ಜೈಲಿನಿಂದ ಎಲ್‌ಇಟಿ ಉಗ್ರನ ಅಪಹರಣಕ್ಕೆ ಸಂಚು; ಛೋಟಾ ಉಸ್ಮಾನ್‌ಗೆ ಏಳು ವರ್ಷ ಸಜೆ
x

ಎಐ ಆಧಾರಿತ ಚಿತ್ರ

ಜೈಲಿನಿಂದ ಎಲ್‌ಇಟಿ ಉಗ್ರನ ಅಪಹರಣಕ್ಕೆ ಸಂಚು; ಛೋಟಾ ಉಸ್ಮಾನ್‌ಗೆ ಏಳು ವರ್ಷ ಸಜೆ

ನೂರ್ ಕೊಲೆ ಪ್ರಕರಣದಲ್ಲಿ ಬಂಧಿತನಾಗಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ವಿಕ್ರಮ್ ಕುಮಾರ್, ಅಲ್ಲಿ ಬೆಂಗಳೂರು ಸರಣಿ ಸ್ಫೋಟದ ಪ್ರಮುಖ ಆರೋಪಿ ಟಿ. ನಾಸೀರ್ ಸಂಪರ್ಕಕ್ಕೆ ಬಂದಿದ್ದ.


Click the Play button to hear this message in audio format

ಲಷ್ಕರ್‌ ಎ ತಯ್ಬಾ ಉಗ್ರ ಹಾಗೂ ಬೆಂಗಳೂರು ಸರಣಿ ಸ್ಫೋಟದ ಮಾಸ್ಟರ್ ಮೈಂಡ್ ಟಿ. ನಾಸೀರ್‌ನನ್ನು ಜೈಲಿನಿಂದ ಬಿಡಿಸಿಕೊಳ್ಳಲು ಸಂಚು ರೂಪಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ನ್ಯಾಯಾಲಯವು ಶನಿವಾರ ಮಹತ್ವದ ತೀರ್ಪು ನೀಡಿದೆ.

ಪ್ರಕರಣದ 9ನೇ ಆರೋಪಿ ವಿಕ್ರಮ್ ಕುಮಾರ್ ಅಲಿಯಾಸ್ ಚೋಟಾ ಉಸ್ಮಾನ್‌ಗೆ ಎನ್ಐಎ ವಿಶೇಷ ನ್ಯಾಯಾಲಯವು 7 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶಿಸಿದೆ. ತನ್ನ ವಿರುದ್ಧದ ದೇಶದ್ರೋಹ ಹಾಗೂ ಭಯೋತ್ಪಾದನಾ ಚಟುವಟಿಕೆಗಳ ಆರೋಪಗಳನ್ನು ಆರೋಪಿ ವಿಕ್ರಮ್ ಕುಮಾರ್ ನ್ಯಾಯಾಲಯದ ಮುಂದೆ ಒಪ್ಪಿಕೊಂಡ ಹಿನ್ನೆಲೆ ಈ ಶಿಕ್ಷೆ ಪ್ರಕಟಿಸಲಾಗಿದೆ.

ಚೋಟಾ ಉಸ್ಮಾನ್ ಆಗಿದ್ದ ವಿಕ್ರಮ್

ನೂರ್ ಕೊಲೆ ಪ್ರಕರಣದಲ್ಲಿ ಬಂಧಿತನಾಗಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ವಿಕ್ರಮ್ ಕುಮಾರ್, ಅಲ್ಲಿ ಬೆಂಗಳೂರು ಸರಣಿ ಸ್ಫೋಟದ ಪ್ರಮುಖ ಆರೋಪಿ ಟಿ. ನಾಸೀರ್ ಸಂಪರ್ಕಕ್ಕೆ ಬಂದಿದ್ದ. ಜೈಲಿನಲ್ಲೇ ನಾಸೀರ್‌ನ ತೀವ್ರಗಾಮಿ ವಿಚಾರಧಾರೆಗಳಿಗೆ ಮಾರುಹೋಗಿದ್ದ ವಿಕ್ರಮ್, ಆತನ ಪ್ರಭಾವಕ್ಕೊಳಗಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದ. ಅಲ್ಲದೆ ತನ್ನ ಹೆಸರನ್ನು 'ಚೋಟಾ ಉಸ್ಮಾನ್' ಎಂದು ಬದಲಾಯಿಸಿಕೊಂಡಿದ್ದ.

ಜೈಲಿನಿಂದ ಬಿಡುಗಡೆಯಾದ ನಂತರವೂ ಈತ ಸುಮ್ಮನಿರದೆ, ನಾಸೀರ್ ಹಾಗೂ ಆತನ ಇತರ ದೇಶವಿರೋಧಿ ಸಂಘಟನೆಗಳ ಸದಸ್ಯರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದ ಎಂಬುದು ಎನ್ಐಎ ತನಿಖೆಯಿಂದ ಬಯಲಾಗಿತ್ತು.

ಗುಂಡಿನ ದಾಳಿ ಮಾಡಿ ಉಗ್ರನ ಅಪಹರಣಕ್ಕೆ ಸ್ಕೆಚ್

ಜೈಲಿನಿಂದ ಹೊರಬಂದ ವಿಕ್ರಮ್ ಕುಮಾರ್ ಅಲಿಯಾಸ್ ಚೋಟಾ ಉಸ್ಮಾನ್, ಟಿ. ನಾಸೀರ್ ಸೂಚನೆಯಂತೆ ಇತರ ಆರೋಪಿಗಳಾದ ಜುನೈದ್ ಅಹ್ಮದ್ ಮತ್ತು ಸಲ್ಮಾನ್ ಖಾನ್ ಜೊತೆ ಕೈಜೋಡಿಸಿದ್ದ. ನಾಸೀರ್‌ನನ್ನು ಜೈಲಿನಿಂದ ಬಿಡಿಸಿಕೊಳ್ಳಲು ಈ ಗ್ಯಾಂಗ್ ಸಿನಿಮೀಯ ಮಾದರಿಯ ಆಘಾತಕಾರಿ ಸಂಚು ರೂಪಿಸಿತ್ತು.

ಉಗ್ರ ಟಿ. ನಾಸೀರ್‌ನನ್ನು ನ್ಯಾಯಾಲಯದ ವಿಚಾರಣೆಗೆ ಅಥವಾ ವೈದ್ಯಕೀಯ ತಪಾಸಣೆಗೆ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಪೊಲೀಸ್ ವಾಹನವನ್ನು ಅಡ್ಡಗಟ್ಟುವುದು ಉಗ್ರರ ಯೋಜನೆಯಾಗಿತ್ತು. ವಾಹನದ ಮೇಲೆ ಗ್ರೆನೇಡ್ ಎಸೆದು, ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸರನ್ನು ಬರ್ಬರವಾಗಿ ಹತ್ಯೆ ಮಾಡಿ ನಾಸೀರ್ನನ್ನು ಅಪಹರಿಸಲು ಸಂಚು ರೂಪಿಸಲಾಗಿತ್ತು. ಈ ವಿಧ್ವಂಸಕ ಕೃತ್ಯಕ್ಕಾಗಿ ಹರಿಯಾಣದ ಅಂಬಾಲಾದಿಂದ ಅತ್ಯಂತ ಅಪಾಯಕಾರಿ ಗ್ರೆನೇಡ್‌ಗಳನ್ನು ತರಿಸಿಕೊಳ್ಳಲಾಗಿತ್ತು. ಕೇವಲ ಗ್ರೆನೇಡ್ ಅಷ್ಟೇ ಅಲ್ಲದೆ, ದಾಳಿಗೆ ಬಳಸಲು ಮಾರಕಾಸ್ತ್ರಗಳು ಮತ್ತು ವಾಹನಗಳ ವ್ಯವಸ್ಥೆಯನ್ನೂ ಮಾಡಿಕೊಂಡಿತ್ತು.

ಸಂಚು ಭೇದಿಸಿದ ಎನ್ಐಎ

ಉಗ್ರರ ಈ ಸಂಚು ಕಾರ್ಯರೂಪಕ್ಕೆ ಬರುವ ಮೊದಲೇ ಎನ್ಐಎ ಅಧಿಕಾರಿಗಳು ದಾಳಿ ನಡೆಸಿ ಇಡೀ ಜಾಲವನ್ನು ಭೇದಿಸಿದ್ದರು. ಆರೋಪಿಗಳ ಅಡಗುದಾಣಗಳ ಮೇಲೆ ದಾಳಿ ಮಾಡಿ ಗ್ರೆನೇಡ್‌ಗಳು ಹಾಗೂ ಇತರ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಎನ್ಐಎ ವಿಶೇಷ ನ್ಯಾಯಾಲಯವು, ಆರೋಪಿಯು ತನ್ನ ತಪ್ಪನ್ನು ಒಪ್ಪಿಕೊಂಡ ಹಿನ್ನೆಲೆಯಲ್ಲಿ 7 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ.

‌ಇತ್ತೀಚೆಗಷ್ಟೇ ಮಂಗಳೂರಿನ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ವಿಶೇಷ ನ್ಯಾಯಾಲಯವು ಅಪರಾಧಿ ಮಹಮ್ಮದ್ ಶಾರಿಕ್‌ಗೆ 10 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.

Read More
Next Story