ಬೆಂಗಳೂರಿನಲ್ಲಿ ಕ್ವಾಂಟಮ್ ಸಿಟಿ : ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಗೆ ಸಜ್ಜಾದ ರಾಜ್ಯ ಸರ್ಕಾರ
x

ಬೆಂಗಳೂರಿನಲ್ಲಿ ಕ್ವಾಂಟಮ್ ಸಿಟಿ : ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಗೆ ಸಜ್ಜಾದ ರಾಜ್ಯ ಸರ್ಕಾರ

ಭವಿಷ್ಯದ ಆರೋಗ್ಯ ಸೇವೆಯು ಡೇಟಾವನ್ನು ಅವಲಂಬಿಸಿದೆ. ಈ ನಿಟ್ಟಿನಲ್ಲಿ ಕ್ವಾಂಟಮ್ ಕಂಪ್ಯೂಟಿಂಗ್‌ನ ಪಾತ್ರ ಹಿರಿದು. ಕ್ಯಾನ್ಸರ್‌ನಂತಹ ಕಾಯಿಲೆಗಳನ್ನು ಆರಂಭಿಕ ಹಂತದಲ್ಲಿಯೇ ಪತ್ತೆಹಚ್ಚಲು ನೆರವಾಗಲಿವೆ.


Click the Play button to hear this message in audio format

ಆಧುನಿಕ ವೈದ್ಯಕೀಯ ವಿಜ್ಞಾನವು ತಂತ್ರಜ್ಞಾನದ ಜೊತೆ ಕೈಜೋಡಿಸುತ್ತಿರುವುದರಿಂದ ರಾಜ್ಯವು ಆರೋಗ್ಯ ವಲಯದಲ್ಲಿ ಜಾಗತಿಕ ಮಟ್ಟದ ಬದಲಾವಣೆಗಳಿಗೆ ನಾಂದಿ ಹಾಡುತ್ತಿದೆ. ಕೃತಕ ಬುದ್ಧಿಮತ್ತೆ, ಕ್ವಾಂಟಮ್ ಕಂಪ್ಯೂಟಿಂಗ್ ಮತ್ತು ಜೀನೋಮಿಕ್ಸ್‌ನಂತಹ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿ ರಾಜ್ಯದ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲು ಸರ್ಕಾರ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಹಮ್ಮಿಕೊಂಡಿದೆ. ಈ ನಿಟ್ಟಿನಲ್ಲಿ ಬೆಂಗಳೂರನ್ನು 'ಕ್ವಾಂಟಮ್ ಸಿಟಿ'ಯನ್ನಾಗಿ ಪರಿವರ್ತಿಸುವ ಗುರಿಯನ್ನು ಸರ್ಕಾರ ಹೊಂದಿದೆ.

ಪ್ರಗತಿಪರ ಸಮಾಜ ನಿರ್ಮಾಣಕ್ಕೆ ರೋಗಮುಕ್ತ ಸಮಾಜ ಅತಿ ಅಗತ್ಯ. ವೈದ್ಯರು, ಸಂಶೋಧಕರು ಮತ್ತು ಫಾರ್ಮಾ ವಲಯದ ಪರಿಣತಿಯಿಂದಾಗಿ ಮಧ್ಯಪ್ರಾಚ್ಯ ಮತ್ತು ಆಫ್ರಿಕಾ ರಾಷ್ಟ್ರಗಳ ರೋಗಿಗಳು ಚಿಕಿತ್ಸೆಗಾಗಿ ಭಾರತಕ್ಕೆ ಆಗಮಿಸುತ್ತಿದ್ದಾರೆ. ಕೋವಿಡ್-19 ಸಾಂಕ್ರಾಮಿಕದಂತಹ ಬಿಕ್ಕಟ್ಟಿನ ಸಮಯದಲ್ಲೂ ಜಗತ್ತಿಗೆ ಲಸಿಕೆ ಮತ್ತು ಔಷಧಿಗಳನ್ನು ಪೂರೈಸಿ, ನಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದೇವೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ತಿಳಿಸಿದ್ದಾರೆ.

ಭವಿಷ್ಯದ ಆರೋಗ್ಯ ಸೇವೆಯು ಡೇಟಾ ಮತ್ತು ವೇಗವನ್ನು ಅವಲಂಬಿಸಿದೆ. ಈ ನಿಟ್ಟಿನಲ್ಲಿ ಕ್ವಾಂಟಮ್ ಕಂಪ್ಯೂಟಿಂಗ್‌ನ ಪಾತ್ರ ಹಿರಿದು. ಮಾರಕ ಕ್ಯಾನ್ಸರ್‌ನಂತಹ ಕಾಯಿಲೆಗಳನ್ನು ಅವುಗಳ ಆರಂಭಿಕ ಹಂತದಲ್ಲಿಯೇ ಪತ್ತೆಹಚ್ಚಲು ಎಐ ಮತ್ತು ರೊಬೊಟಿಕ್ಸ್ ನೆರವಾಗಲಿವೆ. ಅಷ್ಟೇ ಅಲ್ಲದೆ, ಪ್ರತಿಯೊಬ್ಬ ವ್ಯಕ್ತಿಯ ದೇಹದ ಪ್ರಕೃತಿಗೆ ಅನುಗುಣವಾಗಿ ಚಿಕಿತ್ಸೆ ನೀಡುವ ಪರ್ಸನಲೈಸ್ಡ್ ಮೆಡಿಸಿನ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಕ್ವಾಂಟಮ್ ಕಂಪ್ಯೂಟಿಂಗ್ ದಾರಿ ಮಾಡಿಕೊಡಲಿದೆ. ಬೆಂಗಳೂರು ಈ ನಿಟ್ಟಿನಲ್ಲಿ ಈಗಾಗಲೇ ದಾಪುಗಾಲು ಹಾಕಿದೆ. ದೇಶದ ಮೊದಲ ಸ್ವದೇಶಿ ಕ್ವಾಂಟಮ್ ಕಂಪ್ಯೂಟರ್ ಅನ್ನು ಹೊಂದುವ ಹೆಗ್ಗಳಿಕೆ ಬೆಂಗಳೂರಿನದ್ದು. ಕ್ಯುಪಿಐ-ಎಐ ಮತ್ತು ಕ್ವಾಂಟಮ್ ಬಯೋಸೈನ್ಸಸ್‌ನಂತಹ ಸ್ಟಾರ್ಟ್‌ಅಪ್‌ಗಳು ಈ ದಿಕ್ಕಿನಲ್ಲಿ ಅತ್ಯುತ್ತಮ ಸಂಶೋಧನೆಗಳನ್ನು ನಡೆಸುತ್ತಿವೆ ಎಂದರು.

ಬೆಂಗಳೂರಿನಲ್ಲಿ ಕ್ವಾಂಟಮ್ ಸಿಟಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾರ್ಗದರ್ಶನದಲ್ಲಿ, ಸರ್ಕಾರವು ಬೆಂಗಳೂರಿನಲ್ಲಿ ಕ್ವಾಂಟಮ್ ಸಿಟಿ ನಿರ್ಮಿಸಲು ಯೋಜನೆ ರೂಪಿಸಿದೆ. ಇದು ಕೇವಲ ಒಂದು ನಗರವಲ್ಲ, ಆರೋಗ್ಯ ಸಂಶೋಧನೆಯ ಒಂದು ಹಬ್ ಆಗಿರಲಿದೆ. ಈ ಕ್ವಾಂಟಮ್ ಸಿಟಿಯಲ್ಲಿ ಆರೋಗ್ಯ ವಲಯಕ್ಕಾಗಿಯೇ ಮೀಸಲಾದ ಅತ್ಯಾಧುನಿಕ ಪ್ರಯೋಗಾಲಯಗಳು ಇರಲಿವೆ. ವಿಜ್ಞಾನಿಗಳು, ವೈದ್ಯರು, ಶಿಕ್ಷಣ ತಜ್ಞರು ಮತ್ತು ಖಾಸಗಿ ಆರೋಗ್ಯ ಸಂಸ್ಥೆಗಳು ಒಂದೇ ವೇದಿಕೆಯಲ್ಲಿ ಸೇರಿ ಸಂಶೋಧನೆ ನಡೆಸಲು ಇಲ್ಲಿ ಅವಕಾಶವಿರುತ್ತದೆ. ಈ ಜಾಗತಿಕ ಮಟ್ಟದ ಆರೋಗ್ಯ ಮತ್ತು ಸಂಶೋಧನಾ ವ್ಯವಸ್ಥೆಯನ್ನು ರೂಪಿಸಲು ಕೈಜೋಡಿಸಬೇಕು ಎಂದು ತಿಳಿಸಿದರು.

ಗ್ರಾಮೀಣ ಆರೋಗ್ಯ ಸೇವೆಗೆ ಆದ್ಯತೆ

ತಂತ್ರಜ್ಞಾನವು ಕೇವಲ ನಗರಗಳಿಗೆ ಸೀಮಿತವಾಗಬಾರದು ಎಂಬುದು ಸರ್ಕಾರದ ಸ್ಪಷ್ಟ ನಿಲುವು. ಗ್ರಾಮೀಣ ಭಾರತದ ಆರೋಗ್ಯ ಸವಾಲುಗಳನ್ನು ಪರಿಹರಿಸಲು ಸರ್ಕಾರ ಬದ್ಧವಾಗಿದೆ. ಕ್ಯಾನ್ಸರ್ ರೋಗಿಗಳಿಗೆ ತಕ್ಷಣದ ಚಿಕಿತ್ಸೆಗಾಗಿ ರಾಯಚೂರಿನಲ್ಲಿ ಪೆರಿಫೆರಲ್ ಕ್ಯಾನ್ಸರ್ ಸೆಂಟರ್ ಆರಂಭಿಸಿರುವ ವಿಶೇಷ ಕೇಂದ್ರ ಆರಂಭಿಸಲಾಗಿದೆ. ಅಪೌಷ್ಟಿಕತೆಯಂತಹ ಸಮಸ್ಯೆಯನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಲು ರಾಯಚೂರು ವಿಶ್ವವಿದ್ಯಾಲಯದಲ್ಲಿ ಅತ್ಯಾಧುನಿಕ ಜೀನೋಮ್ ಲ್ಯಾಬ್ ಸ್ಥಾಪಿಸಲಾಗಿದೆ. ಕಲ್ಯಾಣ ಕರ್ನಾಟಕದ ಆರೋಗ್ಯ ಚಿತ್ರಣವನ್ನೇ ಬದಲಿಸಬಲ್ಲ ಏಮ್ಸ್ ಆಸ್ಪತ್ರೆಯನ್ನು ಸ್ಥಾಪಿಸಲು ರಾಜ್ಯ ಸರ್ಕಾರ ಕೇಂದ್ರದೊಂದಿಗೆ ನಿರಂತರ ಸಂಪರ್ಕದಲ್ಲಿದೆ.

ಸರ್ಕಾರವೊಂದೇ ಆರೋಗ್ಯ ವಲಯದಲ್ಲಿ ಕ್ರಾಂತಿ ತರಲು ಸಾಧ್ಯವಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಅಪೌಷ್ಟಿಕತೆ, ಟಿಬಿ ಮತ್ತು ರಕ್ತಹೀನತೆಯಂತಹ ಸಮಸ್ಯೆಗಳನ್ನು ಹೋಗಲಾಡಿಸಲು ವೈದ್ಯಕೀಯ ಸಂಸ್ಥೆಗಳು, ಖಾಸಗಿ ವೈದ್ಯರು ಮತ್ತು ತಂತ್ರಜ್ಞಾನ ತಜ್ಞರು ತಮ್ಮ ವೃತ್ತಿಜೀವನದ ಒಂದು ಭಾಗವನ್ನು ಸಮಾಜ ಸೇವೆಗೆ ಮೀಸಲಿಡಬೇಕು ಎಂದು ತಿಳಿಸಿದರು.

Read More
Next Story