ತೆರಿಗೆ ಹಣದಲ್ಲೇ ಡಿಜಿಟಲ್ ಸೇವೆ ನಿರ್ವಹಣೆ; ಆಸ್ತಿ ತೆರಿಗೆ ಜತೆ ಸಾಫ್ಟ್ವೇರ್ ಶುಲ್ಕದ ಭಾರ
ಡಿಜಿಟಲ್ ಪೋರ್ಟಲ್ಗಳ ಸುಗಮ ನಿರ್ವಹಣೆ, ಸರ್ವರ್ ಸುರಕ್ಷತೆ, ಆನ್ಲೈನ್ ಡೇಟಾ ನವೀಕರಣ, ಕಾಗದರಹಿತ ವ್ಯವಸ್ಥೆಯ ಅಭಿವೃದ್ಧಿಗಾಗಿ ಈ ಬಳಕೆದಾರರ ಶುಲ್ಕ ವಿಧಿಸುವುದು ಅನಿವಾರ್ಯ ಎಂದು ಜಿಬಿಎ ಸಮರ್ಥಿಸಿಕೊಂಡಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಆಸ್ತಿ ತೆರಿಗೆಯೊಂದಿಗೆ ಹೊಸದಾಗಿ 'ಸಾಫ್ಟ್ವೇರ್ ಶುಲ್ಕ' ವಿಧಿಸಿರುವುದಕ್ಕೆ ಸಾರ್ವಜನಿಕರು ಹಾಗೂ ವಿಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಇದು ಸದ್ಯ ರಾಜಕೀಯ ವಲಯದಲ್ಲಿ ವಿವಾದಕ್ಕೆ ಕಾರಣವಾಗಿದೆ. ವಸತಿ ಕಟ್ಟಡಗಳಿಗೆ ವಾರ್ಷಿಕ 200 ರೂ. ಹಾಗೂ ವಾಣಿಜ್ಯ ಕಟ್ಟಡಗಳಿಗೆ ವಾರ್ಷಿಕ 1 ಸಾವಿರ ರೂ. ಸಾಫ್ಟ್ವೇರ್ ಶುಲ್ಕವನ್ನು ಆಸ್ತಿ ತೆರಿಗೆಯೊಂದಿಗೆ ಕಡ್ಡಾಯವಾಗಿ ಸಂಗ್ರಹಿಸಲಾಗುತ್ತಿದೆ.
ಡಿಜಿಟಲ್ ಪೋರ್ಟಲ್ಗಳ ಸುಗಮ ನಿರ್ವಹಣೆ, ಸರ್ವರ್ ಸುರಕ್ಷತೆ, ಆನ್ಲೈನ್ ಡೇಟಾ ನವೀಕರಣ, ಕಾಗದರಹಿತ ವ್ಯವಸ್ಥೆಯ ಅಭಿವೃದ್ಧಿಗಾಗಿ ಈ ಬಳಕೆದಾರರ ಶುಲ್ಕ ವಿಧಿಸುವುದು ಅನಿವಾರ್ಯ ಎಂದು ಜಿಬಿಎ ಸಮರ್ಥಿಸಿಕೊಂಡಿದೆ. ಬೆಂಗಳೂರಿನಲ್ಲಿರುವ ಅಂದಾಜು 17.5 ಲಕ್ಷ ವಸತಿ ಮತ್ತು 2.5 ಲಕ್ಷಕ್ಕೂ ಅಧಿಕ ವಾಣಿಜ್ಯ ಕಟ್ಟಡಗಳಿಂದ ಶುಲ್ಕದ ಮೂಲಕ ವಾರ್ಷಿಕ ಅಂದಾಜು 60 ಕೋಟಿ ರೂ. ಹೆಚ್ಚುವರಿ ಆದಾಯ ಸರ್ಕಾರದ ಖಜಾನೆ ಸೇರಲಿದೆ.
ತಂತ್ರಾಂಶ ನಿರ್ವಹಣೆಗೆ ಸಾರ್ವಜನಿಕರಿಂದ ಹಣ ವಸೂಲಿ ಮಾಡಲು ಯಾವುದೇ ಸ್ಪಷ್ಟ ಕಾನೂನು ಅಥವಾ ಅಧಿಕೃತ ನಿಯಮಗಳಿಲ್ಲ. ಉಚಿತ ಗ್ಯಾರೆಂಟಿ ಯೋಜನೆಗಳ ವೆಚ್ಚ ಭರಿಸಲು ಹಾಗೂ 'ಬ್ರ್ಯಾಂಡ್ ಬೆಂಗಳೂರು' ಹೆಸರಿನಲ್ಲಿ ನಾಗರಿಕರನ್ನು ಸುಲಿಗೆ ಮಾಡಲಾಗುತ್ತಿದೆ ಎಂದು ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ನಾಗರಿಕರು ಈಗಾಗಲೇ ಆಸ್ತಿ ತೆರಿಗೆಯ ಮೇಲೆ ಗ್ರಂಥಾಲಯ ಸೆಸ್ (ಶೇ. 6), ಆರೋಗ್ಯ ಸೆಸ್ (ಶೇ. 15), ಭಿಕ್ಷಾಟನೆ ಸೆಸ್ (ಶೇ. 3), ಮತ್ತು ಘನತ್ಯಾಜ್ಯ ನಿರ್ವಹಣೆ ಶುಲ್ಕದಂತಹ ವಿವಿಧ ತೆರಿಗೆಗಳ ಭಾರದಿಂದ ನಲುಗಿದ್ದಾರೆ. ಇದರ ಜೊತೆಗೆ ಯಾವುದೇ ಮುನ್ಸೂಚನೆ ಇಲ್ಲದೆ ಏಕಾಏಕಿ ಈ ಶುಲ್ಕ ಹೇರಿರುವುದು ಸರಿಯಲ್ಲ ಎಂಬುದು ಸಾರ್ವಜನಿಕರ ವಾದ.
ಡಿಜಿಟಲ್ ಮೂಲಸೌಕರ್ಯ ಬಲಪಡಿಸುವುದು ಆಡಳಿತಕ್ಕೆ ಅನಿವಾರ್ಯವಾದರೂ ಆನ್ಲೈನ್ ಮೂಲಕ ಸರ್ಕಾರದ ಕೆಲಸವನ್ನು ಸುಲಭಗೊಳಿಸುತ್ತಿರುವ ತೆರಿಗೆದಾರರ ಮೇಲೆಯೇ ತಂತ್ರಾಂಶ ನಿರ್ವಹಣೆಯ ಹೊರೆ ಹೊರಿಸುವುದು ಎಷ್ಟು ಸಮಂಜಸ ಎಂಬ ಪ್ರಶ್ನೆ ಈಗ ಗಂಭೀರವಾಗಿ ಮೂಡಿದೆ.

