
ಬೆಂಗಳೂರಿನಲ್ಲಿ ಮೇ 29ರವರೆಗೆ ಗುಡುಗು ಸಹಿತ ಭಾರಿ ಮಳೆ ಸಾಧ್ಯತೆದೆ.
ಸಿಲಿಕಾನ್ ಸಿಟಿಗೆ ಮಳೆ ಮುನ್ಸೂಚನೆ; ಮೇ 29ರವರೆಗೆ ಗುಡುಗು ಸಹಿತ ಭಾರಿ ಮಳೆ ಸಾಧ್ಯತೆ
ಬೆಂಗಳೂರಿನಲ್ಲಿ ಮೇ 29ರವರೆಗೆ ಗುಡುಗು ಸಹಿತ ಭಾರಿ ಮಳೆ ಸಾಧ್ಯತೆಯಿದ್ದು, ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಗಾಳಿ ಸಹಿತ ಮಳೆಯಾಗಲಿದ್ದು, ತಾಪಮಾನ ಗಣನೀಯವಾಗಿ ಕುಸಿತ ಕಂಡಿದೆ.
ರಾಜಧಾನಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 5 ದಿನಗಳ ಕಾಲ ನಗರದಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರಕ್ಕೆ ಮುಂದಿನ ಶುಕ್ರವಾರದವರೆಗೆ ಹವಾಮಾನ ಇಲಾಖೆಯು 'ಯೆಲ್ಲೋ ಅಲರ್ಟ್' ಘೋಷಿಸಿದೆ. ಮುಂದಿನ ಇಡೀ ವಾರ ನಗರದಲ್ಲಿ ಗಾಳಿ ಸಹಿತ ಸಾಧಾರಣದಿಂದ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆಯ ವರದಿ ತಿಳಿಸಿದೆ.
ನೈರುತ್ಯ ಬಂಗಾಳ ಕೊಲ್ಲಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿರುವುದರಿಂದ ಹವಾಮಾನದಲ್ಲಿ ಭಾರಿ ಬದಲಾವಣೆಯಾಗಿದೆ. ಇದರ ಪರಿಣಾಮ ಬೆಂಗಳೂರಿನಾದ್ಯಂತ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
ಮಧ್ಯಾಹ್ನ ಹಾಗೂ ಸಂಜೆ ವೇಳೆಗೆ ಆಕಾಶವು ಭಾಗಶಃ ಮೋಡ ಕವಿದ ವಾತಾವರಣದಿಂದ ಕೂಡಿರಲಿದ್ದು, ಕೆಲವು ಭಾಗಗಳಲ್ಲಿ ಗಂಟೆಗೆ 40 ರಿಂದ 50 ಕಿಲೋಮೀಟರ್ ವೇಗದಲ್ಲಿ ಬೀಸುವ ಬಲವಾದ ಗಾಳಿಯೊಂದಿಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಈ ಅವಧಿಯಲ್ಲಿ ನಗರದ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿರಲಿದೆ.
ಕಳೆದ ವಾರಕ್ಕೆ ಹೋಲಿಸಿದರೆ ಭಾನುವಾರ ಬೆಳಗಿನ ಜಾವ ದಾಖಲಾದ ತಾಪಮಾನದಲ್ಲಿ ಗಣನೀಯ ಕುಸಿತ ಕಂಡುಬಂದಿದೆ. ಕರ್ನಾಟಕದ ಹಲವು ಭಾಗಗಳಲ್ಲಿ ವಾಡಿಕೆಗಿಂತ 2 ರಿಂದ 5 ಡಿಗ್ರಿ ಸೆಲ್ಸಿಯಸ್‌ನಷ್ಟು ತಾಪಮಾನ ಕಡಿಮೆಯಾಗಿದೆ.
ಕಳೆದ ವಾರ ಸರಾಸರಿ 34 ಡಿಗ್ರಿ ಸೆಲ್ಸಿಯಸ್ ಇದ್ದ ಗರಿಷ್ಠ ತಾಪಮಾನವು ಸದ್ಯ 30 ಡಿಗ್ರಿ ಸೆಲ್ಸಿಯಸ್‌ಗಿಂತ ಕೆಳಗೆ ಇಳಿದಿದ್ದು, ನಗರದಲ್ಲಿ ತಂಪಾದ ವಾತಾವರಣ ನಿರ್ಮಾಣವಾಗಿದೆ. ಬಿಹಾರದ ದಕ್ಷಿಣ ಭಾಗದಿಂದ ಜಾರ್ಖಂಡ್ ಮತ್ತು ಒಡಿಶಾ ಮಾರ್ಗವಾಗಿ ಆಂಧ್ರಪ್ರದೇಶದ ಉತ್ತರ ಕರಾವಳಿಯವರೆಗೆ ಹರಡಿರುವ ವಾಯುಭಾರ ಕುಸಿತದ ರೇಖೆಯೂ ಈ ಮಳೆಗೆ ಪ್ರಮುಖ ಕಾರಣವಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಕೇವಲ ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಕರಾವಳಿ ಭಾಗ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲೂ ಮೇ 29ರವರೆಗೆ ಯೆಲ್ಲೋ ಅಲರ್ಟ್ ಜಾರಿಯಲ್ಲಿರಲಿದ್ದು, ರಾಜ್ಯಾದ್ಯಂತ ಮುಂದಿನ ಕೆಲವು ದಿನಗಳ ಕಾಲ ಮಳೆಯ ಅಬ್ಬರ ಮುಂದುವರಿಯಲಿದೆ.

