ಬೆಂಗಳೂರಿನಲ್ಲಿ ಪ್ರತ್ಯೇಕ ಪಾರ್ಕಿಂಗ್ ನೀತಿ: ಕರಡು ಅಧಿಸೂಚನೆ ಪ್ರಕಟಿಸಿದ ಜಿಬಿಎ
x

ಬೆಂಗಳೂರಿನಲ್ಲಿ ಪ್ರತ್ಯೇಕ ಪಾರ್ಕಿಂಗ್ ನೀತಿ: ಕರಡು ಅಧಿಸೂಚನೆ ಪ್ರಕಟಿಸಿದ ಜಿಬಿಎ

ಕೇವಲ ಪಾರ್ಕಿಂಗ್ ಜಾಗ ಸೃಷ್ಟಿಸುವುದು ಅಷ್ಟೇ ಅಲ್ಲದೆ, ರಸ್ತೆ ಸಂಚಾರ ಮುಕ್ತಗೊಳಿಸಲು ಕೆಲವು ಕಠಿಣ ನಿಯಮಗಳನ್ನು ಜಾರಿಗೆ ತರಲು ಜಿಬಿಎ ಚಿಂತನೆ ನಡೆಸಿದೆ.


ಸಿಲಿಕಾನ್ ಸಿಟಿಯಲ್ಲಿ ದಿನದಿಂದ ದಿನಕ್ಕೆ ಉಲ್ಬಣಿಸುತ್ತಿರುವ ಪಾರ್ಕಿಂಗ್ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ’ ಪ್ರತ್ಯೇಕ ಪಾರ್ಕಿಂಗ್ ನೀತಿ ಸಿದ್ಧಪಡಿಸಿದೆ.

ನಗರದಲ್ಲಿ ವಾಹನಗಳ ಸಂಖ್ಯೆ ಮಿತಿಮೀರುತ್ತಿದ್ದು, ರಸ್ತೆ ಬದಿಯ ಪಾರ್ಕಿಂಗ್‌ನಿಂದ ಟ್ರಾಫಿಕ್ ಸಮಸ್ಯೆ ವಿಪರೀತವಾಗಿದೆ. ಈಗ ಪುಟ್ ಪಾತ್ ತೆರವು ಬಳಿಕ ಖಾಸಗಿ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ‘ಪಾರ್ಕಿಂಗ್ ನೀತಿ - 2026' ಜಾರಿಗೆ ತರಲು ಮುಂದಾಗಿದ್ದು, ಕರಡು ಅಧಿಸೂಚನೆ ಪ್ರಕಟಿಸಿದೆ.

ವಾಣಿಜ್ಯ ಬಡಾವಣೆಗಳಲ್ಲಿ ಖಾಸಗಿ ವ್ಯಕ್ತಿಗಳ ಖಾಲಿ ನಿವೇಶನಗಳನ್ನು ಪಾರ್ಕಿಂಗ್ ತಾಣಗಳನ್ನಾಗಿ ಪರಿವರ್ತಿಸಲು ನಿರ್ಧರಿಸಿದ್ದು, ಸರ್ಕಾರ ಹಾಗೂ ಜಿಬಿಎ ನಡೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಏನಿದು ಜಿಬಿಎ ‘ಪಾರ್ಕಿಂಗ್ ನೀತಿ-2026’?

ನಗರದ ವಾಣಿಜ್ಯ ವಲಯಗಳಲ್ಲಿ ಸರ್ಕಾರಿ ಜಾಗದ ತೀವ್ರ ಕೊರತೆ ಇರುವುದರಿಂದ, ಖಾಲಿ ಸೈಟುಗಳನ್ನು ಗುರುತಿಸಿ, ಅಲ್ಲಿ ಪಾರ್ಕಿಂಗ್ ಸೌಲಭ್ಯ ಕಲ್ಪಿಸುವುದು ಸರ್ಕಾರದ ಮೂಲ ಉದ್ದೇಶವಾಗಿದೆ.

ಖಾಸಗಿ ಮಾಲೀಕರು ಸ್ವಇಚ್ಛೆಯಿಂದ ತಮ್ಮ ಜಾಗವನ್ನು ಬಿಟ್ಟುಕೊಟ್ಟರೆ, ಜಿಬಿಎ ಅಲ್ಲಿ ಬಹುಮಹಡಿ ಪಾರ್ಕಿಂಗ್ ವ್ಯವಸ್ಥೆ ಮಾಡಲು ಪ್ರೋತ್ಸಾಹ ನೀಡಲಿದೆ.

ನಿವೇಶನ ಮಾಲೀಕರಿಗೆ ಲಾಭವೇನು?

ಖಾಲಿ ಜಾಗ ನೀಡುವ ಮಾಲೀಕರನ್ನು ಸೆಳೆಯಲು ಸರ್ಕಾರ ಭರಪೂರ ಕೊಡುಗೆಯನ್ನು ಕರಡು ನೀತಿಯಲ್ಲಿ ಪ್ರಸ್ತಾಪಿಸಿದೆ.

ನಿವೇಶನದ ಅಳತೆ ಆಧರಿಸಿ ಮಾಲೀಕರಿಗೆ ಬರೋಬ್ಬರಿ 15 ರಿಂದ 35 ವರ್ಷಗಳವರೆಗೆ ಆಸ್ತಿ ತೆರಿಗೆ ವಿನಾಯಿತಿ ನೀಡಲು ಜಿಬಿಎ ಚಿಂತಿಸಿದೆ.

ಪಾರ್ಕಿಂಗ್ ತಾಣದಿಂದ ಸಂಗ್ರಹವಾಗುವ ‘ಪೇ ಆಂಡ್ ಪಾರ್ಕಿಂಗ್’ ಆದಾಯದ ನಿರ್ದಿಷ್ಟ ಪಾಲನ್ನು ನೇರವಾಗಿ ಮಾಲೀಕರಿಗೇ ಹಂಚಿಕೆ ಮಾಡಲಾಗುತ್ತದೆ.

ಸಂಚಾರ ಸುಧಾರಣೆಗೆ ಕಠಿಣ ನಿಯಮ

ಕೇವಲ ಪಾರ್ಕಿಂಗ್ ಜಾಗ ಸೃಷ್ಟಿಸುವುದು ಅಷ್ಟೇ ಅಲ್ಲದೆ, ರಸ್ತೆ ಸಂಚಾರ ಮುಕ್ತಗೊಳಿಸಲು ಕೆಲವು ಕಠಿಣ ನಿಯಮಗಳನ್ನು ಜಾರಿಗೆ ತರಲು ಜಿಬಿಎ ಚಿಂತನೆ ನಡೆಸಿದೆ.

ನಗರದ ಪ್ರಮುಖ ಮುಖ್ಯರಸ್ತೆಗಳಲ್ಲಿ ವಾಹನ ನಿಲುಗಡೆಯನ್ನು ಸಂಪೂರ್ಣ ನಿಷೇಧಿಸಲಾಗುತ್ತದೆ.

ಜಂಕ್ಷನ್‌ಗಳು ಹಾಗೂ ಟ್ರಾಫಿಕ್ ಸಿಗ್ನಲ್‌ಗಳ ಸಮೀಪ ಪಾರ್ಕಿಂಗ್ ಮಾಡುವುದಕ್ಕೆ ಕರಡು ನೀತಿಯಲ್ಲಿ ರೆಡ್ ಸಿಗ್ನಲ್ ನೀಡಲಾಗಿದೆ.

ಜಿಬಿಎ ತಂದಿರುವ ಈ ಮಹತ್ವಾಕಾಂಕ್ಷಿ ಯೋಜನೆಗೆ ಸದ್ಯ ಬೆಂಗಳೂರಿಗರಿಂದ ಪರ-ವಿರೋಧದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

ವಾಹನ ಸವಾರರು ಈ ನೀತಿಯನ್ನು ಸ್ವಾಗತಿಸುತ್ತಿದ್ದಾರೆ. "ಮಾಲ್ ಅಥವಾ ಕಾಂಪ್ಲೆಕ್ಸ್‌ಗಳಿಗೆ ಹೋದಾಗ ಪಾರ್ಕಿಂಗ್ ಜಾಗ ಹುಡುಕುವುದರಲ್ಲೇ ಅರ್ಧ ಗಂಟೆ ವೇಸ್ಟ್ ಆಗುತ್ತದೆ. ವಾಣಿಜ್ಯ ಪ್ರದೇಶಗಳಲ್ಲಿ ಇಂತಹ ಪಾರ್ಕಿಂಗ್ ಹಬ್‌ಗಳು ನಿರ್ಮಾಣವಾದರೆ ಟ್ರಾಫಿಕ್ ಕಿರಿಕಿರಿ ತುಂಬಾನೇ ಕಡಿಮೆಯಾಗಬಹುದು," ಎನ್ನುತ್ತಾರೆ ವಾಹನ ಸವಾರರು.

ಮಾಲೀಕರಿಗೂ ಖಾಲಿ ಸೈಟ್‌ನಿಂದ ಆದಾಯ ಬರುವುದರಿಂದ ಇದು ಲಾಭದಾಯಕ ಎನ್ನುವುದು ಕೆಲವರ ಅಭಿಪ್ರಾಯ.

ಇನ್ನೊಂದೆಡೆ, ಕೆಲ ಮಾಲೀಕರಲ್ಲಿ ಇದು ತೀವ್ರ ಆತಂಕಕ್ಕೂ ಕಾರಣವಾಗಿದೆ. 15 ರಿಂದ 35 ವರ್ಷಗಳ ದೀರ್ಘಾವಧಿಗೆ ಸರ್ಕಾರಕ್ಕೆ ಜಾಗ ಬಿಟ್ಟುಕೊಟ್ಟರೆ, ಭವಿಷ್ಯದಲ್ಲಿ ಆಸ್ತಿಯ ಮೇಲಿನ ಹಕ್ಕು ಕಳೆದುಕೊಳ್ಳಬಹುದು ಎಂಬ ಗುಸು ಗುಸು ಶುರುವಾಗಿದೆ.

Read More
Next Story