
ಬೆಂಗಳೂರಿನಲ್ಲಿ ಬೈಕ್ ಟ್ಯಾಕ್ಸಿಗಳ ವಿರುದ್ಧ ಆರ್ಟಿಒ ಕಾರ್ಯಾಚರಣೆ: 230ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳ ಜಪ್ತಿ
ಬಿಳಿ ಬಣ್ಣದ ಬೋರ್ಡ್ ಹೊಂದಿರುವ ವಾಹನಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುವುದು ಮೋಟಾರು ವಾಹನ ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿದೆ.
ರಾಜಧಾನಿ ಬೆಂಗಳೂರಿನಲ್ಲಿ ಅನಧಿಕೃತ ಸಾರಿಗೆ ಸೇವೆಗಳ ವಿರುದ್ಧ ಸಮರ ಸಾರಿರುವ ಪ್ರಾದೇಶಿಕ ಸಾರಿಗೆ ಕಚೇರಿ (ಆರ್ಟಿಯು) ಅಧಿಕಾರಿಗಳು, ಅಕ್ರಮ ಬೈಕ್ ಟ್ಯಾಕ್ಸಿಗಳ ವಿರುದ್ಧ ನಗರದಾದ್ಯಂತ ಬೃಹತ್ ಕಾರ್ಯಾಚರಣೆ ಆರಂಭಿಸಿದ್ದಾರೆ. ಕಾರ್ಯಾಚರಣೆ ಶುರುವಾದ ಮೊದಲ ದಿನವೇ ನಗರದ ವಿವಿಧ ಆರ್ಟಿಯು ವ್ಯಾಪ್ತಿಯಲ್ಲಿ ನಿಯಮ ಉಲ್ಲಂಘಿಸಿ ಓಡಿಸುತ್ತಿದ್ದ 230ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಖಾಸಗಿ ಬಳಕೆಯ ವಾಹನಗಳನ್ನು ವಾಣಿಜ್ಯ ಉದ್ದೇಶಗಳಿಗಾಗಿ ಹಾಗೂ ಬಾಡಿಗೆಗೆ ನೀಡಲು ಬಳಸಲಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ಹಾಗೂ ಅಧಿಕೃತ ಟ್ಯಾಕ್ಸಿ ಯೂನಿಯನ್‌ಗಳಿಂದ ನಿರಂತರ ದೂರುಗಳು ಕೇಳಿಬಂದಿದ್ದವು. ಸರ್ಕಾರದ ಯಾವುದೇ ಪರವಾನಗಿ ಪಡೆಯದ ಅನಧಿಕೃತ ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ ಈ ಬೈಕ್ ಟ್ಯಾಕ್ಸಿ ಸೇವೆಗಳನ್ನು ರಾಜಾರೋಷವಾಗಿ ಒದಗಿಸಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಸಾರಿಗೆ ಇಲಾಖೆ, ನಗರದಾದ್ಯಂತ ಏಕಕಾಲದಲ್ಲಿ ಕಾರ್ಯಾಚರಣೆ ಕೈಗೊಂಡು, ಖಾಸಗಿ ವಾಹನಗಳನ್ನು ಬಾಡಿಗೆಗೆ ಬಳಸುತ್ತಿದ್ದವರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದೆ.
ಮುಂದುವರಿಯಲಿರುವ ಕಾನೂನು ಕ್ರಮ ಮತ್ತು ಎಚ್ಚರಿಕೆ
ನಗರದಾದ್ಯಂತ ಇರುವ ವಿವಿಧ ಆಟಿಒ ಕಚೇರಿಗಳ ವ್ಯಾಪ್ತಿಯಲ್ಲಿ ವಿಶೇಷ ತಂಡಗಳನ್ನು ರಚಿಸಿ ಈ ತಪಾಸಣೆ ನಡೆಸಲಾಗುತ್ತಿದೆ. ಬಿಳಿ ಬಣ್ಣದ ಬೋರ್ಡ್ ಹೊಂದಿರುವ ವಾಹನಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುವುದು ಮೋಟಾರು ವಾಹನ ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ಮುಂದಿನ ದಿನಗಳಲ್ಲೂ ಈ ತಪಾಸಣಾ ಕಾರ್ಯಾಚರಣೆ ತೀವ್ರವಾಗಿ ಮುಂದುವರಿಯಲಿದ್ದು, ನಿಯಮ ಮೀರಿ ಬೈಕ್ ಟ್ಯಾಕ್ಸಿ ಓಡಿಸುವ ವಾಹನ ಮಾಲೀಕರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವುದರ ಜೊತೆಗೆ ಭಾರಿ ದಂಡ ವಿಧಿಸಲಾಗುವುದು ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

