
ಭಾರಿ ಮಳೆಗೆ ಗೋಡೆ ಕುಸಿದು 5 ಹಸುಗಳ ಸಾವು; ನಗರದಲ್ಲಿ ಸಾಲು ಸಾಲು ಅವಾಂತರ
ಬೆಂಗಳೂರಿನಲ್ಲಿ ಒಂದೇ ಮಳೆಗೆ ಹಲವು ಅವಾಂತರಗಳು ಸೃಷ್ಟಿಯಾಗಿವೆ. ಇಂದು ಕೂಡ ನಗರದ ಹಲವೆಡೆ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮಳೆರಾಯನ ಅಬ್ಬರಕ್ಕೆ ಬೆಂಗಳೂರು ತತ್ತರಿಸಿದೆ. ಮಂಗಳವಾರ ಸಂಜೆ ಸುರಿದ ಭಾರಿ ಮಳೆಗೆ ಸಿಲಿಕಾನ್ ಸಿಟಿಯಲ್ಲಿ ಹಲವು ಅವಾಂತರಗಳು ಸಂಭವಿಸಿದ್ದು, ದೊಮ್ಮಲೂರಿನಲ್ಲಿ ಕಾಂಪೌಂಡ್ ಗೋಡೆ ಕುಸಿದು ಐದು ಹಸುಗಳು ಮೃತಪಟ್ಟಿವೆ.
ದೊಮ್ಮಲೂರಿನಲ್ಲಿ ಮಳೆಯಿಂದ ಕಾಂಪೌಂಡ್ ಗೋಡೆ ಕುಸಿದ ಪರಿಣಾಮ ಕೊಟ್ಟಿಗೆಯಲ್ಲಿದ್ದ ಐದು ಹಸುಗಳು ಮೃತಪಟ್ಟಿವೆ. ಕೊಟ್ಟಿಗೆಯಲ್ಲಿ ಒಟ್ಟು ಎಂಟು ಹಸುಗಳು ಮತ್ತು ಕರುಗಳನ್ನು ಕಟ್ಟಲಾಗಿತ್ತು. ಈ ಪೈಕಿ ನಾಲ್ಕು ಹಸುಗಳು ಹಾಗೂ ಒಂದು ಕರು ಗೋಡೆ ಕುಸಿತಕ್ಕೆ ಸಿಲುಕಿ ಸಾವನ್ನಪ್ಪಿವೆ. ಮೃತಪಟ್ಟ ಹಸುಗಳು ಮುನಿರಾಜು ಎಂಬುವವರಿಗೆ ಸೇರಿವೆ ಎಂದು ತಿಳಿದುಬಂದಿದೆ.
ಇನ್ನು ಬೆಂಗಳೂರಿನಲ್ಲಿ ಒಂದೇ ಮಳೆಗೆ ಹಲವು ಅವಾಂತರಗಳು ಸೃಷ್ಟಿಯಾಗಿವೆ. ಹವಾಮಾನ ಇಲಾಖೆ ಮುನ್ಸೂಚನೆಯಂತೆ ಮಂಗಳವಾರ ಸಂಜೆ ನಗರದ ಹಲವೆಡೆ ಭಾರಿ ಮಳೆಯಾಗಿದೆ. ಮಧ್ಯಾಹ್ನದಿಂದಲೇ ಮೋಡ ಕವಿದ ವಾತಾವರಣವಿದ್ದು, ಸಂಜೆ ವೇಳೆಗೆ ಮಳೆ ಅಬ್ಬರಿಸಿದೆ.
ಮಲ್ಲತ್ತಹಳ್ಳಿ ಬಳಿಯೂ ಮಳೆಯಿಂದ ಬೃಹತ್ ಮರವೊಂದು ರಸ್ತೆಗೆ ಬಿದ್ದಿದೆ. ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಆಟೋ ಮೇಲೆ ಮರದ ರೆಂಬೆ ಬಿದ್ದು ಆಟೋ ಸಂಪೂರ್ಣ ಜಖಂಗೊಂಡಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ಯಾವುದೇ ಅಪಾಯವಾಗಿಲ್ಲ ಎಂದು ತಿಳಿದುಬಂದಿದೆ. ಒಂದೆಡೆ ಭಾರಿ ಮಳೆಯಿಂದ ರಸ್ತೆಗಳಲ್ಲಿ ನೀರು ನಿಂತು ವಾಹನ ಸವಾರರು ಪರದಾಡಿದರೆ, ಮತ್ತೊಂದೆಡೆ ಮರ ಹಾಗೂ ಗೋಡೆ ಕುಸಿತದಿಂದ ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿದೆ.

