
ಬೆಂಗಳೂರಲ್ಲಿ ಭಾರೀ ಮಳೆಯಿಂದ ಹಲವು ರಸ್ತೆಗಳು ಜಲಾವೃತಗೊಂಡಿದ್ದು, ವೈಟ್ಫೀಲ್ಡ್, ಮಾರತ್ತಹಳ್ಳಿ ಸೇರಿ ಹಲವೆಡೆ ಟ್ರಾಫಿಕ್ ಜಾಮ್ ಉಂಟಾಗಿ 9 ಕಿಮೀ ಸಾಗಲು ಒಂದು ಗಂಟೆ ಬೇಕಾಯಿತು.
ಬೆಂಗಳೂರಲ್ಲಿ ಮಳೆ ಅವಾಂತರ; 9 ಕಿಮೀ ಪ್ರಯಾಣಕ್ಕೆ ಬೇಕಾಯ್ತು 1 ಗಂಟೆ
ವೈಟ್ಫೀಲ್ಡ್ ಮತ್ತು ಹೆಚ್ಎಎಲ್ ಸುತ್ತಮುತ್ತ ರಸ್ತೆಯಲ್ಲಿ ನೀರು ನಿಂತಿದ್ದರಿಂದ ಸಂಚಾರ ನಿಯಂತ್ರಣಕ್ಕೆ ಪೊಲೀಸರು ನೀರಿನಲ್ಲೇ ನಿಂತು ಕರ್ತವ್ಯ ನಿರ್ವಹಿಸಿದ್ದಾರೆ.
ಬೆಂಗಳೂರು ನಗರದಲ್ಲಿ ಕಳೆದ ಕೆಲವು ದಿನಗಳಿಂದ ಮಳೆ ಮುಂದುವರಿದಿದ್ದು, ಹಲವೆಡೆ ಜನಜೀವನ ಅಸ್ತವ್ಯಸ್ತವಾಗಿದೆ. ನಿರಂತರ ಮಳೆಯಿಂದ ಪ್ರಮುಖ ರಸ್ತೆಗಳು ಹಾಗೂ ಅಂಡರ್ಪಾಸ್ಗಳಲ್ಲಿ ನೀರು ನಿಂತ ಪರಿಣಾಮ ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ. ಹಲವು ಮಾರ್ಗಗಳಲ್ಲಿ ವಾಹನಗಳು ನಿಧಾನವಾಗಿ ಚಲಿಸುವಂತಾಗಿದ್ದು, ಭಾರೀ ಟ್ರಾಫಿಕ್ ಜಾಮ್ ಕಂಡುಬಂದಿದೆ.
10-12 ಕಿಮೀ ಪ್ರಯಾಣಕ್ಕೆ ಬರೋಬ್ಬರಿ 3 ಗಂಟೆ
ಮಹದೇವಪುರದಿಂದ ವರ್ತೂರಿನತ್ತ ತೆರಳಿದ ವಾಹನ ಸವಾರರು ಮಳೆಯಿಂದಾಗಿ ಎದುರಾದ ಟ್ರಾಫಿಕ್ ಸಮಸ್ಯೆಯನ್ನು ವಿವರಿಸಿದ್ದಾರೆ. ಸಂಜೆ ಸುಮಾರು 5 ಗಂಟೆಗೆ ಮಹದೇವಪುರದಿಂದ ಹೊರಟಿದ್ದವರು ಸುಮಾರು 8 ಗಂಟೆಗೆ ವರ್ತೂರು ತಲುಪಿದ್ದಾರೆ. ಕೇವಲ 10ರಿಂದ 12 ಕಿಮೀ ದೂರ ಕ್ರಮಿಸಲು ಮೂರು ಗಂಟೆಗೂ ಹೆಚ್ಚು ಸಮಯ ಬೇಕಾಯಿತು ಎಂದು ಅವರು ತಿಳಿಸಿದ್ದಾರೆ.
ಉತ್ತರ ಬೆಂಗಳೂರಲ್ಲೂ ಮಳೆ ಅಬ್ಬರ
ಬೆಂಗಳೂರು ಉತ್ತರ ಭಾಗದ ಯಲಹಂಕ, ರಾಜಾನುಕುಂಟೆ, ಥಣಿಸಂದ್ರ ಮತ್ತು ಸಂಪಿಗೆಹಳ್ಳಿ ಸುತ್ತಮುತ್ತಲ ಪ್ರದೇಶಗಳಲ್ಲಿ ಜೋರು ಮಳೆಯಾಗಿದೆ. ಮಳೆಯಿಂದಾಗಿ ಹಲವು ರಸ್ತೆಗಳು ಮತ್ತು ಅಂಡರ್ಪಾಸ್ಗಳಲ್ಲಿ ನೀರು ನಿಂತಿದ್ದು, ವಾಹನ ಸವಾರರು ಪರದಾಡುವಂತಾಗಿದೆ.
ಜಕ್ಕೂರು ಅಂಡರ್ಪಾಸ್ ಸೇರಿ ಹಲವೆಡೆ ನೀರು
ಜಕ್ಕೂರು ಬಳಿಯ ರೈಲ್ವೆ ಅಂಡರ್ಪಾಸ್ನಲ್ಲಿ ನೀರು ತುಂಬಿಕೊಂಡಿದೆ. ಕೆಲವು ಪ್ರದೇಶಗಳಲ್ಲಿ ಅಪಾರ್ಟ್ಮೆಂಟ್ಗಳಿಗೂ ಮಳೆ ನೀರು ನುಗ್ಗಿರುವ ವರದಿಯಾಗಿದೆ. ಕೆಲವು ಕಡೆ ನೀರಿನ ಪ್ರಮಾಣ ಹೆಚ್ಚಾಗಿ ಕಾರುಗಳು ಕೂಡ ಜಲಾವೃತವಾಗಿವೆ.
ರಾಜಕಾಲುವೆ ಸಮೀಪದ ನಾಗವಾರ ಮುಖ್ಯ ರಸ್ತೆಯಲ್ಲೂ ನೀರು ನಿಂತು ಸಂಚಾರಕ್ಕೆ ತೊಂದರೆಯಾಗಿದೆ. ಮಾಲ್ ಆಫ್ ಏಷಿಯಾ, ಹೊರಮಾವು ಹಾಗೂ ಜಕ್ಕೂರು ಭಾಗದ ಅಂಡರ್ಪಾಸ್ಗಳಲ್ಲಿಯೂ ನೀರು ನಿಂತಿರುವುದರಿಂದ ವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮಳೆ ನೀರು ನಿರ್ವಹಣೆ ಬಗ್ಗೆ ಸಾರ್ವಜನಿಕರ ಅಸಮಾಧಾನ
ರಸ್ತೆಗಳಲ್ಲಿ ನೀರು ನಿಲ್ಲುತ್ತಿರುವುದು ಮತ್ತು ಗಂಟೆಗಟ್ಟಲೆ ಟ್ರಾಫಿಕ್ನಲ್ಲಿ ಸಿಲುಕಬೇಕಾಗುತ್ತಿರುವುದರಿಂದ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಳೆ ಬಂದಾಗಲೆಲ್ಲ ಇದೇ ರೀತಿಯ ಸಮಸ್ಯೆ ಎದುರಾಗುತ್ತಿದ್ದು, ಮಳೆ ನೀರು ಸರಾಗವಾಗಿ ಹರಿದುಹೋಗುವ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿದ್ದಾರೆ.

