
ಆರ್‌ಜಿಯುಎಚ್‌ಎಸ್ 28ನೇ ಘಟಿಕೋತ್ಸವ: 72,741 ವೈದ್ಯಕೀಯ ಪದವೀಧರರಿಗೆ ಪದವಿ ಪ್ರದಾನ
103 ವಿದ್ಯಾರ್ಥಿಗಳಿಗೆ ಚಿನ್ನದ ಪದಕ, 3 ಜನರಿಗೆ ಗೌರವ ಡಾಕ್ಟರೇಟ್, 72 ಸಾವಿರ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಸ್ನಾತಕ ಪದವೀಧರರು ಅತಿ ಹೆಚ್ಚಿನ ಸಂಖ್ಯೆಯಾಗಿದ್ದು, 62,419 ವಿದ್ಯಾರ್ಥಿಗಳು ಪದವಿ ಸ್ವೀಕರಿಸಿದರು.
ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆದ ರಾಜೀವ್‌ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ 28ನೇ ವಾರ್ಷಿಕ ಘಟಿಕೋತ್ಸವವು, ಸಾವಿರಾರು ವಿದ್ಯಾರ್ಥಿಗಳ ಪಾಲಿಗೆ ತಮ್ಮ ವೃತ್ತಿ ಜೀವನದ ಹೊಸ ಅಧ್ಯಾಯವನ್ನು ತೆರೆದಿಟ್ಟಿದೆ. ಈ ಬಾರಿಯ ಘಟಿಕೋತ್ಸವದಲ್ಲಿ ಒಟ್ಟು 72,741 ವಿದ್ಯಾರ್ಥಿಗಳಿಗೆ ಪದವಿ ಮತ್ತು ಗೌರವ ಪ್ರದಾನ ಮಾಡಲಾಯಿತು. ವೈದ್ಯಕೀಯ ಕ್ಷೇತ್ರದ ವಿವಿಧ ವಿಭಾಗಗಳಲ್ಲಿ ಉನ್ನತ ವ್ಯಾಸಂಗ ಪೂರೈಸಿದ ವಿದ್ಯಾರ್ಥಿಗಳಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪದವಿಗಳನ್ನು ಹಸ್ತಾಂತರಿಸಿದರು.
103 ವಿದ್ಯಾರ್ಥಿಗಳಿಗೆ ಚಿನ್ನದ ಪದಕ, 3 ಜನರಿಗೆ ಗೌರವ ಡಾಕ್ಟರೇಟ್, 72 ಸಾವಿರ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಸ್ನಾತಕ ಪದವೀಧರರು ಅತಿ ಹೆಚ್ಚಿನ ಸಂಖ್ಯೆಯಾಗಿದ್ದು, 62,419 ವಿದ್ಯಾರ್ಥಿಗಳು ಪದವಿ ಸ್ವೀಕರಿಸಿದರು. 9,761 ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ಪಡೆದರು. 211 ವಿಶೇಷ ತಜ್ಞ ವೈದ್ಯರು ಪದವಿ ಪಡೆದರು. ಪಿಎಚ್‌ಡಿ ವಿಭಾಗದಲ್ಲಿ 71 ವಿದ್ಯಾರ್ಥಿಗಳಿಗೆ ಡಾಕ್ಟರೇಟ್ ಪದವಿ ಪ್ರದಾನಿಸಲಾಯಿತು. 256 ಮಂದಿ ಫೆಲೋಶಿಪ್ ಪ್ರಶಸ್ತಿಗಳನ್ನು ಪಡೆದರು. 8 ಸ್ನಾತಕೋತ್ತರ ಡಿಪ್ಲೊಮಾ ಮತ್ತು 15 ಪ್ರಮಾಣಪತ್ರ ಕೋರ್ಸ್ ವಿದ್ಯಾರ್ಥಿಗಳು ಪದವಿ ಪಡೆದರು.
ಆರೋಗ್ಯ ವ್ಯವಸ್ಥೆಗೆ ಬಲ
ಒಟ್ಟು 72,741 ಪದವೀಧರರು ಒಂದೇ ಬಾರಿಗೆ ಆರೋಗ್ಯ ಸೇವಾ ವಲಯಕ್ಕೆ ಸೇರ್ಪಡೆಯಾಗುತ್ತಿರುವುದು ರಾಜ್ಯದ ಆರೋಗ್ಯ ವ್ಯವಸ್ಥೆಯ ದೃಷ್ಟಿಯಿಂದ ಮಹತ್ವದ ಬೆಳವಣಿಗೆಯಾಗಿದೆ. ಇದು ಕೋವಿಡ್‌ನಂತಹ ಸವಾಲಿನ ನಂತರ ಆರೋಗ್ಯ ಸೇವೆಗಳ ಮಹತ್ವವನ್ನು ಅರಿತಿರುವ ಸಮಾಜಕ್ಕೆ ದೊಡ್ಡ ಶಕ್ತಿಯಾಗಿದೆ. ನುರಿತ ವೈದ್ಯರು, ಸಂಶೋಧಕರು ಮತ್ತು ತಜ್ಞರ ಸೇರ್ಪಡೆಯಿಂದ ಸಾರ್ವಜನಿಕ ಆರೋಗ್ಯ ರಕ್ಷಣೆಯಲ್ಲಿ ಮತ್ತಷ್ಟು ಸುಧಾರಣೆ ನಿರೀಕ್ಷಿಸಬಹುದಾಗಿದೆ. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿಯು ಕಳೆದ ಮೂರು ದಶಕಗಳಿಂದ ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ದೇಶದಲ್ಲೇ ಅಗ್ರಗಣ್ಯವಾಗಿ ಗುರುತಿಸಿಕೊಂಡಿದೆ. ಸುಮಾರು 1,044ಕ್ಕೂ ಹೆಚ್ಚು ಅಫಿಲಿಯೇಟೆಡ್ ಕಾಲೇಜುಗಳನ್ನು ಹೊಂದಿರುವ ಈ ವಿವಿಯು, ಆರೋಗ್ಯ ವಿಜ್ಞಾನದ ಪ್ರತಿ ವಿಭಾಗದಲ್ಲೂ ಕಠಿಣ ಗುಣಮಟ್ಟವನ್ನು ಕಾಪಾಡಿಕೊಳ್ಳುತ್ತಿದೆ. ಲಕ್ಷಾಂತರ ವಿದ್ಯಾರ್ಥಿಗಳು ಇಲ್ಲಿನ ಶೈಕ್ಷಣಿಕ ಗುಣಮಟ್ಟವನ್ನು ನಂಬಿ ವ್ಯಾಸಂಗ ಮಾಡುತ್ತಿದ್ದಾರೆ.
ವೈದ್ಯಕೀಯ ಕೇವಲ ಉದ್ಯೋಗವಲ್ಲ, ಅದು ಸೇವೆ
ಪದವಿ ಪ್ರದಾನ ಮಾಡಿ ಮಾತನಾಡಿದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್, ವೈದ್ಯಕೀಯ ವೃತ್ತಿಯು ಕೇವಲ ಉದ್ಯೋಗವಲ್ಲ, ಅದು ಸೇವೆ ಮತ್ತು ಕರುಣೆಯ ಕ್ಷೇತ್ರವಾಗಿದ್ದು, ವೈದ್ಯರು ಸದಾ ನೈತಿಕತೆ, ಪ್ರಾಮಾಣಿಕತೆ ಹಾಗೂ ಮಾನವೀಯ ಮೌಲ್ಯಗಳಿಗೆ ಬದ್ಧರಾಗಿರಬೇಕು. ಇಂದಿನಿಂದ ಅವರ ಜೀವನದಲ್ಲಿ ಹೊಸ ಅಧ್ಯಾಯ ಆರಂಭವಾಗುತ್ತಿದ್ದು, ಸಮಾಜದ ಆರೋಗ್ಯ ಮತ್ತು ಮಾನವ ಜೀವಗಳನ್ನು ರಕ್ಷಿಸುವ ಮಹತ್ತರ ಜವಾಬ್ದಾರಿ ಅವರ ಮೇಲಿದೆ. ವೈದ್ಯರ ಮಾತುಗಳು ಭರವಸೆ ನೀಡುತ್ತವೆ, ಅವರ ಸ್ಪರ್ಶ ನಂಬಿಕೆಯನ್ನು ಮೂಡಿಸುತ್ತದೆ ಮತ್ತು ಅವರ ನಿರ್ಧಾರಗಳು ಜೀವ ಉಳಿಸುವ ಸಾಮರ್ಥ್ಯವನ್ನು ಹೊಂದಿವೆ. ವೈದ್ಯಕೀಯ ವೃತ್ತಿಯಲ್ಲಿ ನಂಬಿಕೆಯೇ ಅತಿದೊಡ್ಡ ಆಸ್ತಿ. ರೋಗಿಗಳು ತಮ್ಮ ಜೀವವನ್ನು ವೈದ್ಯರ ಕೈಯಲ್ಲಿ ಇಡುತ್ತಾರೆ. ಆದ್ದರಿಂದ ವೈದ್ಯರು ಪಾರದರ್ಶಕತೆ, ಸೂಕ್ಷ್ಮತೆ ಮತ್ತು ನೈತಿಕ ಮೌಲ್ಯಗಳನ್ನು ತಮ್ಮ ವೃತ್ತಿಜೀವನದ ಅವಿಭಾಜ್ಯ ಅಂಗವನ್ನಾಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ದೇಶದ ಆರೋಗ್ಯ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ, ಟೆಲಿಮೆಡಿಸಿನ್ ಮತ್ತು ಸಂಶೋಧನೆಯ ಮೂಲಕ ಮಹತ್ವದ ಬದಲಾವಣೆಗಳು ನಡೆಯುತ್ತಿವೆ. ಯುವ ವೈದ್ಯರು ನಿರಂತರ ಕಲಿಕೆಗೆ ಒತ್ತು ನೀಡಿ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಬೇಕು. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಶಿಷ್ಟ ಸ್ಥಾನ ಗಳಿಸಿದೆ ಎಂದು ಶ್ಲಾಘಿಸಿದ ಅವರು, ಇಲ್ಲಿಂದ ಶಿಕ್ಷಣ ಪಡೆದ ಸಾವಿರಾರು ವೈದ್ಯರು ದೇಶ-ವಿದೇಶಗಳಲ್ಲಿ ಮಾನವೀಯ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಹೇಳಿದರು. ಭವಿಷ್ಯದಲ್ಲಿಯೂ ವಿಶ್ವವಿದ್ಯಾಲಯವು ನಾವೀನ್ಯತೆ, ಸಂಶೋಧನೆ ಮತ್ತು ಗುಣಮಟ್ಟದ ಶಿಕ್ಷಣದ ಪ್ರಮುಖ ಕೇಂದ್ರವಾಗಿ ಮುಂದುವರಿಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಪ್ರತಿ ಜಿಲ್ಲೆಯಲ್ಲಿ ಕ್ಯಾನ್ಸರ್ ಆಸ್ಪತ್ರೆ ಸ್ಥಾಪನೆ: ಶರಣಪ್ರಕಾಶ್ ಪಾಟೀಲ್
ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಮಾತನಾಡಿ, ರಾಜ್ಯದ ಆರೋಗ್ಯ ಮೂಲಸೌಕರ್ಯವನ್ನು ಮತ್ತಷ್ಟು ಬಲಪಡಿಸುವಲ್ಲಿ ಸರ್ಕಾರ ಬದ್ಧತೆಯನ್ನು ಹೊಂದಿದೆ. ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು, ಕ್ಯಾನ್ಸರ್ ಆಸ್ಪತ್ರೆ ಹಾಗೂ ಟ್ರಾಮಾ ಕೇರ್ ಕೇಂದ್ರಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ರಾಜ್ಯದ ಸಾಮಾನ್ಯ ಜನರೂ ತಮ್ಮ ರಾಜ್ಯದಲ್ಲಿಯೇ ಉತ್ತಮ, ಗುಣಮಟ್ಟದ ಮತ್ತು ಕೈಗೆಟುಕುವ ಆರೋಗ್ಯ ಸೇವೆಗಳನ್ನು ಪಡೆಯಬೇಕು ಎಂಬುದು ಸರ್ಕಾರದ ಆಶಯವಾಗಿದೆ. ಪದವೀಧರರ ಪರಿಶ್ರಮ, ಸಮರ್ಪಣೆ ಮತ್ತು ಶೈಕ್ಷಣಿಕ ಸಾಧನೆಯನ್ನು ಶ್ಲಾಘಿಸಿದ ಅವರು, ವೈದ್ಯರಿಗೆ ವೃತ್ತಿಪರ ಕೌಶಲ್ಯ ಎಷ್ಟು ಮುಖ್ಯವೋ, ಮಾನವೀಯತೆ ಮತ್ತು ಕರುಣೆಯ ಗುಣಗಳು ಅದಕ್ಕಿಂತಲೂ ಮುಖ್ಯ ಎಂದು ಹೇಳಿದರು.
ವೈದ್ಯಕೀಯ ಶಿಕ್ಷಣಕ್ಕೆ ವಿವಿ ಮಹತ್ವದ ಕೊಡುಗೆ - ಡಾ.ಬಿ.ಸಿ.ಭಗವಾನ್
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ. ಬಿ.ಸಿ. ಭಗವಾನ್ ಮಾತನಾಡಿ, ರಾಮನಗರ, ಕನಕಪುರ ಮತ್ತು ಬಾಗಲಕೋಟೆಯಲ್ಲಿ ಮೂರು ವೈದ್ಯಕೀಯ ಕಾಲೇಜುಗಳ ಸ್ಥಾಪನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದು, ಈ ಜಿಲ್ಲೆಗಳಲ್ಲಿ ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಸೇವೆಗಳನ್ನು ಹೆಚ್ಚಿಸಿದೆ. ಜೊತೆಗೆ ಬೆಂಗಳೂರಿನಲ್ಲಿ ಸರ್ಕಾರಿ ದಂತ ವೈದ್ಯಕೀಯ ಕಾಲೇಜಿನ ಅಭಿವೃದ್ಧಿಗೆ ಸಹಕಾರ ನೀಡಿದ್ದು, ವಿಶೇಷ ದಂತ ಚಿಕಿತ್ಸೆ ಹಾಗೂ ತರಬೇತಿ ಅವಕಾಶಗಳನ್ನು ವಿಸ್ತರಿಸಿದೆ. ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಕ್ಷೇತ್ರಕ್ಕೆ ವಿಶ್ವವಿದ್ಯಾಲಯ ನೀಡುತ್ತಿರುವ ಕೊಡುಗೆ ಮಹತ್ವದ್ದು. ವಿಶ್ವವಿದ್ಯಾಲಯವು ಸಾರ್ವಜನಿಕ ಆರೋಗ್ಯ ಕ್ಷೇತ್ರದ ಮೂಲಸೌಕರ್ಯವನ್ನು ಬಲಪಡಿಸುವಲ್ಲಿ ಮಹತ್ವದ ಕೊಡುಗೆ ನೀಡಿದೆ. ವಿಶ್ವವಿದ್ಯಾಲಯವು ಎರಡು ಜಿಲ್ಲೆಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸ್ಥಾಪನೆಗೂ ಸಹಾಯ ಮಾಡಿದೆ. ಇದರಿಂದ ಗ್ರಾಮೀಣ ಮಟ್ಟದಲ್ಲಿ ಮೂಲಭೂತ ಆರೋಗ್ಯ ಸೇವೆಗಳ ಲಭ್ಯತೆ ಹೆಚ್ಚಾಗಿದೆ. ಹಾಗೆಯೇ ಬೆಂಗಳೂರು ಮತ್ತು ಕಲಬುರಗಿಯಲ್ಲಿ ತಾಯಿ ಮತ್ತು ಶಿಶು ಆರೋಗ್ಯ ಸೇವಾ ಸೌಲಭ್ಯಗಳ ಸ್ಥಾಪನೆಗೆ ನೆರವಾಗಿ, ಮಹಿಳೆಯರು ಮತ್ತು ಮಕ್ಕಳ ಆರೋಗ್ಯ ಸೇವೆಗಳ ಗುಣಮಟ್ಟವನ್ನು ಉತ್ತಮಗೊಳಿಸುವಲ್ಲಿ ಸಹಕರಿಸಿದೆ ಎಂದು ತಿಳಿಸಿದರು.
ಆರೋಗ್ಯ ವೃತ್ತಿಯಲ್ಲಿ ಯಶಸ್ಸು ಕೇವಲ ಜ್ಞಾನ ಮತ್ತು ತಾಂತ್ರಿಕ ಕೌಶಲ್ಯದಿಂದ ಮಾತ್ರವಲ್ಲ; ಕರುಣೆ, ನೈತಿಕತೆ ಮತ್ತು ಸೇವಾಭಾವದಿಂದ ನಿರ್ಧರಿಸಲಾಗುತ್ತದೆ. ಯುವ ಆರೋಗ್ಯ ವೃತ್ತಿಪರರು ಗುಣಮಟ್ಟದ ಆರೋಗ್ಯ ಸೇವೆ ನೀಡುವ ಜೊತೆಗೆ ಸಮಾಜದ ಉನ್ನತಿಗಾಗಿ ನೈತಿಕತೆ ಮತ್ತು ನಿಷ್ಠೆಯಿಂದ ಸೇವೆ ಸಲ್ಲಿಸಬೇಕು. 1996ರಲ್ಲಿ ಸ್ಥಾಪನೆಯಾದ ರಾಗಾಆವಿವಿ ಏಷ್ಯಾದ ಅತಿದೊಡ್ಡ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿ ಬೆಳೆದು ನಿಂತಿದೆ. ಆರಂಭದಲ್ಲಿ ಕೇವಲ 100 ಶಿಕ್ಷಣ ಸಂಸ್ಥೆಗಳನ್ನು ಹೊಂದಿದ್ದ ವಿಶ್ವವಿದ್ಯಾಲಯ ಪ್ರಸ್ತುತ ಸುಮಾರು 1,450 ಸಂಸ್ಥೆಗಳೊಂದಿಗೆ ಸಂಯೋಜನೆ ಹೊಂದಿದ್ದು, 4 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿದೆ. ಸಿಬ್ಬಂದಿ ಸಂಖ್ಯೆ 40 ಸಾವಿರಕ್ಕೂ ಹೆಚ್ಚಿದೆ. ಇಲ್ಲಿ ಅಧ್ಯಯನ ಮಾಡಿದ ಸುಮಾರು 8 ಲಕ್ಷಕ್ಕೂ ಅಧಿಕ ಪದವೀಧರರು ದೇಶ-ವಿದೇಶದ ಆರೋಗ್ಯ ವ್ಯವಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.

