
ಟೌನ್ ಹಾಲ್‌ನಲ್ಲಿ ಸಿಜೆಪಿ ಪ್ರತಿಭಟನೆಗೆ ಬ್ರೇಕ್; ಅನುಮತಿ ಇಲ್ಲ ಎಂದ ಪೊಲೀಸ್ ಇಲಾಖೆ
ಬೆಂಗಳೂರು ಪೊಲೀಸರು, ಇಂತಹ ಯಾವುದೇ ಪ್ರತಿಭಟನೆಗೆ ಅನುಮತಿ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಸಂಬಂಧ ಯಾವುದೇ ಆಯೋಜಕರು ಪೊಲೀಸ್ ಇಲಾಖೆಯಿಂದ ಪೂರ್ವಾನುಮತಿ ಪಡೆದಿಲ್ಲ ಎಂದು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿರುವ 'ಕಾಕ್ರೋಚ್ ಜನತಾ ಪಾರ್ಟಿ'ಯ ಕರ್ನಾಟಕ ಘಟಕವು ಕರೆ ನೀಡಿದ್ದ "ಮಾನವ ಸರಪಳಿ ಪ್ರತಿಭಟನೆ"ಗೆ ಬೆಂಗಳೂರು ನಗರ ಪೊಲೀಸರು ಬ್ರೇಕ್ ಹಾಕಿದ್ದಾರೆ. ಸಾರ್ವಜನಿಕ ಪ್ರಕಟಣೆ ಹೊರಡಿಸಿರುವ ಪೊಲೀಸರು, ಸಾರ್ವಜನಿಕರು ಈ ಪ್ರತಿಭಟನೆಯಲ್ಲಿ ಭಾಗವಹಿಸಬಾರದು. ಇದಕ್ಕೆ ಸಂಬಂಧಿಸಿದ ಸಂದೇಶಗಳನ್ನು ಹಂಚಿಕೊಳ್ಳದಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.
ಕಾಕ್ರೋಚ್ ಜನತಾ ಪಾರ್ಟಿ ಕರ್ನಾಟಕ ಘಟಕದ ಹೆಸರಿನಲ್ಲಿ ಭಾನುವಾರ (ಮೇ 24) ಬೆಂಗಳೂರಿನ ಟೌನ್ ಹಾಲ್ ಬಳಿ ಶಾಂತಿಯುತ ಮಾನವ ಸರಪಳಿ ಪ್ರತಿಭಟನೆಗೆ ಕರೆ ನೀಡಿ ಬಿಡುಗಡೆ ಮಾಡಿದ್ದ ಪೋಸ್ಟರ್ಗಳು ಜಾಲತಾಣಗಳಲ್ಲಿ ಹರಿದಾಡುತ್ತಿದ್ದವು. "ಎಲ್ಲಾ ಜಿರಳೆಗಳು ಅಥವಾ ಕಾಕ್ರೋಚ್ ಜನತಾ ಪಾರ್ಟಿಯ ಅಭಿಮಾನಿಗಳು ಒಂದೆಡೆ ಸೇರಿ, ನಮ್ಮ ಶಕ್ತಿಯನ್ನು ಪ್ರದರ್ಶಿಸುವ ಮೂಲಕ ಭ್ರಮೆಯಲ್ಲಿರುವ ಆಡಳಿತ ವ್ಯವಸ್ಥೆಗೆ ಸೂಕ್ತ ಸಂದೇಶ ರವಾನಿಸಬೇಕು" ಎಂದು ಪೋಸ್ಟರ್ನಲ್ಲಿ ಕರೆ ನೀಡಲಾಗಿತ್ತು.
"ಕೇವಲ ಆನ್ಲೈನ್ನಲ್ಲಿ ಮಾತ್ರವಲ್ಲ, ಈಗ ಬೀದಿಗೆ ಇಳಿದು ಶಕ್ತಿ ಪ್ರದರ್ಶಿಸುವ ಸಮಯ ಬಂದಿದೆ" ಎಂಬ ಅಡಿಬರಹದೊಂದಿಗೆ ಸಿದ್ಧಪಡಿಸಿದ್ದ ಈ ಪೋಸ್ಟರ್ನಲ್ಲಿ, ಜಿರಳೆಗಳು ಕೈಯಲ್ಲಿ "ನಮ್ಮ ಹಕ್ಕು" ಎಂಬ ಫಲಕಗಳನ್ನು ಹಿಡಿದು ವಿಧಾನಸೌಧದ ಕಡೆಗೆ ಮೆರವಣಿಗೆ ಹೊರಟಿರುವಂತೆ ಚಿತ್ರಿಸಲಾಗಿತ್ತು. ಅಲ್ಲದೆ, "ಇಲ್ಲಿ ಯಾವುದೇ ನಾಯಕರಿಲ್ಲ; ನಾವೇ ನಾಯಕರು. ಇಲ್ಲಿ ಯಾವುದೇ ಸಂಘಟನೆಯೂ ಇಲ್ಲ; ಕೈಜೋಡಿಸುವ ಜನರೇ ಇಲ್ಲಿ ಸಂಘಟನೆ" ಎಂದು ಸಂದೇಶ ಸಾರಲಾಗಿತ್ತು.
ಅನುಮತಿ ನಿರಾಕರಣೆ
ಈ ಬೆಳವಣಿಗೆಗೆ ತಕ್ಷಣ ಪ್ರತಿಕ್ರಿಯಿಸಿರುವ ಬೆಂಗಳೂರು ಪೊಲೀಸರು, ಇಂತಹ ಯಾವುದೇ ಪ್ರತಿಭಟನೆಗೆ ಅನುಮತಿ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಈ ಸಂಬಂಧ ಯಾವುದೇ ಆಯೋಜಕರು ಪೊಲೀಸ್ ಇಲಾಖೆಯಿಂದಾಗಲಿ ಅಥವಾ ಬೃಹತ್ ಬೆಂಗಳೂರು ಪ್ರಾಧಿಕಾರದಿಂದಾಗಲಿ ಪೂರ್ವಾನುಮತಿ ಪಡೆದಿಲ್ಲ ಎಂದು ತಿಳಿಸಿದ್ದಾರೆ.
ಕರ್ನಾಟಕ ಹೈಕೋರ್ಟ್ ಆದೇಶದನ್ವಯ ನಗರದಲ್ಲಿ ಯಾವುದೇ ಪ್ರತಿಭಟನೆ, ರ್ಯಾಲಿ ಅಥವಾ ಧರಣಿಗಳನ್ನು ಕೇವಲ 'ಫ್ರೀಡಂ ಪಾರ್ಕ್'ನಲ್ಲಿ ಮಾತ್ರ ನಡೆಸಲು ಅವಕಾಶವಿದೆ. ಟೌನ್ ಹಾಲ್ನಂತಹ ಸಾರ್ವಜನಿಕ ಸ್ಥಳಗಳಲ್ಲಿ ಇವುಗಳಿಗೆ ನಿರ್ಬಂಧವಿದೆ ಎಂದು ಪೊಲೀಸರು ಹೇಳಿದ್ದಾರೆ.
"ಸಾರ್ವಜನಿಕರು ಫೇಸ್ಬುಕ್, ವಾಟ್ಸ್‌ಆಪ್, ಇನ್ಸ್ಟಾಗ್ರಾಮ್, ಎಕ್ಸ್ (ಟ್ವಿಟರ್) ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಈ ಪ್ರತಿಭಟನೆಗೆ ಸಂಬಂಧಿಸಿದ ಸಂದೇಶಗಳನ್ನು ಫಾರ್ವರ್ಡ್ ಮಾಡಬಾರದು. ಟೌನ್ ಹಾಲ್ ಬಳಿ ಜಮಾಯಿಸಬಾರದು" ಎಂದು ಬೆಂಗಳೂರು ನಗರ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
'ಜಿರಳೆಗಳು' ಪ್ರತಿಭಟಿಸುತ್ತಿರುವುದು ಏಕೆ?
ಮೇ 16 ರಂದು ಆನ್ಲೈನ್ನಲ್ಲಿ ಪ್ರತ್ಯಕ್ಷವಾದ 'ಕಾಕ್ರೋಚ್ ಜನತಾ ಪಾರ್ಟಿ' ಕೇವಲ ಕೆಲವೇ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಬಿರುಗಾಳಿ ಎಬ್ಬಿಸಿದೆ. ಈ ವ್ಯಂಗ್ಯಭರಿತ ಚಳವಳಿಯನ್ನು ಆಮ್ ಆದ್ಮಿ ಪಕ್ಷದ (ಎಎಪಿ) ಮಾಜಿ ರಾಜಕೀಯ ತಂತ್ರಜ್ಞ ಅಭಿಜಿತ್ ದಿಪ್ಕೆ ಎಂಬುವವರು ಆರಂಭಿಸಿದ್ದರು. ಈ ಗುಂಪು ಈಗಾಗಲೇ ತನ್ನದೇ ಆದ ಪ್ರಣಾಳಿಕೆ ಮತ್ತು ವೆಬ್ಸೈಟ್ ಬಿಡುಗಡೆ ಮಾಡಿದೆ.
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ದೇಶದ ನಿರುದ್ಯೋಗಿ ಯುವಕರನ್ನು "ಜಿರಳೆಗಳು" ಎಂಬ ವಿವಾದಾತ್ಮಕ ಹೇಳಿಕೆ ಬಳಿಕ ಈ ಚಳುವಳಿ ಆರಂಭವಾಗಿದೆ. ನಂತರ ಮುಖ್ಯ ನ್ಯಾಯಮೂರ್ತಿಗಳು ತಮ್ಮ ಹೇಳಿಕೆಯನ್ನು ಮಾಧ್ಯಮಗಳ ಒಂದು ವರ್ಗವು ತಪ್ಪಾಗಿ ಅರ್ಥೈಸಿದೆ ಎಂದು ಸ್ಪಷ್ಟನೆ ನೀಡಿದ್ದರು.
ಆದಾಗ್ಯೂ, ಕಠಿಣ ಪರಿಸ್ಥಿತಿಯಲ್ಲೂ ಬದುಕುಳಿಯುವ ಮತ್ತು ಪ್ರತಿರೋಧದ ಸಂಕೇತವಾಗಿರುವ 'ಜಿರಳೆ'ಯನ್ನು ಮುಂದಿಟ್ಟುಕೊಂಡು ಆರಂಭವಾದ ಈ ಇಂಟರ್ನೆಟ್ ಆಧಾರಿತ ವಿಡಂಬನಾತ್ಮಕ ಚಳವಳಿ ಕೆಲವೇ ದಿನಗಳಲ್ಲಿ ಲಕ್ಷಾಂತರ ಜನರನ್ನು ಆಕರ್ಷಿಸಿದೆ.
ಪಾಕಿಸ್ತಾನಕ್ಕೂ ಹರಡಿದ 'ಜಿರಳೆ' ಜ್ವರ!
ಭಾರತದಲ್ಲಿ ವೈರಲ್ ಆಗಿರುವ ಈ ಆನ್ಲೈನ್ ಚಳವಳಿ ಈಗ ಗಡಿ ದಾಟಿ ಪಾಕಿಸ್ತಾನಕ್ಕೂ ತಲುಪಿದೆ. ಭಾರತದ ಸಿಜೆಪಿ ಲೋಗೋ ಮತ್ತು ಪರಿಕಲ್ಪನೆಯನ್ನು ಹೋಲುವ ಹಲವು ಪೆರೋಡಿ ಖಾತೆಗಳು ಪಾಕಿಸ್ತಾನದಲ್ಲಿ ತಲೆ ಎತ್ತಿವೆ. "ಕಾಕೂರೋಚ್ ಅವಾಮಿ ಪಾರ್ಟಿ", "ಕಾಕೂರೋಚ್ ಅವಾಮಿ ಲೀಗ್" ಮತ್ತು "ಮುತ್ತಹಿದಾ ಕಾಕೂರೋಚ್ ಮೂವ್ಮೆಂಟ್" ಎಂಬ ಹೆಸರಿನಲ್ಲಿ ಜಾಲತಾಣಗಳಲ್ಲಿ ಸದ್ದು ಮಾಡುತ್ತಿವೆ. ಆದರೆ ಭಾರತಕ್ಕೆ ಹೋಲಿಸಿದರೆ, ಪಾಕಿಸ್ತಾನದಲ್ಲಿ ಈ ಚಳುವಳಿ ಹೆಚ್ಚು ವಿಕೇಂದ್ರೀಕೃತವಾಗಿದ್ದು, ಹಲವು ಸ್ವತಂತ್ರ ಕಂಟೆಂಟ್ ಕ್ರಿಯೇಟರ್ಗಳು ತಮ್ಮದೇ ಆದ ಪ್ರತ್ಯೇಕ ಆವೃತ್ತಿಗಳನ್ನು ನಡೆಸುತ್ತಿದ್ದಾರೆ.
ಇದೇ ವೇಳೆ, ಭಾರತದಲ್ಲಿ ಮೂಲ ಸಿಜೆಪಿ ನ ಎಕ್ಸ್ ಖಾತೆಯನ್ನು ಈ ವಾರದ ಆರಂಭದಲ್ಲಿ ಅಮಾನತುಗೊಳಿಸಲಾಗಿದ್ದು, ಇದರ ಬೆನ್ನಲ್ಲೇ "ಕಾಕ್ರೋಚ್ ಈಸ್ ಬ್ಯಾಕ್" (ಜಿರಳೆ ಮರಳಿದೆ) ಎಂಬ ಹೊಸ ಖಾತೆಯು "ಜಿರಳೆಗಳು ಎಂದಿಗೂ ಸಾಯುವುದಿಲ್ಲ" ಎಂಬ ಘೋಷಣೆಯೊಂದಿಗೆ ಪ್ರತ್ಯಕ್ಷವಾಗಿದೆ.

