ಐಡಿ ಇಲ್ಲದಿದ್ದರೆ ಪ್ರವೇಶವಿಲ್ಲ: ಅಪ್ರಾಪ್ತರ ಮದ್ಯಪಾನ ತಡೆಗೆ ನಿಯಮ ಜಾರಿ
x

'ಐಡಿ ಇಲ್ಲದಿದ್ದರೆ ಪ್ರವೇಶವಿಲ್ಲ': ಅಪ್ರಾಪ್ತರ ಮದ್ಯಪಾನ ತಡೆಗೆ ನಿಯಮ ಜಾರಿ

ಬೆಂಗಳೂರು ನಗರದ ಪಬ್‌ಗಳು, ಬಾರ್‌ಗಳು ಮತ್ತು ಮದ್ಯ ಸರಬರಾಜು ಮಾಡುವ ಎಲ್ಲಾ ವಾಣಿಜ್ಯ ಸಂಸ್ಥೆಗಳ ಮೇಲೆ ಕಠಿಣ ನಿಗಾ ವಹಿಸಲು ಪೊಲೀಸ್ ಇಲಾಖೆಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸೂಚನೆ ನೀಡಿದ್ದಾರೆ.


Click the Play button to hear this message in audio format

ದೇಶದ ಐಟಿ ರಾಜಧಾನಿ, ಸ್ಟಾರ್ಟಪ್‌ಗಳ ತವರೂರು ಮತ್ತು ಶಿಕ್ಷಣದ ಕೇಂದ್ರವಾಗಿರುವ ಬೆಂಗಳೂರು, ಇಂದು ಒಂದು ಗಂಭೀರ ಸಾಮಾಜಿಕ ಪಿಡುಗಿನತ್ತ ಮುಖ ಮಾಡಿದೆ. ಹದಿಹರೆಯದವರಲ್ಲಿ ಹೆಚ್ಚುತ್ತಿರುವ ಮದ್ಯಪಾನ ಮತ್ತು ಮಾದಕ ದ್ರವ್ಯಗಳ ಅತಿಯಾದ ಬಳಕೆಯು ಸರ್ಕಾರಕ್ಕೆ ದೊಡ್ಡ ಆತಂಕವನ್ನುಂಟುಮಾಡಿದೆ. ಈ ಹಿನ್ನೆಲೆಯಲ್ಲಿ, ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು, ನಗರದ ಪಬ್‌ಗಳು, ಬಾರ್‌ಗಳು ಮತ್ತು ಮದ್ಯ ಸರಬರಾಜು ಮಾಡುವ ಎಲ್ಲಾ ವಾಣಿಜ್ಯ ಸಂಸ್ಥೆಗಳ ಮೇಲೆ ಕಠಿಣ ನಿಗಾ ವಹಿಸಲು ಪೊಲೀಸ್ ಇಲಾಖೆಗೆ ಸ್ಪಷ್ಟ ಸೂಚನೆ ನೀಡಿದ್ದಾರೆ.

ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜು, ಕ್ರೈಸ್ಟ್ ವಿಶ್ವವಿದ್ಯಾಲಯ ಮತ್ತು ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಸಂಶೋಧಕರು ನಡೆಸಿದ ದೀರ್ಘಕಾಲೀನ ಅಧ್ಯಯನದಿಂದಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಬೆಂಗಳೂರಿನ 4,093 ವಿದ್ಯಾರ್ಥಿಗಳ ಮೇಲೆ ನಡೆಸಿದ ಈ ಸಂಶೋಧನೆಯು ಹಲವು ಸತ್ಯಗಳನ್ನು ಹೊರಹಾಕಿದೆ. ಸಮೀಕ್ಷೆಗೆ ಒಳಪಟ್ಟ ಯುವಕರಲ್ಲಿ ಶೇ. 33 ರಷ್ಟು ಮಂದಿ ಮದ್ಯವ್ಯಸನಿಗಳಾಗಿದ್ದಾರೆ. ಇನ್ನು ಶೇ. 18 ರಷ್ಟು ಮಂದಿ ತಂಬಾಕು ಚಟಕ್ಕೆ ಬಲಿಯಾಗಿದ್ದಾರೆ. ತಂಬಾಕು ಬಳಕೆಯ ರಾಷ್ಟ್ರೀಯ ಸರಾಸರಿ ಶೇ. 8.7 ಹಾಗೂ ಮದ್ಯಪಾನದ ರಾಷ್ಟ್ರೀಯ ಸರಾಸರಿ ಶೇ. 7.9 ಆಗಿದ್ದರೆ, ಬೆಂಗಳೂರಿನ ವಿದ್ಯಾರ್ಥಿಗಳ ನಡುವೆ ಈ ಪ್ರಮಾಣ ದ್ವಿಗುಣಕ್ಕಿಂತ ಹೆಚ್ಚಿದೆ. ಮದ್ಯಪಾನ ಆರಂಭಿಸುವ ಸರಾಸರಿ ವಯಸ್ಸು 17 ವರ್ಷ ಎಂದು ವರದಿಯಾದರೂ, ಕೆಲವರು ಕೇವಲ 8 ವರ್ಷ ವಯಸ್ಸಿನಲ್ಲೇ ಮದ್ಯಪಾನದ ಹವ್ಯಾಸವನ್ನು ಆರಂಭಿಸಿದ್ದಾರೆ ಎಂಬುದು ಸಮಾಜದ ಕಳವಳಕಾರಿ ಮುಖವನ್ನು ಅನಾವರಣಗೊಳಿಸಿದೆ.

'ಶೂನ್ಯ ಸಹಿಷ್ಣುತೆ' ನೀತಿ

ಈ ವರದಿಯನ್ನು ಗಂಭೀರವಾಗಿ ಪರಿಗಣಿಸಿರುವ ಸಚಿವ ಪ್ರಿಯಾಂಕ್ ಖರ್ಗೆ, ನಮ್ಮ ಮಕ್ಕಳ ಭವಿಷ್ಯವು ಯಾವುದೇ ಸಂಸ್ಥೆಯ ಲಾಭಕ್ಕಿಂತ ದೊಡ್ಡದು. ಅಪ್ರಾಪ್ತ ವಯಸ್ಕರಿಗೆ ಮದ್ಯ ಸರಬರಾಜು ಮಾಡುವುದು ಕೇವಲ ಪರವಾನಗಿ ನಿಯಮದ ಉಲ್ಲಂಘನೆಯಲ್ಲ, ಅದೊಂದು ಸಾಮಾಜಿಕ ಅಪರಾಧ ಎಂದು ಖಡಕ್ಕಾಗಿ ನುಡಿದಿದ್ದಾರೆ. ಈ ಪಿಡುಗನ್ನು ನಿಯಂತ್ರಿಸಲು ಸರ್ಕಾರವು ಶೂನ್ಯ ಸಹಿಷ್ಣುತೆ ನೀತಿಯನ್ನು ಅಳವಡಿಸಿಕೊಳ್ಳಲಿದ್ದು, ಯಾವುದೇ ರೀತಿಯ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

ಆರು ಅಂಶಗಳ ನಿರ್ದೇಶನ

ಪೊಲೀಸ್ ಇಲಾಖೆಯ ಮೂಲಕ ಎಲ್ಲಾ ಪಬ್, ಬಾರ್, ಕ್ಲಬ್ ಮತ್ತು ರೆಸ್ಟೋರೆಂಟ್‌ಗಳಿಗೆ ಆರು ಅಂಶಗಳ ನಿರ್ದೇಶನವನ್ನು ಕಡ್ಡಾಯಗೊಳಿಸಲಾಗಿದೆ. ಯಾವುದೇ ವ್ಯಕ್ತಿ, ವಿಶೇಷವಾಗಿ ಯುವಕರು ಪಬ್‌ ಅಥವಾ ಬಾರ್‌ ಪ್ರವೇಶಿಸುವಾಗ ಸರ್ಕಾರದಿಂದ ನೀಡಲ್ಪಟ್ಟ ಅಧಿಕೃತ ಗುರುತಿನ ಚೀಟಿಯನ್ನು (ಆಧಾರ್, ಡ್ರೈವಿಂಗ್ ಲೈಸೆನ್ಸ್, ಇತ್ಯಾದಿ) ತೋರಿಸುವುದು ಕಡ್ಡಾಯ. ವಯಸ್ಸಿನ ದೃಢೀಕರಣವಿಲ್ಲದವರಿಗೆ ಯಾವುದೇ ಕಾರಣಕ್ಕೂ ಒಳಗೆ ಪ್ರವೇಶ ನೀಡಬಾರದು. ಪ್ರವೇಶ ದ್ವಾರದಲ್ಲಿ ಮಾತ್ರವಲ್ಲದೆ, ಮದ್ಯದ ಆರ್ಡರ್ ನೀಡುವ ಸಂದರ್ಭದಲ್ಲಿಯೂ ಸಿಬ್ಬಂದಿ ವಯಸ್ಸಿನ ಪರಿಶೀಲನೆ ನಡೆಸಬೇಕು. ಇದು ಕೇವಲ ಔಪಚಾರಿಕತೆಯಲ್ಲ, ಕಾನೂನುಬದ್ಧ ಬಾಧ್ಯತೆ ಎಂದು ಘೋಷಿಸಲಾಗಿದೆ. ಯಾವುದೇ ಪಬ್ ಅಥವಾ ಕ್ಲಬ್‌ನಲ್ಲಿ ಅಪ್ರಾಪ್ತರಿಗೆ ಮದ್ಯ ದೊರೆತರೆ, ಅದಕ್ಕೆ ನೇರವಾಗಿ ಆಯಾ ಸಂಸ್ಥೆಯ ಮಾಲೀಕರು, ವ್ಯವಸ್ಥಾಪಕರು (ಮ್ಯಾನೇಜರ್‌ಗಳು) ಮತ್ತು ಲೈಸೆನ್ಸ್‌ದಾರರು ಹೊಣೆಗಾರರಾಗಿರುತ್ತಾರೆ. ನಿಯಮ ಉಲ್ಲಂಘಿಸಿದರೆ ಪರವಾನಗಿ ರದ್ದುಪಡಿಸುವುದು ಸೇರಿದಂತೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಎಲ್ಲಾ ಸಂಸ್ಥೆಗಳ ಪ್ರವೇಶ ದ್ವಾರಗಳಲ್ಲಿ ಹೈ-ಡೆಫಿನಿಷನ್ ಸಿಸಿಟಿವಿ ಕ್ಯಾಮೆರಾಗಳು ಇರಬೇಕು. ಈ ದೃಶ್ಯಾವಳಿಗಳನ್ನು ತನಿಖಾಧಿಕಾರಿಗಳು ಕೇಳಿದಾಗ ತಕ್ಷಣವೇ ಸಲ್ಲಿಸುವಂತೆ ವ್ಯವಸ್ಥೆ ಮಾಡಬೇಕು. ಕ್ಯಾಮೆರಾ ಕೆಲಸ ಮಾಡದಿದ್ದರೆ ಅದನ್ನು ನಿಯಮ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ. ಅಪ್ರಾಪ್ತರಿಗೆ ಮದ್ಯ ಸೇವಿಸಲು ಪ್ರಚೋದಿಸುವ ಯಾವುದೇ ಚಟುವಟಿಕೆಗಳು ಸಂಸ್ಥೆಯ ಆವರಣದಲ್ಲಿ ನಡೆಯಬಾರದು. ತಪ್ಪು ಮಾಡಿದರೆ ಅಬಕಾರಿ ಕಾಯ್ದೆ ಮತ್ತು ಐಪಿಸಿ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗುವುದು. ಪೊಲೀಸರು ಕೇವಲ ದಾಳಿಗಳಿಗೆ ಸೀಮಿತವಾಗದೆ, ಶಿಕ್ಷಣ ಸಂಸ್ಥೆಗಳು, ಪೋಷಕರು ಮತ್ತು ಆರ್‌ಡಬ್ಲ್ಯುಎಗಳೊಂದಿಗೆ ಕೈಜೋಡಿಸಿ ಜಾಗೃತಿ ಮೂಡಿಸಲಿದ್ದಾರೆ.

ಈ ಪಿಡುಗನ್ನು ನಿಯಂತ್ರಿಸಲು ಸರ್ಕಾರ ಮಾತ್ರವಲ್ಲದೆ, ಪೋಷಕರು ಮತ್ತು ಶಿಕ್ಷಕರೂ ಎಚ್ಚೆತ್ತುಕೊಳ್ಳಬೇಕು ಎಂದು ಸಚಿವರು ಕರೆ ನೀಡಿದ್ದಾರೆ. ಮನೆಯಲ್ಲಿ ಮಕ್ಕಳು ಯಾರೊಂದಿಗೆ ಬೆರೆಯುತ್ತಿದ್ದಾರೆ, ಅವರ ನಡವಳಿಕೆ ಹೇಗಿದೆ ಎಂಬುದನ್ನು ಗಮನಿಸುವುದು ಪೋಷಕರ ಜವಾಬ್ದಾರಿ. ಅದೇ ರೀತಿ, ಶಿಕ್ಷಣ ಸಂಸ್ಥೆಗಳ ಸುತ್ತಮುತ್ತ ಯಾವುದೇ ಅನೈತಿಕ ಚಟುವಟಿಕೆಗಳು ನಡೆದರೆ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡುವಂತೆ ನಾಗರಿಕರಿಗೆ ಮನವಿ ಮಾಡಲಾಗಿದೆ. ಬೆಂಗಳೂರು ಇಡೀ ಪ್ರಪಂಚಕ್ಕೆ ಮಾದರಿಯಾಗಬೇಕಾದ ನಗರ. ಅಂತಹ ನಗರದಲ್ಲಿ ಯುವಪೀಳಿಗೆ ಮದ್ಯ ಮತ್ತು ಮಾದಕ ದ್ರವ್ಯಗಳಿಗೆ ದಾಸರಾಗುತ್ತಿರುವುದು ಭವಿಷ್ಯದ ದೃಷ್ಟಿಯಿಂದ ಅಪಾಯಕಾರಿ.

Read More
Next Story