
ಬೆಂಗಳೂರು ಮಳೆ ದುರಂತ: ಡಿಕೆಶಿ ಅಧಿಕಾರ ವ್ಯಾಪ್ತಿಯಲ್ಲಿ ಸಿದ್ದರಾಮಯ್ಯ ಕೈ ಮೇಲು?
ದುರಂತ ಸಂಭವಿಸಿದ ಕೆಲವೇ ಗಂಟೆಯ ಮುಖ್ಯಮಂತ್ರಿಗಳು ಸ್ಥಳಕ್ಕೆ ಭೇಟಿ ನೀಡಿ ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದರು. ಇದು ರಾಜಕೀಯವಾಗಿ ಅವರಿಗೆ ದೊಡ್ಡ ಮೈಲೇಜ್ ತಂದುಕೊಟ್ಟಿದೆ.
ರಾಜಧಾನಿಯ ಹೃದಯ ಭಾಗದಲ್ಲಿರುವ ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಕುಸಿದು 7 ಕಾರ್ಮಿಕರು ಬಲಿಯಾದ ಭೀಕರ ದುರಂತ, ಬಿಬಿಎಂಪಿ ಹಾಗೂ ಆಡಳಿತ ಯಂತ್ರದ ವೈಫಲ್ಯವನ್ನು ಬೆತ್ತಲಾಗಿಸಿದೆ. ಆದರೆ, ಈ ಸೂತಕದ ಛಾಯೆಯ ನಡುವೆಯೂ ರಾಜ್ಯ ಕಾಂಗ್ರೆಸ್‌ನ ಇಬ್ಬರು ಘಟಾನುಘಟಿ ನಾಯಕರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ನಡುವಿನ 'ವರ್ಚಸ್ಸಿನ ಪೈಪೋಟಿ' ರಾಜಕೀಯ ವಲಯದಲ್ಲಿ ಭಾರೀ ಚರ್ಚೆ ಹುಟ್ಟುಹಾಕಿದೆ.
ಘಟನೆ ಸಂಭವಿಸುತ್ತಿದ್ದಂತೆಯೇ ಎಚ್ಚೆತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ, ತಕ್ಷಣವೇ ಸ್ಥಳಕ್ಕೆ ದೌಡಾಯಿಸುವ ಮೂಲಕ ಜನಪರ ಕಾಳಜಿ ಮೆರೆದರು. ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಷ್ಟೇ ಅಲ್ಲದೆ, ಸ್ಥಳದಲ್ಲಿದ್ದ ಅಧಿಕಾರಿಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ಇದು ಸಾರ್ವಜನಿಕ ವಲಯದಲ್ಲಿ ಸಿಎಂ ಕಾರ್ಯವೈಖರಿಗೆ ಮೆಚ್ಚುಗೆ ತಂದುಕೊಟ್ಟಿತಲ್ಲದೆ, ರಾಜಕೀಯವಾಗಿ "ಸಂಕಷ್ಟದ ಸಮಯದಲ್ಲಿ ನಾನೇ ಮುಂಚೂಣಿಯಲ್ಲಿರುತ್ತೇನೆ" ಎಂಬ ಸಂದೇಶ ರವಾನಿಸಿ ದೊಡ್ಡ ಮಟ್ಟದ ಮೈಲೇಜ್ ಒದಗಿಸಿದೆ.
ಡಿಕೆಶಿಗೆ ಕಾಯದೆ ಸಭೆ ನಡೆಸಿದ 'ಸೂಪರ್ ಬಾಸ್'!
ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಈ ಬೆಳವಣಿಗೆಗಳು ನೇರ ಮುಜುಗರ ತಂದಿವೆ. ದುರಂತದ ಹಿನ್ನೆಲೆಯಲ್ಲಿ ಜಿಬಿಎ (GBA) ಆಯುಕ್ತರೊಂದಿಗೆ ಸಿಎಂ ತುರ್ತು ಸಭೆ ಕರೆದಿದ್ದರು. ಆದರೆ, ನಗರದ ಉಸ್ತುವಾರಿಯಾಗಿರುವ ಡಿಕೆಶಿ ಸಭೆಗೆ ತಡವಾಗಿ ಆಗಮಿಸಿದರು. ಅಚ್ಚರಿಯೆಂದರೆ, ಉಪಮುಖ್ಯಮಂತ್ರಿಗಾಗಿ ಕಾಯದ ಸಿಎಂ ಸಿದ್ದರಾಮಯ್ಯ ಸಭೆ ಆರಂಭಿಸಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದರು. ಡಿಕೆಶಿಯವರ ಅಧಿಕಾರ ವ್ಯಾಪ್ತಿಯಲ್ಲಿ ಸಿಎಂ ನಡೆಸಿದ ಈ ನೇರ 'ಹಸ್ತಕ್ಷೇಪ', ಕೇವಲ ಸಾಂಪ್ರದಾಯಿಕ ಮುಖ್ಯಮಂತ್ರಿಯಾಗಿರದೆ ತಾವೊಬ್ಬ 'ಸೂಪರ್ ಬಾಸ್' ಎಂದು ಬಿಂಬಿಸಿಕೊಳ್ಳುವ ತಂತ್ರ ಎಂದೇ ವಿಶ್ಲೇಷಿಸಲಾಗುತ್ತಿದೆ.
'ಬ್ರ್ಯಾಂಡ್ ಬೆಂಗಳೂರು' ಕನಸಿಗೆ ಬಿತ್ತಾ ಪೆಟ್ಟು?
'ಬ್ರ್ಯಾಂಡ್ ಬೆಂಗಳೂರು' ನಿರ್ಮಾಣದ ಮಹತ್ವಾಕಾಂಕ್ಷೆ ಹೊತ್ತಿರುವ ಡಿ.ಕೆ. ಶಿವಕುಮಾರ್ ಅವರಿಗೆ ಈ ಮಳೆ ಅನಾಹುತ ದೊಡ್ಡ ಹಿನ್ನಡೆಯುಂಟು ಮಾಡಿದೆ. ಇದು ನೇರವಾಗಿ ಅವರ ಇಲಾಖೆಯ ವೈಫಲ್ಯ ಎಂದೇ ಬಿಂಬಿತವಾಗುತ್ತಿದೆ. ಸಿಎಂ ಸ್ಥಳಕ್ಕೆ ಭೇಟಿ ನೀಡಿ ಮರಳಿದ ಬಳಿಕ ಡಿಕೆಶಿ ಆಗಮಿಸಿದ್ದು, "ಉಸ್ತುವಾರಿ ಸಚಿವರಿಗಿಂತ ಸಿಎಂ ಹೆಚ್ಚು ಆಕ್ಟಿವ್ ಆಗಿದ್ದಾರೆ" ಎಂಬ ಭಾವನೆ ಜನರಲ್ಲಿ ಮೂಡಲು ಕಾರಣವಾಗಿದೆ. ಇದು ಬೆಂಗಳೂರಿನ ಮೇಲೆ ಸಂಪೂರ್ಣ ಹಿಡಿತ ಸಾಧಿಸಲು ಯತ್ನಿಸುತ್ತಿರುವ ಡಿಕೆಶಿಗೆ ರಾಜಕೀಯವಾಗಿ ಬಿದ್ದ ದೊಡ್ಡ ಪೆಟ್ಟು ಎನ್ನಲಾಗುತ್ತಿದೆ.
ಗೊಂದಲದಲ್ಲಿ ಆಡಳಿತ ಯಂತ್ರ: ಯಾರ ಮಾತು ಕೇಳಬೇಕು?
ದುರಂತದ ಸಮಯದಲ್ಲಿ ನಾಯಕರ ಈ ಪೈಪೋಟಿ ಬಹಿರಂಗವಾಗಿರುವುದು ಕಾಂಗ್ರೆಸ್ ಪಕ್ಷಕ್ಕೂ ಮುಜುಗರ ತರಿಸಿದೆ. ಸಿಎಂ ಮುಖ್ಯವೋ? ಉಸ್ತುವಾರಿ ಸಚಿವರು ಮುಖ್ಯವೋ? ಎಂಬ ಗೊಂದಲದಲ್ಲಿ ಅಧಿಕಾರಿಗಳು ಸಿಲುಕಿದ್ದಾರೆ. ಸಚಿವರೇ ಇಲ್ಲದೆ ಕೈಗೊಳ್ಳುವ ನಿರ್ಧಾರಗಳು ಎಷ್ಟರ ಮಟ್ಟಿಗೆ ಅನುಷ್ಠಾನಕ್ಕೆ ಬರುತ್ತವೆ ಎಂಬ ಪ್ರಶ್ನೆ ಎದ್ದಿದೆ. ಸಮನ್ವಯದ ಕೊರತೆ ಹೀಗೆಯೇ ಮುಂದುವರಿದರೆ ಅದರ ನೇರ ಪರಿಣಾಮ ಬೆಂಗಳೂರಿನ ಜನಸಾಮಾನ್ಯರ ಮೇಲಾಗಲಿದೆ.
ಒಟ್ಟಿನಲ್ಲಿ, ಬೌರಿಂಗ್ ಆಸ್ಪತ್ರೆ ದುರಂತವು ಸಿದ್ದರಾಮಯ್ಯ ಅವರ ರಾಜಕೀಯ ಚಾಣಾಕ್ಷತನವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದರೆ, ಡಿ.ಕೆ. ಶಿವಕುಮಾರ್ ಪಾಲಿಗೆ ಇದೊಂದು ಎಚ್ಚರಿಕೆಯ ಗಂಟೆ.

