ಕಸದ ಟೆಂಡರ್‌ನಲ್ಲಿ 39,437 ಕೋಟಿ ರೂ. ಅವ್ಯವಹಾರ: ಸರ್ಕಾರಕ್ಕೆ ಶೋಭಾ ಕರಂದ್ಲಾಜೆ ಪತ್ರ
x

ಕಸದ ಟೆಂಡರ್‌ನಲ್ಲಿ 39,437 ಕೋಟಿ ರೂ. ಅವ್ಯವಹಾರ: ಸರ್ಕಾರಕ್ಕೆ ಶೋಭಾ ಕರಂದ್ಲಾಜೆ ಪತ್ರ

ಮೊದಲ ಟೆಂಡರ್ ಅಸ್ಪಷ್ಟ ಕಾರಣಗಳಿಗೆ ರದ್ದಾದರೆ, ಎರಡನೇ ಟೆಂಡರ್‌ ತಾಂತ್ರಿಕವಾಗಿ ಅನರ್ಹಗೊಂಡಿದ್ದು, ಮೂರನೇ ಟೆಂಡರ್‌ನಲ್ಲಿ ಯಾವುದೇ ಅರ್ಹತಾ ಮಾನದಂಡ ಬದಲಾಗದಿದ್ದರೂ ಅರ್ಹರೆಂದು ಘೋಷಿಸಲಾಗಿದೆ.


Click the Play button to hear this message in audio format

ಬೆಂಗಳೂರು ನಗರದ ಮೂಲಸೌಕರ್ಯ ಯೋಜನೆಗಳಲ್ಲಿ ಒಂದಾದ ಘನತ್ಯಾಜ್ಯ ನಿರ್ವಹಣಾ ಟೆಂಡರ್ ಪ್ರಕ್ರಿಯೆಯು ಇದೀಗ ತೀವ್ರ ವಿವಾದಕ್ಕೆ ಗ್ರಾಸವಾಗಿದೆ. ಟೆಂಡರ್‌ನಲ್ಲಿ ಸುಮಾರು 39,437 ಕೋಟಿ ರೂ. ಸಾರ್ವಜನಿಕ ಹಣದ ವಿನಿಯೋಗದಲ್ಲಿ ಅವ್ಯವಹಾರಗಳು ನಡೆದಿದೆ ಎಂದು ಆರೋಪಿಸಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಈ ಪ್ರಕ್ರಿಯೆಯನ್ನು ತಕ್ಷಣವೇ ಸ್ಥಗಿತಗೊಳಿಸಿ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಸಚಿವೆ ಶೋಭಾ ಕರಂದ್ಲಾಜೆ ಅವರು ಮುಖ್ಯ ಕಾರ್ಯದರ್ಶಿಗೆ ಬರೆದಿರುವ ಪತ್ರವು, ಟೆಂಡರ್ ಪ್ರಕ್ರಿಯೆಯು ಹೇಗೆ ಪಾರದರ್ಶಕತೆಯಿಂದ ದೂರವಾಗಿ, ಕೇವಲ ಲಾಭದಾಯಕ ಹಿತಾಸಕ್ತಿಗಳಿಗಾಗಿ ರೂಪಿತವಾಗಿದೆ ಎಂಬುದನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದೆ.

ಬದಲಾಯಿಸಲಾದ ಡಿಪಿಆರ್ ಸಲಹೆಗಾರರು

ಪ್ರಾಥಮಿಕವಾಗಿ, ಈ ಯೋಜನೆಯ ವಿಸ್ತೃತ ಯೋಜನಾ ವರದಿಯನ್ನು (ಡಿಪಿಆರ್‌) ಸಿದ್ಧಪಡಿಸಲು ರೈಟ್ಸ್ ಲಿಮಿಟೆಡ್ ಸಂಸ್ಥೆಯನ್ನು ನೇಮಿಸಲಾಗಿತ್ತು. ಆದರೆ, ಯಾವುದೇ ಸಮರ್ಥನೀಯ ಕಾರಣವಿಲ್ಲದೆ, ಕಾನೂನುಬಾಹಿರವಾಗಿ ಬಿಸಿಜಿ ಸಂಸ್ಥೆಯನ್ನು ಸಲಹೆಗಾರರನ್ನಾಗಿ ನೇಮಿಸಲಾಯಿತು. ಇದು ಕರ್ನಾಟಕ ಸಾರ್ವಜನಿಕ ಖರೀದಿ ಪಾರದರ್ಶಕತಾ ಕಾಯ್ದೆಯ ಸ್ಪಷ್ಟ ಉಲ್ಲಂಘನೆ ಎಂದು ಆರೋಪಿಸಿದ್ದಾರೆ.

ಟೆಂಡರ್ ಪ್ರಕ್ರಿಯೆಯನ್ನು ಮೂರು ಬಾರಿ ನಡೆಸಲಾಗಿದೆ. ಮೊದಲ ಟೆಂಡರ್ ಅಸ್ಪಷ್ಟ ಕಾರಣಗಳಿಗೆ ರದ್ದಾದರೆ, ಎರಡನೇ ಟೆಂಡರ್‌ನಲ್ಲಿ ತಾಂತ್ರಿಕವಾಗಿ ಅನರ್ಹಗೊಂಡಿದ್ದ ಬಿಡ್ಡರ್‌ಗಳನ್ನೇ, ಮೂರನೇ ಟೆಂಡರ್‌ನಲ್ಲಿ ಯಾವುದೇ ಅರ್ಹತಾ ಮಾನದಂಡ ಬದಲಾಗದಿದ್ದರೂ ಅರ್ಹರೆಂದು ಘೋಷಿಸಲಾಗಿದೆ. ಇದು ನಿರ್ದಿಷ್ಟ ವ್ಯಕ್ತಿಗಳಿಗೆ ಲಾಭ ಮಾಡಿಕೊಡುವ ವ್ಯವಸ್ಥಿತ ಪಿತೂರಿಯಾಗಿದೆ. ಹಣಕಾಸು ಇಲಾಖೆಯು ಈ ಪ್ರಸ್ತಾವನೆಯ ಹಲವು ಅಂಶಗಳನ್ನು ಸ್ಪಷ್ಟವಾಗಿ ತಿರಸ್ಕರಿಸಿದ್ದರೂ, ಅದನ್ನು ಕಡೆಗಣಿಸಿ ಸಚಿವ ಸಂಪುಟ ಅನುಮೋದನೆ ಪಡೆದಿರುವುದು ಆಡಳಿತಾತ್ಮಕವಾಗಿ ಗಂಭೀರ ತಪ್ಪು. ಅಂದಾಜು ಮೊತ್ತಕ್ಕಿಂತ ಶೇ.10ಕ್ಕಿಂತ ಹೆಚ್ಚು ಬಿಡ್ ಮೊತ್ತವಿದ್ದರೆ ಟೆಂಡರ್ ರದ್ದುಗೊಳಿಸಬೇಕೆಂಬ ನಿಯಮವಿದ್ದರೂ, ಅದಕ್ಕಿಂತ ಹೆಚ್ಚಿನ ಮೊತ್ತದ ಬಿಡ್‌ಗಳನ್ನು ಸ್ವೀಕರಿಸಲಾಗಿದೆ.


ಹಣಕಾಸು ಇಲಾಖೆಯ ಆಕ್ಷೇಪಣೆಯ ನಿರ್ಲಕ್ಷ್ಯ

ಹಣಕಾಸು ಇಲಾಖೆಯು ಭೂಮಿಯ ಮೌಲ್ಯಮಾಪನದ ಕುರಿತು ವಿರೋಧ ವ್ಯಕ್ತಪಡಿಸಿದೆ. ಸರ್ಕಾರಿ ನಿಯಮದ ಪ್ರಕಾರ ಪ್ರತಿ ಎಕರೆಗೆ 1.35 ಕೋಟಿ ರೂ. ಮೌಲ್ಯ ನಿಗದಿಯಾಗಿದ್ದರೆ, ಅದನ್ನು ಯಾವುದೇ ಆಧಾರವಿಲ್ಲದೆ 1.50 ಕೋಟಿ ರೂ.ಗೆ ಏರಿಸಲಾಗಿದೆ. ಇದಕ್ಕೆ ಅಮೂರ್ತ ಲಾಭ ಎಂಬ ಅಸ್ಪಷ್ಟ ಕಾರಣ ನೀಡಲಾಗಿದೆ. ಇದು ಯಾವುದೇ ಹಣಕಾಸು ನಿಯಮಾವಳಿಗಳಿಗೂ ಒಳಪಡುವುದಿಲ್ಲ. ಇಲಾಖೆಯ ಸ್ಪಷ್ಟ ವಿರೋಧದ ಹೊರತಾಗಿಯೂ ಕಡತವನ್ನು ಅನುಮೋದನೆಗೆ ಕಳಿಸಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.

ಸಚಿವೆ ಶೋಭಾ ಕರಂದ್ಲಾಜೆ ಬೇಡಿಕೆಗಳು

ಸಚಿವರು ತಮ್ಮ ಪತ್ರದಲ್ಲಿ ನಾಲ್ಕು ಪ್ರಮುಖ ಬೇಡಿಕೆಗಳನ್ನು ಇಟ್ಟಿದ್ದಾರೆ. ಟೆಂಡರ್ ಸಂಬಂಧಿತ ಎಲ್ಲಾ ಮುಂದಿನ ಕ್ರಮಗಳನ್ನು ತಕ್ಷಣವೇ ಸ್ಥಗಿತಗೊಳಿಸಬೇಕು. ಡಿಪಿಆರ್ ಸಿದ್ಧತೆಯಿಂದ ಹಿಡಿದು ಅಂತಿಮ ಹಣಕಾಸು ಅನುಮೋದನೆಯವರೆಗೆ ಸಂಪೂರ್ಣ ಪ್ರಕ್ರಿಯೆಯ ಮೇಲೆ ಸ್ವತಂತ್ರ ತನಿಖೆ ನಡೆಯಬೇಕು. ಹಗರಣದ ಕಡತಗಳು ಮತ್ತು ಇಲಾಖೆಗಳ ನಡುವಿನ ಸಂವಹನ ದಾಖಲೆಗಳನ್ನು ಭದ್ರಪಡಿಸಬೇಕು. ಅಕ್ರಮಗಳು ಮೇಲ್ನೋಟಕ್ಕೆ ಸಾಬೀತಾದಲ್ಲಿ, ಪ್ರಕರಣವನ್ನು ಸಿಬಿಐ ಅಥವಾ ಲೋಕಾಯುಕ್ತಕ್ಕೆ ಹಸ್ತಾಂತರಿಸಬೇಕು ಎಂದು ಆಗ್ರಹಿಸಿದ್ದಾರೆ.

ರಾಜಕೀಯ ಹಾಗೂ ಆಡಳಿತಾತ್ಮಕ ಪರಿಣಾಮ

ಬೆಂಗಳೂರಿನ ಕಸ ನಿರ್ವಹಣೆಯು ದಶಕಗಳಿಂದಲೂ ದೊಡ್ಡ ಸಮಸ್ಯೆ ಮತ್ತು ಭ್ರಷ್ಟಾಚಾರದ ಕೂಪವಾಗಿ ಗುರುತಿಸಿಕೊಂಡಿದೆ. ಇಂತಹ ಸಮಯದಲ್ಲಿ, 39,437 ಕೋಟಿ ರೂ. ಮೊತ್ತದ ಟೆಂಡರ್‌ನಲ್ಲಿ ಇಷ್ಟು ದೊಡ್ಡ ಮಟ್ಟದ ಅಕ್ರಮದ ಆರೋಪ ಬಂದಿರುವುದು ರಾಜ್ಯ ಸರ್ಕಾರಕ್ಕೆ ದೊಡ್ಡ ಮುಜುಗರವನ್ನು ತಂದಿದೆ. ಸಚಿವರು ಪತ್ರದಲ್ಲಿ ಉಲ್ಲೇಖಿಸಿರುವಂತೆ, ಖಾಸಗಿ ಹಿತಾಸಕ್ತಿಗಳಿಗಾಗಿ ಸಾರ್ವಜನಿಕ ಹಣವನ್ನು ಪಣಕ್ಕಿಡುವುದು ಕರ್ನಾಟಕದ ಜನತೆಗೆ ಮಾಡುತ್ತಿರುವ ದ್ರೋಹ ಎಂದಿದ್ದಾರೆ.

Read More
Next Story