಉದ್ದಿಮೆಗಳನ್ನು ನಡೆಸುವವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Read More
Next Story